Advertisement

ಜನರಿಗೆ ಅನ್ನ ನೀಡಿದ ಬಿಜೆಪಿಯಿಂದ ವಿಶ್ವಗುರು ಮಾಡಲು ಸಾಧ್ಯವೇ?; ಸಿದ್ದರಾಮಯ್ಯ

02:48 PM Oct 27, 2022 | Team Udayavani |

ಬೆಂಗಳೂರು: ಜನರ ಹೊಟ್ಟೆಗೆ ಸಮರ್ಪಕವಾದ ಅನ್ನ ನೀಡದ ಬಿಜೆಪಿಯವರಿಂದ ದೇಶವನ್ನು ವಿಶ್ವಗುರು ಮಾಡಲು ಸಾಧ್ಯವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಜಗತ್ತಿನ ಜನರ ಮುಂದೆ ಹಸಿವು, ಸ್ವಾತಂತ್ರ್ಯ, ಮಹಿಳೆಯರ ದುಡಿಮೆ ಮುಂತಾದ ವಿಷಯಗಳಲ್ಲಿ ಭಾರತದ ಮರ್ಯಾದೆ ಹರಾಜಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಮೋದಿಯವರನ್ನು ಟೀಕಿಸಿದವರ ವಿರುದ್ಧ ಪ್ರತಿಭಟಿಸಿ ಎಂದು ಹೇಳಿಕೆ ನೀಡಿದ್ದ ಯಡಿಯೂರಪ್ಪನವರಿಗೆ ಮತ್ತು ಬಿಜೆಪಿಯವರಿಗೆ ನಾನು 32 ಪ್ರಶ್ನೆಗಳನ್ನು ಕೇಳಿದ್ದೆ. ಇದುವರೆಗೆ ಬಿಜೆಪಿಯವರಿಗೆ ಮತ್ತು ಯಡಿಯೂರಪ್ಪನವರಿಗೆ ಒಂದೇ ಒಂದು ಪ್ರಶ್ನೆಗೂ ಉತ್ತರಿಸಲು ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದರು.

ಇದರ ಮಧ್ಯೆ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ 121 ದೇಶಗಳ ಪೈಕಿ 107 ನೇ ಸ್ಥಾನಕ್ಕೆ ಕುಸಿದಿದೆಯೆಂಬ ವರದಿ ಬಿಡುಗಡೆಯಾಯಿತು. ಬಿಜೆಪಿಯವರು ಯಥಾಪ್ರಕಾರ ಈ ವರದಿಯೆ ಸರಿ ಇಲ್ಲ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ದಾಖಲೆಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ ಎಂಬ ಸಾಕ್ಷ್ಯಗಳನ್ನು ಸಮೀಕ್ಷೆ ಮಾಡಿದವರು ತೋರಿಸಿದ್ದಾರೆ. ಮುಖ್ಯವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ-5 ರಲ್ಲಿನ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಹಸಿವಿನ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆಯೆಂದು ತಿಳಿಸಿದ ಮೇಲೆ ಬಿಜೆಪಿಯವರು ಆಕ್ಷೇಪಗಳನ್ನು ನಿಲ್ಲಿಸಿದ್ದಾರೆ ಎಂದರು.

2017 ರಲ್ಲಿ 100 ನೇ ಸ್ಥಾನದಲ್ಲಿದ್ದ ಭಾರತ 2018 ರಲ್ಲಿ 103 ನೇ ಸ್ಥಾನಕ್ಕೆ ಕುಸಿಯಿತು. ಈಗ 121 ದೇಶಗಳ ಪೈಕಿ 107 ನೇ ಸ್ಥಾನ. ನಮ್ಮ ನಂತರ ಕೇವಲ 15 ದೇಶಗಳಿವೆ. ದುರದೃಷ್ಟವೆಂದರೆ ನಮಗಿಂತ ಮೇಲೆ ಇಥಿಯೋಪಿಯ, ಕೀನ್ಯಾ, ಸುಡಾನ್ ಮುಂತಾದ ದೇಶಗಳಿವೆ. ನಮ್ಮ ಅಕ್ಕಪಕ್ಕದ ದೇಶಗಳಾದ ಪಾಕಿಸ್ತಾನ 99 ನೇ ಸ್ಥಾನ, ಬಾಂಗ್ಲಾದೇಶ 84 ನೇ ಸ್ಥಾನ, ನೇಪಾಳ 81 ನೇ ಸ್ಥಾನ, ನಮ್ಮದು 107 ನೇ ಸ್ಥಾನ. ಇದು ದೇಶಕ್ಕೆ ಹೆಮ್ಮೆ ತರುವ ಸಂಗತಿಯೆ? ತನ್ನ ಜನರ ಹೊಟ್ಟೆಗೆ ಸಮರ್ಪಕವಾಗಿ ಅನ್ನ ಸಿಗುವಂತೆ ನೋಡಿಕೊಳ್ಳದ ದೇಶ ವಿಶ್ವಗುರುವಾಗಲು ಸಾಧ್ಯವೆ? ಹಸಿವಿನ ಸೂಚ್ಯಂಕವನ್ನು ಜನರ ಅಪೌಷ್ಟಿಕತೆ, ಶಿಶುಮರಣ, ಮಕ್ಕಳ ವಯಸ್ಸಿಗನುಗುಣವಾಗಿ ಎತ್ತರ ಮತ್ತು ತೂಕಗಳನ್ನು ಮಾನದಂಡವನ್ನಾಗಿ ಇಟ್ಟುಕೊಂಡು ವರದಿಯನ್ನು ಸಿದ್ಧಪಡಿಸಲಾಗುತ್ತದೆ.

