ರಾಯಚೂರು: ಕನಿಷ್ಠ ಮಾಹಿತಿಯೂ ಇಲ್ಲದೇ ಸಭೆಗೆ ಬರುತ್ತಿರಲ್ಲ ನಿಮಗೆ ನಾಚಿಕೆ ಆಗಲ್ಲವೇ. ನಾನೇನೋ ಕೇಳಿದರೆ ನೀವು ಇನ್ನೇನೋ ಹೇಳುತ್ತೀರಿ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶರನ್ನು ಪ್ರಾದೇಶಿಕ ಆಯುಕ್ತ ಸುಭೋದ್ ಯಾದವ್ ತೀವ್ರ ತರಾಟೆಗೆ ತೆಗೆದುಕೊಂಡರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಡಿ ಮಂಜೂರಾದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಲೋಕೋಪಯೋಗಿ, ಕೆಆರ್‌ಐಡಿಎಲ್ ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯಾವ ಕಾಮಗಾರಿಗಳ ಬಗ್ಗೆಯೂ ಸ್ಪಷ್ಟ ಮಾಹಿತಿ ನೀಡದ್ದಕ್ಕೆ ಅಸಮಾಧಾನಗೊಂಡ ಪ್ರಾದೇಶಿಕ ಆಯುಕ್ತರು, ನನಗೆ ಪದೇಪದೆ ಹಳೇ ಸ್ಟೋರಿ ರಿಪೀಟ್ ಮಾಡಬೇಡಿ. ಈ ಕತೆಯನ್ನು ಹಿಂದಿನ ಸಭೆಯಲ್ಲೇ ಕೇಳಿದ್ದೇನೆ. ಮುಂದೇನು ಮಾಡಿದ್ದೀರಿ ಎಂದು ತಿಳಿಸಿ ಎಂದು ತರಾಟೆಗೆ ತೆಗೆದುಕೊಂಡರು.
ಸಣ್ಣಪುಟ್ಟ ಕಾಮಗಾರಿಗಳನ್ನು ಏಜೆನ್ಸಿಗೆ ವಹಿಸಿದ್ದೀರಿ. ಏನಾದರೂ ವಿಶೇಷವಿದ್ದರೆ, ದೊಡ್ಡ ಮಟ್ಟದ ಕಾಮಗಾರಿಯಾಗಿದ್ದರೆ ಮಾತ್ರ ಏಜೆನ್ಸಿಗೆ ನೀಡಬೇಕಲ್ಲವೇಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಎಇಇ ಪ್ರಕಾಶ, ಕಾಮಗಾರಿ ವೆಚ್ಚ ಒಂದು ಕೋಟಿ ರೂ. ದಾಟಿದ್ದರಿಂದ ನೀಡಲಾಯಿತು ಎಂದು ಸಮಜಾಯಿಷಿ ನೀಡಿದರು. ಹಣ ಜಾಸ್ತಿಯಾದರೆ ಏಜೆನ್ಸಿಗೆ ವಹಿಸಬೇಕು ಅಂತ ನಿಯಮವಿದೆಯಾ. ನಿಮ್ಮ ನಿರ್ಲಕ್ಷದಿಂದ ಕಾಮಗಾರಿ ವಿಳಂಬವಾಗಿದೆ. ಈಗ ಅಂದಾಜು ವೆಚ್ಚ ಜಾಸ್ತಿಯಾಗುತ್ತದೆ ಎಂದರೆ ಯಾರು ನೀಡಬೇಕು. ಯಾವುದೇ ಕಾರಣಕ್ಕೂ ಹೆಚ್ಚಿನ ಹಣ ನೀಡಲಾಗದು. ಅಷ್ಟಕ್ಕೂ ನಿಮಗೆ ನನ್ನ ಭಾಷೆ ಅರ್ಥವಾಗುತ್ತದೆ ತಾನೆ. ಈ ರೀತಿ ಕಾಟಾಚಾರಕ್ಕೆ ಯಾಕೆ ಸಭೆಗೆ ಬರುತ್ತೀರಿ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಏಜೆನ್ಸಿಗೆ ಹಣ ನೀಡಲಾಗದು: ಅಧಿಕಾರಿಗಳು ವಹಿಸಿದ ಮಾತ್ರಕ್ಕೆ ಸಣ್ಣಪುಟ್ಟ ಕಾಮಗಾರಿಗಳನ್ನು ಮಾಡಲು ಒಪ್ಪಿಕೊಂಡ ಏಜೆನ್ಸಿಗಳನ್ನು ಪ್ರಾದೇಶಿಕ ಆಯುಕ್ತ ಸುಭೋದ್ ಯಾದವ್ ತರಾಟೆಗೆ ತೆಗೆದುಕೊಂಡರು. ಹಣ ಬಿಡುಗಡೆ ಮಾಡದಿರಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು. ಎಂಥ ಕೆಲಸ ಒಪ್ಪಿಕೊಳ್ಳಬೇಕು ಎಂಬ ತಿಳಿವಳಿಕೆ ಇಲ್ಲವೇ. ಜಿಲ್ಲಾಧಿಕಾರಿ, ಜಿಪಂ ಸಿಇಒ ಪರಿಶೀಲಿಸಿ ನಿಮಗೆ ವಹಿಸಿದ ಕೆಲಸಗಳನ್ನು ಮಾತ್ರ ಮಾಡಬೇಕು. ಸಣ್ಣಪುಟ್ಟ ಕೆಲಸಗಳನ್ನು ಮಾಡಲಿಕ್ಕಲ್ಲ ನೀವಿರುವುದು. ಹಾಗೆ ಮಾಡಿದಲ್ಲಿ ಅದರ ಖರ್ಚನ್ನು ನೀವೇ ಭರಿಸಬೇಕಾಗುತ್ತದೆ ಎಂದರು.
