Advertisement

ಶಿಕ್ಷಕರ ವರ್ಗಾವಣೆ ಸಮಸ್ಯೆ ಹೊಸ ವಿಧೇಯಕ ಪರಿಹಾರವೇ?

09:55 AM Mar 12, 2020 | mahesh |

ಶಿಕ್ಷಕರ ವರ್ಗಾವಣೆ ಸಮಸ್ಯೆಗೆ ಮುಕ್ತಿ ಸಿಗಲಿ ಮತ್ತು ಹೊಸ ವಿಧೇಯಕದಿಂದಾದರೂ ಹಲವಾರು ವರ್ಷಗಳಿಂದ ವರ್ಗಾವಣೆಗಾಗಿ ಕಾದು ಕುಳಿತಿರುವ ಅರ್ಹ ಶಿಕ್ಷಕರಿಗೆ ಫ‌ಲ ಸಿಗಲಿ ಎಂಬುದು ಆಶಯ.

Advertisement

ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಆಡಳಿತ ನಡೆಸಿದ ಮೂರ್‍ನಾಲ್ಕು ಸರ್ಕಾರಗಳಿಗೆ ಕಬ್ಬಿಣದ ಕಡೆಲೆಯಾಗಿಯೇ ಪರಿಣಮಿಸಿತ್ತು. ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು ( ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ್ಕೆ 2007ರ ಸಮ್ಮಿಶ್ರ ಸರ್ಕಾರ, ನಂತರದ ಬಿಜೆಪಿ ಸರ್ಕಾರ, ನಂತರ ಐದು ವರ್ಷ ಆಳಿದ ಕಾಂಗ್ರೆಸ್‌ ಸರ್ಕಾರ ಮತ್ತು ಒಂದೂವರೆ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರದಲ್ಲೂ ತಿದ್ದುಪಡಿ ತರಲಾಗಿತ್ತು. ಆದರೆ, ಶಿಕ್ಷಕರ ವರ್ಗಾವಣೆ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ.

ವರ್ಗಾವಣೆ ಮಿತಿಯಿಂದ ಶೇ.8ರಿಂದ ಶೇ.15ಕ್ಕೆ ಏರಿಸಿದರೂ, ಸಮಸ್ಯೆ ಬಹೆಹ‌ರಿದಿರಲಿಲ್ಲ. ಶಿಕ್ಷಕ ದಂಪತಿ
ವಿಷಯದಲ್ಲಿ ಕೆಲವು ವಿನಾಯತಿ ಹಾಗೂ ಅವಕಾಶಗಳನ್ನು ಕಲ್ಪಿಸಿದ್ದರೂ, ಸಮಸ್ಯೆ ಬಗೆಹರಿದಿಲ್ಲ. ಒಂದೊಂದು ಸರ್ಕಾರ ಬಂದಾಗಲೂ ಒಂದೊಂದು ತಿದ್ದುಪಡಿ ತರುತ್ತಿದ್ದಂತೆ ಶಿಕ್ಷಕರ ವರ್ಗಾವಣೆ ವಿಷಯದಲ್ಲಿ ಭಿನ್ನವಾದ ಇನ್ನೊಂದು ರೀತಿಯ ಸಮಸ್ಯೆ ಎದುರಾಗುತ್ತಲೇ ಬಂದಿದೆ.

ಘಟಕದ ಒಳಗಿನ ಮತ್ತು ಹೊರಗಿನ ವರ್ಗಾವಣೆ, ದಂಪತಿ ಶಿಕ್ಷಕರ ವರ್ಗಾವಣೆ, ಕೌನ್ಸೆಲಿಂಗ್‌ ಪ್ರಕ್ರಿಯೆ ಇತ್ಯಾದಿ ಸಮಸ್ಯೆಗಳು ಬಹುತೇಕ ಬಗೆಹರಿದಿದೆ ಎನ್ನುಷ್ಟರಲ್ಲಿ ಕಡ್ಡಾಯ ವರ್ಗಾವಣೆ ಹೊಸ ಸಮಸ್ಯೆಯಾಗಿ ಉದ್ಭವಿಸಿತ್ತು. ಕಳೆದ ಒಂದು ದಶಕದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಸಚಿವರಿಗೆ ಶಿಕ್ಷಕರ ವರ್ಗಾವಣೆ ಸಮಸ್ಯೆ ನಿತ್ಯವೂ ಕಾಡಿತ್ತು ಮತ್ತು ಕಾಡುತ್ತಲೇ ಇದೆ.

