Advertisement

ತಲೆ ಅಥವಾ ಕಿವಿಯಲ್ಲಿ ರಿಂಗಣಿಸುವುದು ಸಹಜ ಸಂಗತಿಯೇ?

03:22 PM Jul 02, 2023 | Team Udayavani |

ಕಿವಿ ಅಥವಾ ತಲೆಯಲ್ಲಿ ಯಾವುದೇ ಬಾಹ್ಯ ಮೂಲದಿಂದ ಉದ್ಭವಿಸಿದ್ದಲ್ಲದ ಸದ್ದೊಂದನ್ನು ನೀವು ಯಾವತ್ತಾದರೂ ಕೇಳಿದ್ದೀರಾ? ಇಂತಹ ಸದ್ದಿನ ಅನುಭವವನ್ನು ಟಿನಿಟಸ್‌ ಎಂಬುದಾಗಿ ವೈದ್ಯಕೀಯ ಪರಿಭಾಷೆಯಲ್ಲಿ ಕರೆಯುತ್ತಾರೆ, ವಯಸ್ಸಿನ ಬೇಧವಿಲ್ಲದೆ ಯಾರಲ್ಲೂ ಇದು ಕಂಡುಬರಬಹುದಾಗಿದೆ. ಟಿನಿಟಸ್‌ ಯಾವುದೇ ಬಗೆಯ ಸದ್ದಾಗಿ ಅನುಭವಕ್ಕೆ ಬರಬಹುದು; ಆದರೆ ಬಹುತೇಕ ಮಂದಿ ರಿಂಗಣಿಸುವ, ಗುಂಯ್‌ಗಾಡುವ, ಮೊರೆಯುವ ಅಥವಾ ಹಿಸ್‌ ಎಂಬ ಸದ್ದಾಗಿ ಯಾ ಒಂದಕ್ಕಿಂತ ಹೆಚ್ಚು ಸದ್ದಾಗಿ ಇದು ಅನುಭವಕ್ಕೆ ಬರುವುದನ್ನು ದಾಖಲಿಸುತ್ತಾರೆ. ಶ್ರವಣ ಶಕ್ತಿ ನಷ್ಟಕ್ಕೆ ಸಂಬಂಧಪಟ್ಟ ಸಾಮಾನ್ಯ ಲಕ್ಷಣಗಳಲ್ಲಿ ಇದು ಒಂದಾಗಿದೆ. ಟಿನಿಟಸ್‌ಗೆ ತುತ್ತಾಗಿರುವ ಎಲ್ಲರೂ ಶ್ರವಣ ಶಕ್ತಿ ನಷ್ಟ ಹೊಂದಿರುತ್ತಾರೆ ಎಂದೇನಲ್ಲ; ಆದರೆ ಇದು ಶ್ರವಣ ಶಕ್ತಿ ನಷ್ಟದ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿರಬಹುದು. ಟಿನಿಟಸ್‌ ಎಂಬುದು ನಿಜಕ್ಕೂ ಇಲ್ಲದ ಒಂದು ಸದ್ದನ್ನು ಕೇಳುವ ಸಮಸ್ಯೆಯಷ್ಟೇ ಅಲ್ಲ; ಇದು ಖನ್ನತೆ, ಉದ್ವಿಗ್ನತೆ ಮತ್ತು ನಿದ್ರಾಹೀನತೆ, ನಿದ್ರಾಭಂಗಗಳಿಗೆ ಸಂಬಂಧಿಸಿದ ಒಂದು ತೊಂದರೆದಾಯಕ ಅನುಭವವೂ ಹೌದು. ಟಿನಿಟಸ್‌ನ ತೀವ್ರತೆಯು ಲಘು ಸ್ವರೂಪದಿಂದ ತೊಡಗಿ ವ್ಯಕ್ತಿಯ ದೈನಿಕ ಜೀವನಕ್ಕೆ ತೊಂದರೆ ಉಂಟು ಮಾಡಬಲ್ಲಷ್ಟು ತೀವ್ರತೆಯದ್ದೂ ಆಗಿರಬಹುದು. ವಯಸ್ಕರಲ್ಲಿ ಟಿನಿಟಸ್‌ ತೊಂದರೆಯ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನ, ಚರ್ಚೆಗಳಾಗಿವೆ; ಇಲ್ಲಿ ಮಕ್ಕಳಲ್ಲಿ ಈ ತೊಂದರೆ ಕಂಡುಬರುವ ಬಗ್ಗೆ ಮಾಹಿತಿಗಳಿವೆ.

