Advertisement

ಅಪಘಾತಕ್ಕೆ ಕಾರಣವಾದ ಇಲಾಖೆ ವಿರುದ್ಧವೇ ಕೇಸ್‌?

03:25 PM Jul 16, 2019 | Team Udayavani |

ಕಾರವಾರ: ರಸ್ತೆ ಅಪಘಾತ ಸಂಭವಿಸಿದರೆ ಘಟನೆಗೆ ಕಾರಣವಾದ ಇಲಾಖೆ ವಿರುದ್ಧವೇ ಏಕೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಾರದು ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಲೋಕೋಪಯೋಗಿ ಇಲಾಖೆ, ಕೆಇಬಿ ಮತ್ತು ಸಾರಿಗೆ ಇಲಾಖೆಗಳ ಮುಖ್ಯಸ್ಥರನ್ನು ಪ್ರಶ್ನಿಸಿದರು.

Advertisement

ಡಿಸಿ ಕಚೇರಿಯಲ್ಲಿ ನಡೆದ ಪ್ರಾದೇಶಿಕ ರಸ್ತೆ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಸ್ತೆಗಳಲ್ಲಿ ವಾಹನ ಸವಾರರಿಗೆ ಪೂರಕವಾಗಿ ಸರಿಯಾದ ಸೂಚನಾ ಫಲಕಗಳನ್ನು ಅಳವಡಿಸದೇ ಇರುವುದು, ರಸ್ತೆಯ ಅಂಚಿನಲ್ಲೇ ವಿದ್ಯುತ್‌ ಕಂಬ ಅಳವಡಿಸಿರುವುದು, ರಸ್ತೆ ಕಾಣದಂತೆ ಗಿಡ, ಮರಗಳು ಬೆಳೆದಿರುವುದು, ನಿಯಮಾನುಸಾರ ಸಮತಟ್ಟಾಗಿ ರಸ್ತೆಗಳನ್ನು ನಿರ್ಮಿಸದೆ ಅತಿ ಹೆಚ್ಚು ಉಬ್ಬು ತಗ್ಗುಗಳಿಂದ ರಸ್ತೆ ನಿರ್ಮಾಣ. ಇಂತಹ ಕಾರಣಗಳಿಂದಲೇ ಜಿಲ್ಲೆಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ದಾಖಲೆಗಳಿದ್ದು, ಘಟನೆ ನಂತರವೂ ಸರಿಪಡಿಸದೆ ತಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುವುದಾದರೆ ಅಪಘಾತಕ್ಕೆ ಕಾರಣವಾದ ಇಲಾಖೆ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ಏಕೆ ದಾಖಲಿಸಬಾರದು ಎಂದು ಕಿಡಿಕಾರಿದರು.

ರಸ್ತೆ ಸುರಕ್ಷತೆ ಬಗ್ಗೆ ಪ್ರತಿ ಸಭೆಗಳಲ್ಲೂ ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಕರ್ತವ್ಯಗಳ ಬಗ್ಗೆ ತಿಳಿಸಲಾಗುತ್ತದೆ. ಸುಪ್ರೀಕೋರ್ಟ್‌ ಆದೇಶದಂತೆ ಪ್ರತಿವರ್ಷ ಕನಿಷ್ಠ ಶೇ.10ರಷ್ಟು ಅಪಘಾತಗಳು ಕಡಿಮೆಯಾಗಬೇಕು ಎಂದು ನಿಯಮವಿದೆ. ಆದರೂ ನಮ್ಮ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ನಿರ್ಲಕ್ಷದಿಂದಲೇ ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಎಂದು ಅವರು ಹೇಳಿದರು.

ಹೊಸದಾಗಿ ರಸ್ತೆ ಪಕ್ಕದಲ್ಲಿ ವಿದ್ಯುತ್‌ ಕಂಬಗಳನ್ನು ಹಾಕುವಾಗಲೂ ನಿಯಮಾನುಸಾರ ರಸ್ತೆಯಿಂದ ನಿಗದಿತ ಅಂತರದಲ್ಲಿ ಕಂಬ ಇರಬೇಕು. ಆದರೆ ಹೆಸ್ಕಾಂನಿಂದ ರಸ್ತೆ ಪಕ್ಕದ ಒಂದು ಅಡಿಯಲ್ಲಿಯೇ ಕಂಬಗಳನ್ನು ನೆಡಲಾಗಿದೆ. ಇದರಿಂದ ಸಂಭವಿಸುವ ಸಾವಿಗೆ ಯಾರು ಕಾರಣ. ರಾಷ್ಟ್ರೀಯ ಹೆದ್ದಾರಿ ರಸ್ತೆ ಕೂಡುವಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲ ಅಥವಾ ರಸ್ತೆ ಅಂಚಿನಲ್ಲಿ ಪಟ್ಟೆಗಳನ್ನು ಬಳಿದಿಲ್ಲ. ಇನ್ನು ರಸ್ತೆ ಬದಿಯಲ್ಲಿ ಗಿಡಗಳು ಬೆಳೆದು ರಸ್ತೆ ಮಧ್ಯಭಾಗಕ್ಕೆ ಬಂದಿರುತ್ತದೆ. ರಸ್ತೆ ನಿರ್ಮಾಣ ಪ್ರಾಧಿಕಾರಿಗಳು ಅದನ್ನು ಅರಣ್ಯ ಇಲಾಖೆ ಸಹಕಾರ ಪಡೆದು ಕಟಾವು ಮಾಡುವುದಿಲ್ಲ. ಅರಣ್ಯ ಇಲಾಖೆ ತಮ್ಮ ಗಮನಕ್ಕಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರ ಜೀವ ಹಾನಿಯಾದರೆ ಯಾರು ಹೊಣೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಕೋಶ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದವರು ತಮ್ಮ ವ್ಯಾಪ್ತಿಯ ಪೊಲೀಸ್‌ ಉಪಾಧೀಕ್ಷಕರ ನೇತೃತ್ವದಲ್ಲಿ ಪ್ರತಿ ತಾಲೂಕುವಾರು ಪ್ರವಾಸ ಮಾಡಿ ಅಪಘಾತ ಸಂಭವಿಸಬಹುದಾದ ಸ್ಥಳಗಳನ್ನು ಗುರ್ತಿಸಿ, ಸರಿಪಡಿಸಿ ಫೋಟೋ ಸಹಿತ ಸಮಿತಿಗೆ ವರದಿ ನೀಡಬೇಕು ಎಂದು ತಿಳಿಸಿದರು.

