Advertisement
ಏನಿದು ಹೊಸ ತಳಿಎವೈ.4.2 ಅಲಿಯಾಸ್ ಡೆಲ್ಟಾ ಪ್ಲಸ್ ಅಲಿಯಾಸ್ ವಿಯುಐ-21. ಬ್ರಿಟನ್‌ನ ಆರೋಗ್ಯ ಸುರಕ್ಷತ ಮಂಡಳಿ ಈ ಬಗ್ಗೆ ಅಧ್ಯಯನ ನಡೆಸಿದೆ. ಇದರ ವರದಿ ಪ್ರಕಾರವೇ, ಈ ರೂಪಾಂತರಿಗೆ ಹೆಚ್ಚು ಹರಡುವ ಶಕ್ತಿ ಇದೆಯಂತೆ.
ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಈ ವೈರಸ್ ಕಾಣಿಸಿಕೊಂಡ ಮೇಲೆ, ಭಾರತದಲ್ಲೂ ಅತ್ಯಂತ ಜಾಗ್ರತೆ ವಹಿಸಲಾಗಿದೆ. ಇಲ್ಲಿನ ವಿಜ್ಞಾನಿಗಳೂ ಈ ವೈರಸ್‌ಗೆ ಬೇಗ ಹರಡುವ ಶಕ್ತಿ ಇದೆ ಎಂದು ಹೇಳಿದ್ದಾರೆ. ಹೊಸ ಅಲೆಗೆ ಕಾರಣವಾಗಬಲ್ಲದೇ?
ಖ್ಯಾತ ವೈದ್ಯರಾದ ಎಸ್. ಸ್ವಾಮಿನಾಥನ್ ಅವರು, ಈ ರೂಪಾಂತರಿ ಬಗ್ಗೆ ಹೆದರುವ ಅಗತ್ಯವಿಲ್ಲ ಎಂದಿದ್ದಾರೆ. ಸದ್ಯ ಕೋವಿಡ್ ವೈರಸ್ ಎಂಡಮಿಕ್ ಹಂತಕ್ಕೆ ಪ್ರವೇಶಿಸಿದೆ. ಆದರೂ, ಮುಂದಿನ ದಿನಗಳಲ್ಲಿ ಕೋವಿಡ್ ವೈರಸ್ ಕಾಣಿಸಿಕೊಳ್ಳುತ್ತದೆ. ಇದರಿಂದ ಜೀವಹಾನಿಯಾಗುವುದು ಕಡಿಮೆ ಎಂದಿದ್ದಾರೆ.
Related Articles
ಕೋವಿಡ್ ವೈರಸ್‌ನ ರೂಪಾಂತರ ಸಾಮಾನ್ಯ ಪ್ರಕ್ರಿಯೆ ಎನ್ನುವುದು ಡಾ| ಎಸ್. ಸ್ವಾಮಿನಾಥನ್ ಅವರ ಅಭಿಪ್ರಾಯ. ಪ್ರತೀ ವರ್ಷವೂ ಬೇರೆ ಜ್ವರಗಳೂ ರೂಪಾಂತರಗೊಳ್ಳುತ್ತವೆ. ಇತರೆ ಜ್ವರದಂತೆ ಇರುವ ಇದೂ ಕೂಡ ರೂಪಾಂತರವಾಗಿಯೇ ಆಗುತ್ತದೆ. ಇಂಥ ಸಂದರ್ಭದಲ್ಲಿ ಹೊಸ ತಳಿ ಪತ್ತೆಯಾಯಿತು ಎಂದಾಕ್ಷಣ ಅಯ್ಯೋ ನಮಗೆ ಏನೋ ಸಮಸ್ಯೆಯಾಗಿಬಿಡುತ್ತದೆ ಎಂದು ಭಾವಿಸುವುದು ಬೇಡ. ಈಗಾಗಲೇ ನಾವು ಲಸಿಕೆ ಹಾಕಿಸಿಕೊಂಡಿದ್ದೇವೆ. ಈಗ ಲಸಿಕೆ ನೀಡುವ ಪ್ರಕ್ರಿಯೆಯೂ ವೇಗದಲ್ಲಿದೆ. ಒಂದು ವೇಳೆ ಹೊಸ ಅಲೆ ಬಂದರೂ ಹೆಚ್ಚು ಸಮಸ್ಯೆಯಾಗುವುದಿಲ್ಲ.
