ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸೇನಾ ಅಧಿಕಾರಿಗೆ ಕಿಡ್ನಿ ದಾನ ಮಾಡಲು ಸ್ವಯಂಪ್ರೇರಿತವಾಗಿ ಮುಂದೆ ಬಂದ ಮಹಿಳೆಗೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳ ಕಾರ್ಯವೈಖರಿಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕಿಡ್ನಿ ದಾನಕ್ಕೆ ಅನುಮತಿ ನೀಡಲು ವಿಳಂಬ ಮಾಡುತ್ತಿರುವ ಸರ್ಕಾರದ ಕ್ರಮ ಪ್ರಶ್ನಿಸಿ ವರ್ಷಾ ಶರ್ಮಾ ಎಂಬುವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾ.ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ದೇಶಕ್ಕಾಗಿ ತ್ಯಾಗ ಮನೋಭಾವದಿಂದ ಸೇವೆ ಸಲ್ಲಿಸುವ ಸೇನೆಯ ಅಧಿಕಾರಿಗೆ ಕಿಡ್ನಿ ದಾನ ನೀಡಲು ಮುಂದಾಗಿರುವ ಮಹಿಳೆಗೆ ಅನುಮತಿ ನೀಡಲು ಹೀಗೇಕೆ ವಿಳಂಬ ಧೋರಣೆ ಅನುಸರಿಸುತ್ತೀದ್ದೀರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಅಲ್ಲದೆ, ಕಿಡ್ನಿ ದಾನಕ್ಕೆ ಅನುಮತಿ ಕೋರಿ ಅರ್ಜಿದಾರರು ಸಲ್ಲಿಸಿರುವ ಮನವಿ ಸಂಬಂಧ ಇಂದೇ ಸಕ್ಷಮ ಪ್ರಾಧಿಕಾರ ಸಭೆ ನಡೆಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚನೆ ನೀಡಿತು.
ಈ ವೇಳೆ ಸರ್ಕಾರದ ಪರ ವಕೀಲರು ಪ್ರತಿಕ್ರಿಯಿಸಿ, ಕಿಡ್ನಿ ಕಸಿಗೆ ಅನುಮತಿ ಪರಿಶೀಲಿಸುವ ಕರ್ನಾಟಕ ಅಂಗಾಂಗ ಕಸಿ ಪ್ರಾದೇಶಿಕ ಸಮನ್ವಯ ಸಮಿತಿ ಸದಸ್ಯರಲ್ಲಿ ಒಬ್ಬ ಸದಸ್ಯರ ಕೋರಂ ಕಡಿಮೆಯಿದೆ. ಹೀಗಾಗಿ, ಎರಡು ದಿನ ಕಾಲಾವಕಾಶ ನೀಡಬೇಕು ಎಂದು ಕೋರಿದರಲ್ಲದೆ, ವರ್ಷಾ ಶರ್ಮಾ ಅವರ ಮನವಿ ಸಂಬಂಧ ಎರಡು ದಿನದಲ್ಲಿ ನಿರ್ಧಾರ ಕೈಗೊಳ್ಳುವ ಬಗ್ಗೆ ಆರೋಗ್ಯ ಇಲಾಖೆ ಕಾರ್ಯದರ್ಶಿಯವರೇ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದರು.
ಪ್ರಕರಣ ಏನು?: ಭಾರತೀಯ ಸೇನೆಯ ನೈರುತ್ಯ ವಿಭಾಗದ ಕಮಾಂಡೆಂಟ್ ಪುಣೆಯ ಕೇಂದ್ರ ಕಚೇರಿಯಲ್ಲಿ ಮುಖ್ಯ ಅಭಿಯಂತರ ಹುದ್ದೆಯಲ್ಲಿರುವ 49 ವರ್ಷದ ಕರ್ನಲ್ ಪಂಕಜ್ ಭಾರ್ಗವ 2017ರ ಆಗಸ್ಟ್‌ನಲ್ಲಿ ಅನಾರೋಗ್ಯದಿಂದಾಗಿ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದು, ಕಳೆದ ನವೆಂಬರ್‌ನಲ್ಲಿ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕಿಡ್ನಿ ಕಸಿ ಅನಿವಾರ್ಯವಾಗಿದ್ದರಿಂದ ಕುಟುಂಬದ ಸ್ನೇಹಿತೆಯಾಗಿರುವ ಮುಂಬೈ ಮೂಲದ ವರ್ಷಾ ಶರ್ಮಾ, ತನ್ನ ಒಂದು ಕಿಡ್ನಿಯನ್ನು ದಾನವಾಗಿ ಪಂಕಜ್ ಭಾರ್ಗವ ಅವರಿಗೆ ನೀಡಲು ಮುಂದಾಗಿದ್ದರು. ಅದರಂತೆ ಕಿಡ್ನಿ ದಾನಕ್ಕೆ ಅನುಮತಿ ನೀಡುವಂತೆ ಸಕ್ಷಮ ಪ್ರಾಧಿಕಾರವಾದ ಕರ್ನಾಟಕ ಅಂಗಾಂಗ ಕಸಿ ಪ್ರಾದೇಶಿಕ ಸಮನ್ವಯ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಮನವಿ ಬಗ್ಗೆ ಸಮಿತಿ ಹಲವು ಆಕ್ಷೇಪಣೆಗಳನ್ನು ಎತ್ತಿ ವಿಳಂಬ ಮಾಡಿತ್ತಲ್ಲದೆ, ಅರ್ಜಿ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ. ಹೀಗಾಗಿ, ಕಿಡ್ನಿ ದಾನಕ್ಕೆ ಅನುಮತಿ ಕೊಡಲು ಸಮಿತಿಗೆ ನಿರ್ದೇಶಿಸುವಂತೆ ಕೋರಿ ವರ್ಷಾ ಶರ್ಮಾ ಹೈಕೋರ್ಟ್ ಮೊರೆಹೋಗಿದ್ದಾರೆ.
ರಾತ್ರಿಯಾದರೂ ಸರಿ; ನಿರ್ಧಾರ ಪ್ರಕಟಿಸಿ
ಸರ್ಕಾರಿ ವಕೀಲರ ವಾದ ಆಲಿಸಿದ ನ್ಯಾಯಪೀಠ, “ಸರ್ಕಾರಕ್ಕೆ ಸಂಬಂಧಿಸಿದ ಕೆಲ ವಿಚಾರಗಳ ಬಗ್ಗೆ ತಡರಾತ್ರಿಯೂ ಆದೇಶಗಳನ್ನು ಹೊರಡಿಸುತ್ತೀರಿ. ಈ ವಿಚಾರದಲ್ಲಿ ಅಂತಹ ನಿಯಮವನ್ನು ಏಕೆ ಪಾಲಿಸಬಾರದು? ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಸೇನಾಧಿಕಾರಿ ಜೀವಕ್ಕೆ ಸಂಬಧಿಸಿದ ಈ ಮನವಿಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ. ಸಮಿತಿಯ ಸದಸ್ಯರಾದ ಮೂವರು ವೈದ್ಯರೇ ಸಭೆ ನಡೆಸಿ ರಾತ್ರಿ ಎಷ್ಟು ಹೊತ್ತಾದರೂ ಸರಿ, ಬುಧವಾರವೇ ನಿರ್ಧಾರ ಪ್ರಕಟಿಸಿ,’ ಎಂದು ತಾಕೀತು ಮಾಡಿ ವಿಚಾರಣೆ ಮುಂದೂಡಿತು.