Advertisement

ತೃಪ್ತ ಸಹ ಜೀವನವು ಮರೀಚಿಕೆಯೇ?

12:30 AM May 04, 2018 | |

ಸಾಮಾಜಿಕ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಅಗತ್ಯ. ಸಮಾಜದಲ್ಲಿ ಒಬ್ಬಂಟಿಗರಾಗಿ ಬದುಕಲು ಸಾಧ್ಯವಿಲ್ಲ. ವಿವಿಧ ಕ್ಷೇತ್ರಗಳಲ್ಲಿ, ವಿವಿಧ ರೀತಿಯ ಜನ ಸಮುದಾಯದೊಂದಿಗೆ, ತಾಳ್ಮೆಯಿಂದ ಸಹ ಜೀವನ ನಡೆಸಬೇಕಾಗುತ್ತದೆ. ಸ್ಥಾನಮಾನ, ಪಾಶ್ಚಾತ್ಯ ಅನುಕರಣೆ, ಆಧುನಿಕ ಅವಿಷ್ಕಾರ, ಸ್ಪರ್ಧಾತ್ಮಕ ಮನೋಭಾವಗಳಿಂದಾಗಿ ಭೌತಿಕವಾಗಿ ಮನುಷ್ಯ ಎತ್ತರಕ್ಕೇರಿದ್ದರೂ ಮಾನಸಿಕವಾಗಿ, ನೈತಿಕವಾಗಿ, ಭಾವನಾತ್ಮಕವಾಗಿ ಕುಸಿದು, ಪ್ರಾಮಾಣಿಕ ಬದುಕಿನಿಂದ ಹಾಗೂ ಸಂಬಂಧಗಳಿಂದ ದೂರ ಸರಿಯುತ್ತಿದ್ದಾನೆ.

Advertisement

ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಸಮಸ್ಯೆಗಳಿದ್ದರೂ, ಉತ್ತಮ ಮಾನವೀಯ ಸಂಬಂಧಗಳಿಂದಾಗಿ ಸಂತೃಪ್ತಿಯ ಜೀವನ ನಡೆಸುತ್ತಿದ್ದರು. ಅತಿಯಾದ ಆಸೆ, ಐಷಾರಾಮದ ಬದುಕಿನಿಂದ ದೂರವಿದ್ದು, ಸುವ್ಯವಸ್ಥೆ ಎಂಬುದು ಅತ್ಯಗತ್ಯವಾದವುಗಳಿಗೆ ಮಾತ್ರ ಸೀಮಿತವಾಗಿತ್ತು. 

ಇಂದು ಮನುಷ್ಯನಲ್ಲಿ ಹಲವಾರು ಬದಲಾವಣೆಗಳಾಗಿವೆ. ಪ್ರೀತಿ, ವಿಶ್ವಾಸ, ಸಂಬಂಧ ಎಂದು ಪರಸ್ಪರ ಮನೆಗಳಿಗೆ ಹೋಗುವ ಸಂಪ್ರದಾಯ ದೂರವಾಗಿದೆ. ಪರಸ್ಪರ ಭೇಟಿಯಾದರೂ ನಾಟಕೀಯ ವರ್ತನೆ, ಸ್ವಯಂ ಪ್ರದರ್ಶನ, ಶಿಫಾರಸ್ಸುಗಳನ್ನು ಹೇಳಿಕೊಳ್ಳುವ ಧಾವಂತ, ಆಹ್ವಾನದ ಮೇಲೆ ಮನೆಗಳಿಗೆ ಹೋದರೂ ಮಾತಿನ ಮಧ್ಯೆ ದೂರವಾಣಿಯಲ್ಲಿ ಮುಗಿಯದ ಮಾತುಕತೆ, ದೂರದರ್ಶನದ ವೀಕ್ಷಣೆ, ಚರ್ಚೆ, ಮಕ್ಕಳನ್ನು ಗದರುವುದು ಒಟ್ಟಿನಲ್ಲಿ ಉಸಿರು ಕಟ್ಟುವ ವಾತಾವರಣ, ಸ್ನೇಹಿತರನ್ನು ನೆಂಟರನ್ನು ತಾವಾಗಿಯೇ ಕರೆದಿದ್ದೇವೆ ಎಂಬುದನ್ನು ಮರೆತಿರುತ್ತಾರೆ.

