Advertisement

ಜಿಎಸ್‌ಟಿ ದುಬಾರಿ?: ಮೂಲ ತೆರಿಗೆ ಹಂತ ಶೇ.5ರಿಂದ ಶೇ.9-10ಕ್ಕೆ ಏರಿಕೆ ಬಗ್ಗೆ ಮಾತುಕತೆ

10:13 AM Dec 09, 2019 | mahesh |

ಹೊಸದಿಲ್ಲಿ: ಒಂದು ದೇಶ, ಒಂದು ತೆರಿಗೆ ಶಿರೋನಾಮೆಯಲ್ಲಿ ಆರಂಭಗೊಂಡಿದ್ದ ಜಿಎಸ್‌ಟಿ ಸದ್ಯದಲ್ಲೇ ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆಗಳು ಗೋಚರಿಸಿವೆ. 2017ರ ಜುಲೈಯಲ್ಲಿ ಅದ್ದೂರಿಯಾಗಿ ಜಿಎಸ್‌ಟಿ ಜಾರಿ ಮಾಡಿದ್ದ ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ಅದನ್ನು ಆಮೂಲಾಗ್ರ ಪರಿಶೀಲನೆಗೆ ಒಳಪಡಿಸಲು ನಿರ್ಧರಿಸಿದೆ. ಹಾಗೆ ಮಾಡಿದ್ದೇ ಆದಲ್ಲಿ ಜಿಎಸ್‌ಟಿ ಸ್ಲ್ಯಾಬ್‌ ದರ ಹೆಚ್ಚಿ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

Advertisement

ಏನಾಗಲಿದೆ?
ಮೂಲ ತೆರಿಗೆ ಪ್ರಮಾಣವನ್ನು ಶೇ.5ರಿಂದ ಶೇ.9-10ಕ್ಕೆ ಏರಿಸಲು ಮತ್ತು ಸದ್ಯ ಇರುವ ಶೇ.12ರ ಸ್ಲ್ಯಾಬ್‌ ತೆಗೆದು ಹಾಕುವ ಬಗ್ಗೆ ಚಿಂತನೆಗಳು ನಡೆದಿವೆ ಎಂದು ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಶೇ.12ರ ಸ್ಲ್ಯಾಬ್‌ನಲ್ಲಿರುವ 243 ವಸ್ತುಗಳನ್ನು ಶೇ.18ರ ಸ್ಲಾéಬ್‌ಗ ವರ್ಗಾಯಿಸುವ ಬಗ್ಗೆಯೂ ಮಾತುಕತೆಗಳು ನಡೆದಿವೆ. ಈ ಬಗ್ಗೆ ಶೀಘ್ರದಲ್ಲಿಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧರಿಸಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಜಿಎಸ್‌ಟಿಗೆ ಸೇರ್ಪಡೆ
ಖಾಸಗಿ ಕ್ಷೇತ್ರದ ಆಸ್ಪತ್ರೆಗಳಲ್ಲಿ ನೀಡುತ್ತಿರುವ ದುಬಾರಿ ಚಿಕಿತ್ಸೆ, 1 ಸಾವಿರ ರೂ.ಗಳಿಗಿಂತ ಕಡಿಮೆ ಬಾಡಿಗೆ ಇರುವ ಹೊಟೇಲ್‌ ಕೊಠಡಿಗಳು, ಕಂಪೆನಿಗಳು ಭೋಗ್ಯಕ್ಕೆ ನೀಡುವ ದುಬಾರಿ ಮನೆಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲಾಗುತ್ತದೆ. ಎರಡೂವರೆ ವರ್ಷಗಳ ಹಿಂದೆ ಜಿಎಸ್‌ಟಿ ಜಾರಿಗೊಂಡ ಬಳಿಕ ನೂರಾರು ವಸ್ತುಗಳನ್ನು ಶೇ.14.4ರಿಂದ ಶೇ.11.6ರ ಸ್ಲ್ಯಾಬ್‌ಗ ತರಲಾಗಿದೆ. ಇದರಿಂದಾಗಿ 2 ಲಕ್ಷ ಕೋಟಿ ರೂ. ವಾರ್ಷಿಕ ಖೋತಾ ಉಂಟಾಗಿದೆ.

ಮಾಜಿ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯಂ ನೇತೃತ್ವದ ಸಮಿತಿ ಶಿಫಾರಸಿನಂತೆ ಶೇ.15.3ರ ದರದಲ್ಲಿಯೇ ಸ್ಲ್ಯಾಬ್‌ ಜಾರಿಗೆ ತಂದರೆ ನಷ್ಟದ ಪ್ರಮಾಣ 2.5 ಲಕ್ಷ ಕೋಟಿ ರೂ.ಗೆ ತಲುಪುವ ಸಾಧ್ಯತೆ ಇದೆ. ಜತೆಗೆ ದೇಶದ ಅರ್ಥ ವ್ಯವಸ್ಥೆಯ ಮೇಲೆ ಉಂಟಾಗಿರುವ ಕರಾಳ ಛಾಯೆ ರಾಜ್ಯ ಮತ್ತು ಕೇಂದ್ರ ಸರಕಾರಗಳ ತೆರಿಗೆ ಸಂಗ್ರಹಕ್ಕೂ ಪ್ರತಿಕೂಲವಾಗಿದೆ. ಇದರಿಂದ ಕೇಂದ್ರಕ್ಕೆ 13,750 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ. ಮುಂದಿನ ವಿತ್ತೀಯ ವರ್ಷದಲ್ಲಿ ಆದಾಯ ಸಂಗ್ರಹ ಪ್ರಮಾಣ ಶೇ.14ಕ್ಕಿಂತ ಕುಸಿದರೆ ಪ್ರತಿ ತಿಂಗಳು ಪಾವತಿ ಮಾಡಬೇಕಾಗಿರುವ ಮತ್ತು ಪರಿಹಾರ ನೀಡಿಕೆಯ ಒಟ್ಟಾರೆ ಮೊತ್ತ 20 ಸಾವಿರ ಕೋಟಿ ರೂ.ಗಳಿಗೆ ಏರುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರಕಾರಗಳಿಗೇ ಹಲವು ಆಯ್ಕೆಗಳನ್ನು ಮುಂದಿಡುವ ಸಾಧ್ಯತೆ ಇದೆ.

ಲಾಭವಾಗದು?
ಜಿಎಸ್‌ಟಿ ಮಂಡಳಿಯು ಪರಿಹಾರ ನೀಡಿಕೆ ಮೇಲಿನ ಸೆಸ್‌ ಅನ್ನು ಪರಿಶೀಲಿಸಲು ಸಲಹೆ ನೀಡಿರುವಂತೆಯೇ ಕಾರು ಮತ್ತು ಇತರ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದರೆ ಲಾಭವೇನೂ ಆಗದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿಯೇ ತೆರಿಗೆ ಪ್ರಮಾಣ ಪರಿಷ್ಕರಿಸಬೇಕು ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಒಂದು ವೇಳೆ ಅದು ಜಾರಿಯಾದರೆ ಶೇ.12.5ರಿಂದ ಶೇ.12.75ರ ನಡುವೆ ಇರಬಹುದು ಎನ್ನಲಾಗಿದೆ. ಇದು ಹಣದುಬ್ಬರ ಹೆಚ್ಚಳವಾಗಲು ಕಾರಣ ವಾಗುತ್ತದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರಾದರೂ ಹಾಗೇನೂ ಆಗದು ಎಂದು ಕೇಂದ್ರದ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

Advertisement

ವೇತನದಾರರಿಗೆ ಐಟಿ ಕಡಿತದ ಖುಷಿ?
ಮುಂಬರುವ ಬಜೆಟ್‌ನಲ್ಲಿ ವೇತನದಾರರಿಗೆ ಸಂತಸದ ಸುದ್ದಿ ಸಿಗುವ ಸಾಧ್ಯತೆಗಳಿವೆ. ಈ ಬಗ್ಗೆ ಸ್ವತಃ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸುಳಿವು ನೀಡಿದ್ದಾರೆ. ಹೊಸದಿಲ್ಲಿಯಲ್ಲಿ ಶನಿವಾರ ನಡೆದ ಹಿಂದೂಸ್ತಾನ್‌ ಟೈಮ್ಸ್‌ ನಾಯಕತ್ವ ಶೃಂಗದಲ್ಲಿ ಮಾತನಾಡಿದ ಅವರು, ಒಟ್ಟಾರೆಯಾಗಿ ನಮ್ಮ ಆದ್ಯತೆ ತೆರಿಗೆ ಪ್ರಮಾಣವನ್ನು ತಗ್ಗಿಸುವುದೇ ಆಗಿದೆ ಎಂದರು. ಜತೆಗೆ ಪ್ರಮಾಣ ಎಷ್ಟು ಎಂಬುದರ ಸಹಿತ ಎಲ್ಲ ಮಾಹಿತಿಗಳಿಗೆ ಮುಂದಿನ ಬಜೆಟ್‌ ವರೆಗೂ ಕಾಯಿರಿ ಎಂದೂ ಹೇಳಿದರು.

