ನನ್ನ ಕಣ್ಣುಗಳೇ ನನಗೆ ಮೋಸ ಮಾಡಿದ್ದು; ನೀನಲ್ಲ. ನನ್ನ ಕಣ್ಣುಗಳಿಗೆ ನೀನು ಮೊದಲ ಬಾರಿ ಸಿಕ್ಕಾಗಲೇ ಅವು ಕುಣಿದಾಡಿದ್ದವು. ನಿನ್ನನ್ನು ಮತ್ತೆ-ಮತ್ತೆ ನೋಡಲು ಪರದಾಡುತ್ತಿದ್ದವು. ಮರೆಯಾದರೆ ಸಾಕು, ಹುಡುಕು ಅಂತ ನನಗೆ ದುಂಬಾಲು ಬೀಳುತ್ತಿದ್ದವು.
ಹುಡುಗಿ,
ನಿನ್ನ ತಪ್ಪಿಲ್ಲ ಬಿಡು. ಆಗಿದ್ದು ಆಗಿಹೋಯಿತು. ಹೃದಯಕ್ಕೆ ಬಿದ್ದಿರುವುದು ಒಂದು ಸಣ್ಣ ಗೀರು ತಾನೆ? ಕಾಲದ ಬಳಿ ಮುಲಾಮು ಇದೆ, ಅದೇ ಸವರುತ್ತದೆ. ಛತ್ರದ ಮುಂದೆ ಹೂವಲ್ಲಿ, ನಿನ್ನ ಮತ್ತು ನಿನ್ನ ಭಾವಿ ಗಂಡನ ಜೋಡಿ ಹೆಸರು ಬರೆದಿದೆಯಲ್ಲ; ಅದು ನಮ್ಮ ಪ್ರೀತಿಗೆ ಕೊನೆಯ ನೋಟಿಸ್. ಕೊಟ್ಟ ನೋಟೀಸಿಗೆ ಕನಿಷ್ಠ ಉತ್ತರವನ್ನೂ ಪಡೆದುಕೊಳ್ಳದಂತೆ ಹೊರಟುಬಿಡುವ ಹುಡುಗಿಯರು ಹೊರಡಿಸುವ ನೋಟೀಸು ಅದು. ಅಬ್ಬೇಪಾರಿ ಹುಡುಗ ಕೊಡುವ ಉತ್ತರ ಈ ಜಗತ್ತಿಗೆ ಬೇಕಿಲ್ಲ. ಅದಿರಲಿ ಬಿಡು.
ನೀನು ಅವತ್ತು “ಕ್ಷಮಿಸು’ ಅಂದೆ. ನಾನು ತುಸು ಹೆಚ್ಚೇ ರೇಗಾಡಿದೆ. ಪ್ರೀತಿ ಮುರಿದು ಹೋಗುವಾಗಲೂ ಹೀಗೆ ಮಾತಾಡಿಕೊಂಡೆವಲ್ಲ, ನಮ್ಮ ಪ್ರೀತಿಗೆ ಸೊಗಸಾದ ಕ್ಲೈಮ್ಯಾಕ್ಸ್ ದಕ್ಕಿದ್ದಕ್ಕೆ ಖುಷಿಯಿದೆ. “ಪ್ರೀತಿಯನ್ನೇ ನುಂಗಿದ್ದೀನಿ, ಧರಿಸಿದ್ದೀನಿ, ಅದು ಚರ್ಮದಲ್ಲಿ ಹೂತು ಹೋಗಿದೆ. ಆದರೆ, ಅದನ್ನು ಕಾರಣವಾಗಿಟ್ಟುಕೊಂಡು ಮನೆಮಂದಿ ಜಗತ್ತನ್ನು ಎದುರಿಸುವ ಧೈರ್ಯವಿಲ್ಲ’ ಅಂದಿದ್ದೆ ನೀನು. ನಾನು ಕೂಡ ಅವತ್ತು ಕಡ್ಡಿ ಮುರಿದಂತೆ ಬೇರೆಯಾಗಿಬಿಟ್ಟೆ. ನಿನ್ನನ್ನು ಮತ್ತೆ ಮತ್ತೆ ಕಾಡುವ, ಮನೆಗೆ ಬಂದು ಗಲಾಟೆ ಮಾಡುವ, ಬ್ಲಾಕ್ ಮೇಲ್‌ನಂಥ ಹಾಳು ಮೂಳುಗಳ ತಂಟೆಗೆ ಹೋಗಲಿಲ್ಲ. ನನಗೆ ನಿಜಕ್ಕೂ ಕೋಪ ಇದ್ದದ್ದು ನನ್ನ ಕಣ್ಣುಗಳ ಮೇಲೆ.
ನೈನೋ ಕಿ ಮತ್ ಮಾನಿಯೋರೆ,
ನೈನೋ ಕಿ ಮತ್ ಸುನಿಯೋ ರೆ, ನೈನಾ ಠಣ್ ಲೇಂಗೆ..
