Advertisement

ಹೆಝಲ್ ಅಂತ್ಯಕ್ರಿಯೆಯೊಂದಿಗೆ ನ್ಯಾಯವೂ ಮಣ್ಣಾಯಿತೇ?

02:32 AM Jul 19, 2019 | mahesh |

ಶಿರ್ವ: ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯದ ಅಲ್-ಮಿಕ್ವಾ ಜನರಲ್ ಆಸ್ಪತ್ರೆಯಲ್ಲಿ ನರ್ಸ್‌ ಆಗಿದ್ದ ಶಿರ್ವ ಸಮೀಪ ಕುತ್ಯಾರಿನ ಹೆಝಲ್ ಜೋತ್ಸಾ ್ನ ಕ್ವಾಡ್ರಸ್‌ ಸೌದಿ ಪ್ರಜೆಯ ಕಿರುಕುಳದಿಂದ ಸಾವನ್ನಪ್ಪಿ ಒಂದು ವರುಷ ಸಂದಿದೆ. ಅವರ ಅಂತ್ಯಸಂಸ್ಕಾರದೊಂದಿಗೆ ಅಪರಾಧಿಗೆ ಶಿಕ್ಷೆಯಾಗದೆ, ಪರಿಹಾರವೂ ದೊರೆಯದೆ ನ್ಯಾಯ ಮಣ್ಣಾಯಿತೇ ಎಂಬುದು ಆಕೆಯ ಪತಿ, ಹೆತ್ತವರ ಅಳಲು.

Advertisement

ಕುತ್ಯಾರು ಬಗ್ಗ ತೋಟ ರಸ್ತೆ ದಡ್ಡು ನಿವಾಸಿ ಅಶ್ವಿ‌ನ್‌ ಮಥಾಯಸ್‌ ಅವರ ಪತ್ನಿ, ಕುತ್ಯಾರು ಅಗರ್‌ದಂಡೆ ನಿವಾಸಿ ರಾಬರ್ಟ್‌ ಕ್ವಾಡ್ರಸ್‌ ಮತ್ತು ಹೆಲೆನ್‌ ಕ್ವಾಡ್ರಸ್‌ ದಂಪತಿಯ ಪುತ್ರಿ ಹೆಝಲ್ ಸೌದಿಯ ಆಸ್ಪತ್ರೆಯಲ್ಲಿ ನರ್ಸ್‌ ಆಗಿ 6 ವರ್ಷಗಳಿಂದ ದುಡಿಯುತ್ತಿದ್ದರು.

ಆರೋಪಿ ತಪ್ಪೊಪ್ಪಿಗೆ
ಸೌದಿ ಪ್ರಜೆಯ ಕಿರುಕುಳ ತಾಳಲಾರದೆ ವಸತಿಗೃಹದಲ್ಲಿ ನೇಣು ಬಿಗಿದು 2018ರ ಜು. 19ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಕೊಂಕಣಿ, ಇಂಗ್ಲಿಷ್‌ನಲ್ಲಿ ಡೆತ್‌ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಕಿರುಕುಳದ ಬಗ್ಗೆ ಪ್ರಸ್ತಾವಿಸಿದ್ದರು. ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನಾದರೂ ಕಾನೂನು ಪ್ರಕ್ರಿಯೆಗಳ ಬಗ್ಗೆ ಸೌದಿ ಆಡಳಿತ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಕೋರ್ಟ್‌ ಆತನಿಗೆ ಜಾಮೀನು ನೀಡಿದೆ.

