Advertisement

ನೀಲಕಂಠರಾಯನ ಗಡ್ಡಿ ಮತಗಳಿಗಿಲ್ಲವೇ ಬೆಲೆ?

12:08 PM Mar 19, 2019 | |

ಕಕ್ಕೇರಾ: ಕೃಷ್ಣಾನದಿ ತೀರದ ನೀಲಕಂಠರಾಯನಗಡ್ಡಿ ಚುನಾವಣೆ ವಿಷಯದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ದಂತಾಗಿದೆ. ಇಲ್ಲಿನ ಬಹುತೇಕ ಜನರ ಮತಗಳಿಗೆ ಬೆಲೆಯೇ ಇಲ್ಲದಂತಾಗಿದೆ. ನೀಲಕಂಠರಾಯನ ಗಡ್ಡಿಯಲ್ಲಿ 45 ಮಹಿಳೆಯರು, 70 ಪುರುಷರು ಸೇರಿದಂತೆ ಒಟ್ಟು 110 ಮತಗಳಿವೆ.

Advertisement

ಅಲ್ಲದೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಈಗಾಗಲೇ ಎರಡು ಅರ್ಜಿ ಸಲ್ಲಿಕೆಯಾಗಿವೆ. ಆದರೆ ದಶಕಗಳಿಂದಲೂ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿಲ್ಲ. ಚುನಾವಣೆಯಲ್ಲಿ ರಾಜಕಿಯ ಪಕ್ಷಗಳು ನೀಲಕಂಠರಾಯನಗಡ್ಡಿ ಜನರ ಮತ ಕೇಳುವಲ್ಲಿ ನಿರಾಸಕ್ತಿ ತೋರಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀಲಕಂಠರಾಯನಗಡ್ಡಿ ಜನರಿಗೆ ದೊಡ್ಡ ಅನ್ಯಾಯವಾಗಿದೆ.
 
ಈ ಹಿಂದೆ 2014ರಲ್ಲಿ ನಡೆದ ಲೋಕಸಭಾ ಚುನಾವಣೆ ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯಾವೊಬ್ಬ ಅಭ್ಯರ್ಥಿಯೂ ಗಡ್ಡಿಗೆ ಭೇಟಿ ನೀಡಿ ಮತ ಕೇಳಿಲ್ಲ. ಅಂದ ಹಾಗೆ ಗಡ್ಡಿ ನಮಗೆ ಸಂಬಂಧಿಸಿಲ್ಲ ಎನ್ನುವಂತೆ ನಡೆದುಕೊಂಡು ಬರಲಾಗಿದೆ. ಹೀಗಾಗಿಯೇ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಬಹಿಷ್ಕಾರ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಮತದಾನದ ಜಾಗೃತಿ ಮೂಡಿಸಿಲ್ಲ: ಪ್ರತಿಯೊಬ್ಬ ಅನಕ್ಷರಸ್ಥ ನಾಗರಿಕರಿಗೆ ಮತದಾನ ಬಗ್ಗೆ ಜಾಗೃತಿ ಮೂಡಿಸಬೇಕು.
ಕೇವಲ ನಗರ ಮತ್ತು ಪಟ್ಟಣಗಳಲ್ಲಿಯೇ ಜಾಗೃತಿ ಮೂಡಿಸಲಾಗಿದೆ ಹೊರತು ಇಲ್ಲಿ ಅಂತಹ ಪ್ರಯತ್ನ ನಡೆದಿಲ್ಲ. ಇಲ್ಲಿ ಬಹುತೇಕರು ಅನಕ್ಷರಸ್ಥರು ಇದ್ದಾರೆ.

ಇಂತವರಿಗೆ ಮತದಾನ ಹಕ್ಕು ಮತ್ತು ಮೌಲ್ಯದ ಬಗ್ಗೆ ಜಾಗೃತಿ ಮೂಡಿಸುವುದು ಚುನಾವಣಾ ಅಧಿಕಾರಿಗಳ ಕರ್ತವ್ಯವಾಗಿದೆ. ಇಲ್ಲಿ ಮಾತ್ರ ಜಾಗೃತಿ ಮೂಡಿಸುವ ಕೆಲಸ ಇಂದಿಗೂ ನಡೆದಿಲ್ಲ. ಹೀಗಾಗಿ ನೀಲಕಂಠರಾಯನಗಡ್ಡಿ ಜನರು ನಿರ್ಲಕ್ಷಕ್ಕೆ ಒಳಗಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಹೊಸೂರು ಪೈದೊಡ್ಡಿ ಬೂತ್‌: ಚುನಾವಣೆ ಸಂದರ್ಭದಲ್ಲಿ ಐದು ಕಿಮೀ ದೂರದ ಹೊಸೂರು ಪೈದೊಡ್ಡಿ ಮತಗಟ್ಟೆಗೆ ನಡೆದುಕೊಂಡು ಬಂದೇ ಹಕ್ಕು ಚಲಾಯಿಸಬೇಕು. ಚುನಾವಣೆ ಅಧಿಕಾರಿಗಳು ನಮಗೆ ವಾಹನ ಅನುಕೂಲ ಮಾಡಿಕೊಟ್ಟ ಉದಾಹರಣೆಯೇ ಇಲ್ಲ ಎನ್ನುತ್ತಾರೆ ಇಲ್ಲಿನ ಮತದಾರರು.
 
