ಬೆಂಗಳೂರು: ಸಿಬಿಐ ಅಂದರೆ ಪೊಲೀಸ್ ಸ್ಟೇಷನ್ನೋ ಅಥವಾ ಯಾವುದೋ ತನಿಖಾ ಆಯೋಗ ಅಂದು ಕೊಂಡಿದ್ದೀರಾ ? ಏನೇ ಪ್ರಕರಣವಿದ್ದರೂ ಸಿಬಿಐನೇ ತನಿಖೆ ನಡೆಸಬೇಕಾ? ಹೀಗೆಂದು ಹೈಕೋರ್ಟ್ ಪ್ರಶ್ನಿಸಿದೆ.
ಅರ್ಜಿಯೊಂದರ ವಿಚಾರಣೆ ವೇಳೆ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅರ್ಜಿದಾರರ ಕೋರಿಕೆಯನ್ನು ಗಮನಿಸಿದ ಮುಖ್ಯ ನ್ಯಾ. ಎ.ಎಸ್. ಓಕ್ ಈ ರೀತಿ ಅರ್ಜಿದಾರರ ಪರ ವಕೀಲರಿಗೆ ತೀಕ್ಷ್ಣವಾಗಿ ಪ್ರಶ್ನಿಸಿದರು.
ಬಿಬಿಎಂಪಿ ವತಿಯಿಂದ ಮೌಂಟೆಡ್ ಮೆಕಾನಿಕಲ್ ಸ್ವೀಪಿಂಗ್ ಮಷಿನ್ ಖರೀದಿಯಲ್ಲಿ ಹಗರಣ ನಡೆದಿದ್ದು, ಅದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆರ್. ಗೋಪಾಲ್ ಎಂಬುವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಇದರಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಇತ್ತೀಚಿಗೆ ಸಿಬಿಐ ತನಿಖೆ ಕೋರುವ ಮನವಿಗಳು ಹೆಚ್ಚಾಗುತ್ತಿವೆ. ಪ್ರಕರಣವೇನು, ಅದರ ಕಾನೂನು ವ್ಯಾಪ್ತಿ ಯಾವುದು ಅನ್ನುವುದನ್ನು ಗಮನಸಿದೆ ನೇರವಾಗಿ ಸಿಬಿಐ ತನಿಖೆಗೆ ಕೊಡಿ ಎಂದು ಅರ್ಜಿದಾರರು ಮನವಿ ಮಾಡುತ್ತಾರೆ. ಅಷ್ಟಕ್ಕೂ ಸಿಬಿಐ ಅಂದರೆ ಪೊಲೀಸ್ ಠಾಣೆಯೇ ಎಂದು ಪ್ರಶ್ನಿಸಿ, ಆಕ್ಷೇಪಣೆ ಸಲ್ಲಿಸಲು ಬಿಬಿಎಂಪಿಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದರು.
ಅರ್ಜಿದಾರರ ವಾದವೇನು?: ನಗರದ ಪ್ರಮುಖ ರಸ್ತೆಯಲ್ಲಿ ಕಸ ಗುಡಿಸಲು ಎಂಟು ಟ್ರಕ್ ಮೌಂಟೆಡ್ ಮೆಕಾನಿಕಲ್ ಸ್ವೀಪಿಂಗ್ ಮಷಿನ್‌ಗಳನ್ನು ಬಿಬಿಎಂಪಿ ಖರೀದಿಸಿದೆ. ವಾಸ್ತವದಲ್ಲಿ ಒಂದು ಸ್ವೀಪಿಂಗ್ ಮಷಿನ್ ಬೆಲೆ 65 ಲಕ್ಷ ರೂ. ಆಗಿದೆ.
ಆದರೆ, ಬಿಬಿಎಂಪಿ ಮಾತ್ರ 1.18 ಕೋಟಿ ರೂ.ಗೆ ತಲಾ ಒಂದರಂತೆ ಎಂಟು ಸ್ವೀಪಿಂಗ್ ಮೆಷಿನ್ ಖರೀದಿಸಲಾಗಿದೆ. ಇದರಿಂದ ಪಾಲಿಕೆಯ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ಮೆಷಿನ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಅರ್ಜಿದಾರರು ಸಿಬಿಐ ತನಿಖೆಗೆ ಒತ್ತಾಯಿಸಿ ದೂರು ಸಲ್ಲಿಸಿದ್ದರು.