Advertisement

ಬಿಜೆಪಿ ಜತೆ ಸೇರಿದರೆ ಮಾತ್ರ ಎಲ್ಲರೂ ಪ್ರಾಮಾಣಿಕರಾಗ್ತಾರ?

11:25 AM Jul 30, 2017 | Team Udayavani |

ಬೆಂಗಳೂರು: ಇಡೀ ದೇಶ ಕೇಸರಿಮಯ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷರು ಹೊರಟಿದ್ದಾರೆ. ಬಿಹಾರ ಹಾಗೂ ಗುಜರಾತ್‌ ವಿದ್ಯಮಾನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ತರುವಂತದ್ದಲ್ಲ. ಬಿಜೆಪಿ ಜತೆ ಸೇರಿದ ತಕ್ಷಣ ಎಲ್ಲರೂ ಪ್ರಾಮಾಣಿಕರಾಗಿ ಬಿಡ್ತಾರಾ, ಇದು ಕುತಂತ್ರವಲ್ಲವೇ?ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ. 

Advertisement

ಗಾಂಧಿನಗರದಲ್ಲಿ ಜೆಡಿಎಸ್‌ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಸಂಸತ್ತಿನಲ್ಲಿ 282 ಸ್ಥಾನ ಸಿಕ್ಕರೂ ಇವರಿಗೆ ಸಮಾಧಾನ ಇದ್ದಂತಿಲ್ಲ. ಒಂದು ಕಡೆ ಕಾಂಗ್ರೆಸ್‌, ಮತ್ತೂಂದು ಕಡೆ ಆರ್‌ಜೆಡಿ, ಮಗದೊಂದು ಕಡೆ ಇನ್ನೊಂದು ಪ್ರತಿಪಕ್ಷ ಹಣೆಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.

ಬಿಹಾರದಲ್ಲಿ ನಿತೀಶ್‌ಕುಮಾರ್‌ ಸಂಜೆ ರಾಜೀನಾಮೆ ಕೊಡ್ತಾರೆ, ಬೆಳಗ್ಗೆ ಮತ್ತೆ ಮುಖ್ಯಮಂತ್ರಿಯಾಗ್ತಾರೆ. ಹದಿನೈದು ಗಂಟೆಯೊಳಗೆ ಆರ್‌ಜೆಡಿ-ಜೆಡಿಎಯು ಸರ್ಕಾರ ಹೋಗಿ, ಜೆಡಿಯು-ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ. ಇದು ಪ್ರಜಾಪ್ರಭುತ್ವದ ಅಣಕವಲ್ಲವೇ? ಎಂದರು.

ಚುನಾವಣೆ ವೇಳೆ ಲಾಲೂ ಪ್ರಸಾದ್‌ರನ್ನು ತಬ್ಬಿಕೊಂಡಿದ್ರು. ಆಗ ಲಾಲೂ ಜತೆಗೂಡದಿದ್ದರೆ ಜೆಡಿಯುಗೆ 71 ಸ್ಥಾನ ಬರುತ್ತಿತ್ತಾ ಎಂದು ಪ್ರಶ್ನಿಸಿದ ಗೌಡರು, ಬಿಜೆಪಿ ಜತೆ ಸೇರಿದ ತಕ್ಷಣ ಎಲ್ಲರೂ ಪ್ರಾಮಾಣಿಕರಾಗಿ ಬಿಡ್ತಾರಾ, ಇದು ಕುತಂತ್ರವಲ್ಲವೇ? ಜನ ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದಾರೆಂದು ಹೇಳಿದರು.

ಭಾರತ ಕೇಸರಿಮಯ:  ಐವತ್ತು ವರ್ಷ ದೇಶ ಆಳಿದ ಕಾಂಗ್ರೆಸ್‌ ಇತ್ತೀಚಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ನಾಲ್ಕೈದು ರಾಜ್ಯ ಬಾಕಿಯಿದ್ದು, ಅದೂ ಹೋದರೆ ಇಡೀ ಭಾರತ ಕೇಸರಿಮಯವಾಗುತ್ತದೆ. ಬಿಜೆಪಿಯವರಿಗೆ ಅದೇ ಆನಂದ ಎಂದು ವ್ಯಂಗ್ಯವಾಡಿದರು.

