Advertisement

Yakshagana: ಪ್ರಸಂಗದ ರೂಪ, ಹಾಡಿನ ಬದಲಾವಣೆ ಸರಿಯೇ?

03:13 PM Nov 06, 2023 | Team Udayavani |

ಯಕ್ಷಗಾನವು ಕಲಾಪ್ರಕಾರಗಳಲ್ಲೇ ಶ್ರೇಷ್ಠವಾದುದು. ಗಾನ, ನರ್ತನ, ಅಭಿನಯ, ಶ್ರುತಿ, ಲಯ, ಮಾತುಗಾರಿಕೆ, ಬಣ್ಣಗಾರಿಕೆ, ವೇಷಭೂಷಣಗಳೆಲ್ಲವೂ ಮೇಳೈಸಿ ಇದನ್ನು ಇತರ ಕಲಾಪ್ರಕಾರಗಳಿಗಿಂತ ಮೇಲ್ಪಂಕ್ತಿಯಲ್ಲಿ ನಿಲ್ಲುವಂತೆ ಮಾಡಿದೆ. ಕೇವಲ ಒಂದು ಸಣ್ಣ ರಂಗಸ್ಥಳದಲ್ಲಿ ಹದಿನಾಲ್ಕು ಲೋಕ ಗಳನ್ನೂ, ಮಾನವ, ದೇವ, ದಾನ ವರನ್ನೂ ಸೃಷ್ಟಿಸಿ, ಜನರಿಗೆ ಮುಟ್ಟಿ ಸುವುದರಲ್ಲಿ ಈ ಕಲೆ ಸಫ‌ಲ ವಾಗುತ್ತದೆ.

Advertisement

ಹಳೆಯ ಯಕ್ಷಗಾನ ಪ್ರಸಂ ಗಗಳು ರಾಮಾಯಣ, ಮಹಾ ಭಾರತ, ಭಾಗವತ ಪುರಾಣಗಳನ್ನು ಆಧರಿಸಿ ರಚಿಸಿದ ಲಿಖೀತ ಕಾವ್ಯ ಗಳಾಗಿದ್ದು, ಈಗ ಈ ಸಾಲಿಗೆ ಕಾಲ್ಪನಿಕ ಕತೆಗಳೂ ಸೇರಿವೆ. ಪ್ರಸಂಗ ಯಾವುದೇ ಇದ್ದರೂ ಕವಿಯು ಪದ್ಯಗಳ ರಾಗ, ತಾಳಗಳ ಮಾಹಿತಿಯನ್ನು ಪದ್ಯಗಳ ಆರಂಭದಲ್ಲೇ ಉಲ್ಲೇಖೀಸಿರುತ್ತಾನೆ. ಈ ಪದ್ಯಗಳನ್ನು ಭಾಗ ವತರು ಶ್ರುತಿ, ತಾಳ, ಚೆಂಡೆ, ಮದ್ದಲೆಗಳೊಂದಿಗೆ ಹಾಡಿದಾಗ ವೇಷಧಾರಿಗಳು ಪದ್ಯದ ಅರ್ಥಕ್ಕೆ ಸಮನಾದ ಅಭಿನಯಗಳೊಂದಿಗೆ ಕುಣಿದು ಪದ್ಯದ ಮುಗಿದ ಬಳಿಕ ಅರ್ಥವನ್ನು ಸಂಭಾಷಣೆ ರೂಪದಲ್ಲಿ ವಿವರಿ ಸುವುದು ಯಕ್ಷಗಾನದ ವೈಶಿಷ್ಟ್ಯ .
ಹಳೆಯ ಯಕ್ಷಗಾನ ಕವಿಗಳು ರಚಿಸಿದ ಪ್ರಸಂಗಗಳು ಇಡೀ ರಾತ್ರಿಯ (ಸುಮಾರು ಆರೇಳು ಗಂಟೆಗಳ) ಪ್ರಸಂಗಗಳಾಗಿದ್ದು, ಎಲ್ಲ ಪದ್ಯಗಳನ್ನು ಕವಿಯು ನಿರ್ದೇಶಿಸಿದ ರಾಗ, ತಾಳಗಳಲ್ಲೇ ಹಾಡುವ ಕ್ರಮವಿತ್ತು. ಪ್ರಸಂಗದಲ್ಲಿ ಹೇಳಲಾದ ಎಲ್ಲ ಪಾತ್ರಗಳನ್ನೂ ರಂಗದಲ್ಲಿ ಪ್ರದರ್ಶಿಸಲಾಗುತ್ತಿತ್ತು.

