ಬೆಂಗಳೂರು: “ಗ್ರಾಮೀಣ ಆಡಳಿತದ ಸೂತ್ರಧಾರ’ರಂತೆ ಇರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಓ) ಮುಂದಿನ ಬಜೆಟ್‌ನಲ್ಲಿ ಸಿಹಿ ಸುದ್ದಿ ಸಿಗಲಿದ್ದು, ಅವರಿಗೆ “ಹುದ್ದೆ ಮೇಲ್ದರ್ಜೆ ಭಾಗ್ಯ’ ಲಭಿಸುವ ಸಾಧ್ಯತೆಗಳಿವೆ.
ಪಿಡಿಓ ಹುದ್ದೆಗಳನ್ನು ಈಗಿರುವ ಸಿ ದರ್ಜೆಯಿಂದ ಬಿ ದರ್ಜೆಗೆ ಏರಿಸುವ ಪ್ರಸ್ತಾವನೆ ಸದ್ಯ 6ನೇ ವೇತನ ಆಯೋಗದ ಮುಂದಿದ್ದು, ಈ ತಿಂಗಳ ಕೊನೆಗೆ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.ಅದರಲ್ಲಿ ಪಿಡಿಓಗಳ ಹುದ್ದೆ ಮೇಲ್ದರ್ಜೆ ಪ್ರಸ್ತಾವನೆಗೆ ಹಸಿರು ನಿಶಾನೆ ಸಿಗಲಿದ್ದು, ಫೆಬ್ರವರಿ ತಿಂಗಳಲ್ಲಿ ಮುಖ್ಯಮಂತ್ರಿಯವರು ಮಂಡಿಸಲಿರುವ 2018-19ನೇ ಸಾಲಿನ ಬಜೆಟ್‌ನಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ರಾಜ್ಯದ 6,022 ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 4 ಸಾವಿರಕ್ಕೂ ಹೆಚ್ಚು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಸಿ ದರ್ಜೆಯಿಂದ ಬಿ ದರ್ಜೆಗೆ ಏರಲಿದೆ. ಹಾಗೆ ಆದರೆ, ಈಗ ಆಗುತ್ತಿರುವ ಆಡಳಿತಾತ್ಮಕ ಅಡಚಣೆಗಳು ದೂರ ಆಗುವುದರ ಜೊತೆಗೆ ಪಿಡಿಓಗಳ ವೇತನ ಸಹ ಹೆಚ್ಚಳವಾಗಲಿದೆ. ಸದ್ಯ 20 ರಿಂದ 36 ಸಾವಿರ ರೂ. ಇರುವ ವೇತನ 22ರಿಂದ 43 ಸಾವಿರ ರೂ. ಗೆ ಏರಿಕೆಯಾಗಲಿದೆ.
ಹುದ್ದೆಗಳನ್ನು ಮೇಲ್ದರ್ಜೆಗೇರಿಸಬೇಕು ಎನ್ನುವುದು ಪಿಡಿಓಗಳ ಬಹುದಿನಗಳ ಬೇಡಿಕೆಯಾಗಿತ್ತು. ಇದಕ್ಕೆ ಪೂರಕವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಕ್ರಮ ಕೈಗೊಂಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ಸಿ ದರ್ಜೆಯಿಂದ ಬಿ ದರ್ಜೆಗೆ ಉನ್ನತೀಕರಿಸಲು ಪ್ರಸ್ತಾವನೆ ಸಿದ್ದಪಡಿಸಿತ್ತು. ಇದರ ಸಮ್ಮತಿಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಆರ್ಥಿಕ ಇಲಾಖೆಗೆ ಕಡತವನ್ನು ಕಳಿಸಲಾಗಿತ್ತು. ಆದರೆ, ಈ ಪ್ರಸ್ತಾವನೆಯನ್ನು ವೇತನ ಆಯೋಗದ ಪರಿಶೀಲನೆಗೆ ಸಲ್ಲಿಸುವಂತೆ ಆರ್ಥಿಕ ಇಲಾಖೆ ಸಲಹೆ ನೀಡಿತ್ತು. ಅದರಂತೆ ಪ್ರಸ್ತಾವನೆಯನ್ನು 6ನೇ ವೇತನ ಆಯೋಗದ ಮುಂದೆ ಮಂಡಿಸಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆ, ಹುದ್ದೆಗಳನ್ನು ಮೇಲ್ದರ್ಜೆಗೇರಿಸುವ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟಿತ್ತು.