Advertisement
ಎಲ್ಲಿ ಹೆಚ್ಚು ಪ್ರಕರಣಗಳು ಪತ್ತೆ?ಕೋವ್-ಲೈನೇಜಸ್.ಆರ್ಗ್ ಪ್ರಕಾರ, ಶೇ.96ರಷ್ಟು ಪ್ರಕರಣಗಳು ಯುಕೆಯಲ್ಲೇ ಪತ್ತೆಯಾಗಿವೆ. ಉಳಿದಂತೆ ಡೆನ್ಮಾರ್ಕ್ ಮತ್ತು ಜರ್ಮನಿಯಲ್ಲಿ ಶೇ.1 ಪ್ರಕರಣಗಳು ದೃಢಪಟ್ಟಿವೆ. ಹಾಗೆಯೇ, ಅಮೆರಿಕ, ಇಸ್ರೇಲ್, ರಷ್ಯಾದಲ್ಲಿಯೂ ಹೊಸ ತಳಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಹೊಸ ತಳಿ ಬರದಂತೆ ತಡೆಯಲು ಏನು ಮಾಡಬೇಕು?
ಸದ್ಯ ನಮಗಿರುವುದು ಒಂದೇ ಮಾರ್ಗ. ಅಂತಾರಾಷ್ಟ್ರೀಯ ವಿಮಾನಗಳಿಂದ ಬರುವವರನ್ನು ತೀವ್ರತರವಾಗಿ ಪರೀಕ್ಷೆಗೆ ಒಳಪಡಿಸಬೇಕು. ಒಂದು ವೇಳೆ ಸೋಂಕಿನ ಲಕ್ಷಣ ಕಂಡುಬಂದಲ್ಲಿ ಪ್ರತ್ಯೇಕವಾಗಿರಿಸಬೇಕು. ಇಂಥ ಕ್ರಮ ತೆಗೆದುಕೊಂಡರೆ, ಇಲ್ಲಿ ಹರಡುವಿಕೆಯ ವೇಗ ತಪ್ಪುತ್ತದೆ. ಡೆಲ್ಟಾ ಮತ್ತು ಹೊಸ ತಳಿ ನಡುವಿನ ವ್ಯತ್ಯಾಸ?
ಭಾರತವೂ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡಿದ್ದ ಡೆಲ್ಟಾ ರೂಪಾಂತರಿಗೂ ಈಗ ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿಗೂ ಅಷ್ಟೇನೂ ದೊಡ್ಡ ವ್ಯತ್ಯಾಸವಿಲ್ಲ. ಇದರಲ್ಲಿ ಅಲ್ಪ ಮಟ್ಟಿಗೆ ಬದಲಾಗಿರಬಹುದು. ಆದರೂ, ಈ ಬದಲಾವಣೆಗಳೇ ಬೇರೆ ಸಮಸ್ಯೆಗಳಿಗೂ ಕಾರಣವಾಗಬಹುದು. ಹೀಗಾಗಿ ಬ್ರಿಟನ್‌ನ ಆರೋಗ್ಯ ತಜ್ಞರು ಇದರ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಇದನ್ನೂ ಓದಿ:ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ ಹರಡುವಿಕೆಯ ಪ್ರಮಾಣ ಎಷ್ಟು?
