Advertisement
ಮೇ 18ರಿಂದ ಲಾಕ್ ಡೌನ್ ಬಹುತೇಕ ಸಡಿಲಗೊಂಡ ಬಳಿಕ ದೇಶದ ಹಲವು ಜಿಲ್ಲೆಗಳಲ್ಲಿ ಸೋಂಕು ತಾಂಡವವಾಡಲು ಆರಂಭಿಸಿದೆ. ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಲ, ಜಮ್ಮು-ಕಾಶ್ಮೀರ ಮತ್ತು ಹರ್ಯಾಣ ರಾಜ್ಯಗಳಲ್ಲಿನ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಾ ಸಾಗಿದೆ. ದೇಶದ ಒಟ್ಟಾರೆ 736 ಜಿಲ್ಲೆಗಳ ಪೈಕಿ, 14 ಜಿಲ್ಲೆಗಳಲ್ಲೇ ಶೇ.60ರಷ್ಟು ಪ್ರಕರಣಗಳು ವರದಿಯಾಗಿವೆ. ಈ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದು, ಈ ಪೈಕಿ ಶೇ.50ರಷ್ಟು ಪ್ರಕರಣಗಳು ಮೇ 18ರ ಬಳಿಕವೇ ದೃಢಪಟ್ಟಿರುವಂಥದ್ದು.
Related Articles
Advertisement
ಹಾಟ್ ಸ್ಪಾಟ್‌ಗಳ ಮೇಲೆ ಗಮನವಿಡಿಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿಗಳೊಂದಿಗೆ ಶುಕ್ರವಾರ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದು, ಹೊಸದಾಗಿ ಉದಯಿಸುತ್ತಿರುವ ಕೊರೊನಾ ಹಾಟ್‌ಸ್ಪಾಟ್‌ಗಳ ಮೇಲೆ ವಿಶೇಷ ಗಮನ ಇಡುವಂತೆ ಸೂಚಿಸಿದ್ದಾರೆ. ಜತೆಗೆ, ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳುವಂತೆಯೂ ತಿಳಿಸಿದ್ದಾರೆ. ಕಂಟೈನ್ಮೆಂಟ್ ವಲಯಗಳಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ, ಆಸ್ಪತ್ರೆಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸಿ, ಜನರಲ್ಲಿ ಜಾಗೃತಿ ಮೂಡಿಸಿ ಎಂದೂ ಸೂಚಿಸಿದ್ದಾರೆ. ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣ
ದೇಶಕ್ಕೆ ಕೊರೊನಾ ಪ್ರವೇಶಿಸಿದ ಬಳಿಕ ಇದೇ ಮೊದಲ ಬಾರಿಗೆ ದೈನಂದಿನ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ಕೊರೊನಾ ಹಾಟ್ ಸ್ಪಾಟ್ ದೇಶಗಳ ಪಟ್ಟಿಯಲ್ಲಿ ಭಾರತವು 4ನೇ ಸ್ಥಾನಕ್ಕೆ ತಲುಪಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ. ಗುರುವಾರ ಬೆಳಗ್ಗೆ 8ರಿಂದ ಶುಕ್ರವಾರ ಬೆಳಗ್ಗೆ 8ರವರೆಗಿನ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 10,956 ಮಂದಿಗೆ ಸೋಂಕು ದೃಢಪಟ್ಟಿದ್ದು, 396 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದೇ ವೇಳೆ, ಸ್ವಲ್ಪಮಟ್ಟಿಗಿನ ಸಮಾಧಾನದ ಸಂಗತಿಯೆಂದರೆ, ಸತತ 3ನೇ ದಿನವೂ ದೇಶದಲ್ಲಿ ಗುಣಮುಖರಾದವರ ಸಂಖ್ಯೆಯು ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಮೀರಿದೆ. ಈವರೆಗೆ 1.47 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿ, ಈ ಪ್ರಮಾಣ ಶೇ.49.47ಕ್ಕೇರಿದೆ. ದ್ವಿಗುಣಾವಧಿಯಲ್ಲಿ ಸುಧಾರಣೆ
ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದ್ದರೂ, ದೇಶಾದ್ಯಂತ ಸೋಂಕು ದ್ವಿಗುಣಗೊಳ್ಳುವ ಅವಧಿಯಲ್ಲಿ ಸುಧಾರಣೆಯಾಗಿದೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ. ಕೆಲವು ವಾರಗಳ ಹಿಂದೆ ಪ್ರತಿ 15.4 ದಿನಗಳಿಗೊಮ್ಮೆ ಸೋಂಕಿನ ಸಂಖ್ಯೆ ದುಪ್ಪಟ್ಟಾಗುತ್ತಿತ್ತು. ಆದರೆ ಈಗ ಇದು 17.4 ದಿನಗಳಿಗೇರಿದೆ. ಮಾ.25ರಂದು ದೇಶವ್ಯಾಪಿ ನಿರ್ಬಂಧ ಘೋಷಿಸಿದಂದು ಸೋಂಕಿನ ದ್ವಿಗುಣಾವಧಿ 3.4 ದಿನಗಳಾಗಿದ್ದವು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.