Advertisement

ಇದನ್‌ ಬಿಟ್‌ ಅದನ್‌ ಬಿಟ್‌ ಇನ್ಯಾವ್ದು?

12:32 AM Aug 14, 2019 | mahesh |

ತೊಟ್ಟ ಶರವ ಮರಳಿ ತೊಡೆ ಅಂತ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ ಶಪಥ ಮಾಡಿದ್ದನಂತೆ. ಇವಳು ಕೂಡ ಒಮ್ಮೆ ಉಟ್ಟಿದ್ದು ಮರಳಿ ಉಡಲಾರೆ ಅನ್ನುತ್ತಾಳಲ್ಲ!

Advertisement

ಲಲಿತೆ ಸೀರೆಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಸಪ್ಪೆ ಮುಖ ಹೊತ್ತು ಕೂತೇ ಒಂದು ಗಂಟೆ ಕಳೆದಿತ್ತು. ಪತ್ರಿಕೆ ಓದುತ್ತ ಕುಳಿತಿದ್ದ ಆಕೆಯ ಪತಿಗೆ ಮೊದಲಿಗೆ ಗಮನಕ್ಕೆ ಬಾರದೆ ಇದ್ದರೂ, ಪತ್ನಿ ಕೂತಲ್ಲಿಂದ ಅಲ್ಲಾಡದೆ ಇದ್ದಾಗ ಸಹಜವಾಗಿ ವಿಚಾರಿಸಿದ್ದ – “ಏನು, ಸೀರೆ ಹುಡುಕ್ತಾ ಇದ್ದೀಯಾ?’

“ನಾಳೆ ಮದುವೆಗೆ ಹೋಗ್ಬೇಕಲ್ಲ. ಅದಕ್ಕೆ ಹುಡುಕ್ತಾ ಇದ್ದೆ.’
“ಅಷ್ಟೇ ತಾನೇ. ಒಂದು ರಾಶಿ ಇದೆ ಅಲ್ಲಿ. ಒಂದು ತೆಗೆದಿಟ್ರೆ ಆಯ್ತು. ಅದಕ್ಯಾಕೆ ಯೋಚನೆ?’
ಈಗ ಲಲಿತೆಗೆ ಸ್ವಲ್ಪ ಸಿಟ್ಟು ಬಂತು. “ನೀವೆಲ್ಲ ಉಟ್ಟ ಬಟ್ಟೆಯಲ್ಲೇ ಲಗ್ನದ ಮನೆಗೆ ಹೊರಟುಬಿಡ್ತೀರಿ. ನಮಗೆ ಹಾಗಾ? ಒಂದೊಳ್ಳೆ ಸೀರೆ ಇಲ್ಲದೆ ಹೇಗೆ ಹೋಗುವುದು? ಬ್ಯೂಟಿ ಕಾಂಟೆಸ್ಟ್‌ಗೆ ಬರುವ ಹಾಗೇ ಬರ್ತಾರೆ ನನ್ನ ಫ್ರೆಂಡ್ಸ್‌. ನಾನು ಹಳೆಯ ಸೀರೆಯಲ್ಲಿ ಹೋದ್ರೆ ಅವಮಾನ’
“”ಅದರಲ್ಲೇ ಒಂದು ಉಡು. ಎಲ್ಲ ಚೆನ್ನಾಗಿದೆಯಲ್ಲ”

ಲಲಿತೆಗೆ ಹುಬ್ಬು ಗಂಟು ಬಿತ್ತು. ಈ ಗಂಡಸರಿಗೆ ಇಂಥ ವಿಷಯದಲ್ಲಿ ತಿಳುವಳಿಕೆ ಸ್ವಲ್ಪ ಕಡಿಮೆಯೇ. ಕೈಗೆ ಸಿಕ್ಕಿದ ಸೀರೆಯಲ್ಲಿ ಮದುವೆ ಮನೆಗೆ ಹೋಗಲಾಗುತ್ತದೆಯೆ?
ಈಗ ಪತಿರಾಯನೇ ಎದ್ದು ಬಂದ.

“ನಿನಗೊಪ್ಪುವ ಸೀರೆ ನಾ ಆರಿಸಿ ಕೊಟ್ಟರಾ ಯ್ತಲ್ಲ. ಅದೇನು ಬ್ರಹ್ಮ ವಿದ್ಯೆನಾ? ಇದೆಷ್ಟು ಚೆನ್ನಾಗಿದೆ. ಇದೇ ಇರಲಿ. ಮುಗೀತಲ್ಲ ಆಯ್ಕೆ!’