ದೇಶದ ಅರ್ಥ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರಕಾರ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲಿದೆ ಎಂದ ವಿತ್ತ ಸಚಿವೆ, ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ ಅನುಕೂಲಕರ ನಿರ್ಧಾರಗಳು ಶೀಘ್ರದಲ್ಲಿಯೇ ಜಾರಿಯಾಗಲಿವೆ. ವೈಯಕ್ತಿಕ ಆದಾಯ ತೆರಿಗೆ ಪ್ರಮಾಣ ಸೇರಿದಂತೆ ಅರ್ಥ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಮತ್ತಷ್ಟು ಕ್ರಮಗಳು ಪರಿಶೀಲನೆಯಲ್ಲಿವೆ ಎಂದರು.

ಸದ್ಯ ಶೇ.5ರ ವ್ಯಾಪ್ತಿ ಬ್ರ್ಯಾಂಡೆಡ್‌ ಸಿರಿಧಾನ್ಯಗಳು, ಪನೀರ್‌, ಕೈಗೆಟಕುವ ದರದ ವಿಮಾನ ಯಾನ, ಮೊದಲ ಮತ್ತು ಎರಡನೇ ದರ್ಜೆ ಎ.ಸಿ. ರೈಲು ಯಾನ, ತಾಳೆ ಎಣ್ಣೆ, ಆಲಿವ್‌ ಎಣ್ಣೆ, ಪಿಜಾl, ಕೊಕಾ ಪೇಸ್ಟ್‌, ಒಣ ಹಣ್ಣುಗಳು, ರೇಷ್ಮೆ, ಲಿನನ್‌ನಿಂದ ಸಿದ್ಧಗೊಂಡ ವಸ್ತ್ರಗಳು, ವಿಲಾಸಿ ನೌಕಾ ಯಾನ, ದೋಣಿ ವಿಹಾರ, ಪ್ರವಾಸಿ ಸೇವೆಗಳು, ಕೇಟರಿಂಗ್‌ ಸೇವೆಗಳು, ರೆಸ್ಟೋರೆಂಟ್‌ಗಳು.

ಶೇ.12ರ ವ್ಯಾಪ್ತಿ ಮೊಬೈಲ್‌ ಫೋನ್‌ಗಳು, ಬಿಸಿನೆಸ್‌ ಕ್ಲಾಸ್‌ ವಿಮಾನ ಯಾನ, ಸರಕಾರಿ ಪ್ರಾಯೋಜಿತ ಲಾಟರಿಗಳು, ದುಬಾರಿ ತೈಲ ಚಿತ್ರಗಳು, 5 ಸಾವಿರ ರೂ.ಗಳಿಂದ 7,500 ರೂ. ವರೆಗಿನ ಹೊಟೇಲ್‌ ವಾಸ್ತವ್ಯ.

ಜಿಎಸ್‌ಟಿ ವ್ಯಾಪ್ತಿಗೆ ತರಲು ಉದ್ದೇಶಿಸಿರುವ ಸೇವೆಗಳು
ಖಾಸಗಿ ಕ್ಷೇತ್ರದ ದುಬಾರಿ ಆಸ್ಪತ್ರೆ ಸೇವೆಗಳು, 1 ಸಾವಿರ ರೂ.ಗಳಿಗಿಂತ ಕಡಿಮೆ ಬಾಡಿಗೆಯ ಹೊಟೇಲ್‌ ಕೊಠಡಿಗಳು, ಬ್ರ್ಯಾಂಡ್‌ ರಹಿತ ಪನೀರ್‌, ಕಚ್ಚಾ ರೇಷ್ಮೆ, ಶೇಂದಿ, ಕಂಪೆನಿಗಳು ಭೋಗ್ಯಕ್ಕೆ ನೀಡುವ ದುಬಾರಿ ವೆಚ್ಚದ ಮನೆಗಳು.

Advertisement

Udayavani is now on Telegram. Click here to join our channel and stay updated with the latest news.

Next