Advertisement

ಶೀಘ್ರ ಸುದಂತ ಯೋಜನೆ ಚಿಕಿತ್ಸೆ ಪಡೆಯುವುದರಿಂದ ಲಾಭವಿದೆಯೇ?

06:25 AM Mar 04, 2018 | Team Udayavani |

“ಸಮಯ’ ಎಂಬುದು ಬಹಳ ಮುಖ್ಯವಾದದ್ದು – ನಿಮ್ಮ ಮಗುವಿನ ಸುದಂತ ಯೋಜನೆ ಚಿಕಿತ್ಸೆಯ ಮಟ್ಟಿಗೂ ಇದು ನೂರಕ್ಕೆ ನೂರು ನಿಜ. “ಬೇಗನೆ’ ಪಡೆದುಕೊಳ್ಳುವ, “ಪ್ರತಿಬಂಧಕ’ ಎಂದೂ ಕರೆಯಲ್ಪಡುವ ಚಿಕಿತ್ಸೆ ಎಂದರೆ, ಹಾಲುಹಲ್ಲುಗಳು ಇನ್ನೂ ಇರುವಾಗಲೇ ಸುದಂತ ಯೋಜನ ಚಿಕಿತ್ಸೆಗೆ ಒಳಗಾಗಿ ಪ್ರಯೋಜನಗಳನ್ನು ಪಡೆದುಕೊಳ್ಳುವುದು.

Advertisement

ನಿಮ್ಮ ಮಗುವಿನ ಓಥೊìಡಾಂಟಿಕ್‌ ಸಮಸ್ಯೆಯನ್ನು ನೀವು ಮೊತ್ತಮೊದಲಾಗಿ ಪತ್ತೆಹಚ್ಚಿದ ಕೂಡಲೇ; 7 ವರ್ಷ ವಯಸ್ಸಿಗಿಂತ ಮುನ್ನವೇ ಸುದಂತ ಯೋಜನ ತಜ್ಞರ ಬಳಿ ತಪಾಸಣೆಗೆ ಒಳಗಾಗಬೇಕು ಎಂಬುದಾಗಿ ಅಮೆರಿಕದ ಸುದಂತ ಯೋಜನ ತಜ್ಞರ ಸಂಘಟನೆ (ಎಎಒ) ಶಿಫಾರಸು ಮಾಡುತ್ತದೆ. 

ಖಾಯಂ ಹಲ್ಲುಗಳು ಮೂಡಿದ ಬಳಿಕ ಚಿಕಿತ್ಸೆ ನೀಡಿದರಷ್ಟೇ ಉತ್ತಮ ಎಂಬುದಾಗಿ ಸುದಂತ ಯೋಜನ ತಜ್ಞರು ಒಪ್ಪುವ ಅನೇಕ ಓಥೊìಡಾಂಟಿಕ್‌ ಸಮಸ್ಯೆಗಳು ಇವೆಯಾದರೂ, ಚಿಕಿತ್ಸೆಗೆ ಒಳಗಾಗದೆ ಸಾಕಷ್ಟು ಕಾಲ ಕಳೆಯುವುದರಿಂದ ಗಂಭೀರ ಸ್ವರೂಪಕ್ಕೆ ಬೆಳೆಯಬಹುದಾದ ಸಮಸ್ಯೆಗೆ ಆದಷ್ಟು ಬೇಗನೆ ಚಿಕಿತ್ಸೆ ನೀಡುವುದು ರೋಗಿಯ ಹಿತಾಸಕ್ತಿಯ ದೃಷ್ಟಿಯಿಂದ ಒಳ್ಳೆಯದು. ಶೀಘ್ರ ಚಿಕಿತ್ಸೆ ನೀಡುವುದರ ಗುರಿಯೇನೆಂದರೆ, ಅಭಿವೃದ್ಧಿ ಹೊಂದುತ್ತಿರುವ ಸಮಸ್ಯೆಗಳನ್ನು ಪ್ರತಿಬಂಧಿಸುವುದು, ಸಮಸ್ಯೆಗಳಿಗೆ ಕಾರಣಗಳನ್ನು ನಿರ್ಮೂಲನೆಗೊಳಿಸುವುದು, ಮುಖ ಮತ್ತು ದವಡೆಯ ಎಲುಬುಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡುವುದು ಹಾಗೂ ಮೂಡುತ್ತಿರುವ ಖಾಯಂ ಹಲ್ಲುಗಳಿಗೆ ಸರಿಯಾದ ಸ್ಥಳಾವಕಾಶ ಒದಗಿಸುವುದು. ಎಲ್ಲ ಖಾಯಂ ಹಲ್ಲುಗಳು ಮೂಡಿದ ಬಳಿಕ ಅವುಗಳನ್ನು ಅತ್ಯುತ್ತಮ ಸ್ಥಾನಗಳಿಗೆ ಸ್ಥಳಾಂತರಗೊಳಿಸಲು ರೋಗಿಗೆ ದ್ವಿತೀಯ ಚಿಕಿತ್ಸಾ ಕ್ರಮದ ಅಗತ್ಯವೂ ಉಂಟಾಗಬಹುದಾಗಿದೆ. 