ಎಸ್ಪಿ ವಿನಾಯಕ ಪಾಟೀಲ್, ಅಪಘಾತ ಸಂಭವಿಸಬಹುದಾದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಪ್ರದರ್ಶಿಸಿ, ಮಾಜಾಳಿ ಪ್ರದೇಶದಲ್ಲಿ ತೆರೆದ ರಸ್ತೆ ವಿಭಜಕ ಮುಚ್ಚುವಂತೆ ರಾಹೆ ಪ್ರಾಧಿಕಾರಕ್ಕೆ ಅಧಿಕೃತ ಪತ್ರ ಬರೆದರೂ ಈವರೆಗೆ ಕ್ರಮವಹಿಸಿಲ್ಲ ಎಂದು ಪ್ರಾಧಿಕಾರದ ಅಧಿಕಾರಿ ವಿರುದ್ಧ ಕಿಡಿಕಾರಿದರು.

ಎಷ್ಟು ಜನರ ಪ್ರಾಣ ತೆಗೆದುಕೊಳ್ಳುತ್ತೀರಿ?; ಒಬ್ಬನ ಜೀವ ಹಾನಿಯೂ ದೊಡ್ಡ ನಷ್ಟವೇ ಎಂಬ ಅರಿವು ತಮಗೆ ಇರಬೇಕು. ಎಷ್ಟು ಜನರ ಪ್ರಾಣ ತೆಗೆದುಕೊಳ್ಳುತ್ತೀರಿ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ಪೂರ್ಣಗೊಂಡ ರಸ್ತೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಅಗತ್ಯವಿರುವೆಡೆ ರಸ್ತೆ ಉಬ್ಬುಗಳನ್ನು ಅಳವಡಿಸಬೇಕು, ವಿವಿಧ ಇಲಾಖೆಯ ಪರಸ್ಪರ ಸಹಕಾರ ಪಡೆದು ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಚಾಲನಾ ನಿರ್ಲಕ್ಷ್ಯದ ವರದಿ ಆಧರಿಸಿ ಪ್ರಾದೇಶಿಕ ರಸ್ತೆ ಸಾರಿಗೆ ಇಲಾಖೆ ಚಾಲಕನ ಪರವಾನಗಿ ಅಮಾನತ್ತಿನಲ್ಲಿಡಬೇಕು. ಸಂಬಂಧಿಸಿದ ವಾಹನ ನೋಂದಣಿ ಅಮಾನತುಗೊಳಿಸುವುದರಿಂದ ಕನಿಷ್ಠ ರಸ್ತೆ ಸುರಕ್ಷತೆ ಬಗ್ಗೆ ಚಾಲಕರಿಗೆ ಜವಾಬ್ದಾರಿ ಬರುತ್ತದೆ ಎಂದರು.

ಶಾಲಾ ಮಕ್ಕಳಿಗೆ ಆಟೋ ಬಳಕೆ ನಿಷೇಧ: ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಜಾಗೃತಿ, ಆಟೋ ಬಳಕೆ ನಿಷೇಧ, ಸ್ಥಳೀಯ ಸಂಸ್ಥೆಗಳಲ್ಲಿ ರಸ್ತೆ ಸುರಕ್ಷತೆಗೆ ವಿಶೇಷ ಅನುದಾನ ಮೀಸಲು, ಹೆದ್ದಾರಿ ಪಕ್ಕದ ಡಾಬಾ, ಹೋಟೆಲ್ಗಳನ್ನು ಅಕ್ರಮ ಮದ್ಯ ಮಾರಾಟ ಕಟ್ಟುನಿಟ್ಟಿನ ನಿಷೇಧ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಪವಾರ್‌, ಹೆಚ್ಚುವರಿ ಎಸ್ಪಿ ಗೋಪಾಲ್ ಬ್ಯಾಕೋಡ್‌ ಉಪಸ್ಥಿತರಿದ್ದರು. ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಟ್ಯಾಕ್ಸಿ, ಬಸ್‌, ಆಟೋ ಮಾಲೀಕರ ಸಂಘದ ಅಧ್ಯಕ್ಷರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next