ಬಾಗಲಕೋಟೆ: ಜಿಲ್ಲೆಯ ಬ್ರಿಟಿಷರ ಕಾಲದ ಐತಿಹಾಸಿಕ ಬೃಹತ್ ಕೆರೆ ಎಂಬ ಖ್ಯಾತಿ ಪಡೆದ ಮುಚಖಂಡಿ ಕೆರೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಈ ವರ್ಷವಾದ್ರೂ ತುಂಬಿಸುತ್ತಾರಾ? ಎಂಬ ಪ್ರಶ್ನೆ ಜನರಿಂದ ಕೇಳಿ ಬರುತ್ತಿದೆ.
ಹೌದು, 1882ರಲ್ಲಿ ನಿರ್ಮಾಣಗೊಂಡ 58 ಎಂಸಿಎಫ್‌ಟಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಮುಚಖಂಡಿ ಕೆರೆ ತುಂಬಿಸಲು ಸರ್ಕಾರ, ಬರೋಬ್ಬರಿ 12.40 ಕೋಟಿ ಖರ್ಚು ಮಾಡಿದೆ. ಆದರೆ, ಜನಪ್ರತಿನಿಧಿಗಳ ನಿಷ್ಕಾಳಜಿ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಳೆದ ವರ್ಷ ಕೆರೆ ತುಂಬಲಿಲ್ಲ. ಕೆರೆ ಪೂರ್ಣ ಪ್ರಮಾಣದಲ್ಲಿ ತುಂಬಿಸಲು ಆಗದಿದ್ದರೂ, ಸಾಧ್ಯವಾದಷ್ಟು ನೀರು ಹಿಡಿದಿಟ್ಟುಕೊಳ್ಳುವ ಪ್ರಯತ್ನವೂ ನಡೆಯಲಿಲ್ಲ. ಕೆಲವೇ ಕೆಲವು ದಿನ ಕೆರೆ ತುಂಬಿಸುವ ಪಂಪ್‌ಸೆಟ್ ಆರಂಭಿಸಲಾಯಿತಾದರೂ, ಅಷ್ಟೊತ್ತಿಗೆ ಹಿನ್ನೀರು ಸರಿದು, ಜಾಕ್‌ವೆಲ್ ದಾಟಿತ್ತು. ಹೀಗಾಗಿ ಬೃಹತ್ ಕೆರೆ ತುಂಬಿಸುವ ಯೋಜನೆ, ವಿಫಲವಾಯಿತು.
ಬ್ರಿಟಿಷರ ಕಾಲದ ಕೆರೆಯಿದು: ಬ್ರಿಟಿಷರ ಮುಂದಾಲೋಚನೆ ಹಾಗೂ ಅಂರ್ತಜಲ ಹೆಚ್ಚುವ ಕಾಳಜಿಯ ಪರಿಣಾಮವಾಗಿ 1882ರಲ್ಲಿ ಮುಚಖಂಡಿ ಗ್ರಾಮದ ಸರ್ವೇ ನಂ.202ರಲ್ಲಿ ಒಟ್ಟು 721 ಕೆರೆ ವಿಸ್ತಾರದಲ್ಲಿ ಈ ಕೆರೆ ನಿರ್ಮಾಣಗೊಂಡಿದೆ. ಒಟ್ಟು 480 ಹೆಕ್ಟೇರ್ (1186 ಎಕರೆ) ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ, ಬಾಗಲಕೋಟೆಯ ನವನಗರ, ಮುಚಖಂಡಿ, ಸೂಳಿಕೇರಿ, ಶಿಗಿಕೇರಿ, ನೀರಲಕೇರಿ, ಬೇವಿನಮಟ್ಟಿ, ಹೂಲಗೇರಿ, ಗದ್ದನಕೇರಿ ತಾಂಡಾ, ಮುಚಖಂಡಿ ತಾಂಡಾ ಹೀಗೆ ಹತ್ತಕ್ಕೂ ಹಳ್ಳಿಗಳಲ್ಲಿ ಅಂರ್ತಜಲ ಹೆಚ್ಚಿಸುವ ಕೆರೆ ಇದಾಗಿದೆ. ಆದರೆ, ಕೆರೆಯಲ್ಲಿ ಶೇ.12ರಷ್ಟು ಭಾಗ ಹೂಳು ತುಂಬಿಕೊಂಡಿದ್ದು, ಹೂಳು ತೆಗೆಯದೇ ಕೆರೆ ತುಂಬಿಸುವ ಯೋಜನೆ ಕೈಗೊಂಡಿದ್ದರಿಂದ ಕೆರೆ ಹಾಕುವ ನೀರೆಲ್ಲ, ಹೂಳು ಹೀರಿಕೊಳ್ಳುತ್ತಿದೆ. ಅಲ್ಲದೇ 721 ಎಕರೆಯಷ್ಟು ವಿಶಾಲವಾದ ಕೆರೆ ತುಂಬಿಸಲು ಅಳವಡಿಸಿರುವ 71 ಎಂಎಂ ವ್ಯಾಸದ ಪೈಪ್‌ಗ್ಳು ಸಾಕಾಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ 12.40 ಕೋಟಿ ಯೋಜನೆಯ ಬದಲಾಗಿ, ದೊಡ್ಡ-ದೊಡ್ಡ ಪೈಪ್ ಅಳವಡಿಸಿ, ಇಡೀ ಕೆರೆಯನ್ನು ತುಂಬಿಸಲು ಹೊಸ ಯೋಜನೆ ಮಂಜೂರು ಮಾಡುವಂತೆ, ಸಣ್ಣ ನೀರಾವರಿ ಇಲಾಖೆಗೆ ಮತ್ತೂಂದು ಪ್ರಸ್ತಾವನೆ ಹೋಗಿದೆ. ಈ ಯೋಜನೆಗೆ ಮಂಜೂರಾತಿ ದೊರೆಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಇರುವ ಯೋಜನಯಡಿ, ಸಾಧ್ಯವಾದಷ್ಟು ಕೆರೆ ತುಂಬಿಸಬೇಕು ಎಂಬುದು ಜನರ ಒತ್ತಾಯ.
