Advertisement

ಹರ್ನಿಯಾ ಕಾಯಿಲೆಗೆ ಶಸ್ತ್ರ ಚಿಕಿತ್ಸೆ ಅನಿವಾರ್ಯವೇ ?

03:03 PM Nov 13, 2022 | Team Udayavani |

ಹರ್ನಿಯಾ ಎಂಬುದು ಬಹಳ ಸಾಮಾನ್ಯವಾದ ಕಾಯಿಲೆಗಳಲ್ಲಿ ಒಂದು. ಒಬ್ಬರಿಗೆ ಹರ್ನಿಯಾ ಇದೆ ಎಂದು ಗೊತ್ತಾದಾಗ ಅವರ ಬಗ್ಗೆ ಹಿತೈಷಿಗಳೂ ಕೂಡ ಕನಿಕರ ಸೂಚಿಸುವ ಕಾಲವೊಂದಿತ್ತು. ಬಹುಶಃ ಹರ್ನಿಯಾ ಇದೆ ಎಂದಾದಲ್ಲಿ ಒಂದಲ್ಲ ಒಂದು ದಿನ ಶಸ್ತ್ರಚಿಕಿತ್ಸೆ ಅನಿವಾರ್ಯ ಎಂಬ ತಿಳಿವಳಿಕೆಯೇ ಈ ರೀತಿಯ “ಕರುಣೆ’ಗೆ ಪ್ರೇರಕವಾಗಿತ್ತೇನೋ?

Advertisement

ಇಂದಿಗೂ ಜನಸಾಮಾನ್ಯರ ಮನಸ್ಸಿನಲ್ಲಿ ಹರ್ನಿಯಾ ಕಾಯಿಲೆಯ ಬಗ್ಗೆ ಅರೆಬರೆ ಜ್ಞಾನ, ಸಂದೇಹ ಹಾಗೂ ಅನುಮಾನಗಳು ಇದ್ದೇ ಇವೆ. ಹರ್ನಿಯಾ ಎಂದರೆ ನಿಜವಾಗಿಯೂ ಏನು? ಅದು ವ್ಯಕ್ತಿಯ ತಪ್ಪಿನಿಂದಾಗಿ ಬರುವ ಕಾಯಿಲೆಯೇ? ಅದನ್ನು ಬಂದಂತೆ ತಡೆಯುವುದು ಸಾಧ್ಯವೇ? ಬಂದ ಅನಂತರದಲ್ಲಿ ಶಸ್ತ್ರ ಚಿಕಿತ್ಸೆ ಇಲ್ಲದೇ ಹರ್ನಿಯಾ ವಾಸಿಯಾಗಬಲ್ಲುದೇ? -ಎಂಬಿತ್ಯಾದಿ ಹಲವು ಸಂದೇಹಗಳು ಜನ ಮಾನಸದಲ್ಲಿವೆ. ಇಲ್ಲಿ ಹರ್ನಿಯಾ ಬಗ್ಗೆ ಇರುವ ಅಜ್ಞಾನಕ್ಕಿಂತ ಶಸ್ತ್ರಕ್ರಿಯೆಯ ಬಗೆಗಿನ ಅವ್ಯಕ್ತ ಭಯ ಎದ್ದು ಕಾಣಿಸುತ್ತದೆ.

