Advertisement

ಕಲೆಗೆ ಪರೀಕ್ಷೆ ಎಂಬ ಮಾನದಂಡ ಇಂದಿನ ಅನಿವಾರ್ಯವಲ್ಲವೇ?

12:30 AM Jun 24, 2018 | |

ಪರೀಕ್ಷೆ ಕಿರುಕುಳವಾಗಬಾರದು, ಪ್ರೇರಣೆಯಾಗಬೇಕು. ಒಳ್ಳೆಯ ಕಲಾವಿದರಿಗೆ ಪ್ರಮಾಣಪತ್ರ ಬೇಕೆಂದೇನಿಲ್ಲ ಅನ್ನುವುದು ನಿಜ. ಆದರೆ ಪ್ರದರ್ಶನ, ಪ್ರಯೋಗಗಳಿಗೆ ಅವಕಾಶ ಸಿಗಬೇಕಾದರೆ ಪರೀಕ್ಷೆಯ ಸಾಧನೆ ಮುಖ್ಯ ಮೆಟ್ಟಿಲಾಗಿದೆ. ಆಮೇಲಿನದ್ದು ಅವರವರ ಶ್ರಮ, ಆಸಕ್ತಿ, ಸಾಧನೆಗೆ ಬಿಟ್ಟ ವಿಚಾರ. ಕಲಾ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರು ಶ್ರೇಷ್ಠ ಕಲಾವಿದರಾಗುತ್ತಾರೆಂಬ ಖಾತ್ರಿ ಇಲ್ಲ. ಆದರೆ ಶ್ರೇಷ್ಠ ಕಲಾಕಾರನಿಗೆ ಪರೀಕ್ಷೆ ಎಂಬುದು ಇಂದಿನ ವ್ಯವಸ್ಥೆಯಲ್ಲಿ ಸೂಕ್ತ ಮತ್ತು ಅಗತ್ಯ ಮಾನದಂಡ.

Advertisement

ಕೆಲ ದಿನಗಳ ಹಿಂದೆ ಕಲೆಗೆ ಪರೀಕ್ಷೆಯ ಮಾನದಂಡವೇಕೆ? ಎಂಬ ಚಿಂತನಾಪೂರ್ಣ ವಿಚಾರ ಮಂಡನೆ ಉದಯವಾಣೆಯಲ್ಲಿ ಪ್ರಕಟವಾಗಿತ್ತು. ಮೇಲ್ನೋಟಕ್ಕೆ ಈ ವಿಚಾರ ಸರಣಿ ಅರ್ಥಪೂರ್ಣ ಎನಿಸಿದರೂ ಒಟ್ಟು ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ಒಪ್ಪಿಕೊಳ್ಳು ವುದು ಕಷ್ಟ ಎನಿಸಿತು. ಪರೀಕ್ಷೆಗಳು ಬೇಕೇ ಬೇಡವೇ ಎಂಬ ಚರ್ಚೆ ಶಿಕ್ಷಣ ಕ್ಷೇತ್ರದಲ್ಲಿ ಬಹು ಸುದೀರ್ಘ‌ ಕಾಲದಿಂದ ಇದೆ. ಆದರೆ ಬದಲಿ ಪರಿಣಾಮಕಾರಿ ವ್ಯವಸ್ಥೆಯೊಂದು ಬಳಕೆಗೆ ಬರುವವರೆಗೆ ಪರೀಕ್ಷೆಯನ್ನು ತಿರಸ್ಕರಿಸುವುದು ಸ್ವಾಗತಾರ್ಹವೆನಿಸದು. ಲೇಖಕರೂ ಕೂಡಾ ಕಲೆಗೆ ಪರೀಕ್ಷೆಯ ಮಾನದಂಡ ಬೇಡವೆಂದರೂ ಬದಲಿ ವ್ಯವಸ್ಥೆಯನ್ನು ಸೂಚಿಸಲಿಲ್ಲ. 

ಪ್ರತಿಯೊಂದು ಸಾಧನೆಗೂ ಒಂದು ಪ್ರೇರಣೆ ಪ್ರಚೋದನೆ ಬೇಕಾ ಗುತ್ತದೆ. ಇಂದು ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಯ ನೆಪದಲ್ಲಿ ಪ್ರೇರಿತರಾಗಿ ವಿವಿಧ ಕಲಾಪ್ರಕಾರಗಳಲ್ಲಿ ಸುದೀರ್ಘ‌ ಕಾಲ ಕಲಿಕೆ ನಡೆಸುತ್ತಾರೆ. ವೇದಿಕೆಯ ಪ್ರದರ್ಶನ ಕೇವಲ ಕಲಿತದ್ದನ್ನು ಪ್ರದರ್ಶಿ ಸುವುದಕ್ಕೆ ಆದೀತೇ ವಿನಹ ಹೊಸದಾಗಿ ಕಲಿಯುವುದಕ್ಕೆ ಅಲ್ಲ. ಸಂಗೀತ, ನೃತ್ಯ ಇತ್ಯಾದಿಗಳನ್ನು ಇಷ್ಟಪಟ್ಟು ಕಲಿಯಬೇಕು ಎನ್ನುವು ದೇನೋ ಸರಿ. ಆದರೆ ಮಕ್ಕಳಿಗೆ ಅದರ ಮಹತ್ವ ತಿಳಿಯುವಷ್ಟು ಪ್ರೌಢಿಮೆ ಇಲ್ಲದಿದ್ದಾಗ ದೊಡ್ಡವರ ಪ್ರೇರಣೆಯಿಂದ ಕಷ್ಟಪಟ್ಟಾದರೂ ಕಲಿತವರು ದೊಡ್ಡವರಾದ ಮೇಲೆ ಇಷ್ಟಪಡುತ್ತಾರೆ. ಸಾಧನಾ ಮಾರ್ಗದಲ್ಲಿ ಆರೋಗ್ಯಕರವಾದ ಭಯ ಅನಿವಾರ್ಯ ಕೂಡಾ. ಇಲ್ಲದಿದ್ದರೆ ಕಲೆ ಯಲ್ಲಿ ಆಸಕ್ತಿಯ ಬದಲು ಆಲಸ್ಯ ತುಂಬಿಕೊಳ್ಳುತ್ತದೆ. ಇಂತಹ ಸ್ವಲ್ಪ ಭಯ ಹಾಗೂ ಜವಾಬ್ದಾರಿ ಹುಟ್ಟಿಸುವಂತಹ ಪರೀಕ್ಷೆ ಅನಿವಾರ್ಯ. ಸರಿಯಾದ ಸಿದ್ಧತೆ ಮಾಡಿದವರಿಗೆ ಭಯ ಹೆಚ್ಚೇನೂ ಕಾಡುವುದಿಲ್ಲ. 