ದಾಖಲೆಗಳೂ ಇಲ್ಲ; ಪರಿಹಾರವೂ ಇಲ್ಲ
ಸೌದಿ ಕಾನೂನಿನ ಪ್ರಕಾರ ಸಂತ್ರಸ್ತೆಗೆ ಸೂಕ್ತ ಪರಿಹಾರ ದೊರಕಬೇಕು. ಆದರೆ ತನಿಖೆಯ ಸ್ಥಿತಿಗತಿ ಬಗ್ಗೆ ರಾಯಭಾರ ಕಚೇರಿಯವರು ಕುಟುಂಬಕ್ಕೆ ತಿಳಿಸಿಲ್ಲ. ಕೆಲಸ ಮಾಡಿಕೊಂಡಿದ್ದ ಆಸ್ಪತ್ರೆಯ ಆಡಳಿತ ಮಂಡಳಿ ಕೂಡ ತನಿಖೆ ನಡೆಯುತ್ತಿದೆ ಎಂಬ ನೆಪವೊಡ್ಡಿ ಆಕೆಯ ಸೊತ್ತುಗಳನ್ನಾಗಲೀ ಪರಿಹಾರವನ್ನಾಗಲೀ ನೀಡಿಲ್ಲ. ಈ ಬಗ್ಗೆ ಹೆಚ್ಚಿನ ವ್ಯವಹಾರ ನಡೆಸಲು ಹೆಝಲ್ ಅವರ ಪವರ್‌ ಆಫ್ ಅಟಾರ್ನಿ ಆಗಿರುವ ಡೆನ್ನಿಸ್‌ ನೊರೊನ್ಹಾ ಅವರೂ ಅಸಹಾಯಕರಾಗಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರ ಶಿಫಾರಸಿನ ಮೇರೆಗೆ ಅನಿವಾಸಿ ಭಾರತೀಯ ಸಮಿತಿ-ಕರ್ನಾಟಕದ ವತಿಯಿಂದ ಮೃತಳ ಕುಟುಂಬದ ಸದಸ್ಯರಿಗೆ 1 ಲ. ರೂ. ನೆರವು ಬಿಟ್ಟರೆ ಬೇರಾವುದೇ ಪರಿಹಾರ ಲಭಿಸಿಲ್ಲ.

Advertisement

ಸೌದಿ ಸರಕಾರದ ವಿಳಂಬ ಧೋರಣೆ
ಸೌದಿ ಸರಕಾರದ ವಿಳಂಬ ಧೋರಣೆಯಿಂದ ಹೆಝಲ್ ಮೃತದೇಹ 71 ದಿನಗಳ ಬಳಿಕ ತವರಿಗೆ ಬಂದಿತ್ತು. ಸೆ. 28ರಂದು ಶಿರ್ವ ಚರ್ಚ್‌ ನಲ್ಲಿ ಅಂತಿಮ ಸಂಸ್ಕಾರ ನೆರವೇರಿತ್ತು. ಅಲ್ಲಿವರೆಗೆ ಮನೆಯವರು ಸೂತಕದಲ್ಲೇ ಕಳೆವಂತಾಗಿತ್ತು.

ಸೌದಿ ಅರೇಬಿಯಾದಲ್ಲಿ ಈ ರೀತಿಯ ಪ್ರಕರಣಗಳು ನಡೆದಾಗ ಮೂರನೇ ವ್ಯಕ್ತಿಗೆ ಅಲ್ಲಿನ ಆಡಳಿತದೊಂದಿಗೆ ವ್ಯವಹರಿಸಲು ಸಾಧ್ಯವಿಲ್ಲ. ಹೆಝಲ್ ವಿವಾಹ ಪೂರ್ವದಲ್ಲಿ ಅಲ್ಲಿಗೆ ತೆರಳಿದ್ದರಿಂದ ಆಕೆಯ ತಂದೆ ಸೌದಿಯಲ್ಲಿರುವ ಡೆನ್ನಿಸ್‌ ನೊರೊನ್ಹಾಗೆ ಪವರ್‌ ಆಫ್ ಆಟಾರ್ನಿ ನೀಡಿದ್ದರು.

ಮೃತದೇಹವನ್ನು ತರುವ ಪ್ರಕ್ರಿಯೆಯಲ್ಲಿ ಡಾ| ರವೀಂದ್ರನಾಥ ಶ್ಯಾನುಭಾಗ್‌ ನೇತೃತ್ವದ ಮಾನವ ಹಕ್ಕು ಪ್ರತಿಷ್ಠಾನದ ಕಾರ್ಯಕರ್ತರು ಅವರಿಗೆ ನೆರವು ನೀಡಿದ್ದರು. ಸರಕಾರದ ನೆಲೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಕೂಡ ಶ್ರಮಿಸಿದ್ದರು.

ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂಬುದನ್ನು ನಂಬಲು ಅಸಾಧ್ಯ. ಪರಿಹಾರದ ಬಗ್ಗೆ ನಿರೀಕ್ಷೆ ಇಲ್ಲದಿದ್ದರೂ ಅಲ್ಲಿನ ಸರಕಾರ/ಆಸ್ಪತ್ರೆಯ ಆಡಳಿತ ಮಂಡಳಿ ಸೌಜನ್ಯಕ್ಕಾದರೂ ಪತ್ರ ವ್ಯವಹಾರ ನಡೆಸದಿರುವುದು ಬೇಸರ ತಂದಿದೆ.
– ಹೆಲೆನ್‌ ಕ್ವಾಡ್ರಸ್‌,ಮೃತಳ ತಾಯಿ

– ಸತೀಶ್ಚಂದ್ರ ಶೆಟ್ಟಿ , ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next