ಪಿಡಿಓ ಹುದ್ದೆಗಳನ್ನು ಉನ್ನತೀಕರಿಸುವ ಪ್ರಸ್ತಾವನೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಂದಿದೆ. ಅದನ್ನು ಆಯೋಗ ಸಂಪೂರ್ಣವಾಗಿ ಪರಿಶೀಲನೆ ನಡೆಸಿದ್ದು, ಅಂತಿಮ ವರದಿಲ್ಲಿ ಅಧಿಕೃತ ನಿಲುವು ದಾಖಲಿಸಲಾಗುವುದು ಎಂದು 6ನೇ ವೇತನ ಆಯೋಗದ ಹಿರಿಯ ಅಧಿಕಾರಿಗಳು “ಉದಯವಾಣಿ’ ತಿಳಿಸಿದ್ದಾರೆ. ಅದೇ ರೀತಿ ವೇತನ ಆಯೋಗ ನಮ್ಮ ಬೇಡಿಕೆ ಒಪ್ಪಿಕೊಳ್ಳಲಿದ್ದು, ಪಿಡಿಓ ಹುದ್ದೆಗಳನ್ನು ಮೇಲ್ದರ್ಜೆಗೇರಿಸುವುದರ ಬಗ್ಗೆ ಮುಂದಿನ ಬಜೆಟ್‌ನಲ್ಲಿ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಧಿಕಾರ ವಿಕೇಂದ್ರೀಕರಣ ಮತ್ತು ಗ್ರಾಮೀಣ ಆಡಳಿತವನ್ನು ಬಲಪಡಿಸುವ ಉದ್ದೇಶದಿಂದ “ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ ಜಾರಿಗೊಳಿಸಲಾಗಿದೆ. ಅದರಂತೆ ಗ್ರಾಮ ಪಂಚಾಯಿತಿಗಳು ಸ್ವಯಂ ಆಡಳಿತ ಸ್ಥಳೀಯ ಸರ್ಕಾರಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮ ಪಂಚಾಯಿತಿಗಳು ಸಕ್ರೀಯವಾಗಿ, ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಆಡಳಿತ ವ್ಯವಸ್ಥೆಯನ್ನು ಪುನರ್‌ರಚಿಸಬೇಕಾಗಿರುತ್ತದೆ.
ಸರ್ಕಾರದ ಸುಮಾರು 29 ಇಲಾಖೆಗಳ ಯೋಜನೆ ಮತ್ತು ಕಾರ್ಯಕ್ರಮಗಳ ಅನುಷ್ಠಾನದ ಜವಾಬ್ದಾರಿಯ ಜೊತೆಗೆ ಆಡಳಿತ ನಿರ್ವಹಣೆ ಮಾಡಬೇಕಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಯೋಜನೆ ಮತ್ತು ಕಾರ್ಯಕ್ರಮಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಇದರಿಂದ ಪಿಡಿಓಗಳ ಮೇಲೆ ಕಾರ್ಯ ಒತ್ತಡದ ಜೊತೆಗೆ ಜವಾಬ್ದಾರಿ ಸಹ ಹೆಚ್ಚಾಗಿದೆ. ಅಲ್ಲದೇ ಪಿಡಿಓಗಳ ಅಧೀನದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಬಿ ದರ್ಜೆಯವರಾಗಿದ್ದು, ಪಿಡಿಓಗಳು ಸಿ ದರ್ಜೆ ಹೊಂದಿದ್ದಾರೆ. ಇದರಿಂದ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಆಡಳಿತ ನಿರ್ವಹಣೆಯಲ್ಲಿ ಆಡಳಿತಾತ್ಮಕ ಮತ್ತು ತಾಂತ್ರಿಕ ಅಡಚಣೆಗಳು ಎದುರಾಗುತ್ತಿದ್ದವಿ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹುದ್ದೆಗಳನ್ನು ಉನ್ನತೀಕರಿಸಲು ಗ್ರಾಮೀಣಾಭಿವೃದ್ಧಿ ತೀರ್ಮಾನಿಸಿತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಂತಾಗಿದೆ.
– ರಫೀಕ್ ಅಹ್ಮದ್