Advertisement

ಇಂದಿರಾ ಕ್ಯಾಂಟೀನ್‌ ಉಳಿವು ಸಾಧ್ಯವೇ?

12:59 AM Aug 08, 2019 | Lakshmi GovindaRaj |

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಟೆಂಡರ್‌ ಅವಧಿ ಆಗಸ್ಟ್‌ 15 ಕ್ಕೆ ಮುಗಿಯಲಿದ್ದು ಆನಂತರ ಮುಂದೇನು ಎಂಬ ಪ್ರಶ್ನೆ ಮೂಡಿದೆ.

Advertisement

ಏಕೆಂದರೆ, ಇ-ಗವರ್ನೆನ್ಸ್‌ ಸರ್ವರ್‌ನಲ್ಲಿ ಲೋಪವುಂಟಾಗಿದ್ದು, ಆ. 15 ರವರೆಗೂ ಸರಿ ಹೋಗದಿದ್ದರೆ ಅಥವಾ ಮರು ಟೆಂಡರ್‌ ಆಗಿದ್ದರೆ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿಯೂ ಎದುರಾಗಿದೆ. ಒಂದೊಮ್ಮೆ ಹಾಗೆ ಆಗಿದ್ದೇ ಆದರೆ ಒಂದು ತಿಂಗಳ ಕಾಲ ಬಂದ್‌ ಆಗುವ ಸಾಧ್ಯತೆಯೂ ಇದೆ.

ಆಹಾರ ಪೂರೈಕೆ ಸಂಬಂಧ ಇ-ಗವರ್ನೆನ್ಸ್‌ ಮೂಲಕ ಆನ್‌ಲೈನ್‌ನಲ್ಲಿ ಟೆಂಡರ್‌ ಆಹ್ವಾನಿಸಿ ಜುಲೈ 13ರಿಂದ ಆಗಸ್ಟ್‌ 7ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆದರೆ ಕಳೆದ ಐದು ದಿನಗಳಿಂದ ರಾಜ್ಯ ಸರ್ಕಾರದ ಇ- ಗವರ್ನೆನ್ಸ್‌ನ ಸರ್ವರ್‌ ಸ್ಥಗಿತವಾಗಿದೆ. ಇದರಿಂದಾಗಿ ಐದು ದಿನಗಳಲ್ಲಿ ಅರ್ಜಿ ಸಲ್ಲಿಕೆ ಸಾಧ್ಯವಾದಂತಿಲ್ಲ. ಈವರೆಗೆ ಎಷ್ಟು ಅರ್ಜಿಗಳು ಬಂದಿವೆ ಎಂಬ ಮಾಹಿತಿ ಕೂಡ ಸಿಗುತ್ತಿಲ್ಲ. ಹಾಗಾಗಿ ಇ- ಗವರ್ನೆನ್ಸ್‌ ಮೂಲಕ ಟೆಂಡರ್‌ ಪ್ರಕ್ರಿಯೆ ಯಾಂತ್ರಿಕವಾಗಿ ಮುಂದೂಡಿಕೆಯಾಗಲಿದೆ.

ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ: ಇದಾದ ಬಳಿಕ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ನಂತರ ಅರ್ಜಿಗಳ ಪರಿಶೀಲನೆ, ತಾಂತ್ರಿಕ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತದೆ. ಅಂತಿಮವಾಗಿ ಆಯುಕ್ತರ ಹಂತದಲ್ಲಿ ದರ ಪರಿಶೀಲನೆ ಮಾಡಿ, ಕನಿಷ್ಠ ಬೆಲೆಗೆ ಉತ್ತಮ ಗುಣಮಟ್ಟವನ್ನು ಹೊಂದಿರುವ ಕಂಪನಿಗೆ ಟೆಂಡರ್‌ ನೀಡಲಾಗುತ್ತದೆ. ಇಷ್ಟೆಲ್ಲಾ ಪ್ರಕ್ರಿಯೆ ನಡೆಸಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕಾಗಲಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸುತ್ತಾರೆ. ಇದರಿಂದಾಗಿ ಕ್ಯಾಂಟೀನ್‌ ಬಂದ್‌ ಆಗುತ್ತಾ ಎಂಬ ಆತಂಕ ಎದುರಾಗಿದೆ.

