Advertisement

ಕಾಶ್ಮೀರ ಪ್ರತ್ಯೇಕತಾವಾದ ಅಂತ್ಯವಾಯಿತೇ?

05:34 PM May 27, 2022 | Team Udayavani |

ಪಾಕಿಸ್ಥಾನದ ಕುಮ್ಮಕ್ಕಿನಿಂದಾಗಿ ದಶಕಗಳಿಂದಲೂ ಪ್ರತ್ಯೇಕತಾವಾದ ನಡೆಸಿಕೊಂಡು ಬರುತ್ತಿರುವ ಹುರಿಯತ್‌ ಕಾನ್ಫರೆನ್ಸ್‌ ಮತ್ತು ಜೆಕೆಎಲ್‌ಎಫ್ನ ಚಟುವಟಿಕೆಗಳು ಮಗ್ಗಲು ಬದಲಿಸಿವೆ. ಒಂದು ವರ್ಷದ ಅಂತರದಲ್ಲಿ ಹುರಿಯತ್‌ ಕಾನ್ಫರೆನ್ಸ್‌ ನಾಯಕ ಸಯ್ಯದ್‌ ಅಲಿ ಗಿಲಾನಿ ಸಾವನ್ನಪ್ಪಿದ್ದರೆ, ಬುಧವಾರವಷ್ಟೇ ಭಯೋತ್ಪಾದನೆ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಯಾಸಿನ್‌ ಮಲಿಕ್‌ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದಾನೆ. ಹಾಗಾದರೆ ಜಮ್ಮು ಮತ್ತು ಕಾಶ್ಮೀರದ ಈಗಿನ ಸ್ಥಿತಿ ಏನು? ಈ ಕುರಿತ ಒಂದು ನೋಟ ಇಲ್ಲಿದೆ…

Advertisement

ಏನಿದು ಪ್ರತ್ಯೇಕತಾವಾದಿ ಆಂದೋಲನ?

ತೀರಾ ಮೂಲ ಹುಡುಕಿಕೊಂಡು ಹೋದರೆ, ಈ ವಿವಾದ ಶುರುವಾಗುವುದೇ 1947ರಿಂದ. ಆಗ ಕಾಶ್ಮೀರ ತಮಗೇ ಸೇರಬೇಕು ಎಂಬುದು ಪಾಕಿಸ್ತಾನದ ಪಟ್ಟಾಗಿತ್ತು. ಇದಕ್ಕೆ ಅಲ್ಲಿನ ರಾಜ ಹರಿಸಿಂಗ್‌ ಒಪ್ಪಲಿಲ್ಲ. ಜತೆಗೆ ಕಾಶ್ಮೀರವನ್ನು ಭಾರತಕ್ಕೆ ಸೇರಿಸಲು ಒಪ್ಪಿಕೊಂಡರು. ಇದರಿಂದಾಗಿಯೇ 1948ರಲ್ಲಿಯೇ ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ಮೊದಲ ಯುದ್ಧವಾಗಿತ್ತು. ಕಾಶ್ಮೀರ ಮೇಲಿನ ಪಾಕಿಸ್ಥಾನದ ಆಸೆ ಕಡಿಮೆಯಾಗಲೇ ಇಲ್ಲ. ಇದಾದ ಬಳಿಕ ಕಾಶ್ಮೀರ ವಿಚಾರದಲ್ಲಿಯೇ ಭಾರತ-ಪಾಕಿಸ್ಥಾನ ನಡುವೆ ಯುದ್ಧಗಳೂ ನಡೆದು, ಪಾಕಿಸ್ಥಾನ ಸೋತು ಸುಣ್ಣವಾಗಿದೆ. ಯುದ್ಧದ ಮೂಲಕ ಕಾಶ್ಮೀರವನ್ನು ಪಡೆಯಲಾಗುವುದಿಲ್ಲ ಎಂಬುದನ್ನು ಅರಿತ ಪಾಕಿಸ್ಥಾನ, ಕಾಶ್ಮೀರದೊಳಗೆ ಉಗ್ರರನ್ನು ನುಸುಳಿಸಲು ಆರಂಭಿಸಿತು ಮತ್ತು ಪ್ರತ್ಯೇಕತಾವಾದಿಗಳನ್ನು ಛೂ ಬಿಟ್ಟಿತು. ಹೀಗಾಗಿಯೇ 1988 ರಿಂದ ಕಾಶ್ಮೀರದಲ್ಲಿ ಪಾಕ್‌ ಬೆಂಬಲಿತ ಪ್ರತ್ಯೇಕತಾವಾದಿಗಳು ಚಿಗಿತುಕೊಳ್ಳಲು ಶುರು ಮಾಡಿದರು.