ಈ ಕೆಲವು ಓಥೊìಡಾಂಟಿಕ್‌ ಸಮಸ್ಯೆಗಳು ಜನ್ಮತಃ ಬಂದಿರುತ್ತವೆ, ಇನ್ನು ಕೆಲವು ಆಕಸ್ಮಿಕವಾಗಿ, ದಂತ ಕಾಯಿಲೆಗಳಿಂದ ಅಥವಾ ಅಸಹಜ ನುಂಗುವಿಕೆಯಿಂದ ಉಂಟಾಗುತ್ತವೆ. 

ಶೀಘ್ರ ಸುದಂತ ಯೋಜನ ಚಿಕಿತ್ಸೆಯು ಅನೇಕ ಸ್ವರೂಪಗಳಲ್ಲಿ ನಡೆಯಬಹುದು. ಸುದಂತ ಯೊಜàನ ತಜ್ಞರು ಸ್ಥಿರವಾದ ಅಥವಾ ತೆಗೆಯಬಹುದಾದ “ಪರಿಕರ’ – ಹಲ್ಲುಗಳನ್ನು ಸ್ಥಾನಾಂತರಿಸಲು ಉಪಯೋಗಿಸುವ, ದವಡೆಯ ಸ್ಥಾನವನ್ನು ಬದಲಾಯಿಸಲು ಅಥವಾ ಆವಶ್ಯಕ ಬದಲಾವಣೆಯನ್ನು ಉಂಟಾಗಿಸುವುದಕ್ಕಾಗಿ ಹಲ್ಲುಗಳನ್ನು ಸದ್ಯದ ಸ್ಥಾನದಲ್ಲಿಯೇ ಇರಗೊಳಿಸುವ ಪರಿಕರವನ್ನು ಶಿಫಾರಸು ಮಾಡಬಹುದು. ಕೆಲವೊಮ್ಮೆ ಯಾವುದೇ ಪರಿಕರಗಳ ಅಗತ್ಯ ಉಂಟಾಗುವುದಿಲ್ಲ. ಅದರ ಬದಲು ಕೆಲವು ಹಾಲುಹಲ್ಲುಗಳನ್ನು ತೆಗೆದುಹಾಕುವುದರಿಂದ ಖಾಯಂ ಹಲ್ಲುಗಳು ಉತ್ತಮವಾಗಿ ಮೂಡುವುದಕ್ಕೆ ಪ್ರಯೋಜನವಾಗಬಹುದು. ರೋಗಿಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪ್ರಯೋಜನಕರವಾಗುವಂತೆ ಹಾಲುಹಲ್ಲುಗಳನ್ನು ಕೀಳುವ ಸಮಯವನ್ನು ವಿನ್ಯಾಸ ಮಾಡಲಾಗುತ್ತದೆ. 