ಆಯುಕ್ತರ ಆತ್ಮವಿಶ್ವಾಸ: ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು, ಆಗಸ್ಟ್‌ 15 ರೊಳಗೆ ಮರು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇಂದಿರಾ ಕ್ಯಾಂಟೀನ್‌ ಬಂದ್‌ ಆಗುವುದಿಲ್ಲ. ಇ ಗವರ್ನೆನ್ಸ್‌ ಸರ್ವರ್‌ ಲೋಪವೂ ಸರಿ ಹೊಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಪ್ರತಿ ವರ್ಷ ಜುಲೈ ತಿಂಗಳ ಅಂತ್ಯಕ್ಕೆ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದ ಬಿಬಿಎಂಪಿ ಈ ಬಾರಿ ಗಡುವು ಅವಧಿ ಮುಗಿಯುತ್ತಿದ್ದರೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನಿತ್ಯ 1.4 ಲಕ್ಷ ಜನರಿಗೆ ಆಹಾರ ನೀಡುವ ಈ ಮಹತ್ವದ ಯೋಜನೆಗೆ ಸರ್ಕಾರ ದಿನಕ್ಕೆ 32 ಲಕ್ಷ ರೂ. ಖರ್ಚು ಮಾಡುತ್ತಿದೆ.

Advertisement

ಕಂಪನಿ ಬಗ್ಗೆ ಬೇಸರ: ಕಳೆದ ಎರಡು ವರ್ಷಗಳಿಂದ ಪಾಲಿಕೆ ವ್ಯಾಪ್ತಿಯ ಎಲ್ಲಾ 198 ಕ್ಯಾಂಟೀನ್‌ಗಳಿಗೆ ಖಾಸಗಿ ಕಂಪನಿಗಳು ಆಹಾರ ಪೂರೈಸುತ್ತಿದ್ದು, ಈ ಕಂಪನಿಗಳು ನಿರೀಕ್ಷಿತ ಮಟ್ಟದಲ್ಲಿ ಸೇವೆ ನೀಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಹಾಗಾಗಿ ಈವರೆಗೆ ಟೆಂಡರ್‌ ಪಡೆದಿದ್ದ ಕಂಪನಿಗಳನ್ನು ಈ ಬಾರಿಯ ಟೆಂಡರ್‌ನಲ್ಲಿ ಪರಿಗಣಿಸಬಾರದು ಎಂಬ ಒತ್ತಾಯವೂ ಇದೆ ಎಂದು ಹೇಳಲಾಗಿದೆ.

ಈ ಮಧ್ಯೆ, ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಬದಲಾವಣೆಗಳ ಪರಿಣಾಮ ಪಾಲಿಕೆಯಲ್ಲೂ ಬಿಜೆಪಿ ಆಡಳಿತ ಹಿಡಿಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್‌ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್‌ ಎಂದು ಮರುನಾಮಕರಣ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇಸ್ಕಾನ್‌ ಟೆಂಡರ್‌ ಬಿಡ್‌ ಸಲ್ಲಿಕೆ: ಈ ಬಾರಿ ಆಹಾರ ಪೂರೈಕೆ ಟೆಂಡರ್‌ ಪ್ರಕ್ರಿಯೆಯಲ್ಲಿ ಇಸ್ಕಾನ್‌ ಸಂಸ್ಥೆಯೂ ಬಿಡ್‌ ಸಲ್ಲಿಸಿದೆ. ಆದರೆ ಇಸ್ಕಾನ್‌ ತಯಾರಿಸುವ ಆಹಾರ ಪದಾರ್ಥಗಳಿಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸುವುದಿಲ್ಲ. ಇದೇ ಕಾರಣಕ್ಕೆ ಕಳೆದ ಬಾರಿಯೂ ಇಸ್ಕಾನ್‌ ಸಂಸ್ಥೆಯನ್ನು ಆಹಾರ ಪೂರೈಕೆ ಟೆಂಡರ್‌ ಹಂಚಿಕೆಗೆ ಪರಿಗಣಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.

ಟೆಂಡರ್‌ ಪ್ರಕ್ರಿಯೆ ಚಾಲನೆಯಲ್ಲಿದೆ .ಇ- ಗವರ್ನೆನ್ಸ್‌ ಸರ್ವರ್‌ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಇಂತಹ ಸಮಸ್ಯೆಗಳು ಕಂಡು ಬಂದರೆ ಸರ್ಕಾರದ ಮಟ್ಟದಲ್ಲಿ ಕೂಡಲೇ ಪರಿಹಾರ ಕಂಡುಕೊಳ್ಳಲಾಗುವುದು. ಇಂದಿರಾ ಕ್ಯಾಂಟೀನ್‌ ಸೇವೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲಾಗುವುದು. ಸಾರ್ವಜನಿಕರಿಗೆ ಆತಂಕ ಬೇಡ.
-ಎನ್‌. ಮಂಜುನಾಥ್‌ ಪ್ರಸಾದ್‌ , ಬಿಬಿಎಂಪಿ ಆಯುಕ್ತ

* ಲೋಕೇಶ್‌ ರಾಮ್‌

Advertisement

Udayavani is now on Telegram. Click here to join our channel and stay updated with the latest news.

Next