Advertisement

ನರೇಗಾಕ್ಕೆ ನೀತಿ ಸಂಹಿತೆ ಬಿಸಿ?

07:19 AM Mar 12, 2019 | Team Udayavani |

ಧಾರವಾಡ: ಒಂದೆಡೆ ಭೀಕರ ಬರಗಾಲ, ಇನ್ನೊಂದೆಡೆ ಲೋಕಸಭೆ ಚುನಾವಣೆ ಘೋಷಣೆ. ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ತಿಂಗಳ ಮಟ್ಟಿಗೆ ಬ್ರೇಕ್‌ ಬಿದ್ದಿತೇ? ಇಂತಹದ್ದೊಂದು ಪ್ರಶ್ನೆ ಜಿಲ್ಲೆಯ ಗ್ರಾಮೀಣ ಜನರನ್ನು ಕಾಡುತ್ತಿದ್ದು ನರೇಗಾ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗ್ರಾಮಸ್ಥರಲ್ಲಿ ಗೊಂದಲ ಉಂಟಾಗಿದೆ.

Advertisement

ಜಿಲ್ಲೆಯ ಹಳ್ಳಿಗಳಲ್ಲಿ ಬಿರು ಬೇಸಿಗೆ ಮತ್ತು ಬರದ ಮಧ್ಯೆ ಕೆರೆ ಹೂಳೆತ್ತುವುದು, ಹೊಲಗಳ ಬದು ನಿರ್ಮಾಣ, ಕೃಷಿ ಹೊಂಡಗಳ ನಿರ್ಮಾಣ, ಕಚ್ಚಾ ರಸ್ತೆಗಳ ನಿರ್ಮಾಣ, ಹೊಲದ ರಸ್ತೆಗಳ ಮೇಲ್ಧರ್ಜೆಗೇರಿಸುವುದು, ಕೆರೆ ಕಟ್ಟೆಗಳ ನಿರ್ವಹಣೆ ಸೇರಿದಂತೆ ಹತ್ತಾರು ಯೋಜನೆಗಳು ಕಳೆದ ಒಂದು ತಿಂಗಳಿನಿಂದ ಬಿರುಸು ಪಡೆದುಕೊಂಡಿದ್ದವು.

ಆದರೆ, ಮಾ. 10ರಂದು ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆ-2019ರ ದಿನಾಂಕ ಘೋಷಣೆ ಮಾಡಿ ತಕ್ಷಣದಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಗೊಳಿಸಿದ್ದರಿಂದ ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ಅನೇಕ ಬರ ನಿರ್ವಹಣೆ ಕಾಮಗಾರಿಗಳು ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ಸ್ಥಗಿತಗೊಳ್ಳುತ್ತವೆ ಎನ್ನುವ ಭಯ ಕಾಡುತ್ತಿದೆ. 

ಸದ್ಯಕ್ಕೆ ಜಿಲ್ಲೆಯ 134 ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 16,867 ನರೇಗಾ ಯೋಜನೆ ವಿವಿಧ ಕಾಮಗಾರಿ ಆಗಬೇಕಿದ್ದು, ಈ ಪೈಕಿ 6062 ಕಾಮಗಾರಿಗಳು ಮಾತ್ರ ಮುಕ್ತಾಯವಾಗಿವೆ. ಪ್ರಸ್ತುತ 6938 ಕಾಮಗಾರಿಗಳು ನಡೆಯುತ್ತಿದ್ದು, ಈ ಪೈಕಿ 849 ಸಮುದಾಯಿಕ ಕಾಮಗಾರಿಗಳಿದ್ದು, ಇನ್ನುಳಿದ 6089 ಕಾಮಗಾರಿಗಳು ವೈಯಕ್ತಿಕವಾಗಿವೆ. ಇಂತಿಪ್ಪ ಕಾಮಗಾರಿಗಳನ್ನು ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಅರ್ಧಕ್ಕೆ ನಿಲ್ಲಿಸುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿದ್ದು, ರೈತ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