Advertisement

ಮಕ್ಕಳಲ್ಲಿ ಟಿನಿಟಸ್‌ ವಯಸ್ಕರಂತೆಯೇ ಸಾಮಾನ್ಯವಾಗಿ ಕಂಡುಬರುತ್ತದೆ. ಸರಿಸುಮಾರು ಶೇ. 10ರಿಂದ 15 ಮಂದಿ ಮಕ್ಕಳು ಟಿನಿಟಸ್‌ ಹೊಂದಿರುತ್ತಾರೆ. ಮಕ್ಕಳು ಸಾಮಾನ್ಯವಾಗಿ ಇದರ ಬಗ್ಗೆ ಹೇಳಿಕೊಳ್ಳುವುದಿಲ್ಲವಾದ್ದರಿಂದ ಟಿನಿಟಸ್‌ ಒಂದು “ವೈದ್ಯಕೀಯ ಲಕ್ಷಣ’ವಾಗಿ ನಿರ್ಲಕ್ಷಿಸಲ್ಪಡುತ್ತದೆ. ಇದೇಕೆಂದರೆ, ಸಾಮಾನ್ಯವಾಗಿ ಮಕ್ಕಳು ದೀರ್ಘ‌ಕಾಲದಿಂದ ಇದನ್ನು ಅನುಭವಿಸುತ್ತಿದ್ದರೆ ಅದು ಸಾಮಾನ್ಯ ಎಂದು ಭಾವಿಸುತ್ತಾರೆ ಅಥವಾ ತಮ್ಮ ಪರಿಸರದ ಇತರ ವಿದ್ಯಮಾನಗಳಿಂದಾಗಿ ಈ ಸದ್ದಿನ ಅನುಭವದ ಬಗ್ಗೆ ಅವರು ಹೆಚ್ಚು ಗಮನ ಹರಿಸುವುದಿಲ್ಲ. ಹೀಗಾಗಿ ಟಿನಿಟಸ್‌ ಹೊಂದಿರು ಹಿರಿಯರಿಗೆ ಹೋಲಿಸಿದರೆ ಮಕ್ಕಳು ಇದರ ಬಗ್ಗೆ ತಮ್ಮ ಕಳವಳ, ಚಿಂತೆಯನ್ನು ವ್ಯಕ್ತಪಡಿಸಲು ಶಕ್ತರಾಗುವುದಿಲ್ಲ. ಶ್ರವಣ ಶಕ್ತಿ ದೋಷ ಹೊಂದಿಲ್ಲದ ಮಕ್ಕಳಿಗೆ ಹೋಲಿಸಿದರೆ ಶ್ರವಣ ಶಕ್ತಿ ದೋಷ ಹೊಂದಿರುವ ಮಕ್ಕಳು ಟಿನಿಟಸ್‌ ತೊಂದರೆಯನ್ನು ವ್ಯಕ್ತಪಡಿಸುವುದು ಹೆಚ್ಚು.

ಮಕ್ಕಳಲ್ಲಿ ಟಿನಿಟಸ್‌ ತೊಂದರೆ ಉಂಟಾಗಲು ಸಂಭಾವ್ಯ ಅಪಾಯಾಂಶಗಳು ಎಂದರೆ ಶ್ರವಣ ಶಕ್ತಿ ನಷ್ಟದ ಇತಿಹಾಸ, ಕಿವಿಯ ಸೋಂಕುಗಳು, ತೀರಾ ಗಟ್ಟಿಯಾದ ಸದ್ದುಗದ್ದಲಕ್ಕೆ ಒಡ್ಡಿಕೊಂಡಿರುವುದು, ಕಿವಿಯ ಶಸ್ತ್ರಚಿಕಿತ್ಸೆ ಮತ್ತು ಮಕ್ಕಳಲ್ಲಿ ಸಾಮಾನ್ಯವಾಗಿ ತಾತ್ಕಾಲಿಕ ಟಿನಿಟಸ್‌ಗೆ ಕಾರಣವಾಗುವ ಕಿವಿಕುಗ್ಗೆಯ ಬಾಧೆ. ಆಹಾರ ಶೈಲಿ, ಆಹಾರಕ್ಕೆ ಸಂಬಂಧಪಟ್ಟ ಅಂಶಗಳು ಮತ್ತು ಟಿನಿಟಸ್‌ ತೊಂದರೆ ಉಂಟಾಗುವುದಕ್ಕೆ ಸಂಬಂಧವಿದೆ ಎಂಬುದು ಕೂಡ ಸಾಬೀತಾಗಿದೆ. ತಾಜಾ ಹಣ್ಣು ಮತ್ತು ತರಕಾರಿಗಳ ಸೇವನೆಯಿಂದ ಟಿನಿಟಸ್‌ ತೊಂದರೆ ಉಂಟಾಗುವುದು ತಪ್ಪುತ್ತದೆ; ಸಿಹಿಯುಕ್ತ ಸೋಡಾಗಳು, ಫಾಸ್ಟ್‌ಫ‌ುಡ್‌ ಮತ್ತು ಮೈದಾದಿಂದ ತಯಾರಿಸಿದ ಬಿಳಿ ಬ್ರೆಡ್‌ ಸೇವನೆಯಿಂದ ಟಿನಿಟಸ್‌ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ ಎಂಬುದಾಗಿ ವೈದ್ಯಕೀಯ ಸಾಹಿತ್ಯ ಹೇಳುತ್ತದೆ. ಮಕ್ಕಳಲ್ಲಿಯೂ ಉದ್ವಿಗ್ನತೆಯಿಂತಹ ಒತ್ತಡದ ಅಂಶಗಳಿಗೆ ಮತ್ತು ಟಿನಿಟಸ್‌ ಕಂಡುಬರುವುದಕ್ಕೆ ಸಂಬಂಧವಿದೆ.