ಬಹುತೇಕ ಎಸ್‌ಟಿ ಜನಾಂಗ: ನೀಲಕಂಠರಾಯನಗಡ್ಡಿಯಲ್ಲಿ 40 ಕುಟುಂಬಗಳು ಇವೆ. 20 ಕುಟುಂಬಗಳು ತುತ್ತು ಅನ್ನಕ್ಕಾಗಿ ಬೆಂಗಳೂರಿಗೆ ಗುಳೆ ಹೋಗಿವೆ ಎಂದು ಹೇಳಲಾಗುತ್ತಿದೆ. ಎಲ್ಲ ಮತದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ.

Advertisement

ರಾಯಚೂರು ಲೋಕಸಭಾ ಮತ್ತು ಸುರಪುರ ವಿಧಾನಸಭಾ ಕ್ಷೇತ್ರ ಎಸ್‌ಟಿಗೆ ಮಿಸಲಾಗಿವೆ. ಸ್ವಾಭಿಮಾನಕ್ಕಾದರೂ ಗಡ್ಡಿ ಮತದಾರರನ್ನು ಭೇಟಿಯಾಗಿ ಮತ ಕೇಳುವ ಪ್ರಯತ್ನ ಅಭ್ಯರ್ಥಿ ಗಳಿಂದ ನಡೆದಿಲ್ಲ ಎಂಬುದು ಆಶ್ಚರ್ಯ ಸಂಗತಿ. ವಿವಿಧ ಕಡೆಗೆ ಗುಳೆ ಹೋದ ಜನರನ್ನು ಚುನಾವಣೆಯಲ್ಲಿ ಮತ ಚಲಾಯಿಸಲು ಮರಳಿ ಕರೆಸಿಕೊಳ್ಳಲಾಗುತ್ತಿದೆ. ಆದರೆ ನೀಲಕಂಠರಾಯನ ಗಡ್ಡಿ ಜನರನ್ನು ಮಾತ್ರ ಮತಚಲಾಯಿಸಲು ಕರೆಸಿಕೊಳ್ಳುವ ಪ್ರಯತ್ನ ನಡೆದಿಲ್ಲ. ಸದ್ಯ ಲೋಕಸಭಾ ಚುನಾವಣೆಗೆ ಮತಚಲಾಯಿಸಲು ಕರೆಸಿಕೊಳ್ಳುವರೇ ಎಂದು ಕಾಯ್ದು ನೋಡಬೇಕಾಗಿದೆ ಎನ್ನುತ್ತಾರೆ ಇಲ್ಲಿನ ಜನರು.

ಮತದಾನದ ಹಕ್ಕು ಏನು ಎಂಬುದರ ಬಗ್ಗೆ ನಮಗೆ ತಿಳಿಸಿಲ್ಲ. ಮತ ಹಾಕಬೇಕಾದರೆ ನಡೆದುಕೊಂಡೇ ಹೋಗಬೇಕು. ಎಲ್ಲ ವಿಷಯದಲ್ಲೂ ನಮ್ಮನ್ನು ತಿಸ್ಕರಿಸುತ್ತ ಬರಲಾಗಿದೆ. ಜನಪ್ರತಿನಿಧಿಗಳು ಇಲ್ಲಿಯವರೆಗೂ ಬಂದು ಮತ ಕೇಳಿಲ್ಲ. ಅಂದರೆ ಈ ದೇಶದ ಪ್ರಜೆಗಳು ನಾವಲ್ಲವೇ? 
  ಅಮರೇಶ, ಗಡ್ಡಿ ಗ್ರಾಮಸ್ಥ

ಸದ್ಯ ಎಲ್ಲರೂ ಬೆಂಗಳೂರಿಗೆ ದುಡಿಯಲು ಹೋಗಿದ್ದಾರೆ. ಚುನಾವಣೆ ಎಂದರೆ ಅವರಿಗೆ ಗೊತ್ತಿಲ್ಲ. ಪ್ರತಿ ಚುನಾವಣೆಯಲ್ಲಿ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗಿದೆ. ಮೂಲಭೂತ ಸೌಕರ್ಯ ಒದಗಿಸುವುರದಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ.
 ಲಕ್ಷ್ಮಣ್ಣ ಗಡ್ಡಿ ಗಡ್ಡಿ ನಿವಾಸಿ 

„ಬಾಲಪ್ಪ ಎಂ. ಕುಪ್ಪಿ

Advertisement

Udayavani is now on Telegram. Click here to join our channel and stay updated with the latest news.

Next