Advertisement

ನಸು ಮುನಿಸು ಮಡದಿಗೆ. ಗಂಡನ ಕೈಲಿದ್ದ ಸೀರೆ ಕಿತ್ತು ರಾಶಿಗೇ ಹಾಕಿದಳು. “ಅದು ಮನೇಲಿ ಉಡುವ ಕಾಟನ್‌ ಸೀರೆ. ಅದನ್ಯಾರಾದರೂ ಲಗ್ನಕ್ಕೆ ಉಟ್ಟು ಹೋಗ್ತಾರಾ?’ ನಸು ಪೆಚ್ಚಾದ ಗಂಡನ ದೃಷ್ಟಿಗೆ ಬಿತ್ತು ಮತ್ತೂಂದು ಸೀರೆ. “ಇದೇ ಭರ್ಜರಿಯಾಗಿದೆ ನೋಡು. ನಿನಗೂ ಚೆನ್ನಾಗಿ ಕಾಣ್ಸುತ್ತೆ’.

ಲಲಿತೆ ನೋಡಿದಳು. ಕಳೆದ ತಿಂಗಳು ಪಕ್ಕದ ಮನೆಯವರ ಜೊತೆ ಹೋಗಿ ಖರೀದಿಸಿದ ಸೀರೆ. “ಸೀರೆ ಏನೋ ಚೆನ್ನಾಗಿದೆ. ಆದರೆ, ಇನ್ನೂ ಬ್ಲೌಸ್‌ ಹೊಲಿಸಿ ಆಗಿಲ್ಲವಲ್ಲ’ ಪತಿಗೆ ಸರಳ ಪರಿಹಾರ ಹೊಳೆಯಿತು. “ಅಲ್ನೋಡು ಕಪ್ಪು ಬ್ಲೌಸ್‌. ನಮ್ಮಮ್ಮ ಕಪ್ಪು ಬ್ಲೌಸ್‌ ಒಂದಿದ್ರೆ ಎಲ್ಲ ಬಣ್ಣದ ಸೀರೆಗೂ ಮ್ಯಾಚ್‌ ಆಗುತ್ತೆ ಅಂತಿದ್ರು’ ಅಂತ ಅನುನಯಿಸಿದ.

ಲಲ್ಲು ನೋಡಿದಳು. ಗೇಣು ಜರಿಯ ಅಂಚಿರುವ ಅಪ್ಪಟ ಕಾಂಜೀವರಂ ಸೀರೆಗೆ ಎದುರಿಗಿದ್ದ ಅರೆ ಮಾಸಲು ಕಪ್ಪು ಬ್ಲೌಸ್‌ ಹಾಕಿ ಉಟ್ಟರೆ ತಾನು ಸ್ನೇಹಿತೆಯರ ಬಳಗದಲ್ಲಿ ಅದೆಷ್ಟು ನಗೆಪಾಟಲಾಗುತ್ತೇನೆ. ಈ ಗಂಡಸರಿಗೇನು ಗೊತ್ತು ಗೌರೀ ದುಃಖ. “ನಿಮ್ಮಮ್ಮ ಯಾವ ಸೀರೆ ಉಟ್ಕೊಂಡರೂ ಕಪ್ಪು ಬ್ಲೌಸ್‌ ಹಾಕಿ ಮದುವೆ ಮನೆಗೆ ಹೋಗುತ್ತಿರಬಹುದು. ನಮ್ಮ ಕಾಲ ಬೇರೆ. ಹೆಂಡತಿಗೊಂದು ಒಳ್ಳೆ ಸೀರೆ, ಬ್ಲೌಸ್‌ ತೆಕ್ಕೊಟ್ಟಿಲ್ಲ ಜಿಪುಣ ಅಂತ ನಿಮ್ಮನ್ನೇ ಬೈತಾರೆ ’

“ಅದಕ್ಯಾಕೇ ಬೇಸರ ! ಸೀರೆಗಳು ಬೇಕಾದ ಹಾಗೇ ಬಿದ್ದಿವೆ ಇಲ್ಲಿ. ಅಲ್ಲೊಂದು ಸೆರಗಿಗೆ ಅದೇನೋ ಗಂಟು ಕಟ್ಟಿ ದೆ ಯಲ್ಲ , ಆ ಸೀರೆ ಭಾಳ ಚೆನ್ನಾಗಿದೆ’.
“ಅದೇನೋ ಕಟ್ಟಿದ್ದು ಅಲ್ಲ , ಕುಚ್ಚು ಕಟ್ಟಿದ್ದು. ತಿಳೀತಾ?’ “ಅದೇ ಸೀರೆಯೇ ಇರಲಿ ಅಂತ ಹೇಳಹೊರಟಿದ್ದು ನಾನು’ ಅಂದು ಸಮಜಾಯಿಸಿದ.

