Advertisement

ಮೋದಿ, ಭಾರತದ ಪ್ರಧಾನಿಯೋ? ಪಾಕ್‌ ಪ್ರಧಾನಿಯೋ?

10:50 PM Jan 03, 2020 | Lakshmi GovindaRaj |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಪದೇ, ಪದೇ ಪಾಕಿಸ್ತಾನದ ಜಪ ಮಾಡುವ ಪ್ರಧಾನಿ ನರೇಂದ್ರ ಮೋದಿಯವರೇ, ನೀವು ಭಾರತದ ಪ್ರಧಾನಿಯೋ ಅಥವಾ ಪಾಕಿಸ್ತಾನದ ಪ್ರಧಾನಿಯೋ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಮೋದಿ ರಾಜ್ಯ ಪ್ರವಾಸ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಎಚ್‌.ಡಿ.ಕುಮಾರಸ್ವಾಮಿ, ಮೋದಿಯವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

Advertisement

* ಪಾಕಿಸ್ತಾನದ ವಲಸಿಗರು, ನಿರಾಶ್ರಿತರು ನಿಮಗೆ ಓಟು ಕೊಟ್ಟರೋ ಅಥವಾ ಭಾರತದ ಪ್ರಜೆಗಳು ಓಟು ಕೊಟ್ಟರೋ? ಭಾರತೀಯ ಸಂವಿಧಾನದಿಂದ ಪ್ರಧಾನಿ ಹುದ್ದೆ ಸಿಕ್ಕಿತೋ? ಅಥವಾ ಪಾಕಿಸ್ತಾನದ ಸಂವಿಧಾನದಿಂದ ಪ್ರಧಾನಿ ಹುದ್ದೆ ಸಿಕ್ಕಿತೋ?

* ಭಾರತೀಯವರ ಓಟು ಪಡೆದು ಸಂವಿಧಾನದ ಪ್ರಕಾರ ಪ್ರಧಾನಿಯಾದ ನಿಮಗೆ, ಇಲ್ಲಿನ ರಾಜ್ಯಗಳ ಅಭಿವೃದ್ಧಿ ಆದ್ಯತೆಯೋ? ಪಾಕಿಸ್ತಾನದವರಿಗೆ ಪೌರತ್ವ ನೀಡುವುದು ಆದ್ಯತೆಯೋ? ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ಕರ್ನಾಟಕಕ್ಕೆ ಕೊಡಬೇಕಾದ ಅನುದಾನ ಕೊಡಲಾಗದಿದ್ದರೂ, ಪಾಕಿಸ್ತಾನದ ಮೇಲೆ ನಿಮಗೆ ಪ್ರೀತಿ ಉಕ್ಕುತ್ತಿರುವುದೇಕೆ? ಅಲ್ಲಿನವರ ಮೇಲೆ ಯಾಕಿಷ್ಟು ಮಮಕಾರ?

* 25 ಸಂಸದರನ್ನು ಕೊಟ್ಟ ಕರ್ನಾಟಕದಲ್ಲಿ ಉಂಟಾದ ನೆರೆಯಿಂದ 35 ಸಾವಿರ ಕೋಟಿ ರೂ.ನಷ್ಟವಾದರೂ ಕೊಟ್ಟಿದ್ದು ಚಿಕ್ಕಾಸು. ನರೇಗಾ ಬಾಕಿ ಕೊಟ್ಟಿಲ್ಲ. ತೆರಿಗೆಯಲ್ಲಿ ರಾಜ್ಯದ ಪಾಲು ಕೊಟ್ಟಿಲ್ಲ. ಬರ ಪರಿಹಾರವಿಲ್ಲ. ಇವುಗಳ ಬಗ್ಗೆ ಮಾತನಾಡಲಾಗದ ನೀವು, ಮಾತನಾಡುವುದು ಪಾಕಿಸ್ತಾನದ ಬಗ್ಗೆ. ಮೊದಲು ಪಾಕಿಸ್ತಾನದ ಜಪ ನಿಲ್ಲಿಸಿ, ಕರ್ನಾಟಕಕ್ಕೆ ಬರಬೇಕಾದ ಹಣ ಕೊಡಿ.

* ಕೇಂದ್ರ ಕಟ್ಟಿಸಿಕೊಳ್ಳುವ ತೆರಿಗೆಯ ಕರ್ನಾಟಕದ ಪಾಲನ್ನು ಹಾಗೂ ನೆರೆ ಪರಿಹಾರದ ಹಣವನ್ನು ರಾಜ್ಯದ ಮುಖ್ಯಮಂತ್ರಿಯಾದ ಯಡಿಯೂರಪ್ಪನವರು, ಪಾಕಿಸ್ತಾವನ್ನು ಕೇಳಬೇಕೋ ಅಥವಾ ಭಾರತೀಯ ಮತದಾರರಿಂದ ಆಯ್ಕೆಯಾದ ನಿಮ್ಮನ್ನು ಕೇಳಬೇಕೋ?

Advertisement

* ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ನಮಿಸಿ, ವಿದ್ಯಾರ್ಥಿಗಳ ಎದುರು ಭಾಷಣ ಮಾಡಿದ ನೀವು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಏನಾದರೂ ಸಲಹೆ ಕೊಟ್ಟಿರಾ?. ಇಲ್ಲ…ಅದು ಬಿಟ್ಟು ಪಾಕಿಸ್ತಾನದ ಜಪ ಮಾಡುತ್ತೀರಿ. ಇದು ನಿಮ್ಮ ರಾಜಕೀಯ, ಅಧಿಕಾರದ ಆಸೆಯನ್ನು ಸಾಬೀತು ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next