ಎಲ್ಲಕ್ಕೂ ಕಾರಣ ಈ ನನ್ನ ಕಣ್ಣುಗಳೇ! ನನ್ನ ಕಣ್ಣುಗಳೇ ನನಗೆ ಮೋಸ ಮಾಡಿದ್ದು; ನೀನಲ್ಲ. ನನ್ನ ಕಣ್ಣುಗಳಿಗೆ ನೀನು ಮೊದಲ ಬಾರಿ ಸಿಕ್ಕಾಗಲೇ ಅವು ಕುಣಿದಾಡಿದ್ದವು. ನಿನ್ನನ್ನು ಮತ್ತೆ-ಮತ್ತೆ ನೋಡಲು ಪರದಾಡುತ್ತಿದ್ದವು. ಮರೆಯಾದರೆ ಸಾಕು, ಹುಡುಕು ಅಂತ ನನಗೆ ದುಂಬಾಲು ಬೀಳುತ್ತಿದ್ದವು. ಅವುಗಳ ಕರೆಗೆ, ಆಗುವುದಿಲ್ಲ ಅನ್ನಲಾಗಲಿಲ್ಲ ನನಗೆ. ಅವುಗಳು ಹೇಳಿದಂತೆ ಕೇಳಿದೆ. ಅವುಗಳ ಹಸಿವಿಗೆ ನಿನ್ನ ಸೌಂದರ್ಯವನ್ನು ಉಣಿಸುತ್ತಾ ಹೋದೆ, ಅವು ತಿಂದು ತೇಗಿ ಹೃದಯಕ್ಕೆ ಇಳಿಸಿಬಿಟ್ಟವು.
ಹೃದಯಕ್ಕೂ ಹುಚ್ಚು ಹಿಡಿಸಿದ್ದವು. ಹೃದಯ ಎದ್ದು ಬಿದ್ದು ನಿನ್ನ ಹಿಂದೆ ಓಡತೊಡಗಿತು. ಕಣ್ಣು ಮತ್ತು ಹೃದಯಗಳು ಮುಷ್ಕರ ಹೂಡಿದಂತೆ ಒಂದೇ ಸಮನೆ ನೀನೇ ಬೇಕು ಅಂತ ಹಠ ಹಿಡಿದರೆ ನಾನಾದ್ರೂ ಏನು ಮಾಡಲಾದೀತು? ಅವತ್ತು ನಿನ್ನ ಮುಂದೆ ನಿಂತು, “ನನ್ನ ಕಣ್ಮುಂದೆ ನೀ ಸದಾ ಇರ್ಬೇಕು ಅದಕ್ಕೆ ನಿನ್ನ ಅನುಮತಿ ಬೇಕು’ ಅಂತ ಕೇಳಿದ್ದೇ, ಕೋಪಿಸಿಕೊಂಡು ಎದೆ ಮೇಲಿದ್ದ ಜಡೆಯನ್ನು ಹಿಂದಕ್ಕೆ ಬಿರುಸಾಗಿ ಎಸೆದು ಕೊಂಡು ಹೋಗಿದ್ದೆ! ಮುಖದಲ್ಲಿ ಒಂದು ಪಾವು ನಗು ಕೂಡ ಇಲ್ಲದ ಕೋಪ. ನನ್ನ ಕಣ್ಣುಗಳು ಮತ್ತು ಹೃದಯ ಸುಮ್ನೆ ಬಿಟ್ಟವಾ? ಅವು ಅದ್ಭುತ ಹಟಮಾರಿಗಳು. ಕೊನೆಗೂ ನಿನ್ನನ್ನು ಗೆಲ್ಲಿಸಿಕೊಂಡವು. ಅವತ್ತು ನೀನು ನಾಚಿ ಕೆ.ಜಿ.ಗಟ್ಟಲೆ ನಕ್ಕಿದ್ದೆ; ಒಲವಿನ ಕಡತಕ್ಕೆ ಸಹಿ ಬಿದ್ದಿತ್ತು.
ಈಗ ಕಣ್ಣುಗಳಿಗೆ ಬರೀ ಮೌನ. ಹೃದಯ ಸ್ಮಶಾನದ ಬಾಗಿಲು. ಕಣ್ಣುಗಳು ಅವಳನ್ನು ಬಯಸಿ ಬಯಸಿ ಸಂಕಟವನ್ನು ಉಣ್ಣುತ್ತಿವೆ. ಅದರ ಬುಡದಿಂದ ನೀರು ಒಸರುತ್ತದೆ. ಕಣ್ಣುಗಳು ನನಗೆ ಸಾರಿ ಕೇಳುತ್ತಿವೆ. ನಿಜಕ್ಕೂ ನನ್ನ ಕಣ್ಣುಗಳು ತಪ್ಪಿದೆಯೇ? ಉತ್ತರಿಸುವವರ್ಯಾರು?
ಸದಾಶಿವ್ ಸೊರಟೂರು