ಪುರಾಣಗಳಲ್ಲಿ ಹೇಳಿರುವಂತೆ ಮನುಕುಲ ಹಲವು ಯುಗಗಳನ್ನು ಕಳೆದು ಬಂದಿದೆ. ಅದೇ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಈಗಿನ ಕಲಿಯುಗ. ಈ ಯುಗಗಳಲ್ಲಿ ಕಷ್ಟಗಳನ್ನು ಮೆಟ್ಟಿ ನಿಲ್ಲಲು ಹಾಗೂ ಸತ್ಯ ಧರ್ಮಗಳನ್ನು ಎತ್ತಿಹಿಡಿಯಲು ಹಲವು ಅವತಾರಗಳು ಜನ್ಮತಾಳಿವೆ. ಈಗಿನ ಕಾಲ ಮಾಡರ್ನ್ ಯುಗ ಎಂದು ಕರೆದರೂ ಪುರಾಣಗಳಲ್ಲಿ ಇದಕ್ಕೆ ಕಲಿಯುಗ ಎಂದು ಹೆಸರು. ಕಲಿಯ ಉಗ್ರ ನರ್ತನ ಅಡಗಿಸಲು ಈ ಯುಗದಲ್ಲೂ ಒಂದು ಅವತಾರ ಸೃಷ್ಟಿಯಾಗುತ್ತದೆ ಎಂಬ ನಂಬಿಕೆಯಿದೆ. ಪ್ರಸ್ತುತ ದಿನಗಳಲ್ಲಿ ಜಗತ್ತು ಎಂದೂ ಕಂಡರಿಯದ ವಿನಾಶ ಕಾರ್ಯಗಳನ್ನು ಎದುರಿಸುತ್ತಿದೆ. ಇದು ಮಾನವ ಕುಲದ ಪಾಪದ ಕೊಡ ತುಂಬಿ ಜಗತ್ತು ವಿನಾಶದ ಅಂಚಿಗೆ ಹೋಗುತ್ತಿದೆಯೋ ಎಂಬ ಭಾವನೆ ಮೂಡುವಂತೆ ಮಾಡಿವೆ. ಈ ಭಾವನೆಗಳು ನಮ್ಮಲ್ಲಿ ಮೂಡಲು ಕಾರಣ “ಕೊರೊನಾ’ ಎಂಬ ಮಹಾಮಾರಿ.
ಕೋವಿಡ್ ಆಗಮನದ ಅನಂತರ ಜಗತ್ತಿನಲ್ಲಿ ಇಷ್ಟು ಕಾಲ ನಡೆಯುತ್ತಿದ್ದ ಅನ್ಯಾಯ =ಅಧರ್ಮಗಳು ತನ್ನ ಗುರುತಿಸುವಿಕೆಯನ್ನು ಮೆಲ್ಲನೆ ಕಳೆದುಕೊಂಡಂತಿದೆ. ಸದಾ ಬಿಜಿಯಾಗಿದ್ದ ಜನರು ತಮ್ಮ ಮನೆಗಳಲ್ಲಿ ಕುಟುಂಬಸ್ಥರೊಂದಿಗೆ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ. ಹೆಸರು ಮಾತ್ರಕ್ಕಿದ್ದ ಗಂಡನ ಯಜಮಾನಿಕೆಗೆ ಅರ್ಥ ಬಂದು ಮಡದಿಗೆ ಕೊಂಚ ವಿಶ್ರಾಂತಿ ದೊರಕಿದೆ. ಅಜ್ಜ ಅಜ್ಜಿಯರು ಮೊಮ್ಮಕ್ಕಳನ್ನು ಆಡಿಸುವುದರಲ್ಲಿ ಕಳೆದರೆ, ಮಕ್ಕಳು ಕೂಡುಕುಟುಂಬದ ಅರ್ಥವನ್ನು ಅರಿಯುತ್ತಿದ್ದಾರೆ. ಮನೆಯಿಂದ ಹೊರಗೆ ಬಂದು ನೋಡಿದರೆ ಬಿಕೋ ಎನ್ನುತ್ತಿರುವ ರೋಡ್‌ಗಳಲ್ಲಿ ಪ್ರಾಣಿ-ಪಕ್ಷಿಗಳ ಸಂಚಲನ. ವಾಯುಮಂಡಲ ಶುದ್ಧಗಾಳಿಯನ್ನು ನೀಡುತ್ತಿದೆ, ಕಾರ್ಖಾನೆಗಳ ತ್ಯಾಜ್ಯ ನದಿ ಸಮುದ್ರಕ್ಕೆ ಸೇರುವುದು ನಿಂತಿದೆ.
