Advertisement

ಊರ್ಮಿಳೆಯ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ?

05:55 PM Aug 06, 2019 | Sriram |

ಸೀತೆಗೆ ವನವಾಸ ಏರ್ಪಟ್ಟರೂ ಕನಿಷ್ಠ ರಾಮನ ಜೊತೆಯಿದ್ದಳು. ಊರ್ಮಿಳೆ, ಮಾಂಡವಿಯರ ಕಥೆಯೇನು? ಲಕ್ಷ್ಮಣ ಕಾಡಿನಲ್ಲಿ ಹಗಲುರಾತ್ರಿ ವಿಶ್ರಾಂತಿ ತೆಗೆದುಕೊಳ್ಳದೇ ಅಣ್ಣನ ಯೋಗಕ್ಷೇಮದ ಹೊಣೆ ಹೊತ್ತುಕೊಂಡಿದ್ದಾಗ ಈ ಊರ್ಮಿಳೆ ಪಾಡೇನಾಗಿತ್ತು? ಮದುವೆಯಾಗಿ ಕೆಲವೇ ವರ್ಷದಲ್ಲಿ, ಆಗಷ್ಟೇ ಯೌವ್ವನ ಮೈದುಂಬಿಕೊಂಡಿದ್ದಾಗ ಪತಿಯ ಸಹವಾಸದಿಂದ ದೂರವಿರಬೇಕಾದ ಈ ಅಕ್ಕತಂಗಿಯರ ಮನದ ದುಗುಡುಗಳು ಏನಿದ್ದಿರಬಹುದು?