ಇನ್ನು ದೂರವಾಣಿ, ಮೊಬೈಲ್‌ ಮೂಲಕ ಸಂಪರ್ಕಿಸಿದರೂ, ಮನಸಿದ್ದರೆ ಮಾತ್ರ ವ್ಯವಹರಿಸುತ್ತಾರೆ. ಮದುವೆ, ಉಪನಯನ, ಸಭೆ ಸಮಾರಂಭಗಳಲ್ಲಿ ಶ್ರೀಮಂತ – ಬಡವ ಎಂಬ ಸಂಕುಚಿತ ಭಾವನೆಗಳೇ ಪ್ರಧಾನವಾಗಿರುತ್ತದೆ. ಇಂದು ಕಾರ್ಯಕ್ರಮ ವೀಕ್ಷಿಸಲು ಬರುವವರು ವಿರಳ, ಫ‌ಲಹಾರ, ಭೋಜನವೇ ಪ್ರಧಾನ.

ನಮಗಿಂತ ಕೆಳಮಟ್ಟದಲ್ಲಿರುವವರನ್ನು ನೋಡಿ ತೃಪ್ತಿಯಿಂದ ಇರಬಹುದು. ಆದರೆ ನಮಗಿಂತ ಮೇಲ್ಮಟ್ಟದವರನ್ನು ನೋಡಿ ಸಂತೋಷ ಪಡಬೇಕೆ ವಿನಹಃ ಅವರಂತೆ ನಾವಾಗಬೇಕೆಂಬ ಅತಿ ಅಭಿಲಾಷೆಯು ರಕ್ತ ಸಂಬಂಧ, ಸ್ನೇಹ ಸಂಬಂಧ, ನೆರೆಹೊರೆಯ ಸಂಬಂಧಗಳಿಂದ ವಂಚಿತ ರನ್ನಾಗಿ ಮಾಡಿದೆ. ಈ ಪ್ರಕ್ರಿಯೆ ದಿನನಿತ್ಯದ ಅಗತ್ಯಕ್ಕಷ್ಟೇ ಸೀಮಿತವಾದಲ್ಲಿ ಪರಿಸ್ಥಿತಿ ಗಂಭೀರವಾಗಿರುವುದಿಲ್ಲ. ಆದರೆ ಇಂದಿನ ಹಲವಾರು ಹೊಸ ಆವಿಷ್ಕಾರಗಳು, ಮನಸೆಳೆಯುವಂತಹ ಜಾಹೀರಾತುಗಳು, ಅಗತ್ಯ ಇರದಿದ್ದರೂ ಉತ್ತಮ ಸ್ಥಿತಿಯಲ್ಲಿರುವ ವಸ್ತುಗಳ ಬದಲಾವಣೆ. ಒಂದಕ್ಕೊಂದು ಉಚಿತವೆಂಬ ಪ್ರಚಾರ ಇವುಗಳಿಂದಾಗಿ ಎಷ್ಟಿದ್ದರೂ ಮತ್ತಷ್ಟು ಬೇಕು ಎನ್ನುತ್ತದೆ ಮನುಷ್ಯನ ಅತೃಪ್ತ ಕಾಮನೆ.