Advertisement

ಚಿಕಿತ್ಸೆಯ ಗುರಿಗಳು ಹೇಗೆ ಸಾಧಿಸಲ್ಪಡುತ್ತವೆ ಎಂಬುದರ ಹೊರತಾಗಿ, ಗಮನದಲ್ಲಿ ಇರಬೇಕಾದುದೇನೆಂದರೆ, ಕೆಲವು ಸುದಂತ ಯೋಜನ ಸಂಬಂಧಿ ಸಮಸ್ಯೆಗಳು ಅತಿ ಶೀಘ್ರವಾಗಿ ಪತ್ತೆ ಹಚ್ಚಲ್ಪಟ್ಟು ಚಿಕಿತ್ಸೆಗೆ ಒಳಗಾದರೆ ಸರಿಪಡಿಸುವುದಕ್ಕೆ ಸುಲಭ. ಎಲ್ಲ ಖಾಯಂ ಹಲ್ಲುಗಳು ಮೂಡುವ ವರೆಗೆ ಕಾಯುವುದು ಅಥವಾ ಮುಖದ ಬೆಳವಣಿಗೆ ಸಂಪೂರ್ಣಗೊಳ್ಳುವ ವರೆಗೆ ಕಾಯುವುದರಿಂದ ಕೆಲವು ಸಮಸ್ಯೆಗಳನ್ನು ಸರಿಪಡಿಸುವುದು ಹೆಚ್ಚು ಕ್ಲಿಷ್ಟವಾಗುತ್ತದೆ. 

ಆರೋಗ್ಯಪೂರ್ಣವಾದ ಸುಂದರ ನಗುವನ್ನು ನಿಮ್ಮ ಮಗುವಿನ ಮುಖದಲ್ಲಿ ಮೂಡಿಸುವುದಕ್ಕಾಗಿ ಸುದಂತ ಯೋಜನ ತಜ್ಞರನ್ನು ಭೇಟಿಯಾಗಿ. ಇದಕ್ಕೆ ಯಾರ ಶಿಫಾರಸಿನ ಅಗತ್ಯವೂ ಇಲ್ಲ. ಸುದಂತ ಯೋಜನ ತಜ್ಞರು ಸಂಭಾವ್ಯ ಸಮಸ್ಯೆಗಳ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಾರೆ ಹಾಗೂ ನಿಮ್ಮ ಮಗುವಿಗೆ ಅತ್ಯಂತ ಸಮರ್ಪಕವಾದ ಚಿಕಿತ್ಸೆಯನ್ನು ಶಿಫಾರಸು ಮಾಡುತ್ತಾರೆ. ನೆನಪಿಡಿ, ಸಮಯ ಬಹಳ ಮುಖ್ಯವಾದದ್ದು. 

ದಂತ ವೈದ್ಯಕೀಯ ಕಾಲೇಜಿನಿಂದ ಪದವಿಯನ್ನು ಪಡೆದ ಬಳಿಕ ಹೆಚ್ಚುವರಿಯಾಗಿ ಎರಡರಿಂದ ಮೂರು ವರ್ಷಗಳ ವಿಶೇಷ ಮಾನ್ಯತೆಯುಕ್ತ ಓಥೊìಡಾಂಟಿಕ್‌ ರೆಸಿಡೆನ್ಸಿ ಕಾರ್ಯಕ್ರಮವನ್ನು ಪೂರೈಸು ದಂತವೈದ್ಯರು ಮಾತ್ರ “ಸುದಂತ ಯೋಜನ ತಜ್ಞರು’ ಎಂದು ಕರೆಯಿಸಿಕೊಳ್ಳುತ್ತಾರೆ.

ಸುದಂತ ಯೋಜನ ಚಿಕಿತ್ಸೆಗಾಗಿ ನೀವು ಸುದಂತ ಯೋಜನ ತಜ್ಞರೊಬ್ಬರನ್ನು ಆಯ್ದುಕೊಂಡಾಗ, ನಿಮ್ಮ ಮುಖದಲ್ಲಿ ಅತ್ಯುತ್ತಮ ನಗುವನ್ನು ಅರಳಿಸಲು ಅಗತ್ಯವಾದ ಕೌಶಲಗಳನ್ನು ಹೊಂದಿರುವ, ಸುದಂತ ಯೋಜನೆ, ದಂತ ಮತ್ತು ಮುಖದ ಎಲುಬುಗಳಿಗೆ ಸಂಬಂಧಿಸಿದ ವಿಶೇಷ ತಜ್ಞರನ್ನು ಆರಿಸಿಕೊಂಡಿದ್ದೀರಿ ಎಂದು ಖಂಡಿತ ವಿಶ್ವಾಸವಿರಿಸಬಹುದು. 

