ಹುಬ್ಬಳ್ಳಿ: ಬಡವರಿಗೆ ಕಡಿಮೆ ದರದಲ್ಲಿ ಉಪಾಹಾರ-ಊಟ ನೀಡಿಕೆ ಉದ್ದೇಶದೊಂದಿಗೆ ನಗರದಲ್ಲಿ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ಕೊರತೆ ಎದುರಾಗಿದೆ. ಇದೇ ಸ್ಥಿತಿ ಮುಂದುವರಿದರೆ ಕೆಲವೇ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ ಬೀಳಲಿದೆ. ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ ಹಲವು ಜನಪ್ರಿಯ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಕೂಡ ಒಂದಾಗಿತ್ತು. ಬೇರೆ ಕಡೆ ಹೋಲಿಸಿದರೆ ಹುಬ್ಬಳ್ಳಿಯಲ್ಲಿ ವಿಳಂಬವಾಗಿಯೇ ಆರಂಭಗೊಂಡಿದ್ದ ಕ್ಯಾಂಟೀನ್‌ಗಳು ವಿದ್ಯುತ್, ನೀರು ಸೌಲಭ್ಯಗಳ ಕೊರತೆ ಅನುಭವಿಸಿತ್ತು.
ಇದೀಗ ಅನುದಾನ ಕೊರತೆಯಿಂದ ತನ್ನ ಕೆಲಸವನ್ನೇ ನಿಲ್ಲಿಸುವ ಸ್ಥಿತಿಗೆ ಬಂದಿದೆ. ಒಂದೆಡೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಇನ್ನುಳಿದ ಎರಡು ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲು ಪಾಲಿಕೆ ಮೇಲೆ ಒತ್ತಡ ತರುತ್ತಿದ್ದರೆ, ಇನ್ನೊಂದೆಡೆ ಅವಳಿ ನಗರಗಳಲ್ಲಿ 9 ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆ ಗುತ್ತಿಗೆ ಪಡೆದಿರುವ ಮಯೂರ ಆದಿತ್ಯ ರೆಸಾರ್ಟ್, ಅನುದಾನ ಬಾಕಿಯಿಂದ ಸಂಕಷ್ಟ ಎದುರಿಸುವಂತಾಗಿದೆ. 2018ರ ಸೆಪ್ಟೆಂಬರ್‌ನಲ್ಲಿ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನಗಳು, ಕಳೆದ 10 ತಿಂಗಳಿಂದ ಅನುದಾನದ ಕೊರತೆಯಲ್ಲಿ ಸಾಗಿ ಬಂದಿವೆ ಎನ್ನಲಾಗಿದೆ.
ಕೋಟಿಗಟ್ಟಲೇ ಹಣ ಬಾಕಿ:
ಆದಿತ್ಯಾ ಮಯೂರ ರೆಸಾರ್ಟ್‌ನವರಿಗೆ ಇಲ್ಲಿಯವರೆಗೆ 35 ಲಕ್ಷ ರೂ. ನೀಡಲಾಗಿದ್ದು, ಇನ್ನೂ 2.65ಕೋಟಿ ರೂ. ಬಾಕಿ ಬರಬೇಕಾಗಿದೆ. ಅವಳಿ ನಗರಕ್ಕೆ 12 ಇಂದಿರಾ ಕ್ಯಾಂಟೀನ್ ಮಂಜೂರಾಗಿದ್ದು, ಒಂಭತ್ತು ಮಾತ್ರ ಆರಂಭಗೊಂಡಿವೆ. ಇಂದಿರಾ ಕ್ಯಾಂಟಿನ್‌ಗಳ ನೀರಿನ ಟ್ಯಾಂಕ್‌ಗಳು ಸೋರುತ್ತಿವೆ. ವಿದ್ಯುತ್ ವೈರಿಂಗ್ ಕಳಪೆ ಮಟ್ಟದ್ದಾಗಿದ್ದು, ಯಂತ್ರೋಪಕರಣಗಳು ಹಾಳಾಗುತ್ತಿವೆ. ಇರುವ ಬಾಯ್ಲರ್‌ಗಳು ಕಳಪೆ ಮಟ್ಟದಾಗಿವೆ. ಇದರಿಂದ ಕೆಲಸ ನಿರ್ವಹಣೆಗೂ ತೊಂದರೆಯಾಗುತ್ತಿದೆ ಎಂದು ನಿರ್ವಹಣಾಕಾರರು ಆರೋಪಿಸುತ್ತಿದ್ದಾರೆ. ಈ ಹಿಂದೆ ಗೋಕುಲ ರಸ್ತೆ ಹೊಸ ಬಸ್‌ನಿಲ್ದಾಣ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್‌ನ ವಿದ್ಯುತ್ ಮೀಟರ್ ಹಾಗೂ ವೈರಿಂಗ್ ಸುಟ್ಟು ಹೋಗಿದ್ದನ್ನು ಸ್ಮರಿಸಬಹುದಾಗಿದೆ.
ಸೋರುತ್ತಿರುವ ಕ್ಯಾಂಟೀನ್:
ಹು-ಧಾ ನಗರದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಕೆಲವೊಂದು ಭಾಗದಲ್ಲಿ ಸೋರುತ್ತಿವೆ. ಕಿಮ್ಸ್ ಹಿಂಭಾಗದಲ್ಲಿರುವ ಇಂದಿರಾ ಕ್ಯಾಂಟೀನ್ ಮಹಿಳಾ ಶೌಚಾಲಯದ ಮೇಲ್ಭಾಗದಲ್ಲಿ ಸೋರುತ್ತಿದೆ. ಇದೇ ರೀತಿ ಹಲವು ಕ್ಯಾಂಟೀನ್‌ಗಳು ಸೋರುತ್ತಿವೆ ಎನ್ನಲಾಗಿದೆ.
•ಬಸವರಾಜ ಹೂಗಾರ