Advertisement

ಭಾರತದಲ್ಲಿ ಒಮಿಕ್ರಾನ್‌ ಆರ್ಭಟ ಹೆಚ್ಚೇನಿಲ್ಲ

12:43 AM Dec 12, 2021 | Team Udayavani |

ಹೊಸದಿಲ್ಲಿ/ಮುಂಬಯಿ: ಜಗತ್ತಿನಾದ್ಯಂತ ಒಮಿಕ್ರಾನ್‌ ಭೀತಿ ಶುರುವಾಗಿ ಆಗಲೇ ಎರಡು ವಾರಗಳಾಗಿದ್ದು, ಆತಂಕ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಅದರಲ್ಲೂ ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಇದೊಂದು ಅತ್ಯಂತ ಕಳವಳಕಾರಿ ರೂಪಾಂತರಿ ಎಂದು ಹೇಳಿದ ಮೇಲಂತೂ ಇದರ ಬಗ್ಗೆ ಇನ್ನಿಲ್ಲದ ಭಯ ಆವರಿಸಿತ್ತು. ಇದರ ನಡುವೆಯೇ ಭಾರತೀಯರ ಪಾಲಿಗೆ ಒಂದು ಸಮಾಧಾನಕರ ಸುದ್ದಿ ಸಿಕ್ಕಿದ್ದು, ಒಮಿಕ್ರಾನ್‌ ರೂಪಾಂತರಿ ಇಲ್ಲಿ ಹೆಚ್ಚು ಪ್ರಭಾವ ಬೀರುವ ಸಾಧ್ಯತೆಗಳು ಕಡಿಮೆ ಇವೆ ಎಂದು ತಜ್ಞರು ಹೇಳಿದ್ದಾರೆ.

Advertisement

ಈ ಹಿಂದಿನ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್‌ ವೇರಿಯಂಟ್‌ಗೆ ಹೋಲಿಕೆ ಮಾಡಿದರೆ, ಒಮಿಕ್ರಾನ್‌ ರೂಪಾಂತರಿ ಪ್ರಭಾವ ತೀರಾ ಕಡಿಮೆ ಇದೆ. ಇದರಲ್ಲಿ ಒಂದು ಆತಂಕವಿರುವುದು ಹರಡುವಿಕೆಯ ಪ್ರಮಾಣ ಹೆಚ್ಚಾಗಿದೆ ಎಂಬುದಷ್ಟೇ. ಆದರೆ ತೀವ್ರತೆ ಲೆಕ್ಕಾಚಾರದಲ್ಲಿ ಡೆಲ್ಟಾದಷ್ಟೂ ಇಲ್ಲ ಎಂದು ಇದರ ಬಗ್ಗೆ ಅಧ್ಯಯನ ನಡೆಸುತ್ತಿರುವ ತಜ್ಞರು ಹೇಳಿದ್ದಾರೆ.

ಭಾರತೀಯರಲ್ಲಿ ಪ್ರತಿಕಾಯ ಹೆಚ್ಚು: ತಜ್ಞರ ಪ್ರಕಾರ ಭಾರತದ ಶೇ.70ರಷ್ಟು ಮಂದಿಯಲ್ಲಿ ಈಗಾಗಲೇ ಪ್ರತಿಕಾಯ ಸೃಷ್ಟಿಯಾಗಿದೆ. ಹಾಗೆಯೇ ದೊಡ್ಡ ನಗರಗಳಲ್ಲಿನ ಶೇ.90 ಮಂದಿಯಲ್ಲಿ ಪ್ರತಿಕಾಯ ಬೆಳೆದಿದೆ. ಹೀಗಾಗಿ ಹೆಚ್ಚಿನ ಅಪಾಯ ಬರಲಾರದು ಎಂದು ಸಿಎಸ್‌ ಐಆರ್‌-ಸೆಂಟರ್‌ ಫಾರ್‌ ಸೆಲ್ಯುಲರ್‌ ಆ್ಯಂಡ್‌ ಮಾಲೆಕ್ಯುಲರ್‌ ಬಯಾಲಜಿ (ಸಿಸಿಎಂಬಿ)ಯ ಮಾಜಿ ನಿರ್ದೇಶಕ ರಾಕೇಶ್‌ ಮಿಶ್ರಾ ಹೇಳಿದ್ದಾರೆ.

