ಇತ್ತೀಚೆಗಷ್ಟೇ ಪಂಜಾಬ್ ಪೊಲೀಸರು ದಿಲ್ಲಿಗೆ ಬಂದು, ಬಿಜೆಪಿ ನಾಯಕ ತೇಜಿಂದರ್‌ಪಾಲ್ ಬಗ್ಗಾ ಅವರನ್ನು ಬಂಧಿಸಿದ್ದರು. ಬಳಿಕ ಹರಿಯಾಣ ಮೂಲಕ ಅವರನ್ನು ತಮ್ಮ ರಾಜ್ಯಕ್ಕೆ ಕರೆದುಕೊಂಡು ಹೋಗುವಾಗ ಇಲ್ಲಿನ ಪೊಲೀಸರೇ ಪಂಜಾಬ್ ಪೊಲೀಸರನ್ನು ತಡೆದು ಬಗ್ಗಾರನ್ನು ಬಿಡಿಸಿದ್ದರು. ಈ ಪ್ರಕರಣದಲ್ಲಿ ದಿಲ್ಲಿಗೆ ಬಂದು ಬಗ್ಗಾರನ್ನು ಬಂಧಿಸಲು ಪಂಜಾಬ್ ಪೊಲೀಸರಿಗೆ ಅಧಿಕಾರವಿಲ್ಲ ಎಂಬುದು ಬಗ್ಗಾ ಅವರ ವಾದ. ಕಡೆಗೆ ಇದು ಕೋರ್ಟ್‌ಗೆ ಹೋಗಿ, ಬಿಸಿ ಪಡೆದುಕೊಂಡಿತ್ತು.
ಬಗ್ಗಾ ಕೇಸಿನಲ್ಲಿ ಪಾಲಿಸಲಾಗಿದೆಯೇ?
ಬಗ್ಗಾ ಕೇಸಿನಲ್ಲಿ ಪಂಜಾಬ್ ಪೊಲೀಸರು, ವಾರಂಟ್ ಇಲ್ಲದೆಯೇ ಬಂಧಿ ಸಿದ್ದರು. ಹಾಜರಾಗುವಂತೆ 5 ಬಾರಿ ನೋಟಿಸ್ ನೀಡಿದ್ದರೂ ಬಂದಿಲ್ಲ. ಹೀಗಾಗಿ ಬಂಧಿಸಿದ್ದೇವೆ ಎಂದಿದ್ದರು. ಆದರೆ ಸಂವಿಧಾನದ ಆರ್ಟಿಕಲ್ 22(2)ರ ಪ್ರಕಾರ ಯಾವುದೇ ವ್ಯಕ್ತಿಯನ್ನು ಬಂಧಿಸಿದರೂ 24 ಗಂಟೆಯೊಳಗೆ ಹತ್ತಿರದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು.
ಬಂಧನಕ್ಕೆ ಮಾರ್ಗಸೂಚಿಗಳೇನು?
ಸಿಆರ್‌ಪಿಸಿ ಸೆಕ್ಷನ್ 79ರ ಪ್ರಕಾರ, ಪೊಲೀಸರು ಕೋರ್ಟ್ ವಾರಂಟ್‌ನೊಂದಿಗೆ ಇನ್ನೊಂದು ರಾಜ್ಯಕ್ಕೆ ಹೋಗಿ ವ್ಯಕ್ತಿಯೊಬ್ಬನನ್ನು ಬಂಧಿಸಬಹುದು. ಹಾಗೆಯೇ ಸೆಕ್ಷನ್ 48ರ ಪ್ರಕಾರ, ಪೊಲೀಸ್ ಅಧಿಕಾರಿಯೊಬ್ಬರು ವಾರಂಟ್ ಸಹಿತ ಅಥವಾ ರಹಿತವಾಗಿ ದೇಶದ ಯಾವ ಮೂಲೆಯಲ್ಲಾದರೂ ಸರಿ ವ್ಯಕ್ತಿಯೊಬ್ಬನನ್ನು ಬಂಧಿಸಬಹುದು. ಆದರೆ ಈ ಬಂಧನದ ವೇಳೆ ಪಾಲಿಸಬೇಕಾದ ಕ್ರಮಗಳು ಏನು ಎಂಬ ಬಗ್ಗೆ ವಿವರಣೆ ಇಲ್ಲ.
ಕೋರ್ಟ್ ಹೇಳುವುದೇನು?
ಹೊರರಾಜ್ಯದ ವ್ಯಕ್ತಿಯೊಬ್ಬನನ್ನು ಬಂಧಿಸುವ ವೇಳೆ ಪೊಲೀಸ್ ಅಧಿಕಾರಿಗಳು, ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಒಪ್ಪಿಗೆ ಪಡೆಯಬೇಕು. ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇವರಿಗೆ ಸ್ಥಳೀಯ ಪೊಲೀಸರು ಎಲ್ಲ ರೀತಿಯ ಸಹಾಯ ಮಾಡಬೇಕು.
ಈ ನಿಯಮಗಳು ಪಾಲನೆಯಾಗುತ್ತಿವೆಯೇ?
ಪೊಲೀಸರು ಹೇಳುವ ಪ್ರಕಾರ, ಬಹುತೇಕ ಎಲ್ಲ ಪ್ರಕರಣಗಳಲ್ಲಿಯೂ ನಾವು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತೇವೆ. ಒಂದು ವೇಳೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರೆ, ಕಾರ್ಯಾಚರಣೆ ಕೈತಪ್ಪಬಹುದು ಎಂಬ ಸಂದರ್ಭದಲ್ಲಿ ಮಾತ್ರ ಮುಚ್ಚಿಟ್ಟು, ಬಳಿಕ ಅವರಿಗೆ ಮಾಹಿತಿ ನೀಡುತ್ತೇವೆ. ಇಂಥವುಗಳಲ್ಲಿ ರಾಜಕೀಯ ಪ್ರಕರಣಗಳು ಮಾತ್ರ ತೊಂದರೆಯನ್ನುಂಟು ಮಾಡುತ್ತವೆ ಎಂದು ಪೊಲೀಸರು ಹೇಳುತ್ತಾರೆ.