ಹುಬ್ಬಳ್ಳಿ: ರೈಲ್ವೆ ಸುರಕ್ಷತಾ ಬಲ (ಆರ್‌ಪಿಎಫ್)ಸಿಬ್ಬಂದಿ ಕರ್ತವ್ಯ ನಿಯೋಜನೆಯಲ್ಲಿ ಅಧಿಕಾರಿಗಳು ತಾರತಮ್ಯ ತೋರುತ್ತಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಕೆಲ ಸಿಬ್ಬಂದಿಗೆ 12 ತಾಸು, 24 ತಾಸು ಕೆಲಸ ನೀಡಲಾಗುತ್ತಿದೆ ಎಂಬ ಅಳಲು ಅನೇಕರದ್ದಾಗಿದೆ.
ಓರ್ವ ಸಿಬ್ಬಂದಿ 12 ತಾಸು ಕರ್ತವ್ಯದಲ್ಲಿದ್ದರೆ ಅವರಿಗೆ ಸ್ಥಳದಲ್ಲೇ ನೀರು, ಊಟ ಕೊಡಬೇಕೆಂಬ ನಿಯಮವಿದೆ. ಆದರೆ ಅಧಿಕಾರಿಗಳು ಆ ಯಾವ ವ್ಯವಸ್ಥೆಯನ್ನು ಸಿಬ್ಬಂದಿಗೆ ಒದಗಿಸುತ್ತಿಲ್ಲ. ತಮಗೆ ಬೇಕಾದವರಿಗೆ ದಿನಕ್ಕೆ 8 ತಾಸು ಮಾತ್ರ ಕರ್ತವ್ಯ ಮಾಡಲು ಹೇಳುತ್ತಾರೆ. ಅವರಿಗೆ ರಜೆ ಕೂಡ ಕೊಡುತ್ತಾರೆ. ಮುಖ ನೋಡಿ ಮಣೆ ಹಾಕುತ್ತಿದ್ದಾರೆ. ಆದರೆ ಇನ್ನುಳಿದವರಿಗೆ ರಜೆ ನೀಡಲು ಸತಾಯಿಸುತ್ತಿದ್ದು, ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದರೂ ಹಕ್ಕಿನ ರಜೆ ನೀಡದೆ ಗೈರು ಹಾಜರಿ ಎಂದು ನಮೂದಿಸುತ್ತಿದ್ದಾರೆ. ಆರ್‌ಪಿಎಫ್ ಪ್ರಧಾನ ನಿರೀಕ್ಷಕರು/ಪ್ರಧಾನ ಮುಖ್ಯ ಭದ್ರತಾ ಆಯುಕ್ತರ (ಐಜಿ/ಪಿಸಿಎಸ್‌ಸಿ) ಆದೇಶವಿದೆ. ರಜೆ ಕೊಡಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ತಮಗೆ ಬೇಕಾದವರಿಗೆ ಒಂದು ರಾತ್ರಿ ಪಾಳಿ ಮಾತ್ರ ಡ್ಯೂಟಿ ಹಾಕುತ್ತಾರೆ. ಇನ್ನುಳಿದವರಿಗೆ ವಾರದಲ್ಲಿ ಮೂರು ದಿನ ರಾತ್ರಿ ಡ್ಯೂಟಿ ಕಡ್ಡಾಯ ಮಾಡಲಾಗಿದೆ. ಉತ್ತರ ಭಾರತೀಯರು ಹಾಗೂ ದಕ್ಷಿಣ ಭಾರತೀಯರು ಎಂಬ ಭೇದಭಾವ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ನಿಲ್ದಾಣದ ಐದು ಪ್ಲಾಟ್ಫಾರ್ಮ್ನ್ನು ಇಬ್ಬರೇ ಸಶಸ್ತ್ರ ಸಿಬ್ಬಂದಿ ಒಂದು ತುದಿಯಿಂದ ಇನ್ನೊಂದು ತುದಿವರೆಗೆ ನೋಡಿಕೊಳ್ಳಬೇಕು. ಅನುಮಾನ ಬಂದರೆ ಪ್ರಯಾಣಿಕರ ತಪಾಸಣೆ ಮಾಡಬೇಕು. ಕರ್ತವ್ಯದಲ್ಲಿ ಏನಾದರೂ ಲೋಪವಾದರೆ ಇಲ್ಲವೇ ನಿಲ್ದಾಣದಲ್ಲಿ ಅನಾಹುತ, ಅವಘಡಗಳು ಸಂಭವಿಸಿದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಿ, ಸಂಬಳ ಕಡಿತಗೊಳಿಸುತ್ತಾರೆ. ಕರ್ತವ್ಯದಲ್ಲಿದ್ದಾಗ ಟೋಪಿ ಹಾಕಿಲ್ಲ, ಪ್ರಯಾಣಿಕರ ಲಗೇಜ್, ಟಿಕೆಟ್ ತಪಾಸಣೆ ಮಾಡಿಲ್ಲ, ಮೊಬೈಲ್ನಲ್ಲಿ ಮಾತನಾಡುತ್ತಿದ್ದೀರಿ, ಶೌಚಾಲಯಕ್ಕೆ ಹೋಗಿದ್ದೀರಿ ಎಂದು ಕ್ಷುಲ್ಲಕ ಕಾರಣಕ್ಕೆ ಸಂಬಳ ಕಡಿತಗೊಳಿಸಲಾಗುತ್ತಿದೆ ಎಂದು ದೂರಲಾಗಿದೆ.
Advertisement
ರೈಲ್ವೆ ನಿಲ್ದಾಣ ಸೇರಿದಂತೆ ಇಲಾಖೆಯ ಪ್ರಮುಖ ಸ್ಥಳಗಳಲ್ಲಿ ಭದ್ರತೆ, ಸುರಕ್ಷತಾ ಕ್ರಮ ಕೈಗೊಳ್ಳುವ ನೆಪದಲ್ಲಿ ಅಧಿಕಾರಿಗಳು ಕಳೆದೊಂದು ವರ್ಷಗಳಿಂದ ತಮಗೆ ಬೇಕಾದವರನ್ನು ಹೊರತುಪಡಿಸಿ ಇನ್ನುಳಿದ ಸಿಬ್ಬಂದಿಗೆ ದಿನದ 12 ತಾಸು ಕೆಲಸಕ್ಕೆ ನಿಯೋಜಿಸುತ್ತಿದ್ದಾರೆ. ಕರ್ತವ್ಯದ ಮಧ್ಯೆ ಎರಡು ತಾಸು ಮಾತ್ರ ವಿಶ್ರಾಂತಿ ಬಿಟ್ಟು 24 ತಾಸು ಡ್ಯೂಟಿ ಮಾಡುವಂತೆ ಸೂಚಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.
Related Articles
Advertisement
ಶಿವಶಂಕರ ಕಂಠಿ