Advertisement

ಶ್ರೀರಾಮ-ಸೀತೆಯರ ಕಥೆ ಯಾರಿಗೆ ಗೊತ್ತಿಲ್ಲ? ಭರತಖಂಡದ ಉದ್ದಗಲದಲ್ಲಿ ಅವರ ಕಥೆ ಕೇಳಿ ಬರುತ್ತದೆ. ಬಹುತೇಕ ಊರುಗಳ ಜನ, ರಾಮ ತಮ್ಮೂರಿಗೆ ಬಂದಿದ್ದ ಎಂದು ನಂಬುತ್ತಾರೆ. ಈ ಜಾಗದಲ್ಲಿ ಕೂತು ವಿಶ್ರಾಂತಿ ತೆಗೆದುಕೊಂಡಿದ್ದ, ಅವನು ಊಟ ಮಾಡಿ ಎಲೆ ಎಸೆದ ಜಾಗವಿದು. ಅದಕ್ಕೆ ಈಗ ಇಲ್ಲಿ ದೇವಸ್ಥಾನ ನಿರ್ಮಾಣವಾಗಿದೆ….! ದೈವಪಟ್ಟಕ್ಕೇರಿದ ಆ ಪೌರಾಣಿಕ ಚೇತನಗಳ ಬಗ್ಗೆ ಕಥೆಗಳು ಒಂದೆರಡಲ್ಲ. ಇಡೀ ಭರತಖಂಡವೇ ಶ್ರೀರಾಮ-ಸೀತೆಯರನ್ನು ತಮ್ಮವರನ್ನಾಗಿ ಮಾಡಿಕೊಂಡ ಬಗೆಯಿದು. ಇನ್ನೊಂದು ರೀತಿಯಲ್ಲಿ ಅವರಿಬ್ಬರ ಆದರ್ಶಗಳನ್ನು ಗೌರವಿಸಿ, ಅದನ್ನು ಸ್ವೀಕರಿಸಿದ ರೀತಿಯೂ ಹೌದು. ಗಂಡ ರಾಮನಂತೆ, ಪತ್ನಿ ಸೀತೆಯಂತೆ ಇರಬೇಕೆಂದು ಈಗಲೂ ಹೇಳುತ್ತಾರೆ. ಈ ಕಥೆಯನ್ನು ಹೇಳಬೇಕಾದ್ದು, ವಿವರಿಸಬೇಕಾಗಿದ್ದು ಏನೂ ಇಲ್ಲ. ಆದರೆ, ನಿಮಗೆ ಈ ಜೀವಗಳ ಕಥೆ ಗೊತ್ತಿರಲಿಕ್ಕಿಲ್ಲ. ವಾಲ್ಮೀಕಿ ರಾಮಾಯಣದಲ್ಲಿ ಇವರ ಬದುಕು ಅನಾಮಿಕವಾಗಿಯೇ ಉಳಿದುಹೋಗುತ್ತದೆ. ಇಲ್ಲಿ ಹೇಳುತ್ತಿರುವುದು ಲಕ್ಷ್ಮಣನ ಪತ್ನಿ ಊರ್ಮಿಳೆ, ಭರತನ ಪತ್ನಿ ಮಾಂಡವಿ, ಶತೃಘ್ನನ ಪತ್ನಿ ಶೃತಕೀರ್ತಿಯ ಬಗ್ಗೆ.
ಸೀತೆ ಜನಕನಿಗೆ ನೆಲ ಉಳುವಾಗ ಸಿಗುತ್ತಾಳೆ. ನೇಗಿಲನ್ನು ಉಳುವುದರಿಂದ ಉಂಟಾಗುವ ಗೆರೆಗೆ ಸೀತಾ ಎನ್ನುತ್ತಾರೆ. ಹಾಗೆ ಉಳುವಾಗ ನೆಲದಡಿ ಸಿಕ್ಕಿದ್ದರಿಂದ ಆಕೆಗೆ “ಸೀತಾ’ ಎಂದು ಜನಕ ನಾಮಕರಣ ಮಾಡುತ್ತಾನೆ. ಅದರ ಜೊತೆಗೆ ಆತನಿಗೆ ಊರ್ಮಿಳಾ ಎಂಬ ಪುತ್ರಿಯಿರುತ್ತಾಳೆ. ಜನಕನ ತಮ್ಮ ಕುಶಧ್ವಜನಿಗೆ ಮಾಂಡವಿ, ಶೃತಕೀರ್ತಿ ಪುತ್ರಿಯರು. ಸೀತೆಯೊಂದಿಗೆ ಅವಳ ಉಳಿದ ಮೂವರು ಸಹೋದರಿಯರನ್ನು ಮದುವೆ ಮಾಡಿ ಕೊಡುವಾಗ ಒಮ್ಮೆ ರಾಮಾಯಣದಲ್ಲಿ ಅವರ ಬಗ್ಗೆ ಉಲ್ಲೇಖ ಬರುತ್ತದೆ. ಆಮೇಲೆ ಉತ್ತರಕಾಂಡದಲ್ಲಿ ರಾಮನ ಅಂತಿಮ ದಿನಗಳ ಬಗ್ಗೆ ಹೇಳುವಾಗ ಅಲ್ಲಲ್ಲಿ ಇವರ ಹೆಸರು ಹೀಗೆ ಬಂದು ಹಾಗೆ ಹೋಗುತ್ತದೆ. ಆದರೆ ಇವರ ತಪಸ್ಸು ಯಾರಿಗೆ ಕಡಿಮೆ?

ರಾಮ ಕಾಡಿಗೆ ಹೊರಟು ನಿಂತಾಗ ಲಕ್ಷ್ಮಣನೂ ಹಿಂದೆಯೇ ನಡೆದುಹೋಗುತ್ತಾನೆ. ಭರತ ಅಯೋಧ್ಯೆಯಿಂದ ಹೊರಗಿರುವ ನಂದಿಗ್ರಾಮಕ್ಕೆ ಹೋಗಿ ತಪಸ್ವಿಯಂತೆ ಬದುಕುತ್ತಾನೆ. ರಾಮನ ಚಪ್ಪಲಿಯನ್ನು ಸಿಂಹಾಸನದ ಮೇಲಿಟ್ಟು ಆಡಳಿತ ನಡೆಸುತ್ತಾನೆ. ಭರತನ ಅನುಜ್ಞೆಯಂತೆ ಶತೃಘ್ನ ಆಡಳಿತದ ಉಸ್ತುವಾರಿ ಹೊತ್ತುಕೊಳ್ಳುತ್ತಾನೆ.