48 ಸಾವಿರ ಮಂದಿ ಸಾವು

1988ರಿಂದ ಇಲ್ಲಿವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಿರುವ ಹತ್ಯೆಗಳಿಗೆ ಬೆಲೆಯೇ ಇಲ್ಲ. ಉಗ್ರರ ಆಟಾಟೋಪಗಳಿಂದಾಗಿ ಇಲ್ಲಿವರೆಗೆ 48 ಸಾವಿರ ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಮೊದಲೇ ಹೇಳಿದ ಹಾಗೆ 1971ರ ಯುದ್ಧದಲ್ಲಿ ಪಾಕಿಸ್ಥಾನ ಸೋತ ಮೇಲೆ, ಅದರ ಆಟೋಟಗಳು ನಡೆಯುವುದಿಲ್ಲ ಎಂದು ಅರಿವಾಗುತ್ತದೆ. ಹೀಗಾಗಿಯೇ ಪ್ರತ್ಯೇಕತಾವಾದಿ ಚಳವಳಿ ಮತ್ತು ಉಗ್ರರ ಒಳನುಸುಳುವಿಕೆ ಆರಂಭವಾಗುತ್ತದೆ. 1989-90ರಿಂದ ಅನಂತರದಲ್ಲಿ ಕಣಿವೆ ರಾಜ್ಯದಲ್ಲಿ ಆಗುವ ಸಾವು ನೋವುಗಳು ಅತ್ಯಂತ ಗರಿಷ್ಠ ಪ್ರಮಾಣದ್ದು. ಭದ್ರತಾ ಪಡೆಗಳ ಜತೆಗಿನ ಸಂಘರ್ಷ, ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಮತ್ತು ಕಣಿವೆ ರಾಜ್ಯ ಬಿಟ್ಟು ಸಾವಿರಾರು ಕಾಶ್ಮೀರಿ ಪಂಡಿತರು ವಲಸೆ ಹೋಗುತ್ತಾರೆ.

Advertisement

1987ರಲ್ಲಿ ಟರ್ನಿಂಗ್‌ ಪಾಯಿಂಟ್‌

1987ರ ವಿಧಾನಸಭೆ ಚುನಾವಣೆಯನ್ನು ಕಾಶ್ಮೀರದ ಇತಿಹಾಸದಲ್ಲಿ ಇಂದಿಗೂ ಟರ್ನಿಂಗ್‌ ಪಾಯಿಂಟ್‌ ಎಂದು ಕರೆಯಲಾಗುತ್ತದೆ. ಈ ಚುನಾವಣೆಯಲ್ಲಿ ಜಮಾತೆ ಇ ಇಸ್ಲಾಮಿ ಮತ್ತು ಇನ್ನಿತರ ಮುಸ್ಲಿಂ ಸಂಘಟನೆಗಳು ಮುಸ್ಲಿಂ ಯುನೈಟೆಡ್‌ ಫ್ರಂಟ್‌ ಅನ್ನು ರಚಿಸಿಕೊಂಡು ಸ್ಪರ್ಧೆ ಮಾಡುತ್ತವೆ. ಆಗ, ಈ ಸಂಘಟನೆ ಬೆಂಬಲಕ್ಕೆ ಸಾವಿರಾರು ಯುವಕರು ನಿಲ್ಲುತ್ತಾರೆ. ಆದರೆ ಈ ಚುನಾವಣೆಯಲ್ಲಿ ನ್ಯಾಶನಲ್‌ ಕಾನ್ಫರೆನ್ಸ್‌ ಅನುಕೂಲಕ್ಕಾಗಿ ಭಾರೀ ಅಕ್ರಮ ಎಸಗಲಾಗುತ್ತದೆ ಎಂಬ ಆರೋಪ ಕೇಳಿಬರುತ್ತದೆ. ಆಗ ಮುಸ್ಲಿಂ ಫ್ರಂಟ್‌ನಡಿ ಸ್ಪರ್ಧಿಸಿದ್ದ 17 ಮಂದಿಯಲ್ಲಿ ಕೇವಲ 4 ಮಂದಿ ಗೆದ್ದು, ಉಳಿದವರು ಸೋಲುತ್ತಾರೆ. ಇದು ಸ್ಥಳೀಯ ಯುವಕರ ಕೋಪಕ್ಕೂ ಕಾರಣವಾಗುತ್ತದೆ.

