ಹೈದರಾಬಾದ್ : ಚೆನ್ನೈ ಮತ್ತು ಮುಂಬೈ ವಿರುದ್ಧದ ಪಂದ್ಯಗಳಲ್ಲಿ ಎಡವಿದ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ರವಿವಾರ ಮತ್ತೂಂದು ‘ಬಿಗ್ ಗೇಮ್’ಗೆ ಅಣಿಯಾಗಬೇಕಿದೆ. ಸನ್‌ರೈಸರ್ ಹೈದರಾಬಾದ್ ತಂಡವನ್ನು ಅವರದೇ ಅಂಗಳದಲ್ಲಿ ಎದುರಿಸಬೇಕಾದ ಸವಾಲು ಕೊಹ್ಲಿ ಪಡೆಯ ಮುಂದಿದೆ. ಮೊದಲ ಪಂದ್ಯವನ್ನು ಸೋತರೂ ರಾಜಸ್ಥಾನ್ ವಿರುದ್ಧ ಅಮೋಘ ಜಯ ಸಾಧಿಸಿರುವ ಹೈದರಾಬಾದ್ ಪಾಲಿಗೆ ಇದು ತವರಿನ ಪಂದ್ಯ ಆಗಿರುವುದೊಂದು ಪ್ಲಸ್ ಪಾಯಿಂಟ್.
ಬೆಂಗಳೂರು ಮೊದಲ ಪಂದ್ಯದಲ್ಲಿ ತೀವ್ರ ಬ್ಯಾಟಿಂಗ್ ಕುಸಿತ ಅನುಭವಿಸಿತ್ತು. ಮುಂಬೈ ವಿರುದ್ಧ ಅದೃಷ್ಟ ಕೈಕೊಟ್ಟಿತು. ಹೈದರಾಬಾದ್ ವಿರುದ್ಧ ಸಾಧನೆಯ ಜತೆಗೆ ನಸೀಬು ಕೂಡ ಕೈಹಿಡಿದರೆ ಆರ್‌ಸಿಬಿ ಗೆಲುವಿನ ಖಾತೆ ತೆರೆದೀತು.
ಕೊಹ್ಲಿ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ ಫಾರ್ಮ್ನಲ್ಲಿರುವುದು ಆರ್ ಸಿಬಿ ಪಾಲಿಗೆ ಸಂತಸದ ಸಂಗತಿಯಾದರೂ ಶಿಮ್ರನ್ ಹೆಟ್‌ಮೈರ್ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ವೈಫಲ್ಯ ಚಿಂತೆಯ ಸಂಗತಿಯಾಗಿದೆ. ಭರವಸೆಯ ಶಿವಂ ದುಬೆ ಅವರಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಭಡ್ತಿ ಕೊಡಬೇಕಾದ ಅಗತ್ಯವಿದೆ.
ಬೌಲರ್‌ಗಳಲ್ಲಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಪರ್ವಾಗಿಲ್ಲ. ಆದರೆ ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಯಶಸ್ಸು ಗಳಿಸಿಲ್ಲ. ನವದೀಪ್ ಸೈನಿ ಅಸಾಮಾನ್ಯ ವೇಗದ ಮೂಲಕ ಸುದ್ದಿಯಾಗಿದ್ದಾರೆ. ಗಂಟೆಗೆ 150 ಕಿ.ಮೀ. ವೇಗದಲ್ಲಿ ಚೆಂಡೆಸೆಯಬಲ್ಲ ಸಾಮರ್ಥ್ಯ ಹೊಂದಿರುವ ಸೈನಿ ಮ್ಯಾಚ್ ವಿನ್ನರ್ ಆಗಬೇಕಾದುದು ಆರ್‌ಸಿಬಿ ಪಾಲಿನ ತುರ್ತು ಅಗತ್ಯ.
ವಿಶ್ವಾಸದಲ್ಲಿ ಹೈದರಾಬಾದ್
ಹಿಂದಿನ ಪಂದ್ಯದಲ್ಲಿ ಗೆದ್ದಿರುವ ಖುಷಿಯ ಜೊತೆಗೆ ರವಿವಾರ ತನ್ನದೇ ನೆಲದಲ್ಲಿ ಆಡಲಿರುವುದರಿಂದ ಹೈದರಾಬಾದ್ ಸಹಜವಾಗಿಯೇ ಉತ್ಸಾಹದಲ್ಲಿದೆ. ಆರಂಭಕಾರ ಡೇವಿಡ್ ವಾರ್ನರ್ ಸ್ಫೋಟಕ ಫಾರ್ಮ್
ನಲ್ಲಿದ್ದಾರೆ. ಆಲ್‌ರೌಂಡರ್ ವಿಜಯ್ ಶಂಕರ್ ಕೂಡ ಮಿಂಚುತ್ತಿದ್ದಾರೆ. ಆದರೆ ಬೌಲರ್‌ಗಳು ಕುದುರಿಕೊಂಡಿಲ್ಲ.