ಎ-ವಲಯ (ನಗರ ಪ್ರದೇಶ)ದಲ್ಲಿ ನಿರಂತರವಾಗಿ ಹತ್ತು ವರ್ಷಕ್ಕಿಂತ ಅಧಿಕ ಸಮಯ ಸೇವೆ ಸಲ್ಲಿಸಿದ
ಶಿಕ್ಷಕರಲ್ಲಿ ಜೇಷ್ಠತೆಯ ಆಧಾರದಲ್ಲಿ ಕಡ್ಡಾಯ ವರ್ಗಾವಣೆ ಮಾಡುವ ತಿದ್ದುಪಡಿಯನ್ನು ತನ್ವೀರ್‌ ಸೇs… ಅವರು ಸಚಿವರಾಗಿದ್ದಾಗ ತಂದಿದ್ದರು. ಇದಾದ ನಂತರ ನಗರ ಪ್ರದೇಶದಲ್ಲಿರುವ ಶಿಕ್ಷಕರ ವರ್ಗ ಕಡ್ಡಾಯ ವರ್ಗಾವಣೆ ಬೇಡ ಮತ್ತು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಕಡ್ಡಾಯ ವರ್ಗಾವಣೆ ಬೇಕು ಎನ್ನುವ ಒತ್ತಾಯ ಆರಂಭಿಸಿ, ಶಿಕ್ಷಕರಲ್ಲೇ ಎರಡು ಬಣ ಹುಟ್ಟಿಕೊಂಡಿತು.

Advertisement

ಎರಡು ಬಣದಿಂದಲೂ ಒತ್ತಡ ಹೆಚ್ಚುತ್ತಿದ್ದಂತೆ ವರ್ಗಾವಣೆ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ತಡೆಹಿಡಿದು, ವಿಧೇಯಕ್ಕೆ ತಿದ್ದುಪಡಿ ತರುವುದಾಗಿ ಘೋಷಿಸಿ, ನಿಯಮದಲ್ಲಿ ಕೆಲವೊಂದು ತಿದ್ದುಪಡಿ ತಂದು, ಶಿಕ್ಷಕ
ಸ್ನೇಹಿ ವರ್ಗಾವಣೆ ನೀತಿ ರೂಪಿಸಿದರು. ಇಷ್ಟಾದರೂ ಸಮಸ್ಯೆ ಬಗೆಹರಿಸಿದಿಲ್ಲ.

ಅನೇಕ ಅವೈಜ್ಞಾನಿಕ ಅಂಶಗಳಿದ್ದು, ಅವುಗಳನ್ನು ಕೈಬಿಡಬೇಕು ಎಂದು ಪ್ರಾಥಮಿಕ ಶಾಲಾ
ಶಿಕ್ಷಕರ ಸಂಘದಿಂದಲೇ ಮೂರ್‍ನಾಲ್ಕು ಬಾರಿ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ನಡುವೆ ಸಚಿವರ ಮಾರ್ಗದರ್ಶನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕ ಸ್ನೇಹಿ ವರ್ಗಾವಣೆ ಕರಡನ್ನು ಪ್ರಕಟಿಸಿತ್ತು.

ಈಗ ರಾಜ್ಯ ಸರ್ಕಾರ ಕರ್ನಾಟಕ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ-2020ನ್ನು  ವಿಧಾನ ಸಭೆಯಲ್ಲಿ ಮಂಡಿಸಿದೆ. ಸಿ-ವಲಯದ ಶಿಕ್ಷಕರ ಕಡ್ಡಾಯ ನೇಮಕಾತಿ, ಶಿಕ್ಷಕರ ಸಮರ್ಪಕ ಮರುಹಂಚಿಕೆ, ವಲಯವಾರು ವರ್ಗಾವಣೆ, ಕೋರಿಕೆ ವರ್ಗಾವಣೆ, ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ, ನಿರ್ದಿಷ್ಟ ಹುದ್ದೆಗಳಿಗೆ ಶಿಕ್ಷಕರ ವರ್ಗಾವಣೆ, ವರ್ಗಾವಣೆ ನಿಯಮದಲ್ಲಿ ಕುಂದುಕೊರತೆ ನಿವಾರಣೆ, ಸೇರಿದಂತೆ ಪ್ರಮುಖ 20 ಅಂಶಗಳನ್ನು ಹೊಸ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.  ಇದರಿಂದಾದರೂ ಶಿಕ್ಷಕರ ವರ್ಗಾವಣೆ ಸಮಸ್ಯೆಗೆ ಮುಕ್ತಿ ಸಿಗಲಿ ಮತ್ತು ಹೊಸ ವಿಧೇಯಕದಿಂದಾದರೂ ಹಲವಾರು ವರ್ಷಗಳಿಂದ ವರ್ಗಾವಣೆಗಾಗಿ ಕಾದು ಕುಳಿತಿರುವ ಅರ್ಹ ಶಿಕ್ಷಕರಿಗೆ ಫ‌ಲ ಸಿಗಲಿ ಎಂಬುದು ಆಶಯ.

ಕಳೆದ ಒಂದು ದಶಕದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಸಚಿವರಿಗೆ ಶಿಕ್ಷಕರ ವರ್ಗಾವಣೆ ಸಮಸ್ಯೆ ನಿತ್ಯವೂ ಕಾಡಿತು, ಕಾಡುತ್ತಲೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next