Advertisement

ಮೈನ್‌ಪುರಿ ಕಾರ್ಯಕ್ರಮ ಬಲವಂತದ್ದೇ?

02:15 AM Apr 20, 2019 | mahesh |

ರಾಜಕೀಯ ಕ್ಷೇತ್ರದ ಅನಿವಾರ್ಯತೆಯೇ ಹಾಗೆ. ಅಲ್ಲಿ ಆಜನ್ಮ ಶತ್ರುತ್ವ-ಮಿತ್ರತ್ವ ಇಲ್ಲವೇ ಇಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಪಟ್ಟಿಗೆ ಪ್ರತಿ ಪಟ್ಟು, ವ್ಯೂಹಕ್ಕೆ ಪ್ರತಿವ್ಯೂಹ ರಚನೆ ಮಾಡಬೇಕಾಗುತ್ತದೆ. ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಸಮಾಜವಾದಿ
ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಪರವಾಗಿ ಬಹುಜನ ಸಮಾಜ ಪಕ್ಷದ ವರಿಷ್ಠ ನಾಯಕಿ ಮಾಯಾವತಿ ಅವರು ಪ್ರಚಾರ ನಡೆಸಿರುವ ಹಿನ್ನೆಲೆಯಲ್ಲಿ ಈ ಅಂಶಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಬರೋಬ್ಬರಿ 22 ವರ್ಷಗಳ ಕಾಲ ಇಬ್ಬರು ನಾಯಕರು ನಾಯಕರು ಮುಖ ನೋಡಿ ಮಾತನಾಡಿಯೇ ಇರಲಿಲ್ಲ. ಉತ್ತರ ಪ್ರದೇಶದ ವಿಧಾನಸಭೆಯ ಬಳಿಕ ಫ‌ೂಲ್‌ಪುರ್‌, ಗೋರಖ್‌ಪುರ ಲೋಕಸಭೆ ಉಪ- ಚುನಾವಣೆಗಾಗಿ ನಡೆಸಿದ್ದ ಸಮಾಜವಾದಿ ಪಕ್ಷ- ಬಹುಜನ ಸಮಾಜವಾದಿ ಪಕ್ಷದ ಮೈತ್ರಿಯ ಪ್ರಯೋಗ ಯಶಸ್ವಿಯಾದದ್ದೇ ಅದನ್ನು ಹಾಲಿ ಲೋಕಸಭೆ ಚುನಾವಣೆಗಾಗಿ ರೂಪಿಸಲು ನಿರ್ಧರಿಸಲಾಗಿತ್ತು.

Advertisement

ಸಮಾಜವಾದಿ ಪಕ್ಷ-ಬಹುಜನ ಸಮಾಜ ಪಕ್ಷ- ರಾಷ್ಟ್ರೀಯ ಲೋಕದಳ ಪಕ್ಷಗಳ ಮೈತ್ರಿಗೆ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌ಗೆ ಎಳ್ಳಷ್ಟೂ ಮನಸ್ಸು ಇರಲಿಲ್ಲ. ಅವರು ಈ ವಿಚಾರದಲ್ಲಿ ಅನೇಕ ಬಾರಿ ಬಹಿರಂಗವಾಗಿಯೇ ಆಕ್ಷೇಪ ಮಾಡಿದ್ದರು. ಸದ್ಯ ಅವರು ಅಜಂಗಢ ಕ್ಷೇತ್ರದ ಸಂಸದರು. ಇದೀಗ ಶಕ್ತಿಕೇಂದ್ರದಿಂದ ಮತ್ತೆ ಲೋಕಸಭೆಗೆ ಪ್ರವೇಶ ಮಾಡಲು ಮುಂದಾಗಿದ್ದಾರೆ. ಬಿಎಸ್‌ಪಿ ನಾಯಕಿ ಮಾಯಾವತಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗಗಳ ನಕಲಿ ನಾಯಕ; ಮುಲಾಯಂ ಸಿಂಗ್‌ ಯಾದವ್‌ ನಿಜವಾದ ಸಮುದಾಯದ ನಾಯಕ ಎಂದು ಘೋಷಿಸಿದ್ದಾರೆ. ಮುಲಾಯಂ ಕೂಡ ರ್ಯಾಲಿಗೆ ಬಂದಿರುವ ಮಾಯಾವತಿಯವರಿಗೆ ಸ್ವಾಗತ, ಅವರು ನಮ್ಮ ಕಷ್ಟದ ದಿನಗಳಲ್ಲಿ ಜೊತೆಗೆ ಇದ್ದವರು ಎಂದು ಕೊಂಡಾಡಿದ್ದಾರೆ.