Advertisement

ಇದು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿ ಅವುಗಳನ್ನು ಪಡೆಯುವಲ್ಲಿ ಮನೆ ಮಂದಿಗೆಲ್ಲ ಮಾನಸಿಕ ಉದ್ವೇಗ ಉಂಟಾಗುತ್ತದೆ. ಒಳಿತು – ಕೆಡುಕು, ಅಗತ್ಯ – ಅನಗತ್ಯ, ಅವಶ್ಯ – ಐಷಾರಾಮ ಹೀಗೆ ವಿಂಗಡಿಸಿ, ಮನಸ್ಸನ್ನು ಹತೋಟಿಯಲ್ಲಿಟ್ಟರೆ ಬದುಕು ಸುಂದರವಾಗುತ್ತದೆ. ಇದು ವಿದ್ಯಾವಂತ ಗೃಹಿಣಿಯರ ಕರ್ತವ್ಯ ಹಾಗೂ ಜವಾಬ್ದಾರಿ, ಆಡಂಬರ -ಐಷಾರಾಮ ಎಂದೂ ಶಾಶ್ವತವಲ್ಲ. ಇಂತಹ ಬದುಕಿಗೆ ಮಾರುಹೋದವರು, ಹೆಚ್ಚಿನ ಸಂಪಾದನೆಗಾಗಿ, ಇಚ್ಛೆಪಟ್ಟು ತಮ್ಮ ಕೆಲಸವನ್ನು ಆಯ್ಕೆ ಮಾಡಿಕೊಂಡರೂ ಸಂತೋಷವೊಂದನ್ನು ಬಿಟ್ಟು ಎಲ್ಲವನ್ನು ಅನುಭವಿಸುತ್ತಾರೆ. ಪರಸ್ಪರ ಪ್ರೀತಿಯಿಂದ ವಂಚಿತರಾಗಿದ್ದಾರೆ. ನೆಮ್ಮದಿ ಇಲ್ಲದೇ ಅಲೆಯುತ್ತಿದ್ದಾರೆ. ಮಕ್ಕಳಿಗೆ ನಾವು ಬೇಡವಾಗಿದ್ದೇವೆ ಎಂಬ ಭಾವನೆಯು ಹಿರಿಯರನ್ನು ವೃದ್ಧಾಶ್ರಮದತ್ತ ಕೊಂಡೊಯ್ದಿದೆ. ಮಕ್ಕಳಲ್ಲಿ ಮಾನಸಿಕ ಕಾಯಿಲೆ ಹೆಚ್ಚುತ್ತಿರುವುದು ಕಂಡು ಬರುತ್ತದೆ.

ಬಾಲ್ಯ-ಯೌವನ, ವೃದ್ಧಾಪ್ಯ, ಈ ಮೂರು ಹಂತಗಳ ನಡುವೆ ತಲೆಮಾರುಗಳ ಅಂತರದಿಂದಾಗಿ ಈ ಮನೋಕ್ಲೇಶ ಉಂಟಾಗುತ್ತಿದೆ. ಬಾಲ್ಯದಲ್ಲಿ ಅಕ್ಕರೆಯ ತಾಯಿಯಾಗಿಯೂ, ಯೌವನದಲ್ಲಿ ಸ್ನೇಹಿತೆ ಯಾಗಿಯೂ, ವೃದ್ಧಾಪ್ಯದಲ್ಲಿ ಸಾಂತ್ವನ ನೀಡುವ ಮಾತೆಯಾಗಿಯೂ ಗೃಹಿಣಿಯು ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಬಾಹ್ಯ ಆಕರ್ಷಣೆಗಳಿಗೆ ಮಾರು ಹೋಗದೇ, ಸರಳ, ಆರೋಗ್ಯಮಯ ಜೀವನವನ್ನು ನಮ್ಮದಾಗಿಸಿಕೊಳ್ಳುವ ಮೂಲಕ ಇಂದು ನಾವು ಕಳೆದುಕೊಂಡಿರುವ ಅತ್ಯಮೂಲ್ಯ ಐಶ್ವರ್ಯವಾದ ಮಾನವೀಯ ಸಂಬಂಧಗಳನ್ನು ಪುನಃ ಬೆಸೆದಲ್ಲಿ ಜೀವನದಲ್ಲಿ ಸಂತೃಪ್ತಿಯನ್ನೂ ಸಹಬಾಳ್ವೆಯಲ್ಲಿ ಒಲವನ್ನು ಕಾಣಬಹುದು.

ಸಾವಿತ್ರಿ ರಾಮರಾವ್‌

Advertisement

Udayavani is now on Telegram. Click here to join our channel and stay updated with the latest news.

Next