“ಆದರೇನು ಮ್ಯಾಚಿಂಗ್‌ ಬ್ಲೌಸ್‌ ಸ್ವಲ್ಪ ಬಿಗಿಯಾಗುತ್ತಿದೆ. ತೊಡುವ ಹಾಗೇ ಇಲ್ಲ’ “ನೋಡ್‌ ನೋಡ್‌ ಅಡಿಯಲ್ಲಿ ಬಿದ್ದಿದೆ ಎಂಥ ಚೆಂದದ ಸೀರೆ. ಪಿಂಕ್‌ ಕಲರ್‌, ವಾವ್‌! ನಿಂಗೆ ಚೆನ್ನಾಗಿ ಒಪ್ಪುತ್ತೆ. ಇರಲಿ ಅದೇ. ಲವಿ ಕಲರ್‌’ ಅರಳಿತು ಲಲ್ಲು ಮುಖ. ಅರೆಕ್ಷಣದಲ್ಲಿ ಬೇಜಾರು. “ಮೊನ್ನೆ ತಾನೇ ನಿಮ್ಮಕ್ಕನ ಮಗಳ ಮದುವೆಗೆ ಅದೇ ಉಟ್ಟಿ¨ªೆ. ನಾಳೇದು ನಿಮ್ಮ ತಂಗಿ ಮಗಳ ಲಗ್ನ. ಮೊನ್ನೆ ಇದ್ದ ಅತಿಥಿಗಳೇ ಅಲ್ವಾ ನಾಳೆಯೂ ಇರೋದು? ಅಕ್ಕ-ತಂಗಿಯರ ಮನೆ ಲಗ್ನವೇ ತಾನೇ. ಎಲ್ಲ ವಿಡಿಯೋದಲ್ಲಿ, ಗ್ರೂಪ್‌ ಫೊಟೋಗಳಲ್ಲಿ ತಾನಿರುವುದು ಅದೇ ಸೀರೆಯಲ್ಲಿ. ಹೇಗೆ ತಾನೆ ನಾಳೆ ಮರಳಿ ಅದನ್ನು ಉಡುವುದು. ಆಗುವುದಿಲ್ಲ. ಇವಳ ಬಳಿ ಇರುವುದು ಒಂದೇ ಸೀರೆ ಅಂತ ರಿಲೇಟಿವ್ಸ್‌ ಗುಸುಗುಸು ಪಿಸು ಪಿಸು ಮಾತಾಡ್ಕೊಳ್ತಾರೆ. ಅವಮಾನವಾಗುತ್ತೆ’.
ಈ ಮಾತು ಕೇಳಿ, ಪತಿಗೆ ಬೆಚ್ಚಿ ಬೀಳುವ ಸರದಿ. “ಹತ್ತು ಸಾವಿರದ ಸೀರೆಗೆ ಬ್ಲೌಸ್‌ ಸ್ಟಿಚ್ಚಿಂಗ್‌ ಚಾರ್ಜ್‌ ಐದು ಸಾವಿರ! ಇಷ್ಟು ಕೊಟ್ಟ ಸೀರೆ ಕೇವಲ ಒಂದೇ ಸಲ ಉಡುವುದಾ? ನಾನು ನೋಡು, ನಾಲ್ಕು ವರ್ಷದ ಹಿಂದೆ ಕೊಂಡುಕೊಂಡ ಶರ್ಟ್‌-ಪ್ಯಾಂಟ್‌ ವಾರಕ್ಕೆರಡು ಸಲ ಹಾಕ್ಕೊಳ್ತೀನಿ ನಿನ್ನ ಬಲವಂತಕ್ಕೆ. “ಹಳೇದಾಗಿದೆ ಬೇಡ್ವೇ ಅದು’ ಅಂದ್ರೆ, “ಹಳೇದೋ, ಹೊಸದೋ ಅಂತ ನಿಮ್ಮನ್ಯಾರು ನೋಡ್ತಾರೆ? ತೆಪ್ಪಗೆ ಹಾಕಿಕೊಂಡು ಹೋಗಿ ಅಂತ ಗದರಿಸುತ್ತೀ. ಇದೇ ಸೀರೆ ಉಟ್ರೆ ನಿಂಗೇನಂತೆ? ಯಾರು ನೋಡ್ತಾರೆ ನಿನ್ನ?’

