Advertisement

ಮತದಾನ ಪ್ರಮಾಣ ಇಳಿಕೆಗೆ ಆದ್ಯತೆ ಕೊರತೆ-ನಿರುತ್ಸಾಹ ಕಾರಣ?

09:59 PM Nov 13, 2019 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆಯಲ್ಲಿ ಈ ಬಾರಿ ಹಿಂದಿನ ಪಾಲಿಕೆ, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳ ಮತದಾನದ ಅಂಕಿ-ಅಂಶಗಳನ್ನು ಪರಿಗಣಿಸಿದರೆ ಕಡಿಮೆ ಮತದಾನವಾಗಿರುವುದು ಇದೀಗ ಒಂದಷ್ಟು ಚರ್ಚೆ ಹುಟ್ಟುಹಾಕಿದೆ. ಗ್ರಾಮಾಂತರ ಪ್ರದೇಶಗಳಿಗೆ ಹೋಲಿಸಿದರೆ ಚುನಾವಣೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನಗರವಾಸಿಗಳ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿರುವುದು ಈ ಪಾಲಿಕೆ ಚುನಾವಣೆ ಮತ್ತೂಮ್ಮೆ ಸಾಬೀತುಪಡಿಸಿದೆ.

Advertisement

ಮಂಗಳವಾರ ನಡೆದಿರುವ ಚುನಾವಣೆಯಲ್ಲಿ ಒಟ್ಟು 3,94,894 ಮತದಾರರಲ್ಲಿ 1,12,806 ಪುರುಷರು ಹಾಗೂ 1,22,412 ಮಹಿಳೆಯರು ಸಹಿತ ಒಟ್ಟು 2,35,235 ಮಂದಿ ಮತ ಚಲಾಯಿಸಿದ್ದು, ಶೇ.59.57 ಮತದಾನವಾಗಿದೆ. ಅಂದರೆ 1,59,359 ಮತದಾರರು ಈ ಬಾರಿ ಮತದಾನದಿಂದ ಹೊರಗುಳಿದಿದ್ದಾರೆ.

2013ರ ಮಾ.7 ರಂದು ನಡೆದಿದ್ದ ಪಾಲಿಕೆ ಚುನಾವಣೆಗೆ ಇದ್ದ 3,26,995 ಮತದಾರರಲ್ಲಿ 99,422 ಪುರುಷರು, 1,07,539 ಮಹಿಳೆಯರು ಸಹಿತ ಒಟ್ಟು 2,06,961 ಮಂದಿ ಮತ ಚಲಾಯಿಸಿದ್ದು, ಶೇ.63.29 ಮತದಾನವಾಗಿತ್ತು. 1,20,034 ಮಂದಿ ಅಂದಿನ ಚುನಾವಣೆಯಲ್ಲಿ ಮತದಾನದಿಂದ ಹೊರಗುಳಿದಿದ್ದರು. 2013ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾರರ ಸಂಖ್ಯೆಯಲ್ಲಿ 67,899 ಮಂದಿ ಹೆಚ್ಚಳವಾಗಿದೆ. ಹೀಗಿದ್ದರೂ ಮತದಾನದ ಪ್ರಮಾಣ ಈ ಬಾರಿ ಕುಸಿದಿರುವುದು ಗಮನಾರ್ಹ ವಿಚಾರ.