ಇಲ್ಲೊಂದು ಕುತೂಹಲಕಾರಿಯಾಗಿರುವ ಅಂಶವಿದೆ. ಬಿಎಸ್‌ಪಿ ನಾಯಕಿಯ ಬಗ್ಗೆ ಮುಕ್ತಕಂಠದಿಂದ ಮಾತನಾಡಿರುವ ಹಿರಿಯ ನಾಯಕ ಉತ್ತರಪ್ರದೇಶದ ದೇವ್‌ಬಂದ್‌, ಬದೌನ್‌, ಆಗ್ರಾದ‌ಲ್ಲಿ ಕೆಲ ದಿನಗಳ ಹಿಂದಷ್ಟೇ ಆಯೋಜಿಸಲಾಗಿದ್ದ ಮೈತ್ರಿಕೂಟದ ಚುನಾವಣಾ ಪ್ರಚಾರದಿಂದ ದೂರವೇ ಇದ್ದರು. ಇಷ್ಟು ಮಾತ್ರವಲ್ಲ, ಪುತ್ರ, ಅಜಂಗಢದಿಂದ ಸ್ಪರ್ಧಿಸಿರುವ ಅಖೀಲೇಶ್‌ ಯಾದವ್‌ ನಾಮಪತ್ರ ಸಂದರ್ಭದಲ್ಲಿಯೂ ಹಿರಿಯ ನಾಯಕನ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಹೀಗಾಗಿ, ಸಂಪೂರ್ಣ ಮನಸ್ಸಿನಿಂದ ಮೈತ್ರಿಕೂಟಕ್ಕೆ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿಕೊಳ್ಳುವುದೇ ಪ್ರಶ್ನಾರ್ಹವಾಗಿದೆ. ಅವರದ್ದೇ ಸ್ಥಳದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಭಾಗವಹಿಸುವುದಕ್ಕೂ ಮಾಜಿ ಮುಖ್ಯಮಂತ್ರಿ ಹಿಂದೇಟು ಹಾಕಿದ್ದರು. ಕೇವಲ ಪುತ್ರ ಅಖೀಲೇಶ್‌ ಯಾದವ್‌ ಒತ್ತಾಯಕ್ಕೆ ಮಣಿದು ಅವರು ಬಂದಿದ್ದರು ಎಂದು ಹೇಳಲಾಗುತ್ತಿದೆ.

1995ರಲ್ಲಿ ಲಕ್ನೋದ ಅತಿಥಿ ಗೃಹದಲ್ಲಿ ಬಿಎಸ್‌ಪಿ ಶಾಸಕನನ್ನು ಅಪಹರಿಸಿದ್ದರ ಜತೆಗೆ, ಮಾಯಾವತಿ ಅವರನ್ನು ಸೆರೆಯಲ್ಲಿಟ್ಟಿದ್ದರು ಎಂದು ಹೇಳಲಾಗಿರುವ ಘಟನೆಯ ಬಳಿಕ 2 ಪಕ್ಷಗಳ ನಡುವೆ ಸಂಬಂಧ ಮುರಿದುಬಿದ್ದಿತ್ತು. ಮೈತ್ರಿ ಸರ್ಕಾರದಿಂದ ಬಿಎಸ್‌ಪಿ ದೂರ ಸರಿದದ್ದಕ್ಕಾಗಿ ಈ ಘಟನೆ ನಡೆದಿತ್ತು ಎಂದು ವಿಶ್ಲೇಷಿಸಲಾಗಿತ್ತು.

