ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಒಂಟಿಯಾಗುತ್ತಿದ್ದಾರೆಯೇ ?
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ಈಗ ಇದನ್ನೇ ಧ್ವನಿಸುತ್ತಿವೆ ಎಂಬುದು ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ವ್ಯಾಖ್ಯಾನವಾಗಿದ್ದು, ಮೇಲ್ನೋಟಕ್ಕೆ ಕಾಣುತ್ತಿರುವಷ್ಟು ಹಿಡಿತ ಸಿದ್ದರಾಮಯ್ಯ ಅವರಿಗೆ ಈಗ ಇಲ್ಲ ಎಂದು ಹೇಳಲಾಗುತ್ತಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಗೆ ಎರಡು ಸ್ಥಾನಗಳು ಲಭಿಸಲಿವೆ. ಇದಕ್ಕಾಗಿ 100ಕ್ಕೂ ಹೆಚ್ಚು ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಈ ಸ್ಥಾನವನ್ನು ತಾವು ಪ್ರತಿಪಾದಿಸುವ ಅಹಿಂದ ವರ್ಗಕ್ಕೆ ಕೊಡಿಸಬೇಕೆಂಬುದು ಸಿದ್ದರಾಮಯ್ಯ ಅವರ ವಾದ. ಆದರೆ ಈ ಪ್ರಯತ್ನಕ್ಕೆ ಈಗ ರಾಜ್ಯ ಹಾಗೂ ದಿಲ್ಲಿ ಮಟ್ಟದಲ್ಲೇ ಅವರಿಗೆ ಅಡ್ಡಿಯುಂಟಾಗುತ್ತಿದೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದಾಗಿ ಸಿದ್ದರಾಮಯ್ಯ ವಿರುದ್ಧ ದಾಳ ಉರುಳಿಸಿದ್ದಾರೆ.
ಇದನ್ನೂ ಓದಿ:ಮೇಲ್ಮನೆ: ಇಂದು ಸ್ಪಷ್ಟ ಚಿತ್ರಣ? ಕಾಂಗ್ರೆಸ್ ಪಟ್ಟಿಯಲ್ಲಿ ಹಲವು ಪ್ರಭಾವಿ ನಾಯಕರ ಹೆಸರು
ದಲಿತ ಎಡಗೈ ಸಮುದಾಯದ ಆರ್.ಬಿ.ತಿಮ್ಮಾಪುರ ಹಾಗೂ ಮಾಜಿ ವಿಪಕ್ಷ ನಾಯಕ ಡಾ.ಎಸ್.ಆರ್.ಪಾಟೀಲ್ ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎಂಬುದು ಇವರಿಬ್ಬರ ಲೆಕ್ಕಾಚಾರ. ಆದರೆ ಇದಕ್ಕೆ ಸಿದ್ದರಾಮಯ್ಯ ಖಡಾಖಂಡಿತ ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಪಾಟೀಲ್ ವಿಚಾರದಲ್ಲಿ ನಖಶಿಖಾಂತ ವಿರೋಧ ತೋರಿದ್ದಾರೆ.
ಇದರೆಲ್ಲದರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಠಾತ್ ಆಗಿ ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಕರೆಸಿ ತಮ್ಮ ನಿಲುವು ಸ್ಪಷ್ಟಪಡಿಸಿದೆ. ಇದಾದ ಬಳಿಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ ವಾಗ್ವಾದವೂ ನಡೆದಿದ್ದು, ಅಂತಿಮವಾಗಿ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದಾರೆಂದು ಕಾಂಗ್ರೆಸ್ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ.
ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ನಲ್ಲಿ ನಡೆಯುತ್ತಿರವ ಈ ಬೆಳವಣಿಗೆಗಳು ಎಲ್ಲಿಗೆ ಮುಟ್ಟುತ್ತದೆ ಎಂದು ಕಾದು ನೋಡಬೇಕಿದೆ.