ನಮ್ಮಲ್ಲಿ ಕೆಲವೊಮ್ಮೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಏನೂ ಕಲಿಯದವರು ಸಿನಿಮಾದ ಹಾಡಿಗೆ ಭರತನಾಟ್ಯ ಮಾಡುವು ದಿದೆ. ಅಲ್ಲಿ ಅವರು ಹಾಕಿದ ಉಡುಗೆ-ತೊಡುಗೆಗಳು ಒಂದಿಷ್ಟು ನಾಟ್ಯದ್ದೇ ಇರುತ್ತದೆ. ಉಳಿದಂತೆ ಅದು ಒಂದು ರೀತಿಯಲ್ಲಿ ಆ ಶ್ರೇಷ್ಠ ಕಲೆಯನ್ನು ಅಣಕ ಮಾಡುವಂತೆ ಇರುತ್ತದೆ. ಅಂದರೆ ಭರತನಾಟ್ಯದ ಪ್ರಯೋಗಕ್ಕೆ ವೇದಿಕೆ ಪ್ರಮುಖವಾಗುತ್ತದೆ, ಆದರೆ ಥಿಯರಿ(ಶಾಸ್ತ್ರ)ಗೆ ಪರೀಕ್ಷೆ ಅತೀ ಅಗತ್ಯವಾಗುತ್ತದೆ. ಥಿಯರಿಯಲ್ಲಿ ನಾಟ್ಯದಲ್ಲಿನ ಸೂಕ್ಷ್ಮ ವಾದ ಅನೇಕ ಸಂಗತಿಗಳನ್ನು ಕಲಿಯುವುದಕ್ಕೆ ಇರುತ್ತದೆ. ಅದರಿಂದ ಪ್ರಯೋಗ ಕಳೆಗಟ್ಟುತ್ತದೆ. ಪರೀಕ್ಷೆ ಇದ್ದಾಗ ಮಾತ್ರ ಕಲೆಯನ್ನು ಕಲಿಯುವವರು ಥಿಯರಿಯನ್ನು ಗಮನಕೊಟ್ಟು ತಯಾರಿ ಮಾಡು ತ್ತಾರೆ, ಮಾಡಬೇಕು. ಪರೀಕ್ಷೆಯ ಕಾರಣವಿಲ್ಲದಿದ್ದರೆ ಎಲ್ಲರೂ ನರ್ತಿ ಸುವ ಕಡೆಗೆ ಗಮನ ಕೊಡಬಹುದೇ ವಿನಃ ಅದರ ಒಳಸತ್ವವನ್ನು ಗಮನಿಸಿ ಸ್ವೀಕರಿಸುವಲ್ಲಿ ವಿಫ‌ಲವಾಗುವುದು ಖಂಡಿತ. ಥಿಯರಿಯ ಜ್ಞಾನವಿಲ್ಲದಿದ್ದರೆ ಅದು ಕೇವಲ ಅನುಕರಣೆಯಾಗಿಬಿಡಬಹುದು. ಕಲೆಯ ಥಿಯರಿಯಲ್ಲಿ ಕಲಿತ ಹಲವು ಸಂಗತಿಗಳು ಪ್ರಯೋಗದಲ್ಲಿ ಬಳಕೆಗೆ ಬಂದಿರಬಹುದು. ಆದರೆ ಅದು ಪರಿಣಾಮಕಾರಿಯಾಗಲು ಕಲಾವಿದರಿಗೆ ಅಪಾರವಾದ ಥಿಯರಿ ಜ್ಞಾನ ಬೇಕೇ ಬೇಕು. ಪರೀಕ್ಷೆಯ ಕಾರಣವಿಲ್ಲದಿದ್ದರೆ ಅದನ್ನು ಯಾರೂ ತಿರುಗಿ ನೋಡಲಾರರು. 

ಸಾಮಾನ್ಯ ಜನತೆ ಕಲೆಗಳನ್ನು ಉತ್ತಮ ದೃಷ್ಟಿಕೋನದಿಂದ ನೋಡ ಬೇಕಾದರೆ ಕಲಾವಿದರು ನಿರ್ದಿಷ್ಟವಾದ ಕಲೆಗಳ ಮೌಲ್ಯಗಳಿಗೆ ಒತ್ತು ಕೊಡಬೇಕು. ಸರಿಯಾದ ಗ್ರಹಿಕೆ, ಕಲಿಕೆಗಳಿಗೆ ಪರೀಕ್ಷೆಯೂ ಮಾನ ದಂಡವೆನಿಸಿದರೆ ತಪ್ಪಾಗಲಾರದು. ಅಲರಿಪು, ಜತಿಸ್ವರ, ಶಬ್ದಂ, ಪದಂ, ಜಾವಳಿ, ಅಷ್ಟಪದಿ, ಚೂರ್ಣಿಕೆಯಂತಹ ನೃತ್ತ ಹಾಗೂ ನೃತ್ಯ ಬಂಧಗಳು ಯಾವುದೇ ನೃತ್ಯ ಪ್ರದರ್ಶನ ವೇದಿಕೆಯಲ್ಲಿ ನೋಡುವುದು ಬಹು ವಿರಳ. ಪರೀಕ್ಷಕರು ವಿದ್ಯಾರ್ಥಿಗಳಿಗೆ ಮಾಡುವ ಮೌಖೀಕ ಪರೀಕ್ಷೆಯ ವಿಧಾನ ಯಾವ ಪರೀಕ್ಷೆಯ ವೇದಿಕೆಯಲ್ಲೂ ಸಿಗಲು ಸಾಧ್ಯವಿಲ್ಲ. ಪರೀಕ್ಷೆ ಎಂಬ ಪದ್ಧತಿ ಇಲ್ಲದಿದ್ದರೆ ಹಿಂದಿನಿಂದ ಬಂದ ಸಾಂಪ್ರದಾಯಿಕ ಮಾರ್ಗ ಪದ್ಧತಿಯ ಕೊಂಡಿ ಈಗಿನ ಆಧುನಿಕ ಕಾಲದಲ್ಲಿ ಕಣ್ಮರೆಯಾಗುತ್ತಿತ್ತು. ಹೆಚ್ಚಾಗಿ ಎಲ್ಲ ಕ್ಷೇತ್ರದಲ್ಲೂ ಪರೀಕ್ಷೆ ಎನ್ನುವ ವಿಧಾನವನ್ನು ಕಾಣಬಹುದು. ಪರೀಕ್ಷೆಯು ಯಾವುದೇ ಹಣ ಮತ್ತು ಪ್ರಭಾವದ ನಿರೀಕ್ಷೆಗೆ ಒಳಗಾಗದೆ ವ್ಯವಸ್ಥಿತ ರೀತಿಯಲ್ಲಿ ನಡೆದರೆ ಅದರ ಅಂಕಪಟ್ಟಿಗೆ ಉತ್ತಮ ಮೌಲ್ಯ ದೊರಕುತ್ತದೆ. 

