Advertisement

ಸರಿಯಾಗಿದೆಯೇ ಥೈರಾಯ್ಡ್?

03:37 PM Jul 10, 2018 | |

ಗಂಟಲಿನ ನಡುವೆ ಇರುವ ಥೈರಾಯ್ಡ ಎಂಬ ಸಣ್ಣ ಗ್ರಂಥಿಯು ನಮ್ಮ ದೇಹದಲ್ಲಿ ಅಪಾರ ಕೆಲಸ ಮಾಡುತ್ತದೆ. ಇದು ಟಿ3, ಟಿ4 ಮತ್ತು ಕ್ಯಾಲ್ಸಿಟೋನಿನ್‌ ಎಂಬ ಮೂರು ಹಾರ್ಮೋನ್‌ಗಳನ್ನು ಸ್ರವಿಸುತ್ತದೆ.

Advertisement

ಇದರ ