ಟಿ.ದಾಸರಹಳ್ಳಿ: ಮಠ, ಮಂದಿರಗಳ ನಂಬದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿಯನ್ನು ಪ್ರಶ್ನಿಸುವ ನೈತಿಕತೆ ಇದೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹರಿಹಾಯ್ದರು.
ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಮುನಿರಾಜು ಅವರ ಮನೆ ಆವರಣದಲ್ಲಿ ಆಯೋಜಿಸಿದ್ದ ದಾಸರಹಳ್ಳಿ ಮಂಡಲ ಬಿಜೆಪಿ ಸಂಘಟನಾ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಮಠ ಮಂದಿರಗಳನ್ನೇ ನಿಯಂತ್ರಿಸಲು ಹಾಗೂ ಸ್ವಾಮೀಜಿಗಳನ್ನು ಬಂಧಿಸಲು ಹೊರಟಿದ್ದರು ಎಂದು ಆರೋಪಿಸಿದರು.
ರಾಜ್ಯದ ವಿವಿಧೆಡೆ ಹಿಂದೂಗಳ ಕೊಲೆಗಳಾದಾಗ ಕಣ್ಣುಚ್ಚಿ ಕುಳಿತಿದ್ದ ಸಿದ್ದರಾಮಯ್ಯ, ಪರಿಹಾರ ಕೂಡ ನೀಡಲಿಲ್ಲ. ರಾಜಕೀಯ ಯಾವುದು, ಧರ್ಮ ಯಾವುದು ಅಂದು ಅವರಿಗೆ ಗೊತ್ತಿಲ್ಲ. ಅವರು ಮಠಗಳಿಗೆ ಏನೆಲ್ಲಾ ತೊಂದರೆ ಕೊಟ್ಟಿದ್ದಾರೆ ಎಂಬುದು ಜನತೆಗೆ ಗೊತ್ತಿದೆ. ಇಂಥವರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ರಾಜ್ಯಕ್ಕೆ ಕೊಡಬೇಕಾದ ಅನುದಾನ ಕೊಟ್ಟಿದ್ದಾರೆ. ಭೀಕರ ನೆರೆ ಸಂಭವಿಸಿರುವ ಕಾರಣ ಹೆಚ್ಚಿನ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿಗಳೂ ಕೋರಿದ್ದಾರೆ ಎಂದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನ ಮಾತನಾಡಿ, ನಗರ ಜಿಲ್ಲಾಧ್ಯಕ್ಷರಾಗಿ ಮುನಿರಾಜು ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಸಾಕಷ್ಟು ದುಡಿದಿದ್ದಾರೆ. ಟವರ ಶ್ರಮ ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಲಿದೆ ಎಂದರು.