ರೋಗ ಲಕ್ಷಣ ರಹಿತ: ಒಂದು ವೇಳೆ ಭಾರತದಲ್ಲಿ ಒಮಿಕ್ರಾನ್‌ ಕಂಡು ಬಂದರೂ ಅದು ಲಕ್ಷಣ ರಹಿತ ಮತ್ತು ಮೃದು ಸ್ವಭಾವದ್ದಾಗಿರುತ್ತದೆ ಎಂದು ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್‌ ಫಾರ್‌ ಜೆನೆಟಿಕ್ಸ್‌ ಆ್ಯಂಡ್‌ ಸೊಸೈಟಿ (ಟಿಐಜಿಎಸ್‌)ನ ನಿರ್ದೇಶಕರೂ ಆಗಿರುವ ರಾಕೇಶ್‌ ಮಿಶ್ರಾ ಹೇಳುತ್ತಾರೆ. ಇದಕ್ಕೆ ಹೆಚ್ಚಿನ ಮಂದಿ ಈಗಾಗಲೇ ಲಸಿಕೆ ಪಡೆದಿರುವುದು ಕಾರಣ ಎಂದಿದ್ದಾರೆ.

ಸದ್ಯ ಡೆಲ್ಟಾ ಕಾಣಿಸಿಕೊಂಡಿರುವ ದೇಶಗಳಲ್ಲೇ ಒಮಿಕ್ರಾನ್‌ ಕಾಣಿಸುತ್ತಿದ್ದು, ಸೋಂಕಿತರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಹಾಗೆಂದು ಮಾಸ್ಕ್ ತೆಗೆದು ಓಡಾಡುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದನ್ನು ಮಾಡಬಾರದು ಎನ್ನುತ್ತಾರೆ ಮಿಶ್ರಾ.

Advertisement

ಇದನ್ನೂ ಓದಿ:ಭಾರತೀಯರಿಗೆಂದೇ ಪ್ರತ್ಯೇಕವಾಗಿ ಸಿದ್ಧವಾಗಲಿದೆ ಪಾದದ ಅಳತೆಗೋಲು!

ಒಂದೂವರೆ ವರ್ಷದ ಮಗು ಡಿಸ್ಚಾರ್ಜ್ : ಒಮಿಕ್ರಾನ್‌ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಾರಾಷ್ಟ್ರದ ಪುಣೆಯ ಒಂದೂವರೆ ವರ್ಷದ ಮಗು ಸಂಪೂರ್ಣ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಪುಣೆಯ ಪಿಂಪ್ರಿ ಚಿಂಚಾವಾಡ್‌ ಪ್ರದೇಶದಲ್ಲಿ ಈ ಮಗುವಿಗೆ ಒಮಿಕ್ರಾನ್‌ ಕಾಣಿಸಿಕೊಂಡಿತ್ತು. ಈ ಮಧ್ಯೆ, ಇದೇ ಪ್ರದೇಶದ ಮತ್ತೊಂದು 3 ವರ್ಷದ ಮಗುವಲ್ಲಿ ಶುಕ್ರವಾರ ಒಮಿಕ್ರಾನ್‌ ಕಾಣಿಸಿಕೊಂಡಿದ್ದು, ಇದರಲ್ಲೂ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಹೆಚ್ಚಿನ ನಿಗಾ ವಹಿಸಿ: ಶೇ.5ಕ್ಕಿಂತ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಕೇಂದ್ರ ಸರಕಾರ ಎಲ್ಲ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ. ಇಲ್ಲಿ ಹೆಚ್ಚು ನಿರ್ಬಂಧ ವಿಧಿಸುವುದು, ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಅನುಸರಿಸುವಂತೆ ಹೇಳಿದೆ. ಸದ್ಯ ದೇಶದಲ್ಲಿ ಎಂಟು ಜಿಲ್ಲೆಗಳಲ್ಲಿ ಮಾತ್ರ ಶೇ.10ಕ್ಕಿಂತ ಪಾಸಿಟಿವಿಟಿ ದರವಿದೆ. ಇದರಲ್ಲಿ ಕೇರಳದ 2 ಜಿಲ್ಲೆಗಳು ಇವೆ. ಉಳಿದಂತೆ ಶೇ.5ರಿಂದ ಶೇ.10 ಪಾಸಿಟಿವಿಟಿ ದರ ಕೇರಳದ 9, ಮಿಜೋರಾಂನ ಐದು ಜಿಲ್ಲೆಗಳಲ್ಲಿ ಇವೆ. ಬೇರೆ ಬೇರೆ ರಾಜ್ಯಗಳ ಇನ್ನೂ ಐದು ಜಿಲ್ಲೆಗಳಲ್ಲಿಯೂ ಇಷ್ಟೇ ಪಾಸಿಟಿವಿಟಿ ದರವಿದೆ. ಕರ್ನಾಟಕದ ಯಾವುದೇ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಳವಿಲ್ಲ.