ಕೆಲಸ ವಿಳಂಬವಾಗಲು ನೀವೇ ಕಾರಣ: ಲಿಂಗಸುಗೂರು ತಾಲೂಕಿನಲ್ಲಿ ಐದು ಕಾಮಗಾರಿಗಳು ಮುಗಿದಿದ್ದರೂ ತಂತ್ರಾಂಶದಲ್ಲಿ ಮಾತ್ರ ಪ್ರಗತಿಯಲ್ಲಿವೆ ಎಂದು ದಾಖಲಿಸಲಾಗಿತ್ತು. ಈ ಬಗ್ಗೆ ಕೇಳಿದರೆ ಪ್ರತಿಕ್ರಿಯಿಸಿದ ಎಇಇ ಎಲ್ಲ ಕೆಲಸ ಮುಗಿದಿವೆ. ಹಣ ಮಂಜೂರಾಗಬೇಕಿದೆ ಎಂದರು.
ಹಾಗಿದ್ದರೆ ಫಿಸಿಕಲಿ ಕಂಪ್ಲಿಟೆಡ್ ಅಂತ ದಾಖಲಿಸಬೇಕು. ಕಾಮಗಾರಿ ಮುಗಿದಿದೆ ಎನ್ನುತ್ತೀರಿ ಇನ್ನೂ ಬಿಲ್ ಗಳನ್ನೇ ಸಲ್ಲಿಸಿಲ್ಲ. ನಿಮ್ಮಿಂದ ಈ ರೀತಿ ಅನಗತ್ಯ ವಿಳಂಬವಾಗುವುದಕ್ಕೆ ಗುತ್ತಿಗೆದಾರರು ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ನಾವೇ ಅಂದಾಜುಪಟ್ಟಿ ಸಿದ್ಧಪಡಿಸಿ, ನಾವೇ ಯೋಜನೆ ರೂಪಿಸಿ, ಪ್ರಗತಿ ಪರಿಶೀಲಿಸಿ, ಬಿಲ್ ಸಲ್ಲಿಸಿ ಎಂದು ಹೇಳಬೇಕೇ? ನಿಮಗೆ ನಿಮ್ಮ ಜವಾಬ್ದಾರಿಯ ಅರಿವಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಒಂದು ವರ್ಷಕ್ಕಿಂತ ಮೇಲಾಗಿ ಯಾವ ಕಾಮಗಾರಿ ಆರಂಭವಾಗುವುದಿಲ್ಲವೋ ಅವುಗಳನ್ನು ರದ್ದು ಮಾಡಲಾಗುವುದು ಎಂದು ಈ ಹಿಂದೆಯೇ ಮಂಡಳಿ ಸುತ್ತೋಲೆ ಹೊರಡಿಸಿದೆ. ನೀವು ಯಾರೂ ಅದನ್ನು ಗಮನಿಸಿಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಮಾನ್ವಿಯ ಒಂದು ಕಾಮಗಾರಿ ರದ್ದು ಮಾಡುವಂತೆ ಸೂಚಿಸಿದರು. ಜಿಲ್ಲಾ ಧಿಕಾರಿ ಆರ್.ವೆಂಕಟೇಶಕುಮಾರ, ಜಿಪಂ ಸಿಇಒ ಲಕ್ಷಿಕಾಂತರೆಡ್ಡಿ, ಅಪರ ಜಿಲ್ಲಾ ಧಿಕಾರಿ ದುರುಗೇಶ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.