Advertisement

ಈ ಪರೀಕ್ಷೆಯು ಯಾವ ವಿದ್ಯಾರ್ಥಿಗಳಿಗೂ ಕಡ್ಡಾಯವೆಂದು ಯಾವ ಗುರುಗಳೂ ಆದೇಶಿಸುವುದಿಲ್ಲ. ಪರೀಕ್ಷೆ ವಿದ್ಯಾರ್ಥಿಗಳ ಆಸಕ್ತಿ ಯಾಗಿರುತ್ತದೆಯೇ ಹೊರತು ಯಾರ ಬಲವಂತವೂ ಆಗಿರುವುದಿಲ್ಲ. ಪರೀಕ್ಷೆ ಕಿರುಕುಳವಾಗಬಾರದು, ಪ್ರೇರಣೆಯಾಗಬೇಕು. ಒಳ್ಳೆಯ ಕಲಾವಿದರಿಗೆ ಪ್ರಮಾಣಪತ್ರ ಬೇಕೆಂದೇನಿಲ್ಲ ಅನ್ನುವುದು ನಿಜ. ಆದರೆ ಪ್ರದರ್ಶನ, ಪ್ರಯೋಗಗಳಿಗೆ ಅವಕಾಶ ಸಿಗಬೇಕಾದರೆ ಪರೀಕ್ಷೆಯ ಸಾಧನೆ ಮುಖ್ಯ ಮೆಟ್ಟಿಲಾಗಿದೆ. ಆಮೇಲಿನದ್ದು ಅವರವರ ಶ್ರಮ, ಆಸಕ್ತಿ, ಸಾಧನೆಗೆ ಬಿಟ್ಟ ವಿಚಾರ. ಕಲಾ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರು ಶ್ರೇಷ್ಠ ಕಲಾವಿದರಾಗುತ್ತಾರೆಂಬ ಖಾತ್ರಿ ಇಲ್ಲ. ಆದರೆ ಶ್ರೇಷ್ಠ ಕಲಾಕಾರನಿಗೆ ಪರೀಕ್ಷೆ ಎಂಬುದು ಇಂದಿನ ವ್ಯವಸ್ಥೆಯಲ್ಲಿ ಒಂದು ಸೂಕ್ತ ಮತ್ತು ಅಗತ್ಯ ಮಾನದಂಡ. ಬದಲಿ ಪರಿಣಾಮಕಾರಿ ವ್ಯವಸ್ಥೆ ಬರುವವರೆಗೆ ಇದು ಅನಿವಾರ್ಯ. ಅದನ್ನು ಕೆಂಗಣ್ಣಿನಿಂದ ನೋಡಬಾರದು, ಸಾಧನೆಗೆ ಸಹಕಾರಿ ಎಂದು ಭಾವಿಸಬೇಕು.

ಅನುಷಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next