ಮೃತ ವ್ಯಕ್ತಿಗೆ ಲಸಿಕಾ ಪ್ರಮಾಣ ಪತ್ರ!
ಮಧ್ಯ ಪ್ರದೇಶದ ಮೃತ ವ್ಯಕ್ತಿಯೊಬ್ಬರಿಗೆ ಕೊರೊನಾ ಲಸಿಕಾ ಪ್ರಮಾಣ ಪತ್ರ ನೀಡಲಾಗಿದೆ. ಈ ಬಗ್ಗೆ ಅವರ ಮೊಬೈಲ್‌ಗೆ ಸಂದೇಶ ಬಂದಿದೆ. ಆದರೆ ಸ್ಥಳೀಯ ಪ್ರಾಧಿಕಾರದ ಅಧಿಕಾರಿಗಳು ಕಂಪ್ಯೂಟರ್‌ ಎರರ್‌ನಿಂದಾಗಿ ಈ ಸಂದೇಶ ಹೋಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಬಿಯೋರಾ ನಗರದ 78 ವರ್ಷದ ಪುರುಷೋತ್ತಮ್‌ ಶಕ್ಯಾವರ್‌ ಎಂಬವರು ಮೇ 24ರಂದು ಮೃತಪಟ್ಟಿದ್ದರು. ಇವರು ಎಪ್ರಿಲ್‌ 8ರಂದು ಮೊದಲ ಡೋಸ್‌ ಲಸಿಕೆ ಪಡೆದಿದ್ದರು. ಆದರೆ ಡಿ.3ರಂದು ಇವರ ಮೊಬೈಲ್‌ಗೆ ನೀವು ಎರಡನೇ ಡೋಸ್‌ ಲಸಿಕೆ ಪಡೆದಿದ್ದೀರಿ ಎಂಬ ಸಂದೇಶ ಬಂದಿದೆ. ಈ ಬಗ್ಗೆ ಅವರ ಪುತ್ರನೇ ಮಾಹಿತಿ ನೀಡಿದ್ದಾರೆ.

10 ಡೋಸ್‌ ಲಸಿಕೆ ಪಡೆದ ಭೂಪ!
ನ್ಯೂಜಿಲ್ಯಾಂಡ್‌ನ‌ಲ್ಲಿ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ ಬರೋಬ್ಬರಿ 10 ಡೋಸ್‌ ಲಸಿಕೆ ಪಡೆದಿದ್ದಾನೆ. ಆತ ವಿವಿಧ ಲಸಿಕಾ ಕೇಂದ್ರಗಳಿಗೆ ತೆರಳಿ ಹಣ ಪಾವತಿಸಿ ಲಸಿಕೆ ಪಡೆದಿದ್ದಾನೆ ಎನ್ನಲಾಗಿದೆ. ಆತನ ಬಗ್ಗೆ ಬೇರೆ ಯಾವುದೇ ಮಾಹಿತಿ ಸಿಕ್ಕಿಲ್ಲವೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next