ನಮ್ಮ ಬೀದಿಯ ಕೊನೆಯಲ್ಲಿ ಒಂದು ಚಾಟ್ಸ್ ಸೆಂಟರ್ ಇದೆ. ಈ ಮೊದಲು, ಅಂದರೆ ಕೋವಿಡ್ 19 ಬರುವುದಕ್ಕೂ ಮೊದಲು, ಪ್ರತಿದಿನ ಅಲ್ಲಿಗೊಂದು ಭೇಟಿ ಕೊಡುವುದಿತ್ತು. ಒಂದು ದಿನ ಪಾನಿಪುರಿ, ಮರುದಿನ ಭೇಲ್ ಪುರಿ, ಕೆಲವು ದಿನ ಮಸಾಲ ಪುರಿ ಜೊತೆಗೆ ದಹಿ ಪುರಿಯೂ… ಆಹಾ, ಎಂಥ ದಿನಗಳವು! ನೆನಪಿಸಿಕೊಂಡರೆ, ಈಗಲೂ ಬಾಯಲ್ಲಿ ನೀರು ಬರುತ್ತದೆ. ಲಾಕ್‌ಡೌನ್‌ಗೂ ಎರಡು ದಿನ ಮೊದಲೇ ಅವರು ಅಂಗಡಿ ಮುಚ್ಚಿಬಿಟ್ಟರು.
ಅಯ್ಯೋ, ನಾಳೆಯಿಂದ ಚಾಟ್ಸ್ ತಿನ್ನೋಕೆ ಆಗಲ್ಲ ಅಂತ ಬೇಸರ ಪಡುವಷ್ಟರಲ್ಲಿ, ನಾವೂ ಮನೆಯಿಂದ ಹೊರಗೆ ಹೋಗದಂತೆ ಆಯಿತು. ಭಾನುವಾರ ಮತ್ತು ಹಬ್ಬ ಹರಿದಿನಗಳಂದೂ ಅಂಗಡಿ ತೆರೆದಿರುತ್ತಿದ್ದ ಚಾಟ್ಸ್ ಅಂಗಡಿ ಅಣ್ಣ, ಊರಿಗೆ ಹೋಗಿದ್ದು ಒಳ್ಳೆಯದೇ ಆಯಿತು ಅಂದುಕೊಂಡೆ. ಲಾಕ್‌ಡೌನ್ ಮುಗಿದು, ಮೊನ್ನೆಯಷ್ಟೇ ಅವರು ಊರಿನಿಂದ ಬಂದರು. ಹಾಲು ತರಲು ಹೋದಾಗ ಅವರ ಅಂಗಡಿ ತೆರೆದಿರುವುದನ್ನು ನೋಡಿ ಆನಂದವಾಯ್ತು.
ಇವತ್ತು ಸಂಜೆ ಚಾಟ್ಸ್ ತಿನ್ನುವುದೇ ಅಂತ ಖುಷಿಯಿಂದ ಮನೆಗೋಡಿದೆ. “ರೀ, ಚಾಟ್ಸ್ ಅಂಗಡಿ ಓಪನ್ ಆಗಿದೆ. ಇವತ್ತು ಹೋಗೋಣಾ?’ ಅಂದೆ ಉತ್ಸುಕಳಾಗಿ. “ಏನೂ ಬೇಡ’ ಅಂದರು ಮನೆಯವರು. “ಅವರ ಊರು ಯಾವುದು ಅಂತ ಗೊತ್ತಲ್ವಾ? ಅಲ್ಲಿ ಕೋವಿಡ್ 19 ಮಿತಿಮೀರಿ ಹಬ್ಬುತ್ತಿದೆ. ಈಗಷ್ಟೇ ಬಂದಿದ್ದಾರೆ ಊರಿಂದ. ಈಗಲೇ ತಿನ್ನೋಕೆ ಹೋಗೋದು ಬೇಡ.
ಒಂದು ವಾರ ಕಳೆದ ಮೇಲೆ ನೋಡೋಣ’ ಅಂದರು. ಅಯ್ಯೋ, ಹೀಗೆಲ್ಲಾ ಉಂಟಾ! ನಮಗೆ ಗೊತ್ತಿದ್ದವ ರನ್ನೂ ಅನುಮಾನದಿಂದ ನೋಡುವಂ ತಾಯ್ತಲ್ಲ ಅಂತ ನೊಂದುಕೊಂಡೆ. ಮಾರನೇ ದಿನ ಹಾಲು ತರಲು ಹೋದಾಗ, “ಏನು ಮೇಡಂ ಈ ಕಡೆ ಬಂದೇ ಇಲ್ಲ’ ಅಂತ ಅಂಗಡಿಯ ಅಣ್ಣ ಪ್ರೀತಿಯಿಂದ ಕರೆದರು. ಏನು ಹೇಳಲೂ ತೋಚದೆ ಪೆಚ್ಚಾಗಿ ನಕ್ಕು ಮನೆಗೆ ಬಂದೆ.
* ಪೂರ್ಣಿಮಾ ಎಸ್.