ತೀರಾ ಗಟ್ಟಿಯಾದ ಸದ್ದುಗದ್ದಲಕ್ಕೆ ಒಡ್ಡಿಕೊಳ್ಳುವುದು ಟಿನಿಟಸ್‌ ಉಂಟಾಗುವುದಕ್ಕೆ ಒಂದು ಪ್ರಧಾನ ಕಾರಣವಾಗಿದೆ. ಕಿವಿ ದೀರ್ಘ‌ಕಾಲ ಗಟ್ಟಿಯಾದ ಸದ್ದನ್ನು ಕೇಳಿಸಿಕೊಳ್ಳುತ್ತಿದ್ದರೆ ಕಿವಿಯೊಳಗಿನ ಸೂಕ್ಷ್ಮ ಜೀವಕೋಶಗಳಿಗೆ ಹಾನಿಯಾಗುತ್ತದೆ, ಇದರಿಂದಾಗಿ ಟಿನಿಟಸ್‌ ಮತ್ತು ಶ್ರವಣ ಶಕ್ತಿ ನಷ್ಟ ಉಂಟಾಗಬಹುದು. ಇಯರ್‌ಫೋನ್‌ ಮೂಲಕ ದೀರ್ಘ‌ಕಾಲ ಗಟ್ಟಿಯಾಗಿ ಸಂಗೀತ ಕೇಳುವುದು, ಹತ್ತಿರದಲ್ಲಿಯೇ ಸುಡುಮದ್ದು, ಪಟಾಕಿ ಸದ್ದನ್ನು ಕೇಳುವುದು, ಗಟ್ಟಿಯಾದ ಸ್ವರದ ಕಿರುಚಾಟ ಇತ್ಯಾದಿಗಳು ಟಿನಿಟಸ್‌ ಮತ್ತು ಶ್ರವಣ ಶಕ್ತಿ ನಷ್ಟಕ್ಕೆ ಕಾರಣವಾಗಬಹುದು. ಇಂತಹ ಅಪಾಯಕಾರಿ ಶ್ರವಣ ಸನ್ನಿವೇಶಗಳಿಂದ ದೂರ ಉಳಿಯುವುದು ಉತ್ತಮ. ದೂರ ಉಳಿಯುವುದಕ್ಕೆ ಸಾಧ್ಯವಿಲ್ಲ ಎಂದಾದರೆ ಕಿವಿಯನ್ನು ಸಂರಕ್ಷಿಸಿಕೊಳ್ಳುವ ವಸ್ತು/ ಉಪಕರಣಗಳನ್ನು ಧರಿಸಬೇಕು.

ನಿಮ್ಮ ಮಗು ಇಂತಹ ಸದ್ದಿನ ಅನುಭವವನ್ನು ಹೊಂದಿದ್ದರೆ ಅಥವಾ ಪ್ರಸ್ತುತ ಅನುಭವಿಸುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಪ್ರಧಾನವಾಗಿ ಟಿನಿಟಸ್‌ ತಲೆ ತಿರುಗುವಿಕೆ ಮತ್ತು ಶ್ರವಣ ಶಕ್ತಿ ನಷ್ಟದ ಜತೆಗೆ ಸಂಬಂಧ ಹೊಂದಿದ್ದರೆ ಅದರಿಂದ ದೀರ್ಘ‌ಕಾಲಿಕ ಪ್ರತಿಕೂಲ ಪರಿಣಾಮಗಳು ಉಂಟಾಗಬಹುದು. ನೀವು ಪರಿಣಿತ ಆಡಿಯಾಲಜಿಸ್ಟ್‌ರನ್ನು ಸಂಪರ್ಕಿಸಿದರೆ ಅವರು ಶ್ರವಣ ಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆಹಚ್ಚಿ ಚಿಕಿತ್ಸೆಗೆ ಒಳಪಡಿಸಬಲ್ಲರು. ಬೇಗನೆ ನೀವಿದನ್ನು ಗುರುತಿಸುವುದು ಸಾಧ್ಯವಾದರೆ ಫ‌ಲಿತಾಂಶವೂ ಉತ್ತಮವಾಗಿರುತ್ತದೆ.

Advertisement

-ಡಾ| ಅರ್ಚನಾ ಜಿ.
ಅಸೋಸಿಯೇಟ್‌ ಪ್ರೊಫೆಸರ್‌
ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ
ಎಂಸಿಎಚ್‌ಪಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next