Advertisement

ಒಂದೇ ರಾಷ್ಟ್ರ, ಒಂದೇ ಕಾನೂನು, ಒಂದೇ ಧರ್ಮ ಅಂತಾರೆ. ಆಹಾರ ಪದ್ಧತಿ ಇದೇ ಇರಬೇಕು ಅಂತಾರೆ. ಇದನ್ನು ಹೇಳ್ಳೋದಕ್ಕೆ ಇವರಿಗೆ ಅಧಿಕಾರ ಕೊಟ್ಟೋರ್ಯಾರು ಎಂದು ಕಿಡಿಕಾರಿದರು. ರಾಜ್ಯ ಸರ್ಕಾರ ಭಾಗ್ಯಗಳನ್ನು ಕೊಡುತ್ತಲೇ ಇದೆ. ಆದರೆ, ರಾಜ್ಯದಲ್ಲಿ ಬಡತನ, ನಿರುದ್ಯೋಗ, ರೈತರ ಸಮಸ್ಯೆ ಯಾವುದೂ ಬಗೆಹರಿದಿಲ್ಲ. ಇನ್ನೂ ಯಾವ ಭಾಗ್ಯ ಉಂಟೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಒಂದೇ ದಿನ ಎರಡು ಸಮಾವೇಶ: ಗಾಂಧಿನಗರ ಹಾಗೂ ಚಾಮಜರಾಪೇಟೆ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶನಿವಾರ ಎರಡು ಸಮಾವೇಶದಲ್ಲಿ ಎಚ್‌.ಡಿ.ದೇವೇಗೌಡರು ಪಾಲ್ಗೊಂಡರು. ರಾಜ್ಯದ ಹಿತಾಸಕ್ತಿ ಕಾಪಾಡುವ ಏಕೈಕ ಪಕ್ಷ ಜೆಡಿಎಸ್‌. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಕೋರಿದರು.

ಪಕ್ಷಕ್ಕೆ ಸೆಡ್ಡು ಹೊಡೆದಿರುವ ಜಮೀರ್‌ ಅಹಮದ್‌ ಪ್ರತಿನಿಧಿಸುವ ಚಾಮರಾಜಪೇಟೆ ಕ್ಷೇತ್ರದಲ್ಲಿ ಕಳೆದ ಹತ್ತು ದಿನಗಳಲ್ಲಿ ನಡೆಯುತ್ತಿರುವ ಎರಡನೇ ಸಮಾವೇಶ ಇದಾಗಿದೆ. ಭಿನ್ನಮತೀಯ ಶಾಸಕರ ಕ್ಷೇತ್ರಗಳನ್ನು “ಟಾರ್ಗೆಟ್‌’ ಮಾಡಿರುವ ಗೌಡರು ನಿರಂತರ ಸಭೆ, ಸಮಾವೇಶ ಆಯೋಜಿಸಲು ಸೂಚನೆ ನೀಡಿದ್ದಾರೆ.

ಚಾಮಜರಾಪೇಟೆಗೆ ಎರಡೆರಡು ಬಾರಿ ಸಮಾವೇಶಕ್ಕೆ ಬಂದಿದ್ದಾರೆ ಎಂದು ಯಾರೂ ಭಾವಿಸುವುದು ಬೇಡ. 2008 ರಿಂದ ಸಾಕಷ್ಟು ಮಂದಿ ಪಕ್ಷ ಬಿಟ್ಟು ಹೋಗಿದ್ದಾರೆ. ಇದೇ ಕ್ಷೇತ್ರದಲ್ಲಿ ಗೆದ್ದವರು ಮಹಾರಾಷ್ಟ್ರ ರಾಜ್ಯಪಾಲರಾಗಿ ಹೋದರು. ನಂತರ ನಡೆದ ಉಪ ಚುನಾವಣೆಯಲ್ಲಿ ಹೋರಾಟ ಮಾಡಿ ಗೆಲುವು ಸಾಧಿಸಿದೆವು. ಪಕ್ಷ ಮುಖ್ಯ, ವ್ಯಕ್ತಿಯಲ್ಲ. ಡಿಸೆಂಬರ್‌ನಲ್ಲೇ ಚುನಾವಣೆ ನಡೆಯಬಹುದು. ಜೆಡಿಎಸ್‌ಗೆ ಉತ್ತಮ ಭವಿಷ್ಯವಿದೆ.
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next