ಕೇಂದ್ರದಿಂದಲೂ ಮಾತುಕತೆ

ಪ್ರತ್ಯೇಕತಾವಾದಿ ನಾಯಕರು ಪಾಕಿಸ್ಥಾನದ ಬಗ್ಗೆ ಮೃದು ಸ್ವಭಾವವುಳ್ಳವರಾಗಿದ್ದರೂ ಇವರ ಮನವೊಲಿಕೆಗೆ ಕೇಂದ್ರ ಸರಕಾರಗಳೂ ಪ್ರಯತ್ನಿಸಿದವು. ಅದರಲ್ಲೂ ವಾಜಪೇಯಿ ಕಾಲದಲ್ಲಿ, ಆಗಿನ ಉಪ ಪ್ರಧಾನಿ ಎಲ್‌.ಕೆ.ಆಡ್ವಾಣಿ ಅವರು ಹುರಿಯತ್‌ ನಾಯಕರ ಜತೆ ಮಾತುಕತೆ ನಡೆಸಿದ್ದರು. 2005ರಲ್ಲಿ ಆಗಿನ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಅವರೂ ಹುರಿಯತ್‌ ನಾಯಕರನ್ನು ಮಾತುಕತೆಗೆ ಕರೆದು ಸಂಧಾನ ನಡೆಸಿದ್ದರು. 2006ರಲ್ಲಿ ಮಾತುಕತೆಯ ಮೂಲಕವೇ ಸಮಸ್ಯೆ ಪರಿಹರಿಸಿಕೊಳ್ಳಲು ನಿರ್ಧಾರ ಮಾಡಲಾಗಿತ್ತು. ಸದ್ಯ ಅಳಿದುಳಿದ ಹುರಿಯತ್‌ ನಾಯಕರು ಜೈಲಿನಲ್ಲಿದ್ದಾರೆ. ಕೇಂದ್ರ ಸರಕಾರ 370ನೇ ವಿಧಿ ರದ್ದು ಮಾಡಿದ ಮೇಲೆ ಇವರ ಆಟ ಇನ್ನಷ್ಟು ಕಡಿಮೆಯಾಯಿತು.

ಉಗ್ರರ ಉದಯ

ಈ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಮೊಹಮ್ಮದ್‌ ಯೂಸುಫ್ ಶಾ, ಮುಂದಿನ ದಿನಗಳಲ್ಲಿ ಸಯೀದ್‌ ಸಲಾಹುದ್ದೀನ್‌ ಎಂಬ ಹೆಸರಿನಲ್ಲಿ ಹಿಜ್ಬುಲ್‌ ಮುಜಾಹೀದ್ದೀನ್‌ ಸಂಘಟನೆ ಕಟ್ಟಿ ಉಗ್ರರ ನಾಯಕನಾಗುತ್ತಾನೆ. ಈತನ ಜತೆಯಲ್ಲೇ ಇದ್ದ ಯಾಸಿನ್‌ ಮಲಿಕ್‌ ಜೆಕೆಎಲ್‌ಎಫ್ ಕಟ್ಟುತ್ತಾನೆ. ಈತನ ಮೇಲೆ  ಭಾರತೀಯ ವಾಯು ಸೇನೆಯ ನಾಲ್ವರು ಯೋಧರನ್ನು ಹತ್ಯೆ ಮಾಡಿದ ಆರೋಪವಿತ್ತು. ಹಾಗೆಯೇ 1990ರಿಂದ 2000ರ ವರೆಗೆ ಕಾಶ್ಮೀರದಲ್ಲಿ ಒಟ್ಟು 10 ಸಾವಿರ ಮಂದಿ ನಾಗರಿಕರು ಹತ್ಯೆಯಾಗುತ್ತಾರೆ.