ಆದರೆ ಕಾಲಕ್ರಮೇಣ ಯಕ್ಷ ಗಾನದ ಪ್ರಸಂಗಗಳು ಹರಿಯುವ ನದಿಯ ನೀರಿನಂ ತಾಗಿ ಆಡುವವರು ಅವರವರಿಗೆ ಬೇಕಾದಷ್ಟನ್ನು ಮಾತ್ರ ಮೊಗೆದು ಅವರವರಿಗೆ ಬೇಕಾದ ಹಾಗೆ (ಹಂಸಕ್ಷೀರ ನ್ಯಾಯದಂತೆ) ಉಪಯೋಗಿಸುವ ಕ್ರಮ ಚಲಾವಣೆಗೆ ಬಂತು. ಈಗಂತೂ ಮೂಲ ಪ್ರಸಂಗವು ರಂಗಕ್ಕೆ ಬರು ವಾಗ ಎಷ್ಟು ಬದಲಾವಣೆಯಾಗಿರುತ್ತದೆ ಎಂದರೆ ಆ ಮೂಲ ಕವಿಯು ಸಭೆಯಲ್ಲಿದ್ದು ಪ್ರದರ್ಶನವನ್ನು ವೀಕ್ಷಿಸುತ್ತಿದ್ದರೆ ಇದು ತನ್ನದೇ ಪ್ರಸಂಗವೆಂದು ಗುರುತು ಹಿಡಿಯಲಾರನೋ ಏನೋ. ಏಕೆಂದರೆ ಭಾಗವತರು ಯಾವುದೇ ನಿರ್ದಿಷ್ಟ ರಾಗದ ಪದ್ಯವನ್ನು ಬೇರೆ ರಾಗ ದಲ್ಲಿ, ಹಾಗೆಯೇ ಒಂದು ನಿರ್ದಿಷ್ಟವಾದ ತಾಳದಲ್ಲಿ ರಚಿತವಾದ ಪದ್ಯವನ್ನು ಇನ್ಯಾವುದೋ ತಾಳದಲ್ಲಿ ಹಾಡಿ ದರೂ ಪ್ರಶ್ನಿಸುವವರಿಲ್ಲ, ಪ್ರಶ್ನಿಸುವಂತಿಲ್ಲ. ಪಾತ್ರಗಳ ವಿಷಯದಲ್ಲಂತೂ ಚಾಪೆ ಇದ್ದಷ್ಟೇ ಕಾಲು ಚಾಚಬೇಕೆಂಬಂತೆ ತಮ್ಮಲ್ಲಿರುವ ಕಲಾವಿದರ ಸಂಖ್ಯೆ ಮತ್ತು ಬಲಾನುಬಲಗಳ ಆಧಾರದಲ್ಲಿ ಪಾತ್ರಗಳನ್ನೂ ಆಯ್ಕೆ ಮಾಡಿ ಮೂಲ ಕೃತಿಯಲ್ಲಿ ಹದಿನೈದು ಪಾತ್ರಗಳಿದ್ದರೂ ಕೇವಲ ಎಂಟು ವೇಷದೊಂದಿಗೆ ಮುಗಿಯುವುದೂ ಇದೆ. ಒಂದು ರೀತಿಯಲ್ಲಿ ಈ ಸ್ವಾತಂತ್ರ್ಯವು ಒಳ್ಳೆಯದಾದರೂ, ಮೂಲ ಕವಿಯ ಆಶಯವನ್ನು ಗಮನದಲ್ಲಿಟ್ಟುಕೊಂಡರೆ ಇದೊಂದು ಸ್ವೇಚ್ಛಾಪ್ರವೃತ್ತಿ, ಸಾಹಿತ್ಯ ತಿರುಚುವಿಕೆ ಎಂದೆನಿಸಬಹುದು.

