Advertisement

ಮಂಗಳೂರು: ಕೊನೆಯ ರಣಜಿ ಪಂದ್ಯಕ್ಕೆ  6 ದಶಕ

06:00 AM Dec 12, 2018 | |

ಮಂಗಳೂರು: ಮಂಗಳೂರಿನಲ್ಲಿ ನಡೆದ ಕೊನೆಯ ರಣಜಿ ಕ್ರಿಕೆಟ್‌ ಪಂದ್ಯಕ್ಕೆ ಈಗ 60ರ ನೆನಪು. ಈ ಪಂದ್ಯ ಆಗಿನ ಮೈಸೂರು-ಕೇರಳ ತಂಡಗಳ ನಡುವೆ 1959ರ ಡಿ. 12ರಿಂದ ಆರಂಭವಾಗಿತ್ತು. ಈ   “60′ ವರ್ಷಗಳ ದಾಖಲೆ ಪೂರ್ಣಗೊಳ್ಳುವ ಮೊದಲು ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣವಾದೀತೇ, ತನ್ಮೂಲಕ ಕರಾವಳಿಯ ಕ್ರಿಕೆಟ್‌ ಪ್ರೇಮಿಗಳ ಸುದೀರ್ಘ‌ ಕಾಲದ ಕನಸು ನನಸಾಗುವುದೇ ಎಂಬುದೆಲ್ಲ ನಿರೀಕ್ಷೆಗಳಾಗಿವೆ.

Advertisement

ಕರಾವಳಿಯಲ್ಲಿ ಈವರೆಗೆ ಜರಗಿದ್ದು ಕೇವಲ 3 ರಣಜಿ ಕ್ರಿಕೆಟ್‌ ಪಂದ್ಯಗಳು. ಈ ಪೈಕಿ ಕೇರಳದ ಎದುರು ಆಗಿನ ಮೈಸೂರು ಕ್ರಿಕೆಟ್‌ ತಂಡ 2 ಪಂದ್ಯಗಳನ್ನು ಮಂಗಳೂರಿನ ನೆಹರೂ ಮೈದಾನದಲ್ಲಿ (1957 ಮತ್ತು 1959) ಮತ್ತು ಆಂಧ್ರ ಪ್ರದೇಶದ ಎದುರು ಒಂದು ಪಂದ್ಯವನ್ನು 1974-75ರ ಋತುವಿನಲ್ಲಿ ಉಡುಪಿಯಲ್ಲಿ ಆಡಿತ್ತು. ಅಂದಿನಿಂದ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಯಾವುದೇ ದೊಡ್ಡ ಮಟ್ಟದ ಕ್ರಿಕೆಟ್‌ ನಡೆದಿಲ್ಲ, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಕ್ರೀಡಾಂಗಣವೂ ನಿರ್ಮಾಣವಾಗಿಲ್ಲ.

ಎರಡರಲ್ಲೂ ಮೈಸೂರಿಗೆ ಜಯ
ಕೇರಳದ ಎದುರು 1957ರಲ್ಲಿ ನಡೆದ ಮೊದಲ ರಣಜಿ ಪಂದ್ಯದಲ್ಲಿ ಮೈಸೂರು ತಂಡ ಜಯ ಸಾಧಿಸಿತ್ತು. ಮಂಗಳೂರಿನ ಗಣಪತಿ ರಾವ್‌ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದರು. ಆ ಬಳಿಕ 1959ರ ಡಿಸೆಂಬರ್‌ 12ರಿಂದ ಕೇರಳದ ಎದುರು ನಡೆದ 3 ದಿನಗಳ ರಣಜಿ ಪಂದ್ಯದಲ್ಲಿ ಮೈಸೂರು ತಂಡ ಇನ್ನಿಂಗ್ಸ್‌ ಮತ್ತು 97 ರನ್‌ಗಳ ಜಯ ಗಳಿಸಿತ್ತು. ಈ ಪಂದ್ಯದಲ್ಲಿ ಮಂಗಳೂರಿನ ಗೋಪಾಲ್‌ ಪೈ, ಬಿ.ಸಿ. ಆಳ್ವ ಮೈಸೂರು ತಂಡವನ್ನು ಪ್ರತಿನಿಧಿಸಿದ್ದರು. ಈ ಪಂದ್ಯಗಳೆರಡನ್ನೂ ಬಾಲಕನಾಗಿ ವೀಕ್ಷಿಸಿದ ಕಸ್ತೂರಿ ಬಾಲಕೃಷ್ಣ ಪೈ ಮುಂದೆ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ವ್ಯವಸ್ಥಾಪಕರಾಗಿ 24 ವರ್ಷ ಸೇವೆ ಸಲ್ಲಿಸಿದರು. “ಆ ಕಾಲಕ್ಕೆ ದಾಖಲೆಯ 5 ಸಾವಿರ ಮಂದಿ ನೆಹರೂ ಮೈದಾನದಲ್ಲಿ ಈ ಪಂದ್ಯ ವೀಕ್ಷಿಸಿದ್ದರು. ಕುಡಿ³ ಶ್ರೀನಿವಾಸ ಶೆಣೈ, ಕೆ. ಸೂರ್ಯನಾರಾಯಣ ಅಡಿಗ ಮೊದಲಾದವರು ಸಂಘಟನಾ ನೇತೃತ್ವ ವಹಿಸಿದ್ದರು’ ಎಂದು ಪೈ ಅವರು ನೆನಪಿಸುತ್ತಾರೆ.