ಹುರಿಯತ್‌ ಕಾನ್ಫರೆನ್ಸ್‌

1987ರ ಬಳಿಕವೇ ಈ ಹುರಿಯತ್‌ ಕಾನ್ಫರೆನ್ಸ್‌ ಕೂಡ ಪ್ರವರ್ಧಮಾನಕ್ಕೆ ಬರುತ್ತದೆ. ಈ ಸಂಘಟನೆ ಎರಡು ಹಂತದ ವಿನ್ಯಾಸ ಹೊಂದಿದೆ. ಏಳು ಸದಸ್ಯರ ಕಾರ್ಯಕಾರಿ ಮಂಡಳಿ ಮತ್ತು 24 ಸದಸ್ಯರ ಸಾಮಾನ್ಯ ಮಂಡಳಿ. ಕಾರ್ಯಕಾರಿ ಸಮಿತಿಯನ್ನು ಜಮಾತೆ ಇ ಇಸ್ಲಾಮಿ ಪ್ರತಿನಿಧಿಸುತ್ತಿತ್ತು. ಇದು ಕಾಶ್ಮೀರ ಪಾಕಿಸ್ಥಾನಕ್ಕೆ ಸೇರಬೇಕು, ಸ್ವತಂತ್ರವಾಗಬೇಕು ಎಂಬ ಉದ್ದೇಶ ಹೊಂದಿತ್ತು. 1994ರಲ್ಲಿ ಇದು ಸರ್ಕಾರದ ಜತೆ ಕದನ ವಿರಾಮ ಘೋಷಿಸಿತ್ತು. ಇದರಲ್ಲೇ ಇದ್ದ ಅಬ್ದುಲ್‌ ಘನಿ ಲೋನ್‌, ಪೀಪಲ್ಸ್‌ ಕಾನ್ಫರೆನ್ಸ್‌ ಎಂಬ ರಾಜಕೀಯ ಪಕ್ಷ ಕಟ್ಟಿದ್ದ. ಆದರೆ ಈತ 2002ರಲ್ಲಿ ಉಗ್ರರ ಗುಂಡಿಗೆ ಬಲಿಯಾದ. 2008ರಲ್ಲಿ ಮಿರ್ವಾಜ್‌ ಉಮರ್‌ ಫಾರೂಕ್‌, ಇತ್ತೇಹಾದುಲ್‌ ಮುಸ್ಲಿàಮೀನ್‌, ಶೇಕ್‌ ಅಬ್ದುಲ್‌ ಅಜೀಜ್‌ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದರು.

ಒಡಕು: 1993ರಿಂದ 1996ರ ವರೆಗೆ ಹುರಿಯತ್‌ ಕಾನ್ಫರೆನ್ಸ್‌ ರಾಜಕೀಯವಾಗಿಯೂ ಪ್ರಬಲವಾಗಿತ್ತು. ಆದರೆ 1996ರ ವಿಧಾನಸಭೆ ಚುನಾವಣೆ ವೇಳೆ ನ್ಯಾಶನಲ್‌ ಕಾನ್ಫರೆನ್ಸ್‌ ರಾಜಕೀಯವಾಗಿಯೇ ಹೆಚ್ಚು ಗುರುತಿಸಿಕೊಂಡರೆ, ಹುರಿಯತ್‌ ಪಾಕಿಸ್ಥಾನದ ಜಪ ಮಾಡಿಕೊಂಡೇ ಸಾಗಿತು. ಆ ಬಳಿಕ ಹುರಿಯತ್‌ ಕಾನ್ಫರೆನ್ಸ್‌ ನಾಯ ಕರಲ್ಲಿ ಸುಧಾರಣಾವಾದಿಗಳೆಂದು ಗುರುತಿಸಿಕೊಂಡಿದ್ದ ಮಿರ್ವಾಜ್‌ ಉಮರ್‌ ಫಾರೂಖ್‌, ಅಬ್ದುಲ್‌ ಗನಿ ಲೋನ್‌, ತೀವ್ರವಾದಿಗಳು ಎಂದೆನಿಸಿಕೊಂಡಿದ್ದ ಸಯ್ಯದ್‌ ಅಲಿ ಗಿಲಾನಿ, ಮಸರತ್‌ ಅಲಾಂ ನಡುವೆ ಭಿನ್ನಾಭಿಪ್ರಾಯ ತಲೆದೋರಿ ಪ್ರತ್ಯೇಕ ಬಣಗಳಾದವು.

Advertisement

Udayavani is now on Telegram. Click here to join our channel and stay updated with the latest news.

Next