ಪಾಲಿಕೆ ಚುನಾವಣೆಗೆ ನಿರಾಸಕ್ತಿ ?
7 ತಿಂಗಳ ಹಿಂದೆ ನಡೆದಿದ್ದ ಲೋಕಸಭಾ ಚುನಾವಣೆ, 17 ತಿಂಗಳ ಹಿಂದೆ ನಡೆದಿದ್ದ ವಿಧಾನಸಭಾ ಚುನಾವಣೆಗಳಲ್ಲಿ ಆಗಿರುವ ಮತದಾನಕ್ಕೆ ಹೋಲಿಸಿದರೆ, ಈ ಪಾಲಿಕೆ ಚುನಾವಣೆ ಮತದಾನದಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡುಬಂದಿದೆ. ಇದು ವಿಧಾನಸಭೆ, ಲೋಕಸಭೆಯಂತಹ ಸಾರ್ವತ್ರಿಕ ಚುನಾವಣೆಗಳಿಗೆ ನೀಡುವ ಮಹತ್ವವನ್ನು ಮತದಾರರು ಮತ್ತು ಚುನಾವಣಾ ವ್ಯವಸ್ಥೆ ಪಾಲಿಕೆ ಚುನಾವಣೆಗೆ ನೀಡುತ್ತಿಲ್ಲವೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.67.21ರಷ್ಟು ಮತದಾನವಾಗಿತ್ತು. ಪಾಲಿಕೆಯ 60 ವಾರ್ಡ್‌ಗಳ ಪೈಕಿ ದಕ್ಷಿಣ ವಿಧಾನಸಭಾ ಕ್ಷೇತ್ರ 38 ವಾರ್ಡ್‌ಗಳನ್ನು ಹೊಂದಿದ್ದು, ಪೂರ್ತಿಯಾಗಿ ಪಾಲಿಕೆ ವ್ಯಾಪ್ತಿಗೆ ಬರುತ್ತದೆ. ಎಪ್ರಿಲ್‌ನಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇ.70.71ರಷ್ಟು ಮತದಾನವಾಗಿದ್ದು, ಇದಕ್ಕೆ ಹೋಲಿಸಿದರೆ ಪಾಲಿಕೆ ಚುನಾವಣೆಯಲ್ಲಿ ಶೇ.11ರಷ್ಟು ಮತದಾನ ಕಡಿಮೆಯಾಗಿದೆ. 2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಶೇ.8ರಷ್ಟು ಮತದಾನ ಕಮ್ಮಿಯಾಗಿದೆ. ಉತ್ತರ ವಿಧಾನಸಭಾ ಕ್ಷೇತ್ರ ಪಾಲಿಕೆಯ 22 ವಾರ್ಡ್‌ಗಳನ್ನು ಹೊಂದಿದೆ. ಇಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.75.31ರಷ್ಟು ಮತದಾನವಾಗಿದ್ದು, ಇದಕ್ಕೆ ಹೋಲಿಸಿದರೆ ಪಾಲಿಕೆ ಚುನಾವಣೆಯಲ್ಲಿ ಶೇ.26ರಷ್ಟು ಕಡಿಮೆ ಮತದಾನವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಶೇ.74.55ರಷ್ಟು ಮತದಾನವಾಗಿದ್ದು, ಈ ಬಾರಿ ಮತದಾನವನ್ನು ಪರಿಗಣಿಸಿದರೆ ಶೇ.25ರಷ್ಟು ಕಡಿಮೆ ಮತದಾನ ದಾಖಲಾಗಿದೆ.

Advertisement

ಚುನಾವಣ ವ್ಯವಸ್ಥೆ ಕಾರಣಗಳು
ಕಳೆದ ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ಮತದಾರರ ಜಾಗೃತಿ ನಿಟ್ಟಿನಲ್ಲಿ ಚುನಾವಣ ಆಯೋಗದಿಂದ ಸ್ವೀಪ್‌ ಸಹಿತ ವ್ಯಾಪಕ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಾಲಿಕೆ ಚುನಾವಣೆಯಲ್ಲಿ ಇಂತಹ ಯಾವುದೇ ಜಾಗೃತಿ ಕಾರ್ಯಕ್ರಮಗಳು ಆಯೋಜಿಸಿರಲಿಲ್ಲ. ಪಾಲಿಕೆ ಚುನಾವಣೆಗೆ ಸಿದ್ಧತೆಗಳಿಗೆ ಕಾಲಾವಕಾಶ ಕಡಿಮೆ ಇದ್ದುದು, ಇದಕ್ಕೆ ಕಾರಣವಾಗಿರಬಹುದು. ವಾರ್ಡ್‌ ಮರು ವಿಂಗಡನೆಯಿಂದಾಗಿ ಕಳೆದ ಬಾರಿಯ ವಾರ್ಡ್‌ನಲ್ಲಿದ್ದ ಪ್ರದೇಶಗಳಲ್ಲಿ ಕೆಲವು ಪ್ರದೇಶಗಳು ಇತರ ವಾರ್ಡ್‌ಗೆ ಹಂಚಿಕೆಯಾಗಿದೆ. ಇದರ ಪರಿಣಾಮ ಅವರ ಮತದಾನ ಕೇಂದ್ರವೂ ಬದಲಾಗಿದ್ದು ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಜತೆಗೆ, ವಾರ್ಡ್‌ ಮೀಸಲಾತಿ ಪ್ರಕ್ರಿಯೆಯಲ್ಲಿನ ಬದಲಾವಣೆ ಕೂಡ ಮತದಾನ ಪ್ರಮಾಣದಲ್ಲಿ ಏರುಪೇರು ಆಗುವುದಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next