ಹರ್ನಿಯಾ ಎಂದರೆ ಉದರ ಭಿತ್ತಿ (ಉದರದ ಹೊರಪದರ) ಒಂದು ನಿರ್ದಿಷ್ಟ ಜಾಗದಲ್ಲಿ ಶಿಥಿಲಗೊಂಡು ಅಲ್ಲಿ ಉದರದೊಳಗಿನ ಅಂಗಗಳು ಹೊರಜಾರುವುದು. ಇಲ್ಲಿ ಉದರ ಭಿತ್ತಿ ಶಿಥಿಲ ಯಾ ದುರ್ಬಲಗೊಳ್ಳಲು ಕಾರಣಗಳು ಹಲವು. ಗಂಡಸರಲ್ಲಿ ತೊಡೆಸಂಧಿಯಲ್ಲಿನ ಹರ್ನಿಯಾ ಹುಟ್ಟಿದಾರಂಭ ಇರುವುದುಂಟು. ಪುರುಷರಲ್ಲಿ ವೀರ್ಯನಾಳ, ವೃಷಣದಿಂದ ಆರಂಭಗೊಂಡು ತೊಡೆ ಸಂಧಿಯ ಭಾಗದಲ್ಲಿ ಉದರಭಿತ್ತಿಯನ್ನು ಛೇದಿಸಿ ಉದರದೊಳಕ್ಕೆ ಹೋಗುತ್ತದೆ. ಇದರಿಂದಾಗಿ ಆ ಭಾಗದಲ್ಲಿ ಉದರ ಭಿತ್ತಿ ತುಸು ದುರ್ಬಲವಾಗಿರುವುದು ಸಹಜ. ಈ ದುರ್ಬಲತೆಯನ್ನು ಹರ್ನಿಯಾ ಹೊರಚಾಚಲು ಮೂಲವಾಗಬಹುದು. ಈ ರೀತಿಯ ಹೊರಚಾಚುವಿಕೆ ಹುಟ್ಟಿದ ಮಗುವಿನಿಂದ ಸಾಧಾರಣ ಮಧ್ಯವಯಸ್ಕ ಪುರುಷರಿಗೂ ಕಾಣಬಹುದು. ಹೆಂಗಸರಲ್ಲಿ ಸಹಜವಾಗಿಯೇ ಈ ಭಾಗದ ಹರ್ನಿಯಾ ಬಹಳ ಅಪರೂಪ.

ಇನ್ನು ಮಧ್ಯವಯಸ್ಸು ದಾಟಿದ ಅನಂತರ ವಯೋಸಹಜ ಕಾರಣಗಳಿಂದಲೂ ಉದರ ಭಿತ್ತಿ ದುರ್ಬಲವಾಗುವುದಿದೆ. ಆಗಲೂ ಕೂಡ ತೊಡೆ ಸಂಧಿಯಲ್ಲಿಯೇ ಹೆಚ್ಚಾಗಿ ಹರ್ನಿಯಾ ಹೊರಚಾಚುವುದು. ಆದರೆ ಇಂತಹ ಸಂದರ್ಭಗಳಲ್ಲಿ ಹರ್ನಿಯಾ ದೇಹದ ಎಡ ಹಾಗೂ ಬಲ ಭಾಗಗಳೆರಡರಲ್ಲಿಯೂ ಕಾಣುವ ಸಾಧ್ಯತೆ ಹೆಚ್ಚು. ಉದಾಹರಣೆಗೆ, ದಿನನಿತ್ಯದ ಕೆಮ್ಮು, ಮೂತ್ರ ವಿಸರ್ಜನೆ ಮಾಡುವಾಗ ಹೆಚ್ಚಿನ ಒತ್ತಡ ಕೊಡಬೇಕಾಗುವಿಕೆ ಮಲಬದ್ಧತೆ, ಅತಿಯಾದ ದೈಹಿಕ ಶ್ರಮ ಇತ್ಯಾದಿಗಳು ಉದರದೊಳಗಿನ ಒತ್ತಡ ಹೆಚ್ಚಿಸಿ ವಯೋ ಧರ್ಮದಿಂದ ದುರ್ಬಲಗೊಂಡಿರುವ ಉದರಭಿತ್ತಿಯನ್ನು ಭೇದಿಸಿ ಹರ್ನಿಯಾ ಹೊರ ಚಾಚಲು ಕಾರಣವಾಗುತ್ತವೆ. ಉದರ ಭಿತ್ತಿ ಶಿಥಿಲಗೊಳ್ಳುವ ದೈಹಿಕ ಪ್ರಕ್ರಿಯೆ ಮಹಿಳೆಯರಲ್ಲೂ ಇರುತ್ತದಾದರೂ ಈ ರೀತಿಯ ಹರ್ನಿಯಾ ಕೂಡ ಮಹಿಳೆಯರಲ್ಲಿ ವಿರಳ ಎಂಬುದು ಕುತೂಹಲಕರ.

