Advertisement
ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಇದು ಹೆಚ್ಚು ದಿನ ಬಾಳುವುದಿಲ್ಲ ಎಂಬ ವಿಶ್ಲೇಷಣೆಗಳು ಇದ್ದವಾದರೂ ತಳಹದಿ ಗಟ್ಟಿಯಾಗಿದ್ದರಿಂದ ಕುತೂಹಲವಂತೂ ಇದ್ದೇ ಇತ್ತು. ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್‌ಗಾಂಧಿಯವರು ದೇಶದ ರಾಜಕಾರಣದ ಭವಿಷ್ಯದ ಬಗ್ಗೆ ಯೋಚಿಸಿ ತೀರ್ಮಾನ ಕೈಗೊಂಡಿದ್ದರಿಂದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದರು. ಆಗ ಬಿಎಸ್‌ಪಿ, ಎಸ್‌ಪಿ, ಆರ್‌ಜೆಡಿ, ಟಿಡಿಪಿ, ಎಎಪಿ ಸೇರಿ ಪ್ರಾದೇಶಿಕ ಪಕ್ಷಗಳ ನಾಯಕರೆಲ್ಲರೂ ಒಂದೇ ವೇದಿಕೆಯಡಿ ಬಂದು ಒಗ್ಗಟ್ಟು ಪ್ರದರ್ಶಿಸಿದ್ದರಿಂದ ರಾಜ್ಯದಲ್ಲಿನ ರಾಜಕೀಯ ಧ್ರುವೀಕರಣ ದೇಶದ ಮಟ್ಟದಲ್ಲಾಗುವ ಆಶಾಭಾವನೆ ಮೂಡಿಸಿತ್ತು.
Related Articles
Advertisement
ವೇದಿಕೆಯಲ್ಲಿ ಬಹಿರಂಗವಾಗಿ ಏನೇ ಭಾಷಣ ಮಾಡಿದರೂ ಆಂತರಿಕವಾಗಿ ಬೇರೆಯದೇ ಲೆಕ್ಕಾಚಾರದಡಿ ತಮಗಾಗದವರ ಸೋಲಿಗೆ ವೈಯಕ್ತಿಕ ಅಜೆಂಡಾದಡಿ ತಮ್ಮ, ತಮ್ಮ ಕೈಲಾದ “ಕಾಣಿಕೆ’ ಸಲ್ಲಿಸಿದರು ಎಂಬುದು ಫಲಿತಾಂಶ ಹೊರ ಬಿದ್ದ ನಂತರ ಒಂದೊಂದೇ ಬಹಿರಂಗವಾಗುತ್ತಾ ಹೋಯಿತು. ಕಾಂಗ್ರೆಸ್‌ನ ಕೆಲವು ನಾಯಕರಂತೂ ಮೈತ್ರಿ ಹೆಚ್ಚು ದಿನ ಉಳಿದರೆ ಪಕ್ಷಕ್ಕೆ ಭವಿಷ್ಯವಿಲ್ಲ ಎಂಬ ಸಂಗತಿಯನ್ನು ಹೊರ ಹಾಕಿದರು. ಜತೆಗೆ, ಬಹಿರಂಗವಾಗಿಯೇ ದೇವೇಗೌಡರ ಕುಟುಂಬ, ಎಚ್.ಡಿ.ಕುಮಾರಸ್ವಾಮಿ ಹಾಗೂ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು.
ಅತೃಪ್ತರ ಆಟ: ಇದರ ಮಧ್ಯೆಯೇ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಸಚಿವ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಸಂಸದೀಯ ಕಾರ್ಯದರ್ಶಿ ಸ್ಥಾನ ಸೇರಿ ಎಲ್ಲ ಹುದ್ದೆ ಹೊಂದಿದ್ದರೂ ಒಂದು ಅತೃಪ್ತರ ಗುಂಪು ಸದಾ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಲೇ ಇತ್ತು. ಇದರ ಮಾಹಿತಿ ಬದಲಿ ಸರ್ಕಾರದ ರಚನೆಯ ಪ್ರಯತ್ನದಲ್ಲಿರುವ ಬಿಜೆಪಿಗೆ ಗೊತ್ತಿತ್ತು. ಅತೃಪ್ತರ ಬೇಡಿಕೆಗಳ ಮಾಹಿತಿ ಪಡೆದ ಬಿಜೆಪಿ, ಸಮಯ ಕಾದು “ರಂಗಪ್ರವೇಶ’ ಮಾಡಿ ಹದಿನೈದು ಶಾಸಕರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಯಿತು.
ಇದರೊಂದಿಗೆ ಸಮ್ಮಿಶ್ರ ಸರ್ಕಾರ ಪತನದ ಹಾದಿ ಹಿಡಿಯಿತು. ಇದರೊಂದಿಗೆ 2004ರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 20 ತಿಂಗಳು, 2006ರ ಬಿಜೆಪಿ-ಜೆಡಿಎಸ್ ಸರ್ಕಾರ 20 ತಿಂಗಳು, 2018 ರ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಹದಿನಾಲ್ಕು ತಿಂಗಳು ಮಾತ್ರ ಆಯುಷ್ಯ ಹೊಂದಿದಂತಾಗಿದೆ.
ಕೌಂಟ್‌ಡೌನ್ ಆರಂಭ ಯಾವಾಗ?: ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಾದ ನಂತರ ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖೀಲ್ ಕುಮಾರಸ್ವಾಮಿ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಹಾಗೂ ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಸೇರಿದಂತೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರೇ ಮೈತ್ರಿ ಅಭ್ಯರ್ಥಿಗಳಾಗಿ ಸೋಲು ಅನುಭವಿಸಿದ್ದರು. ಇಲ್ಲಿಂದ ಸಮ್ಮಿಶ್ರ ಸರ್ಕಾರದ ಕೌಂಟ್ ಡೌನ್ ಆರಂಭವಾಯಿತು ಎಂದೇ ಹೇಳಬಹುದು.
* ಎಸ್. ಲಕ್ಷ್ಮಿನಾರಾಯಣ