ಬಿಬಿಸಿಯಲ್ಲಿ ಬಂದಿರುವ ವರದಿ ಪ್ರಕಾರ, ಡೆಲ್ಟಾ ಮತ್ತು ಆಲ್ಫಾ ರೂಪಾಂತರಿಗಳಿಗೆ ಹೋಲಿಕೆ ಮಾಡಿದರೆ, ಈ ಎವೈ.4.2 ರೂಪಾಂತರಿಯ ಹರಡುವಿಕೆ ಪ್ರಮಾಣ ಹೆಚ್ಚಾಗಿಯೇ ಇದೆ. ಅಂದರೆ, ಶೇ.50ರಿಂದ ಶೇ.60ರಷ್ಟು ಹೆಚ್ಚು ವೇಗವಾಗಿ ಹರಡಬಹುದು. ಸದ್ಯದ ಲೆಕ್ಕಾಚಾರದಲ್ಲಿ ಇದರ ಹರಡುವಿಕೆಯ ಪ್ರಮಾಣ ಮಾತ್ರ ಶೇ.10ರಷ್ಟಿದೆ. ಹೊಸ ತಳಿ ಬಗ್ಗೆ ಎಚ್ಚರವಿರಲಿ
ಭಾರತದಲ್ಲಿ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳದೇ ಇದ್ದರೂ, ತೀರಾ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರಕಾರ ಸೂಚಿಸಿದೆ. ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ವೇರಿ ಯಂಟ್‌ನ ಸೋಂಕು ಇಲ್ಲೂ ಕಾಣಿಸಿಕೊಂಡಿದೆ. ಹೀಗಾಗಿ, ಹುಶಾರಾಗಿರಿ. ಸಾಧ್ಯವಾದಷ್ಟು ಹಬ್ಬದ ಸೀಸನ್‌ನಲ್ಲಿ ಸಾಮಾಜಿಕ ಅಂತರ, ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ಹೇಳಿದೆ. ಯಾವುದೇ ಕಾರಣಕ್ಕೂ ಇದರಿಂದ 3ನೇ ಅಲೆ ಬಂದು, ಮತ್ತೆ ಲಾಕ್‌ಡೌನ್ ರೀತಿಯ ನಿರ್ಬಂಧಗಳಿಗೆ ಕಾರಣವಾಗದಂತೆ ಜನತೆಯೂ ಜಾಗ್ರತೆ ವಹಿಸಬೇಕಾಗಿದೆ. ರಷ್ಯಾದಲ್ಲಿ ಭಾರೀ ಹೆಚ್ಚಳ
ಆತಂಕದ ಸ್ಥಿತಿ ಎಂದರೆ, ದಿಢೀರನೇ ರಷ್ಯಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀರಾ ಅಂದರೆ ತೀರಾ ಹೆಚ್ಚಾಗಿದೆ. ಒಂದೇ ದಿನ ಇಲ್ಲಿ 37,930 ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ಬಂದ ಮೇಲೆ ಇದೇ ಮೊದಲ ಬಾರಿಗೆ ಈ ದೇಶದಲ್ಲಿ ಈ ಪ್ರಮಾಣದ ಕೇಸುಗಳು ಕಾಣಿಸಿಕೊಂಡಿವೆ. ಹೀಗಾಗಿ ಅ.30ರಿಂದ ನ.7ರ ವರೆಗೆ ಮನೆಯಿಂದಲೇ ಕೆಲಸ ಮಾಡಿ ಎಂದು ಎಲ್ಲ ನೌಕರರಿಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆದೇಶ ನೀಡಿದ್ದಾರೆ. ಜತೆಗೆ, ಮ್ಯೂಸಿಯಂಗಳು, ಥಿಯೇಟರ್‌ಗಳು, ಕನ್ಸರ್ಟ್ ಸಭಾಂಗಣಗಳಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ನಿಯಂತ್ರಿಸಲಾಗಿದೆ. ಚೀನದಲ್ಲೂ ಹೆಚ್ಚಿದ ಆತಂಕ
ಭಾರತದಲ್ಲಿ ಸದ್ಯ ಹೊಸ ವೇರಿಯಂಟ್‌ನ 17 ಪ್ರಕರಣಗಳು ಪತ್ತೆಯಾಗಿವೆ. ಇವರನ್ನು ಪ್ರತ್ಯೇಕವಾಗಿ ಇರಿಸಿ ಪರಿಶೀಲನೆ ಮಾಡಲಾಗುತ್ತಿದೆ. ಆದರೆ, ಈ ಹೊಸ ರೂಪಾಂತರಿ ಚೀನದಲ್ಲಿ ದೊಡ್ಡ ಪ್ರಮಾಣದ ಆತಂಕವನ್ನೇ ಸೃಷ್ಟಿಸಿದೆ. ಅ.17ರಿಂದ ಶುರುವಾಗಿರುವ ವಾರದಲ್ಲಿ ಚೀನದ 11 ಪ್ಯಾಂತ್ಯಗಳಲ್ಲಿ ಹೊಸ ವೇರಿಯಂಟ್‌ನ ಅಲೆ ಜೋರಾಗಿದೆ. ಇದರಿಂದಾಗಿ ಬಸ್ ಮತ್ತು ಟ್ಯಾಕ್ಸಿಗಳ ಪ್ರಯಾಣವನ್ನು ಈ ಭಾಗಗಳಲ್ಲಿ ರದ್ದು ಮಾಡಲಾಗಿದೆ. ಮಂಗೋಲಿಯಾ ಪ್ರದೇಶದಲ್ಲಿ ಲಾಕ್‌ಡೌನ್ ಅನ್ನೂ ಘೋಷಿಸಲಾಗಿದೆ. ಕರ್ನಾಟಕದಲ್ಲೂ ಪತ್ತೆ
ಕರ್ನಾಟಕದಲ್ಲೂ ಹೊಸ ವೇರಿಯಂಟ್‌ನ ಎರಡು ಪ್ರಕರಣಗಳು ಪತ್ತೆಯಾಗಿವೆ. ಅಂದರೆ, ಆಂಧ್ರದಲ್ಲಿ ಏಳು, ಕೇರಳದಲ್ಲಿ ನಾಲ್ಕು, ಕರ್ನಾಟಕ ಮತ್ತು ತೆಲಂಗಾಣದಲ್ಲಿ ತಲಾ ಎರಡು, ಜಮ್ಮು ಮತ್ತು ಕಾಶ್ಮೀರ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿವೆ. ಎವೈ.4.2 ತೀರಾ ಅಪಾಯಕಾರಿಯೇ?
ಜಗತ್ತಿನ ಬಹುತೇಕ ದೇಶಗಳ ಆರೋಗ್ಯ ಪ್ರಾಧಿಕಾರಿಗಳು, ಈ ವೇರಿಯಂಟ್ ತೀರಾ ಅಪಾಯಕಾರಿ ಎಂದು ಹೇಳಿಲ್ಲ. ಈ ಬಗ್ಗೆ ಇನ್ನೂ ಅಧ್ಯಯನ ನಡೆಸುತ್ತಿವೆ. ಜತೆಗೆ ಲಸಿಕೆ ವಿತರಣೆಯೂ ಆಗುತ್ತಿದೆ. ಈ ವೇರಿಯಂಟ್ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲುದೇ ಎಂಬ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ. ಕೋವಿಡ್ ಮತ್ತು ಹೊಸ ತಳಿಯಬಗ್ಗೆ ವೈದ್ಯರು ಹೇಳುವುದೇನು?