ಉದರ ಭಿತ್ತಿ ತುಸು ದುರ್ಬಲವಾಗಿರುವ ಉದರದ ಇನ್ನೊಂದು ಭಾಗವೆಂದರೆ ಹೊಕ್ಕುಳು.

Advertisement

ಶೈಶವದಲ್ಲಿ ಕರುಳು ಬಳ್ಳಿ ಅಂಟಿಕೊಂಡಿರುವ ಭಾಗವಾದ ಹೊಕ್ಕುಳು ಕರುಳು ಬಳ್ಳಿ ಬಿದ್ದು ಹೋದ ಅನಂತರದಲ್ಲಿ ಒಂದು ರೀತಿಯ ಗಾಯದ ಗುರುತಾಗಿ ಉಳಿದುಕೊಳ್ಳುತ್ತದೆ. ಗಾಯ ಎಷ್ಟೇ ಚೆನ್ನಾಗಿ ವಾಸಿಯಾದರೂ ಗಾಯವಾಗದೆ ಇರುವ ಅಂಗಾಂಶದಷ್ಟು ಗಟ್ಟಿಯಾಗಿರದು ಎಂಬುದು ಪ್ರಕೃತಿ ನಿಯಮ. ಆದ್ದರಿಂದಲೇ ಹೊಕ್ಕುಳಿನ ಹರ್ನಿಯಾ ಕೂಡ ಮಕ್ಕಳಿಂದ ವೃದ್ಧರ ವರೆಗೆ ಒಂದು ಸಾಧ್ಯತೆಯಾಗಿಯೇ ಉಳಿಯುತ್ತದೆ. ಇದರಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲ.

ಅದೇ ರೀತಿ ಹಳೆಯ ಶಸ್ತ್ರಚಿಕಿತ್ಸೆಯಾದ ಗಾಯ ಇರುವಲ್ಲಿ ಕೂಡ ಹರ್ನಿಯಾ ಹೊರಚಾಚಬಹುದು. ಶಸ್ತ್ರ ಚಿಕಿತ್ಸೆಯ ಗಾಯ ಸಮರ್ಪಕವಾಗಿ ವಾಸಿಯಾಗದೇ ಇರುವುದೇ ಈ ರೀತಿಯ ಹರ್ನಿಯಾಕ್ಕೆ ಮುಖ್ಯ ಕಾರಣ. ಇದಕ್ಕೆ “ಇನ್‌ಸಿಶನಲ್‌ ಹರ್ನಿಯಾ’ (Ineisional Hernia) ಅನ್ನುತ್ತಾರೆ. ಇತ್ತೀಚೆಗಿನ ದಶಕಗಳಲ್ಲಿ ಶಸ್ತ್ರಚಿಕಿತ್ಸೆಗೊಳಪಡುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಹಜವಾಗಿಯೇ ಈ ರೀತಿಯ ಹರ್ನಿಯಾ ಕೂಡ ಹೆಚ್ಚುತ್ತಲಿದೆ.

ಉದರದ ಹರ್ನಿಯಾ ಉಂಟಾಗಲು ಹಲವು ಕಾರಣಗಳನ್ನು ಚರ್ಚಿಸಿದೆವು. ಇದಲ್ಲದೆ ಇನ್ನು ಕೆಲವು ಕಾರಣಗಳು ಅಪರೂಪಕ್ಕೆ ಏಕೆ ಬರುತ್ತದೆ ಎಂಬ ಪ್ರಶ್ನೆಗಿಂತ, “ಬಂದ ಮೇಲೆ ಏನು ಮಾಡಬೇಕು?’ ಎಂಬುದು ಹೆಚ್ಚು ಪ್ರಸ್ತುತ ಪ್ರಶ್ನೆ. ಶಸ್ತ್ರಚಿಕಿತ್ಸಾ ತಜ್ಞರನ್ನು ಕೇಳಿದಲ್ಲಿ ಅವರು ಕೆಲವೊಮ್ಮೆ ಹಿಂದೆ ಮುಂದೆ ನೋಡದೆ, “ಶಸ್ತ್ರಕ್ರಿಯೆ ಅಲ್ಲದೆ ಇದಕ್ಕೆ ಬೇರೆ ಪರಿಹಾರವಿಲ್ಲ’ ಅಂದು ಬಿಡುತ್ತಾರೆ. ಅದರಲ್ಲೂ ಯಾವುದೇ ಹೆಚ್ಚಿನ ತಪಾಸಣೆ ಯಾ ಸ್ಕ್ಯಾನ್‌ ಮಾಡಿಸದೆ ಶಸ್ತ್ರಚಿಕಿತ್ಸೆ ಅನಿವಾರ್ಯ ಎಂಬಂತೆ ವೈದ್ಯರು ಸೂಚಿಸಿದಾಗ ರೋಗಿ ಗಲಿಬಿಲಿಗೊಳ್ಳುವುದು ಸಹಜ. ಹಾಗಿದ್ದಲ್ಲಿ ತಜ್ಞರ ಸಲಹೆ ತಪ್ಪೆ? ವಿವರವಾಗಿ ತಿಳಿಯೋಣ.

ಹರ್ನಿಯಾ ಎಂದರೆ ಉದರದ ಗೋಡೆ ಯಾ ಭಿತ್ತಿಯನ್ನು ಭೇದಿಸಿ ಒಳಗಿನ ಅಂಗಗಳು ಹೊರಚಾಚುವುದು ಎಂಬುದನ್ನು ಅರಿತುಕೊಂಡವಷ್ಟೆ. ಈ ರೀತಿ ಹೊರಚಾಚಿದ ಅಂಗಗಳು (ಕರುಳು ಉದರದೊಳಗಿನ ಕೊಬ್ಬು ಇತ್ಯಾದಿ) ವ್ಯಕ್ತಿ ಎದ್ದು ನಿಂತಾಗ, ಕೆಮ್ಮುವಾಗ ಅಥವಾ ಶ್ರಮ ಪಡುವಾಗ ಉದರದಿಂದ ಹೊರಗಿದ್ದು ಆತ ಮಲಗಿ ವಿಶ್ರಾಂತಿ ಪಡೆದುಕೊಳ್ಳುವಾಗ ತನ್ನಿಂದ ತಾನೇ ಒಳಹೋಗಬಹುದು. ಕೆಲವೊಮ್ಮೆ ರೋಗಿ ಹರ್ನಿಯಾವನ್ನು ತಾನೇ ಕೈಯಾರೆ ಒಳದಬ್ಬಬೇಕಾಗುತ್ತದೆ. ತಜ್ಞರು ತಪಾಸಣೆ ಮಾಡುವಾಗ ಹರ್ನಿಯಾ ಇರುವ ಉದರದ ಭಾಗವನ್ನು ಮುಟ್ಟಿ ರೋಗಿಗೆ ಕೆಮ್ಮಲು ಹೇಳುತ್ತಾರೆ. ಕೆಮ್ಮುವ ಕ್ರಿಯೆ ಉದರದೊಳಗಿನ ಒತ್ತಡವನ್ನು ಹೆಚ್ಚಿಸಿ ಹರ್ನಿಯಾವನ್ನು ಹೊರದಬ್ಬುತ್ತದೆ. ಇದು ಒಂದು ರೀತಿಯ ಪ್ರಚೋದನೆಯ ಮೂಲಕ ತಜ್ಞರ ಅನುಭವಕ್ಕೆ ಬಂದಾಗ ಹರ್ನಿಯಾದ ಇರುವಿಕೆಯ ಬಗ್ಗೆ ಸಂಶಯಕ್ಕೆ ಆಸ್ಪದವೇ ಉಳಿಯುವುದಿಲ್ಲ. ಆದ್ದರಿಂದಲೇ ಹೆಚ್ಚಿನ ತಪಾಸಣೆ ಯಾ ಸ್ಕ್ಯಾನ್‌ನ ಆವಶ್ಯಕತೆ ಸಾಮಾನ್ಯವಾಗಿ ಇರುವುದಿಲ್ಲ. ಆದರೆ ಇಂದು ಹಲವು ರೋಗಿಗಳು ಮೊದಲು ಸ್ಕ್ಯಾನ್‌ ಮಾಡಿಸಿಕೊಂಡು ಅನಂತರ ತಜ್ಞರ ಬಳಿ ಹೋಗುತ್ತಾರೆ ಎಂಬುದು ಬೇರೆ ಮಾತು!

ಹರ್ನಿಯಾ ಇರುವುದನ್ನು ಪತ್ತೆ ಹಚ್ಚುವುದು ಸುಲಭ ಸಾಧ್ಯ ಎಂಬುದನ್ನು ಒಪ್ಪಿಕೊಂಡರೂ ಹೆಚ್ಚಿನ ಸಲ ಆಗಾಗ ಹೊರಚಾಚಿ ಒಳಹೋಗುವುದನ್ನು ಹೊರತು ಪಡಿಸಿದರೆ ಅಂತಹ ದೊಡ್ಡ ರೋಗಲಕ್ಷಣವನ್ನು ಉಂಟು ಮಾಡದ ಈ ಕಾಯಿಲೆಗೆ ಶಸ್ತ್ರಕ್ರಿಯೆ ಅನಿವಾರ್ಯವೇ ಎಂಬ ಪ್ರಶ್ನೆ ಉಳಿಯುತ್ತದೆ. ಶಸ್ತ್ರಚಿಕಿತ್ಸೆ ಎಂದರೆ ಒಂದು ರೀತಿಯ ಅವ್ಯಕ್ತ ಭೀತಿ ಹೆಚ್ಚಿನವರಲ್ಲಿರುತ್ತದೆ. ಹರ್ನಿಯಾದ ಬಗ್ಗೆ ಹೇಳುವುದಾದರೆ ಇದೊಂದು ಉದರಭಿತ್ತಿಯಲ್ಲಿನ ಭೌತಿಕ ನ್ಯೂನತೆ (Physical defect) ಆಗಿರುವುದರಿಂದ ಇದರ ಪರಿಹಾರವೂ ಭೌತಿಕವೇ ಆಗಬೇಕಾಗುತ್ತದೆ. ಬಟ್ಟೆ ಹರಿದು ಹೋದಲ್ಲಿ ಅದನ್ನು ಹೊಲಿಗೆ ಹಾಕುವುದಲ್ಲದೆ ಬೇರೆ ರೀತಿಯಲ್ಲಿ ಹೇಗೆ ಸರಿಪಡಿಸಲಾಗದೋ ಆ ರೀತಿ. ಹರ್ನಿಯಾ ಬರಲು ಕಾರಣವಾದ ಉದರಭಿತ್ತಿಯ ನ್ಯೂನತೆಯನ್ನು ಸರಿಪಡಿಸದೇ ಬಿಟ್ಟಲ್ಲಿ ಒಂದಲ್ಲ ಒಂದು ದಿನ ಹೊರಚಾಚಿದ ಕರುಳು ಇತ್ಯಾದಿ ಅಂಗಗಳು ಕಾರಣಾಂತರಗಳಿಂದ ಹೊರಗೆಯೇ ಉಳಿಯುವಂತೆ ಆಗಬಹುದು. ಈ ರೀತಿಯ ಸಿಕ್ಕಿ ಹಾಕಿಕೊಳ್ಳುವ ಪ್ರಕ್ರಿಯೆ ಇದ್ದಕ್ಕಿದ್ದಂತೆ ಘಟಿಸಿದರೆ ಒಳಗಿನ ಕರುಳಿಗೆ ಘಾಸಿಯಾಗಬಹುದು. ಹಾಗಾದಾಗ ರೋಗಿಯ ಸ್ಥಿತಿ ಬಿಗಡಾಯಿಸುತ್ತದೆ. ಕರುಳಿನ ರಕ್ತ ಪೂರೈಕೆಗೆ ಅಡಚಣೆ ಉಂಟಾಗಿ ಕರುಳಿನ ಗ್ಯಾಂಗ್ರಿನ್‌ ಆಗುವುದೂ ಉಂಟು. ಇದು ಪ್ರಾಣಾಂತಿಕ ಸಂಕೀರ್ಣತೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ರೋಗಿಯನ್ನು ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸುವುದರ ಹೊರತಾಗಿ ಆತನ ಪ್ರಾಣ ಉಳಿಸುವ ಯಾವುದೇ ದಾರಿ ಇರುವುದಿಲ್ಲ.