3867 ಕಾಮಗಾರಿ ಬಾಕಿ: ಜಿಲ್ಲೆಯಲ್ಲಿ ಭೀಕರ ಬರಗಾಲ ಇರುವ ಹಿನ್ನೆಲೆಯಲ್ಲಿ ರೈತರಿಗೆ ಮತ್ತು ಕೂಲಿಕಾರ್ಮಿಕರಿಗೆ ಅನುಕೂಲವಾಗಲೆಂದು ನಿಯೋಜಿಸಿರುವ 3867 ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಈ ಪೈಕಿ 329 ಕಾಮಗಾರಿಗಳು ಸಮುದಾಯಿಕ ಕಾಮಗಾರಿಗಳಿದ್ದರೆ 3538 ಕಾಮಗಾರಿಗಳು ವೈಯಕ್ತಿಕ ಕಾಮಗಾರಿಗಳು. ಈಗಾಗಲೇ ಈ ಕಾಮಗಾರಿಗಳಿಗೆ ಜಿಪಂ ಅಸ್ತು ಎಂದಿದ್ದರೂ ತಾಂತ್ರಿಕ ಕಾರಣಗಳಿಂದ ಈ ಕಾಮಗಾರಿಗಳು ಆರಂಭಗೊಂಡಿಲ್ಲ ಎನ್ನುತ್ತಿದ್ದಾರೆ ಗುತ್ತಿಗೆದಾರರು.

Advertisement

ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಕುರುಹು ಅರಿತ ಧಾರವಾಡ ಜಿಲ್ಲಾಡಳಿತ ಮತ್ತು ಜಿಪಂ ಮುಂಗಡವಾಗಿಯೇ ನೂರು ಮಾನವ ದಿನಗಳ ಸೃಜನೆ ಮತ್ತು ಹೆಚ್ಚುವರಿಯಾಗಿ ಸಮುದಾಯಿಕ ಯೋಜನೆಗಳಿಗೆ 50 ದಿನಗಳ ಹೆಚ್ಚುವರಿ ಮಾನವ ದಿನ ಸೃಜನೆಗೆ ಕಳೆದ ತಿಂಗಳೇ ಅನುಮತಿ ನೀಡಿತ್ತು. ಹೀಗಾಗಿ ಜಿಲ್ಲೆಯಲ್ಲಿ ಕಾಮಗಾರಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೂ, ಅವುಗಳ ಅನುಷ್ಠಾನ ವಿಳಂಬವಾಗುತ್ತಿದೆ.

ಯಾವ ಕಾಮಗಾರಿಗಳು ಓಕೆ?: ನೀತಿ ಸಂಹಿತೆ ಜಾರಿಯಾಗಿದ್ದರಿಂದ ಸದ್ಯಕ್ಕೆ ಸಮುದಾಯದ ವತಿಯಿಂದ ನಡೆಯುವ ದೊಡ್ಡ ದೊಡ್ಡ ಕಾಮಗಾರಿಗಳಿಗೆ ಮಾತ್ರ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಚೆಕ್‌ಡ್ಯಾಂ ನಿರ್ಮಾಣ, ರಸ್ತೆ ನಿರ್ಮಾಣ, ಕೆರೆ ಹೂಳೆತ್ತುವುದು ಸೇರಿದಂತೆ ಗ್ರಾಮಗಳಲ್ಲಿನ ಸಮುದಾಯಿಕ ಕಾಮಗಾರಿಗಳು ನಡೆಯಲಿವೆ. ಆದರೆ ವೈಯಕ್ತಿಕ ಯೋಜನೆಗಳ ಫಲಾನುಭವಿಗಳು ಬಳಸಿಕೊಳ್ಳುವ ಮನೆಯಲ್ಲಿ ದನಗಳ ಹಟ್ಟಿ ನಿರ್ಮಾಣ, ದನಗಳ ಮೇವಿನ ತೊಟ್ಟಿ ನಿರ್ಮಾಣಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡ ಬರಲಿದೆ. 

ಎಲ್ಲಕ್ಕಿಂತ ಹೆಚ್ಚಾಗಿ ಈ ಮುಂಚೆಯೇ ಅಂದರೆ ಮಾ. 10ರ ಒಳಗಾಗಿ ಪ್ರಸ್ತಾವನೆ ಸಲ್ಲಿಕೆಯಾಗಿರುವ, ಜಿಪಂನಲ್ಲಿ ಕ್ರಿಯಾ ಯೋಜನೆ ಒಪ್ಪಿಗೆ ಪಡೆದು ಕಾರ್ಯಾದೇಶ (ವರ್ಕ್‌ಆರ್ಡರ್‌) ಪಡೆದುಕೊಂಡ ಯಾವುದೇ ಯೋಜನೆಗಳು ನಿಲ್ಲುವುದಿಲ್ಲ. ಒಂದು ವೇಳೆ ಅಂತಹ ಕಾಮಗಾರಿಗಳು ಅರ್ಧ ಆಗಿದ್ದರೂ ಅವುಗಳನ್ನು ಪೂರ್ಣಗೊಳಿಸಬಹುದು. ಆದರೆ ನೂತನ ಪ್ರಸ್ತಾವನೆ, ಕ್ರಿಯಾಯೋಜನೆಗೆ ಅನುಮತಿ ನೀಡಲು ಅವಕಾಶವಿಲ್ಲವಾದಂತಾಗಿದೆ.

ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾದರೂ ಉದ್ಯೋಗ ಖಾತ್ರಿಯಡಿ ಜನರು ಕೆಲಸ ಮಾಡುವುದಕ್ಕೆ ಅಗತ್ಯವಿದ್ದಷ್ಟು ಕಾಮಗಾರಿಗಳಿಗೆ ಒಪ್ಪಿಗೆ ಕೊಡಲಾಗಿದೆ. ಹೀಗಾಗಿ ಉದ್ಯೋಗ ಖಾತ್ರಿಯಡಿ ಕೆಲಸ ನಿರ್ವಹಿಸುವ ಸಮುದಾಯಿಕ ಚಟುವಟಿಕೆಗಳನ್ನು ಯಾರೂ ನಿಲ್ಲಿಸಬಾರದು. ಅಗತ್ಯ ಬಿದ್ದರೆ ಹೂಳೆತ್ತುವ ಕಾಮಗಾರಿಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು.
 ಡಾ| ಬಿ.ಸಿ. ಸತೀಶ,ಜಿಪಂ ಸಿಇಒ

ಕೆರೆ ಹೂಳೆತ್ತುವ ಕಾಮಗಾರಿಗಳಿಗೆ ಇನ್ನಷ್ಟು ಹಣ ನೀಡಬೇಕು. ಎಲ್ಲಾ ಹಳ್ಳಿಗಳಲ್ಲೂ ರೈತರು ಸ್ವಂತ ಟ್ರ್ಯಾಕ್ಟರ್‌ ಗಳನ್ನು ಬಳಸಿ ತಮ್ಮ ಹೊಲಗಳಿಗೆ ಮಣ್ಣು ಬಿಡುತ್ತಿದ್ದಾರೆ. ಆದರೆ ಹಣದ ಕೊರತೆ ನೆಪ ಹೇಳಿ ಗುತ್ತಿಗೆದಾರರು ಕೇವಲ ಎರಡು ದಿನಗಳು ಮಾತ್ರ ಮಣ್ಣು ತುಂಬಿಸುತ್ತಿದ್ದಾರೆ. 
 ಎಸ್‌.ಬಿ. ಪಾಟೀಲ, ಕಣವಿ ಹೊನ್ನಾಪುರ ರೈತ

„ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next