ಅನ್ಯಾಯ ಅಧರ್ಮವನ್ನು ಎಸಗುತ್ತಿತ್ತು ಮನುಜ ಕುಲ. ಆದರೆ, ಅದರ ಹುಟ್ಟಡಗಿಸಿದ ಕೊರೊನಾವು ಕಲಿಯ ಸಂಹಾರಕ್ಕೆ ಬಂದ ಅವತಾರ ಎಂದು ಪರಿಗಣಿಸಬಹುದು. ಸಮಾಜದಲ್ಲಿ ಸುಖ ಶಾಂತಿಗಳನ್ನು ಕಾಯ್ದಿರಿಸಲು ಬಂದ ಒಂದು ಶಕ್ತಿ ಜನರ ಮತ್ತು ದೇವರ ನಡುವಿನ ವ್ಯತ್ಯಾಸ ತಿಳಿಯಪಡಿಸಿದೆ. ಮನುಷ್ಯ ಈ ಪ್ರಕೃತಿಯ ಮುಂದೆ ಏನೂ ಅಲ್ಲ ಎಂದು ಕೋವಿಡ್ ತೋರಿಸಿಕೊಟ್ಟಿತು.
ಒಟ್ಟಾರೆಯಾಗಿ ಹೇಳುವುದಾದರೆ ಕೊರೊನಾ ಬಂದ ಬಳಿಕ ಜಗತ್ತಿನಲ್ಲಿ ಒದಷ್ಟು ಬದಲಾವಣೆಗಳು ಆಗಿರುವುದಂತೂ ನಿಜ. ಪರಿಸರದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆಯಾಗಿ ಪ್ರಕೃತಿ ಮತ್ತೆ ತನ್ನ ಸಹಜ ಸ್ಥಿತಿಗೆ ಮರಳುತ್ತಿದೆ. ಜಾಗತೀಕರಣ, ನಗರೀಕರಣದಿಂದ ಕೃಷಿಯನ್ನು ತೊರೆದು ನಗರಕ್ಕೆ ವಲಸೆ ಹೋದ ಜನರು ಮತ್ತೆ ಹಳ್ಳಿಗಳಿಗೆ ಬಂದು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸದಾ ಯಾಂತ್ರಿಕವಾಗಿ ಬದುಕುತ್ತಿದ್ದ ಜನರು ಇಂದು ಸಹಜವಾದ ಬದುಕನ್ನು ಬದುಕುತ್ತಿದ್ದಾರೆ.
ಇವೆಲ್ಲದರ ಜತೆಗೆ ಕೇವಲ ಹಣವೊಂದೇ ಎಲ್ಲ ಎಂದು ಭಾವಿಸುತ್ತಿದ್ದ ಹಾಗೂ ಹಣ ಗಳಿಸಲು ಒದ್ದಾಡುತ್ತಿದ್ದ ಜನರ ಮನಸ್ಥಿತಿಯನ್ನು ಈ ಮಹಾಮಾರಿ ಬದಲಾಯಿಸಿದೆ. ಹಣವಿಲ್ಲದಿದ್ದರೂ ನಮ್ಮ ಬಯಕೆಗಳನ್ನು ಮಿತಿಯಲ್ಲಿರಿಸಿಕೊಂಡು ಜೀವನ ಸಾಗಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ. ಇವೆಲ್ಲವನ್ನು ನೋಡಿದಾಗ ನಮ್ಮಲ್ಲಿ ಮೂಡುವ ಪ್ರಶ್ನೆಯೆಂದರೆ ಕೋವಿಡ್ ಎಂಬುದು ಮಾನವ ಕುಲದ ಆರಂಭವೋ ಅಥವಾ ನಮ್ಮನ್ನು ನಾವು ತಿದ್ದಿಕೊಳ್ಳಲು ಪ್ರಕೃತಿ ನೀಡಿದ ಅವಕಾಶವೋ ಎಂದು. ನಾವು ಇದನ್ನು ಧನಾತ್ಮಕವಾಗಿ ಪರಿಗಣಿಸಿ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಉತ್ತಮ ಜೀವನ ನಡೆಸುವಂತಾದರೆ ಎಲ್ಲರೂ ಕೂಡ ಈ ಪ್ರಪಂಚದಲ್ಲಿ ಸುಖೀಗಳಾಗಿ ಜೀವಿಸಬಹುದಾಗಿದೆ.
ಉಲ್ಲಾಸ್ ದರ್ಶನ್ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು