ನವದೆಹಲಿ: ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿರುವ ಕಾರಣ ಹತಾಶವಾಗಿರುವ ಪಾಕಿಸ್ತಾನವು, ಭಾರತದ ಮೇಲೆ ದಾಳಿ ನಡೆಸಲು ಉಗ್ರರನ್ನು ಛೂ ಬಿಟ್ಟಿರುವ ಬಗ್ಗೆ ಗುಪ್ತಚರ ದಳ ಮಾಹಿತಿ ನೀಡಿದೆ.
ಮೂಲಗಳ ಪ್ರಕಾರ 26/11ರ ಮುಂಬೈ ದಾಳಿ ಮಾದರಿಯಲ್ಲಿಯೇ ಸಮುದ್ರದ ಮೂಲಕ ಉಗ್ರರನ್ನು ಕಳುಹಿಸಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ದಳ ತಿಳಿಸಿವೆ. ಆದರೆ, ಸದ್ಯ ಸಮುದ್ರದಲ್ಲಿ ಭಾರಿ ಅಲೆಗಳು ಇರುವುದರಿಂದ ಸಮುದ್ರದ ಮೂಲಕ ಉಗ್ರರನ್ನು ಕಳುಹಿಸುವುದರ ಬದಲಿಗೆ ಈಗಾಗಲೇ ಭಾರತದಲ್ಲೇ ಇರುವ ಉಗ್ರರ ಮೂಲಕ ದಾಳಿ ನಡೆಸುವ ವಿಧಾನವನ್ನು ಅನುಸರಿಸುವ ಸಾಧ್ಯತೆಯಿದೆ ಎಂದು ನೌಕಾಪಡೆ ಶಂಕಿಸಿದೆ.
ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ದೇಶದ ಎಲ್ಲ ನೌಕಾನೆಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜೈಶ್- ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿರುವ ಭಯೋತ್ಪಾದಕರು ಸದ್ಯ ಸಕ್ರಿಯವಾಗಿದ್ದಾರೆ. ಭಾರತದಲ್ಲಿ ದಾಳಿ ನಡೆಸುವ ಉದ್ದೇಶಕ್ಕೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಜೈಶ್ ಉಗ್ರ ಮೌಲಾನಾ ಮಸೂದ್ ಅಜರ್‌ನ ಸೋದರ ರವೂಫ್ ಅಝಗರ್‌ನನ್ನು ಕಳುಹಿಸಲಾಗಿದೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ. ಈತ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಬರುತ್ತಿದ್ದಂತೆಯ ಭಾರಿ ಸಂಖ್ಯೆಯ ಜೈಶ್ ಉಗ್ರರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಗಡಿಯ ಕಡೆಗೆ ಆಗಮಿಸಿದ್ದಾರೆ.
ಪಂಜಾಬ್, ರಾಜಸ್ಥಾನದಲ್ಲಿ ದಾಳಿ ಭೀತಿ: ಜಮ್ಮು ಮತ್ತು ಕಾಶ್ಮೀರ ಈಗ ಸೇನೆ ಹಾಗೂ ಪೊಲೀಸರ ಭದ್ರ ಕೋಟೆಯಾಗಿರುವುದರಿಂದ ಪಂಜಾಬ್, ರಾಜಸ್ಥಾನದಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಅಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.
ಪೂರ್ವ, ಪಶ್ಚಿಮ ಕರಾವಳಿಯಲ್ಲಿ ಕಟ್ಟೆಚ್ಚರ: ಕರಾವಳಿ ಯಲ್ಲಿ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಗುಪ್ತಚರ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಭಾರತದ ಸೇನೆ ಕಟ್ಟೆಚ್ಚರ ವಹಿಸಿದೆ. ಇದರ ಜೊತೆಗೆ ರಾಡಾರ್‌ಗಳನ್ನೂ ಬಳಸಿ ಕೊಳ್ಳಲಾಗುತ್ತಿದ್ದು, ಕೆಲವು ಸಂಕೀರ್ಣ ಪ್ರದೇಶಗಳಲ್ಲಿ ಸ್ಥಾಪಿಸಲಾದ ರಾಡಾರ್‌ಗಳ ಮೂಲಕ ನಿರಂತರ ಕಣ್ಗಾ ವಲು ವಹಿಸಲಾಗಿದೆ. ಈಗಾಗಲೇ ಕರಾವಳಿಯಲ್ಲಿ ರಾಡಾರ್ ಮತ್ತು ಜಂಟಿ ಕಾರ್ಯನಿರ್ವಹಣೆ ಸೆಂಟರ್‌ಗಳು ಕಾರ್ಯನಿರತವಾಗಿದ್ದು, ಇಲ್ಲಿನ ಮಾಹಿತಿಗಳು ಗುರುಗ್ರಾಮದಲ್ಲಿರುವ ಕೇಂದ್ರಕ್ಕೆ ನಿರಂತರವಾಗಿ ರವಾನೆಯಾಗುತ್ತಿವೆ.
ಇನ್ನೊಂದೆಡೆ ಭಾರತದ ಕರಾವಳಿಯಲ್ಲಿರುವ 2.5 ಲಕ್ಷ ಮೀನುಗಾರಿಕೆ ಬೋಟ್‌ಗಳಿಗೆ ‘ಫ್ರೆಂಡ್ ಆರ್ ಫೋಯ್’ ಎಂಬ ಸಾಧನವನ್ನು ಅಳವಡಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಇದರಿಂದ ಮೀನುಗಾರಿಕೆ ಬೋಟ್ ಮೂಲಕ ಭಾರತದ ಕರಾವಳಿಗೆ ಉಗ್ರರು ಬರುವುದನ್ನು ತಡೆಯಬಹುದಾಗಿದೆ.