ಲಕ್ನೋ: ಉಗ್ರವಾದಿಗಳ ಕುಕೃತ್ಯದಿಂದ ತತ್ತರಿಸಿರುವ ಇರಾಕ್ ಮತ್ತು ಭಾರತದಲ್ಲಿ ಜನಿಸಿದ್ದ ಶ್ರೀರಾಮನಿಗೂ ಸಂಬಂಧ ಇದೆಯೇ?
ಹೌದು, ಇರಾಕ್‌ನ ಹೊರೇನ್ ಶೆಖಾನ್‌ನ ದರ್ಬಾಂದ್-ಐ-ಬೆಲುಲಾದಲ್ಲಿ ಪತ್ತೆಯಾದ ಚಿತ್ರಕ್ಕೂ ಅಯೋಧ್ಯೆಗೂ ಹೋಲಿಕೆ ಇದೆ ಎಂದು ಹೇಳಲಾಗಿದೆ. ಅಯೋಧ್ಯ ಶೋಧ ಸಂಸ್ಥಾನ್ ಎಂಬ ಸಂಸ್ಥೆ ಈ ಚಿತ್ರ ರಾಮಾಯಣ ಕಾಲದ್ದು ಎಂದು ಪ್ರತಿಪಾದಿಸಿದೆ. ಅದರಲ್ಲಿ ಕೈಯಲ್ಲಿ ಬಿಲ್ಲಿನ ಆಕಾರವನ್ನು ವ್ಯಕ್ತಿ ಹಿಡಿದಿದ್ದಾನೆ ಮತ್ತು ಅವನ ಬಳಿ ಕುಳಿತುಕೊಂಡಿರುವ ವ್ಯಕ್ತಿ ಹನುಮಂತ ಎಂದು ಸಂಸ್ಥೆಯ ನಿರ್ದೇಶಕ ಯೋಗೇಂದ್ರ ಪ್ರತಾಪ್ ಸಿಂಗ್ ಪ್ರತಿಪಾದಿಸಿದ್ದಾರೆ.
ಭಾರತ ಮತ್ತು ಮೆಸಪಟೋಮಿಯಾ ಸಂಸ್ಕೃತಿಗಳ ನಡುವೆ ಸಮಾನತೆ ಇದೆ ಎಂದು ಸಿಂಗ್ ಹೇಳಿದ್ದಾರೆ. ಇರಾಕ್‌ನ ಬೆಲುಲಾದಲ್ಲಿ ರಾಮನ ಇರುವಿಕೆಯದ್ದು ಎಂದು ಹೇಳಲಾಗಿರುವ ಬಗೆಗಿನ ಅಂಶಗಳು ಪತ್ತೆಯಾಗಿವೆ. ಅದನ್ನು ದೃಢೀಕರಿಸುವ ನಿಟ್ಟಿನಲ್ಲಿ ವಿಸ್ತೃತ ಅಧ್ಯಯನಗಳು ನಡೆಸಬೇಕಾಗಿದೆ ಎಂದು ಹೇಳಿದ್ದಾರೆ ಸಂಸ್ಥೆಯ ನಿರ್ದೇಶಕ.
ಆದರೆ ಇರಾಕ್‌ನ ಪ್ರಾಚ್ಯ ವಸ್ತು ಸಂಶೋಧಕರು ಮತ್ತು ಇತಿಹಾಸಕಾರರ ಪ್ರಕಾರ ಚಿತ್ರ ರಾಮನದ್ದು ಎಂದು ಖಚಿತಪಡಿಸಿಲ್ಲವೆಂದು ಸಿಂಗ್ ‘ದ ಟೈಮ್ಸ್ ಆಫ್ ಇಂಡಿಯಾ’ಕ್ಕೆ ತಿಳಿಸಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಸಲು ಇರಾಕ್ ಸರ್ಕಾರದಿಂದ ಅನುಮತಿ ಸಿಕ್ಕ ತಕ್ಷಣ ಅದನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ಬಗ್ಗೆ ಸ್ಥಳಕ್ಕೆ ಬಾಗ್ಧಾದ್‌ನಲ್ಲಿರುವ ರಾಯಭಾರ ಕಚೇರಿಯ ಅಧಿಕಾರಿಗಳು ಭೇಟಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿಂಧೂ ಕಣಿವೆಯ ನಾಗರಿಕತೆ ಮತ್ತು ಮೆಸಪಟೋಮಿಯಾ ನಾಗರಿಕತೆಗಳ ನಡುವೆ ಲಿಂಕ್ ಇದೆ ಎನ್ನುವುದರ ಬಗ್ಗೆ ಇದೇ ಮೊದಲ ಬಾರಿಗೆ ಸ್ಥಾಪಿಸಲು ಪ್ರಯತ್ನ ನಡೆಸಲಾಗುತ್ತಿದೆ. ಕೆಳಗಿನ ಮೆಸಪಟೋಮಿಯಾ ಭಾಗವನ್ನು ಸುಮೇರಿಯನ್ನರು ಕ್ರಿಸ್ತಪೂರ್ವ 4,500ರಿಂದ 1,900ರ ನಡುವೆ ಆಳಿದ್ದಿರಬಹುದು. ಅವರು ಭಾರತದಿಂದಲೇ ಅಲ್ಲಿಗೆ ತೆರಳಿದ್ದಿರಬಹುದು ಎಂಬುದಕ್ಕೆ ಜೈವಿಕ ಆಧಾರಗಳು ಇವೆ ಎಂದು ಅಯೋಧ್ಯೆ ಶೋಧ ಸಂಸ್ಥಾನದ ನಿರ್ದೇಶಕ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಜೂನ್‌ನಲ್ಲಿ ಇರಾಕ್‌ನಲ್ಲಿರುವ ಭಾರತದ ರಾಯಭಾರಿ ಪ್ರದೀಪ್ ಸಿಂಗ್ ರಾಜಪುರೋಹಿತ್ ಅಯೋಧ್ಯಾ ಶೋಧ ಸಂಸ್ಥಾನ್‌ನ ಕೋರಿಕೆಯ ಮೇರೆಗೆ ಅಧ್ಯಯನ ತಂಡವನ್ನು ಕಳುಹಿಸಿದ್ದರು. ಅದರಲ್ಲಿ ಇತಿಹಾಸ ತಜ್ಞ ಚಂದ್ರಮೌಳಿ ಕರಣ್, ಇರಾಕ್‌ನ ಎಬ್ರಿಲ್ ಪಟ್ಟಣದಲ್ಲಿರುವ ಭಾರತದ ದೂತಾವಾಸದ ಹಿರಿಯ ಅಧಿಕಾರಿ, ಕುರ್ದಿಸ್ತಾನ್‌ನ ಗವರ್ನರ್ ಅಧ್ಯಯನ ತಂಡದಲ್ಲಿದ್ದರು.