ಸೀತೆಗೆ ವನವಾಸ ಏರ್ಪಟ್ಟರೂ ಕನಿಷ್ಠ ರಾಮನ ಜೊತೆಯಿದ್ದಳು. ಊರ್ಮಿಳೆ, ಮಾಂಡವಿಯರ ಕಥೆಯೇನು? ಲಕ್ಷ್ಮಣ ಕಾಡಿನಲ್ಲಿ ಹಗಲುರಾತ್ರಿ ವಿಶ್ರಾಂತಿ ತೆಗೆದುಕೊಳ್ಳದೇ ಅಣ್ಣನ ಯೋಗಕ್ಷೇಮದ ಹೊಣೆ ಹೊತ್ತುಕೊಂಡಿದ್ದಾಗ ಈ ಊರ್ಮಿಳೆ ಪಾಡೇನಾಗಿತ್ತು? ಮದುವೆಯಾಗಿ ಕೆಲವೇ ವರ್ಷದಲ್ಲಿ, ಆಗಷ್ಟೇ ಯೌವ್ವನ ಮೈದುಂಬಿಕೊಂಡಿದ್ದಾಗ ಪತಿಯ ಸಹವಾಸದಿಂದ ದೂರವಿರಬೇಕಾದ ಈ ಅಕ್ಕತಂಗಿಯರ ಮನದ ದುಗುಡುಗಳು ಏನಿದ್ದಿರಬಹುದು? ಮಾಂಡವಿಗಾದರೂ ಭರತನನ್ನು ದೂರದಿಂದಲಾದರೂ ನೋಡಲು ಸಾಧ್ಯವಿತ್ತು. ಶೃತಕೀರ್ತಿಗೆ ಪತಿ ಕಣ್ಣೆದುರಲ್ಲೇ ಇದ್ದ. ಸೀತೆಗಾದರೆ ಸತ್ತರೂ, ಬದುಕಿದರೂ ಅದು ರಾಮನೊಂದಿಗೆ ಎನ್ನುವುದು ಖಚಿತವಾಗಿತ್ತು. ಊರ್ಮಿಳೆಗೆ ಪತಿ ಮರಳಿ ಜೀವಂತ ಹಿಂತಿರುಗುತ್ತಾನೆಂಬ ಖಾತ್ರಿಯಿರಲಾದರೂ ಹೇಗೆ ಸಾಧ್ಯವಿತ್ತು? 14 ವರ್ಷವೆಂದರೆ ಕಡಿಮೆ ಅವಧಿಯೇ? ಲಕ್ಷ್ಮಣ ಹಿಂತಿರುಗುವವರೆಗೆ ಆಕೆಯ ಬದುಕು ಅನಿಶ್ಚಿತತೆಯ ಗೂಡು. ರಾಜರಿಗೆ ಪತ್ನಿಯರು ಸತ್ತರೆ, ರೋಗಿಷ್ಠರಾದರೆ ಇನ್ನೊಬ್ಬರನ್ನು ಮದುವೆಯಾಗುವುದು ನೀರು ಕುಡಿದಷ್ಟು ಸಲೀಸು. ಅದೇ ಪತ್ನಿಯರಿಗೆ ವೈವಾಹಿಕ ಜೀವನ ಒಂದು ಸಂಕೋಲೆ. ರಾಣಿ ಎಂಬ ಪಟ್ಟವನ್ನು ಹೊತ್ತುಕೊಂಡರೆ ಮುಗಿಯಿತು. ಅದರಾಚೆಗಿನ ಅವರ ನೋವು, ಏಕಾಕಿತನ, ಬೇಗುದಿ, ತಹತಹ ಯಾವುದೂ ದಾಖಲಾಗುವುದಿಲ್ಲ. ಆ ಹಂತದಲ್ಲಿ ರಾಣಿಯರ ಮನಸ್ಸು ಸ್ವಲ್ಪ ಚಂಚಲವಾದರೂ ದುರಂತಗಳ ಸರಮಾಲೆಗಳೇ ನಡೆಯುವುದು ಸಾಧ್ಯವಿದೆ. ಈ ಹಿನ್ನೆಲೆಯಿಟ್ಟುಕೊಂಡು ಊರ್ಮಿಳೆಯ ತ್ಯಾಗಕ್ಕೆ ಬೆಲೆಕಟ್ಟಲು ಸಾಧ್ಯವೇ ಯೋಚಿಸಿ ನೋಡಿ!
(pruthvijith@gmail.com)

-ನಿರೂಪ

Advertisement
Advertisement

Udayavani is now on Telegram. Click here to join our channel and stay updated with the latest news.

Next