ಡಾ| ಸುಬ್ರಹ್ಮಣ್ಯನ್ ಸ್ವಾಮಿನಾಥನ್, ಚೆನ್ನೈಯ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆ
ಸದ್ಯ ಕೋವಿಡ್ ಸೋಂಕು ಕಡಿಮೆಯಾದತೆ ಕಾಣಿಸಿಕೊಳ್ಳುತ್ತಿದೆ. ಇದು ನಮ್ಮ ಪಾಲಿಗೆ ಉತ್ತಮ ಸುದ್ದಿ. ಆದರೆ,ಕೋವಿಡ್ ನಮ್ಮಿಂದ ದೂರವಾಗಲು ಇನ್ನೂ ಬಹಳಷ್ಟು ವರ್ಷಗಳು ಬೇಕು. ಇದು ಕಹಿ ಸುದ್ದಿ. ಲಸಿಕೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಮುಂದೆ ದೊಡ್ಡ ಮಟ್ಟದ ಅಲೆ ಬರುವ ಸಾಧ್ಯತೆಗಳು ಕಡಿಮೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಯಾಗಿರುವ ದೇಶಗಳಲ್ಲಿ ಮತ್ತೆ ಕೊರೊನಾ ಹೆಚ್ಚಾಗುತ್ತಿರುವುದು ಆತಂಕದ ಸ್ಥಿತಿಯೇ.ಹೀಗಾಗಿ ಹುಶಾರಾಗಿ ಇರಬೇಕು. ಡಾ| ಶಹೀದ್ ಜಮೀಲ್, ಆಕ್ಸಫರ್ಡ್ ವಿವಿ
ಮೂರನೇ ಅಲೆ ಬರುವ ಸಾಧ್ಯತೆಗಳು ತೀರಾ ಕಡಿಮೆ ಇವೆ. ಕಳೆದ ಎರಡು ತಿಂಗಳಲ್ಲಿ ಶೇ.67ರಷ್ಟು ಭಾರತೀಯರು ಕೋವಿಡ್ ವೈರಸ್‌ಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಂಪರ್ಕಕ್ಕೆ ಬಂದಿದ್ದಾರೆ. ಎರಡನೇ ಅಲೆ ಕಾಲದಲ್ಲಿ ಹೆಚ್ಚು ಕಡಿಮೆ ಬಹುತೇಕರಲ್ಲಿ ಗೊತ್ತಿಲ್ಲದೇ ಕೋವಿಡ್ ಬಂದು ಹೋಗಿರಬಹುದು. ಜತೆಗೆ ಲಸಿಕೆ ಪ್ರಮಾಣವೂ ಹೆಚ್ಚಾಗಿದೆ. ಆದರೂ ಕೇರಳ ಮತ್ತು ಪಶ್ಚಿಮ ಬಂಗಾಲದಲ್ಲಿನ ಘಟನೆಗಳನ್ನು ನೋಡಿಕೊಂಡು ಎಚ್ಚರದಿಂದ ಇರಬೇಕು. ನನ್ನ ಪಾಲಿಗೆ ಈ ಹಿಂದಿನ ಎರಡು ಅಲೆಗಳಲ್ಲಿ ಕಂಡಷ್ಟು ಭೀಕರತೆ ಮುಂದೆ ಕಾಣಿಸದೇ ಇರಬಹುದು. ಆದರೂ ನೆನಪಿರಲಿ, ಸದ್ಯ ದೇಶದಲ್ಲಿ ಪೂರ್ಣ ಲಸಿಕೆಯಾಗಿರುವುದು ಕೇವಲ ಶೇ.25ರಷ್ಟು ಮಂದಿಗೆ ಮಾತ್ರ. ಡಾ| ಹೇಮಂತ್ ಥ್ಯಾಕರ್, ಮುಂಬಯಿ
ಕೋವಿಡ್ ಇನ್ನೂ ಇದೆ. ಎಚ್ಚರ ತಪ್ಪಿ ಈ ವರ್ಷವೇನಾದರೂ ಅದ್ದೂರಿಯಾಗಿ ಎಲ್ಲಾ ಕೋವಿಡ್ ನಿಯಂತ್ರಣ ಕ್ರಮ ಮರೆತು ಹಬ್ಬ ಮಾಡಿದರೆ ಮುಂದಿನ ವರ್ಷ ಹಬ್ಬ ಮಾಡುವುದೇ ಕಷ್ಟವಾಗಬಹುದು. ಮುಂದಿನ ನಾಲ್ಕೈದು ತಿಂಗಳು ಕೋವಿಡ್ ವೈರಸ್ ಹೇಗೆ ವರ್ತಿಸಲಿದೆ ಎಂಬುದರ ಮೇಲೆ ಎಲ್ಲವೂ ನಿಂತಿದೆ. ಸದ್ಯ ನಾವು ಕೋವಿಡ್ ಎಂಡಮಿಕ್ ಸ್ಟೇಜ್ ತಲುಪಿದ್ದೇವೆ ಎಂಬುದು ಸತ್ಯ. ಆದರೂ ಎಚ್ಚರವಾಗಿರೋಣ, ಎಚ್ಚರದಿಂದಲೇ ಹಬ್ಬ ಆಚರಣೆ ಮಾಡೋಣ.