ಪರಿಸ್ಥಿತಿ ಹೀಗಿದ್ದರೂ ಬಿಜೆಪಿಯು ಅತ್ಯಂತ ಕ್ಷುಲ್ಲಕವಾದ ಆಹಾರದ ರಾಜಕಾರಣವನ್ನು ಮಾಡುತ್ತಿದೆ. ಮಾಂಸಾಹಾರದ ಮೇಲೆ ದಾಳಿ ನಡೆಸುತ್ತಿದೆ. ಮನುಷ್ಯರಿಗೆ ಅತ್ಯಂತ ಅಗತ್ಯವಾಗಿ ಬೇಕಾದ ಪ್ರೋಟೀನುಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.

Advertisement

ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಾಗ ಪ್ರತಿ ಬಿಪಿಎಲ್ ಕಾರ್ಡುದಾರರಿಗೆ ತೊಗರಿಬೇಳೆ ನೀಡುತ್ತಿದ್ದೆವು. ಬೇಳೆ ನೀಡುವ ಯೋಜನೆಯನ್ನು ಬಿಜೆಪಿ ಸರ್ಕಾರ ರದ್ದು ಮಾಡಿ 3 ವರ್ಷಗಳಾದವು.ಮನಮೋಹನಸಿಂಗರ ನೇತೃತ್ವದ ಸರ್ಕಾರ ಆಹಾರ ಖಾತ್ರಿ ಯೋಜನೆಯನ್ನು ಜಾರಿಗೆ ತಂದು ಅದನ್ನು ಕಡ್ಡಾಯವಾದ ಹಕ್ಕನ್ನಾಗಿಸಿತು. ಜನರಿಗೆ ಸಮರ್ಪಕವಾದ ಅನ್ನ ನೀಡಬೇಕಾದುದು ಸರ್ಕಾರದ ಜವಾಬ್ಧಾರಿ. ಆದರೆ ಬಡಜನರನ್ನು ಹಸಿವು ಮುಂತಾದ ಸಂಕಷ್ಟಗಳಿಂದ ಮೇಲೆತ್ತಲು ನೀಡುತ್ತಿರುವ ಸಬ್ಸಿಡಿಗಳನ್ನೆ ರದ್ದು ಮಾಡಬೇಕೆಂದು ಬಿಜೆಪಿ ಪ್ರತಿಪಾದಿಸುತ್ತಿದೆ ಎಂದರು.

ಜಾಗತಿಕ ಸಂಸ್ಥೆಗಳು ನಿರಂತರವಾಗಿ ಬಿಡುಗಡೆ ಮಾಡುತ್ತಿರುವ ಅಧ್ಯಯನ ವರದಿಗಳು ಮತ್ತು ಅಂಕಿಅಂಶಗಳನ್ನು ತಳ್ಳಿ ಹಾಕಲೆತ್ನಿಸುವ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿಯು ಯೋಜನಾ ಆಯೋಗವನ್ನೆ ಬರ್ಖಾಸ್ತು ಮಾಡಿದೆ. ಕೇಂದ್ರ ಸರ್ಕಾರವು ನಿಗದಿತವಾಗಿ ನಡೆಸುವ ಅಧ್ಯಯನಗಳನ್ನೇ ನಿಲ್ಲಿಸಿಬಿಟ್ಟಿದೆ. ಮುಖ್ಯವಾಗಿ ಸಿಎಜಿ ಆಡಿಟ್ಟುಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ರಾಷ್ಟ್ರೀಯ ಅಂಕಿ ಅಂಶಗಳ ಇಲಾಖೆಯು ನಡೆಸುವ ಸರ್ವೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next