ಭಾರತ ತಂಡದಲ್ಲಿ ಕರಾವಳಿಗರು
ಆ ಬಳಿಕ ಒಮ್ಮೆ ಉಡುಪಿಯ ಎಂಜಿಎಂ ಕ್ರೀಡಾಂಗಣ ಹೊರತುಪಡಿಸಿ ಕರಾವಳಿಗೆ ರಣಜಿ ಆತಿಥ್ಯದ ಅವಕಾಶ ದೊರೆಯಲಿಲ್ಲ. ಆದರೂ ಇಲ್ಲಿನ ಅನೇಕ ಆಟಗಾರರು ರಾಜ್ಯ ರಣಜಿ ತಂಡದಲ್ಲಿ ಆಡಿ ಮುಂದೆ ಭಾರತ ತಂಡವನ್ನು ಪ್ರತಿನಿಧಿಸಿದರು. ಬುದಿ ಕುಂದರನ್‌, ರಘುರಾಮ ಭಟ್‌, ಈಗಿನ ಕೆ.ಎಲ್‌. ರಾಹುಲ್‌ ಇವರಲ್ಲಿ ಪ್ರಮುಖರು. ಬಿ.ಸಿ. ಆಳ್ವ, ಜಿ.ಆರ್‌. ಸುಂದರಂ ಅವರು ಅನಧಿಕೃತ ಟೆಸ್ಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಇಚ್ಛಾಶಕ್ತಿಯ ಕೊರತೆ
ಮಂಗಳೂರು ಪರಿಸರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣದ ಬಗ್ಗೆ ಕಳೆದ ಕನಿಷ್ಠ ಮೂರು ದಶಕಗಳಿಂದ ಚಿಂತನೆ ನಡೆಯುತ್ತಲೇ ಇದೆ. ಶಕ್ತಿನಗರ, ಕೂಳೂರು, ತಣ್ಣೀರುಬಾವಿ, ಬೊಂದೇಲ್‌… ಹೀಗೆಲ್ಲ ಪ್ರಸ್ತಾವಗಳಾಗಿವೆ. ರಾಜ್ಯ ಸಂಸ್ಥೆ ಪ್ರತಿನಿಧಿಗಳ ಸತತ ಭೇಟಿ, ಸಮಾಲೋಚನೆ ಇತ್ಯಾದಿ ನಡೆಸಿದ್ದಾರೆ. ಆದರೆ ಪ್ರಬಲ ಇಚ್ಛಾಶಕ್ತಿಯ ಕೊರತೆ ಕಾಡುತ್ತಿದೆ.

Advertisement

ಭಾವನಾತ್ಮಕ ಸಂಬಂಧ: ರಾಹುಲ್‌
ಮಂಗಳೂರಿನ ಕೆ.ಎಲ್‌. ರಾಹುಲ್‌ ಈಗಿನ ಭಾರತ ತಂಡದ ಪ್ರಮುಖ ಆಟಗಾರ. ಪ್ರೌಢಶಾಲಾ ಮಟ್ಟದಲ್ಲಿ ಅವರು ಮಂಗಳೂರಿನ ನೆಹರೂ ಮೈದಾನ ಹಾಗೂ ಸುರತ್ಕಲ್‌ನ ಕ್ರೀಡಾಂಗಣದಲ್ಲಿ ಆಡಿದ್ದರು. ಈಗ ಆಸ್ಟ್ರೇಲಿಯ ಪ್ರವಾಸದಲ್ಲಿರುವ ರಾಹುಲ್‌ ಅವರು ನೆಹರೂ ಮೈದಾನದ ಬಗ್ಗೆ ತನಗೆ ಭಾವನಾತ್ಮಕ ಪ್ರೀತಿ ಇದೆ ಅನ್ನುತ್ತಾರೆ.

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next