ಈಗಿನ ಕಾಲದಲ್ಲಿ ಸಾಹಿತ್ಯ, ಸಂಗೀ ತಕ್ಕೂ ಪೇಟೆಂಟ್‌, ಕಾಪಿರೈಟ್‌ಗಳಿದ್ದು, ಅವುಗಳ ತಿರುಚುವಿಕೆ ಅಪರಾಧ ವಾಗುತ್ತದೆ. ಆದರೆ ಯಕ್ಷಗಾನ ಸಾಹಿತ್ಯವನ್ನು ರಚಿಸಿದ ಕವಿಗಳಲ್ಲಿ ಹೆಚ್ಚಿನವರು ಈ ಪೇಟೆಂಟ್‌ ಯುಗದ ಮೊದಲಿನವರಾಗಿದ್ದು ಅವರ ಸಾಹಿತ್ಯದ ದುರುಪಯೋಗವಾದರೂ ಯಾರೂ ಪ್ರಶ್ನಿಸುವವರಿಲ್ಲ. ಯಕ್ಷಗಾನದಲ್ಲಿ ತುರುಕಲ್ಪಡುತ್ತಿರುವ ಭಾವಗೀತೆಗಳು, ಜಾನಪದ ಗೀತೆಗಳು, ಸಿನೆಮಾ ಸಂಗೀತಗಳನ್ನೂ ಪ್ರಶ್ನಿಸುವವರಿಲ್ಲ. ಯಕ್ಷಗಾನವು ತನ್ನ ಮೂಲ ಸ್ವರೂಪವನ್ನು ಉಳಿಸಿಕೊಳ್ಳಬೇಕಾದರೆ ಯಕ್ಷಗಾನ ಕವಿಗಳಿಗೆ ನಿಜ ಅರ್ಥದ ಗೌರವ ಸಿಗಬೇಕಾದರೆ ಅವರ ಆಶಯಕ್ಕೆ ತಕ್ಕಂತೆ ಅವರ ಹಾಡುಗಳನ್ನು ಅವರು ಅಳವಡಿಸಿದ ರಾಗ, ತಾಳಗಳಲ್ಲೇ ಹಾಡಿ ಅವರು ಹೇಳಿದ ಪಾತ್ರಗಳನ್ನೇ ಬಳಸಿ ಪ್ರಸಂಗವನ್ನು ಮುನ್ನಡೆ ಸಬೇಕು. ಸಮಯದ ಅಭಾವ, ಕಲಾವಿದರ ಅಭಾವ ಇತ್ಯಾದಿ ಇದ್ದರೆ ಪ್ರಸಂಗ ಆರಂಭದಲ್ಲಿ ಎಷ್ಟೊಂದು ಪಾತ್ರಗಳನ್ನೂ ಯಾವ ಕಾರಣಕ್ಕೆ ಕೈಬಿಡಲಾಗಿದೆ ಮತ್ತು ಎಷ್ಟು ಪದ್ಯಗಳನ್ನು ಬಿಡಲಾಗಿದೆ ಎನ್ನುವ ಬಗ್ಗೆ ಒಂದೆರಡು ಮಾತುಗಳನ್ನಾಡಿ ಮೂಲ ಕವಿಯಲ್ಲಿ ಕ್ಷಮೆ ಯಾಚಿಸಿ ಪ್ರಸಂಗವನ್ನು ಆರಂಭಿಸುವುದು ಒಳ್ಳೆಯ ಕ್ರಮವಾದೀತು. ತಮಗೆ ಇಷ್ಟಬಂದ ರಾಗ, ತಾಳದಲ್ಲಿ ಹಾಡುವುದು, ಮೂಲ ಪ್ರಸಂಗದಲ್ಲಿಲ್ಲದ ಹಾಡುಗಳನ್ನು ತುರುಕುವುದು ಅಪರಾಧ ಮತ್ತು ಮೂಲ ಕವಿಗೆ ಮಾಡುವ ಅವಮಾನವಲ್ಲವೇ?

*ಡಾ|ಸತೀಶ್‌ ನಾಯಕ್‌, ಆಲಂಬಿ

Advertisement
Advertisement

Udayavani is now on Telegram. Click here to join our channel and stay updated with the latest news.

Next