ಏಳು ವರ್ಷ ವಯಸ್ಸು ಏಕೆ?
ಏಳು ವರ್ಷ ವಯಸ್ಸಿನ ಹೊತ್ತಿಗೆ ನಿಮ್ಮ ಮಗುವಿಗೆ ಸುದಂತ ಯೋಜನ ತಜ್ಞರು ಮೂಡುತ್ತಿರುವ ಹಲ್ಲುಗಳು ಮತ್ತು ದವಡೆಯನ್ನು ಸರಿಯಾಗಿ ವಿಶ್ಲೇಷಿಸುವಂತೆ ಸಾಕಷ್ಟು ಖಾಯಂ ಹಲ್ಲುಗಳು ಮೂಡಿರುತ್ತವೆ. ಇದು ಬಹಳ ಅಮೂಲ್ಯವಾದ ಮಾಹಿತಿಯಾಗಿರುತ್ತದೆ.

ಆರಂಭಿಕ ತಪಾಸಣೆಯಿಂದ ಮೂರು  ಮುಖ್ಯವಾದ ಫ‌ಲಿತಾಂಶಗಳು ಲಭಿಸುತ್ತವೆ
1. ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದಿರುವುದು ನಿರೀಕ್ಷಿತ.
2. ಭವಿಷ್ಯದಲ್ಲಿ ಚಿಕಿತ್ಸೆಯ ಅಗತ್ಯ ಉಂಟಾಗಬಹುದು, ಹೀಗಾಗಿ ಮುಖ ಮತ್ತು ದವಡೆಗಳು ಬೆಳೆಯುತ್ತಿದ್ದಂತೆಯೇ ಮಗುವನ್ನು ನಿಯಮಿತವಾದ ತಪಾಸಣೆಗೆ ಒಳಪಡಿಸಬಹುದು.
3. ಶೀಘ್ರ ಚಿಕಿತ್ಸೆ ಒದಗಣೆಯಲ್ಲಿ ಪರಿಣಮಿಸಬಹುದಾದ ಸಮಸ್ಯೆ ಇರಬಹುದು.

ಮಗು ಇನ್ನೂ ಹಾಲು ಹಲ್ಲುಗಳನ್ನು ಹೊಂದಿರುವ ಸಮಯದಲ್ಲಿಯೇ ಸುದಂತ ಯೋಜನ ತಜ್ಞರು ಚಿಕಿತ್ಸೆಯನ್ನು ಶಿಫಾರಸು ಮಾಡಬಹುದಾದ ಕೆಲವು ವಿಧದ ಸಮಸ್ಯೆಗಳೆಂದರೆ‌: 
– ಕಳಪೆ ಜಗಿತಗಳು – ಕೆಳಸಾಲಿನ ಮುಂಭಾಗದ ಹಲ್ಲುಗಳು ಮೇಲುಸಾಲಿನ ಮುಂಭಾಗದ ಹಲ್ಲುಗಳಿಗಿಂತ ಮುಂದಕ್ಕಿರುವುದು.
– ಅಡ್ಡ ಜಗಿತಗಳು: ದವಡೆ ಒಂದು ಕಡೆಗೆ ಸ್ಥಾನಾಂತರಗೊಳ್ಳುವುದು.
– ಕಿಕ್ಕಿರಿದ ಹಲ್ಲುಗಳು
– ಅತಿಯಾದ ಸ್ಥಳಾವಕಾಶವನ್ನು ಹೊಂದಿರುವ ಹಲ್ಲುಗಳು
– ಹೆಚ್ಚುವರಿ ಅಥವಾ ಕಡಿಮೆ ಹಲ್ಲುಗಳು
– ಅಸಹಜವಾಗಿ ಕೂಡುವ ಹಲ್ಲುಗಳು ಅಥವಾ ಹಲ್ಲುಗಳು ಕೂಡದೇ ಇರುವುದು
– ಹಲ್ಲು ಅಥವಾ ದವಡೆಯ ಬೆಳವಣಿಗೆಯನ್ನು ಬಾಧಿಸುವ ಬೆರಳು, ಹೆಬ್ಬೆರಳು ಅಥವಾ ಪ್ಯಾಸಿಫ‌ಯರ್‌ ಚೀಪುವ ಅಭ್ಯಾಸ

– ಡಾ| ರಿತೇಶ್‌ ಸಿಂಗ್ಲಾ ,
ಅಸೊಸಿಯೇಟ್‌ ಪ್ರೊಫೆಸರ್‌, ಓಥೊìಡಾಂಟಿಕ್ಸ್‌ ವಿಭಾಗ,
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next