1997ರ ಜೂ.15ರಂದು ಮೈನ್‌ಪುರಿಯಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ 2 ತಿಂಗಳ ಅವಧಿಯಲ್ಲಿ ಮಾಯಾವತಿ ಸರ್ಕಾರ ವಜಾಗೊಳ್ಳುತ್ತದೆ ಎಂದಿದ್ದರು. ಈ ದಿನದಿಂದ ಸರಿಯಾಗಿ ನಾಲ್ಕು ದಿನಗಳ ಬಳಿಕ ಲಕ್ನೋದಲ್ಲಿ ಬಿಎಸ್‌ಪಿ ವಿರುದ್ಧ ದೊಡ್ಡ ಪ್ರತಿಭಟನೆಯನ್ನು ಮುಲಾಯಂ ಸಿಂಗ್‌ ಯಾದವ್‌ ಆಯೋಜಿಸಿದ್ದರು. ಅದಕ್ಕೆ ಎಚ್‌.ಡಿ.ದೇವೇಗೌಡ, ಚಂದ್ರಬಾಬು ನಾಯ್ಡು, ಇಂದ್ರಜಿತ್‌ ಗುಪ್ತಾ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

Advertisement

ಮೈನ್‌ಪುರಿಗೆ ಮಾಯಾವತಿಯವರು ಬಂದು ಮೈತ್ರಿಕೂಟದ ಶಕ್ತಿ ಪ್ರದರ್ಶನವಾಗದಿದ್ದರೂ, ಮುಲಾಯಂ ಜಯ ಸಾಧಿಸುವುದು ಖಚಿತ. ಏಕೆಂದರೆ 2014ರಲ್ಲಿ ಅಜಂಗಢವನ್ನು ಉಳಿಸಿಕೊಂಡು ಮೈನ್‌ಪುರಿಗೆ ರಾಜೀನಾಮೆ ನೀಡಿದ ಬಳಿಕ ಉಂಟಾದ ಉಪ ಚುನಾವಣೆಯಲ್ಲಿ ತಮ್ಮ ಸೋದರ ಸಂಬಂಧಿ ತೇಜ್‌ಪ್ರತಾಪ್‌ ಯಾದವ್‌ರನ್ನು ಗೆಲ್ಲಿಸಿದ್ದರು.

ಇನ್ನು ಬಿಜೆಪಿಯ ನಿರೀಕ್ಷೆಯ ಬಗ್ಗೆ ಮಾತನಾಡುವುದಿದ್ದರೆ, ಈ ಕಾರ್ಯಕ್ರಮ ಅದಕ್ಕೆ ಹಿನ್ನಡೆಯೇ. ಹಿಂದಿನ ಚುನಾವಣೆಯಲ್ಲಿ ಪರಾಭವ ಹೊಂದಿದ್ದ ಪ್ರೇಂ ಸಿಂಗ್‌ ಶಕ್ಯಾ ಅವರನ್ನೇ ಕಣಕ್ಕೆ ಇಳಿಸಿದೆ. ಹೀಗಾಗಿ 5 ದಶಕಗಳಿಂದ ಗೆಲ್ಲದೇ ಇರುವ ಕ್ಷೇತ್ರವನ್ನು ಕೈವಶಪಡಿಸಬೇಕೆಂಬ ಮಹತ್ವಾಕಾಂಕ್ಷೆಗೆ ಹಿನ್ನೆಡೆ ಖಚಿತ. ಒಟ್ಟಿನಲ್ಲಿ 2 ಪಕ್ಷಗಳು ನಡೆಸಿರುವ ರ್ಯಾಲಿ, ಮೈತ್ರಿಗೆ ಮುಲಾಯಂರ ಮನಃಪೂರ್ವಕ ಹಾರೈಕೆ ಇಲ್ಲ ಎನ್ನುವುದು ಸ್ಪಷ್ಟ.

Advertisement

Udayavani is now on Telegram. Click here to join our channel and stay updated with the latest news.

Next