ತುಂಬದ ಕೆರೆ: ಬಾಗಲಕೋಟೆ ನಗರದ ಬಳಿಯ ಆಲಮಟ್ಟಿ ಜಲಾಶಯದ ಹಿನ್ನೀರ (ಘಟಪ್ರಭಾ ನದಿ)ನ್ನು 4.5 ಕಿ.ಮೀ. ದೂರದ ಮುಚಖಂಡಿ ಕೆರೆಗೆ ತುಂಬಿಸಲು ಪೈಪ್‌ಲೈನ್ ಅಳವಡಿಸಲಾಗಿದೆ. ನಗರದ ಕಾರಿಹಳ್ಳದ ಬಳಿ 516 ಮೀಟರ್ ವ್ಯಾಪ್ತಿಯ ಹಿನ್ನೀರು ಎತ್ತಲು ಜಾಕ್‌ವೆಲ್ ಕೂಡ ನಿರ್ಮಿಸಲಾಗಿದೆ. ಇಲ್ಲಿ 250 ಎಚ್ಪಿ ಸಾಮರ್ಥ್ಯದ ಎರಡು ಪಂಪ್‌ಸೆಟ್ ಚಾಲ್ತಿ ಇದ್ದರೆ, ಒಂದು ಹೆಚ್ಚುವರಿ ಪಂಪ್‌ಸೆಟ್ ಇಡಲಾಗಿದೆ. 500 ಎಚ್ಪಿ ವಿದ್ಯುತ್ ಅನ್ನು ನಿತ್ಯದ 22 ಗಂಟೆಗಳ ಕಾಲ ಪೂರೈಸಲು ಪ್ರತ್ಯೇಕ ವಿದ್ಯುತ್ ವಿತರಣೆ (ಟಿಸಿ) ಕೇಂದ್ರವೂ ಸ್ಥಾಪಿಸಲಾಗಿದೆ. ಆದರೆ, ಕಳೆದ ವರ್ಷ ಸಣ್ಣ ನೀರಾವರಿ ಇಲಾಖೆಯ (ಇಡೀ ಯೋಜನೆ ನಿರ್ವಹಣೆಯ ಹೊಣೆ ಈ ಇಲಾಖೆಯ ಮೇಲಿದೆ) ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ, ಹಿನ್ನೀರು ಬಂದು ಎರಡು ತಿಂಗಳು ಕಳೆದರೂ, ಯೋಜನೆ ಆರಂಭಿಸಿರಲಿಲ್ಲ. ಹೀಗಾಗಿ ಕೆರೆ ಪೂರ್ಣ ತುಂಬಿಸಲು ಆಗಲಿಲ್ಲ ಎಂಬ ಮಾತು ಕೆಲವರಿಂದ ಕೇಳಿಬಂತು.
ಈ ವರ್ಷವಾದ್ರೂ ತುಂಬಿಸಲಿ: ಸದ್ಯ ಮುಚಖಂಡಿ ಕೆರೆಗೆ, ಮೊನ್ನೆಯಾದ ಮಳೆಯಿಂದ ಅಲ್ಪ ಪ್ರಮಾಣದ ನೀರು ಬಂದಿದೆ. ಜತೆಗೆ ಮಹಾರಾಷ್ಟ್ರ, ಬೆಳಗಾವಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಬಹುಭಾಗ ತುಂಬಿ ಹರಿಯುತ್ತಿವೆ. ಕೃಷ್ಣಾ ನದಿಯಿಂದ ಆಲಮಟ್ಟಿ ಜಲಾಶಯಕ್ಕೆ ಶುಕ್ರವಾರ 1,06,582 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 519.60 ಮೀಟರ್ ಸಾಮರ್ಥ್ಯದ ಆಲಮಟ್ಟಿ ಡ್ಯಾಂನಲ್ಲಿ ಸದ್ಯ 515.85 ಮೀಟರ್ ನೀರು ಸಂಗ್ರಹವಾಗಿದೆ. ಈ ಜಲಾಶಯದಲ್ಲಿ 516 ಮೀಟರ್ ನೀರು ಸಂಗ್ರಹಗೊಂಡರೆ, ಮುಚಖಂಡಿ ಕೆರೆ ತುಂಬಿಸುವ ಜಾಕ್‌ವೆಲ್ಗೆ ನೀರು ಬರುತ್ತದೆ. ಆಗ ತಕ್ಷಣ ಕೆರೆ ತುಂಬಿಸಲು ಆರಂಭಿಸಿದರೆ, ಕನಿಷ್ಠ ಮೂರು ತಿಂಗಳ ಕಾಲ ನಿರಂತರ ಹಿನ್ನೀರನ್ನು ಕೆರೆಗೆ ಹರಿಸಿದರೆ, ಮುಚಖಂಡಿ ಕೆರೆ ಬಹುಭಾಗ ತುಂಬಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಎರಡು ದಿನಗಳಲ್ಲಿ ಪೂರ್ವ ತಯಾರಿ ಮಾಡಿಕೊಳ್ಳಬೇಕಿದೆ.
•ಶ್ರೀಶೈಲ ಕೆ. ಬಿರಾದಾರ