ಈ ರೀತಿಯ ಸಂಕೀರ್ಣತೆ ಸುಮಾರು ಶೇ. 5 ರೋಗಿಗಳಲ್ಲಿ ಮಾತ್ರ ಉಂಟಾಗುತ್ತದೆಯಾದರೂ ಆ ಶೇ. 5 ರೋಗಿಗಳು ಯಾರು ಎಂಬುದನ್ನು ಊಹಿಸುವುದು ಅಸಾಧ್ಯ. ಆದ್ದರಿಂದಲೇ ತುರ್ತು ಶಸ್ತ್ರಚಿಕಿತ್ಸೆಯ ಅಪಾಯವನ್ನು ತಂದುಕೊಳ್ಳುವುದಕ್ಕಿಂತ ಆರೋಗ್ಯ ಚೆನ್ನಾಗಿರುವಾಗ ಅಷ್ಟೊಂದು ರಿಸ್ಕ್ ಇಲ್ಲದ ಸರಳ ಶಸ್ತ್ರಕ್ರಿಯೆಗೆ ಒಳಪಡುವುದು ಶ್ರೇಯಸ್ಕರ ಎಂಬ ಸಲಹೆಯನ್ನು ಎಲ್ಲ ರೋಗಿಗಳಿಗೆ ತಜ್ಞರು ನೀಡಬೇಕಾಗುತ್ತದೆ. ಅದರಲ್ಲೂ ಹೃದಯ ಸಂಬಂಧಿ ಕಾಯಿಲೆ ಇರುವ ಹರ್ನಿಯಾ ರೋಗಿಗಳಿಗೆ ತುರ್ತು ಶಸ್ತ್ರಕ್ರಿಯೆಯ ರಿಸ್ಕ್ ಹಲವು ಪಟ್ಟು ಹೆಚ್ಚಿರುತ್ತದೆ.

ಹರ್ನಿಯಾದ ಶಸ್ತ್ರಚಿಕಿತ್ಸೆ ಸರಳವಾದುದು. ಹೆಚ್ಚಿನ ಆಸ್ಪತ್ರೆಗಳಲ್ಲಿ ದಿನನಿತ್ಯ ಎಂಬಂತೆ ಈ ರೀತಿಯ ಶಸ್ತ್ರಕ್ರಿಯೆಗಳನ್ನು ಯಶಸ್ವಿಯಾಗಿ ನೆರವೇರಿಸಲಾಗುತ್ತದೆ. ಉದರದರ್ಶಕ ಶಸ್ತ್ರಕ್ರಿಯೆ ಹರ್ನಿಯಾಕ್ಕೆ ಅನಿವಾರ್ಯವಲ್ಲ. ಸಾಮಾನ್ಯ ಶಸ್ತ್ರಕ್ರಿಯೆಯೇ ಸಾಕಾಗುತ್ತದೆ. ಒಟ್ಟಾರೆ ಹರ್ನಿಯಾ ಇದೆ ಎಂದು ದೃಢಪಟ್ಟಾಗ ಭಾವನೆಗೆ ಒಳಪಡದ ಶಸ್ತ್ರಕ್ರಿಯೆ ನಿರ್ಧಾರವನ್ನು ತಜ್ಞರಿಗೆ ಬಿಡುವುದು ಲೇಸು ಎಂಬುದು ಈ ಲೇಖನದ ಅಭಿಪ್ರಾಯ.

-ಡಾ| ಶಿವಾನಂದ ಪ್ರಭು, ಪ್ರೊಫೆಸರ್‌, ಸರ್ಜರಿ ವಿಭಾಗ ಕೆಎಂಸಿ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸರ್ಜರಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next