ಅವಳು ಕೇಳು ವ ವ ಳಲ್ಲ. ಗಂಡ ಮತ್ತೂಂದು ಸೀರೆ ಎತ್ತಿ ಹಿಡಿದ. “ಸೀರೆ ಪರ್ವಾಗಿಲ್ಲ. ಅಂದು ಅದನ್ನುಟ್ಟು ನಿಮ್ಮಣ್ಣನ ಮನೆಗೆ ಹೋದಾಗ ನಿಮ್ಮತ್ತಿಗೆ, ಅಕ್ಕಂದಿರ ಜೊತೆ ನಾಲ್ಕೈದು ಸೆಲ್ಫಿ ತೆಗೆದಿದ್ದು, ಆ ಪಿಕ್‌ ಅವರೆಲ್ಲರ ಮೊಬೈಲ್‌ನಲ್ಲಿ ಇದ್ದೇ ಇದೆ. ನಾಳೆ ಪುನಃ ಸೆಲ್ಫಿ ಅಂತ ಶುರುವಾದ್ರೆ ಅದೇ ಹಳೇ ಸೀರೇಲಾ? ಊಹೂಂ. ಅದನ್ನುಟ್ಟು ಹೋಗುವ ಬದಲಿಗೆ ಹೋಗದೆ ಇರೋದು ವಾಸಿ’ ಮುಖ ತಿರುವಿದಳು ಲಲಿ ತೆ. ತೊಟ್ಟ ಶರವ ಮರಳಿ ತೊಡೆ ಅಂತ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ ಶಪಥ ಮಾಡಿದ್ದನಂತೆ. ಇವಳು ಕೂಡ ಒಮ್ಮೆ ಉಟ್ಟಿದ್ದು ಮರಳಿ ಉಡಲಾರೆ ಅನ್ನುತ್ತಾಳಲ್ಲ!
“ಒಂದೇ ಪರಿಹಾರ ಲಲ್ಲೂ, ನಾಳೆ ಹೋಗದೇ ಇರೋದೇ ಸೈ. ಎಲ್ಲ ಸೀರೆಗಳೂ ಒಂದ್ಸಲ ಉಪಯೋಗಿಸಿದ್ದೇ’. “ದುಡ್ಡು ಕೊಟಿಡಿ. ನೀವೇನೂ ಬರೋದು ಬೇಡ. ಮದುವೆಗೆ ಅಂದ್ಮೇಲೆ ರೇಷ್ಮೆ ಸೀರೆಯೇ ಬೇಕು. ನೀವು ಬೇಗ, ಬೇಗ ಎಂದು ಅವಸರ ಮಾಡಿದ್ರೆ ಚೂಸ್‌ ಮಾಡಲಾಗುವುದಿಲ್ಲ. ನನ್ನ ಫ್ರೆಂಡ್‌ ಮಿನ್ನಿಯ ಜೊತೆ ಹೋಗ್ತೀನೆ. ದುಡ್ಡು ಸ್ವಲ್ಪ ಹೆಚ್ಚೇ ಇರಲಿ. ಬ್ಲೌಸ್‌ ಒಂದೇ ಗಂಟೆಯಲ್ಲಿ ಅವಳೇ ಲೇಟೆಸ್ಟ್‌ ವಿನ್ಯಾಸದಲ್ಲಿ ಸ್ಟಿಚ್‌ ಮಾಡ್ಕೊಡ್ತಾಳೆ’…

ಹೀಗೆ, ಲಲಿತೆಯ ಹೊಸ ವಾದ ಮಂಡನೆ ಶುರುವಾದಾಗ ಗಂಡ ಕಕ್ಕಾ ಬಿಕ್ಕಿ!

-ಕೃಷ್ಣ ವೇಣಿ ಎಂ. ಕಿದೂರು

Advertisement

Udayavani is now on Telegram. Click here to join our channel and stay updated with the latest news.

Next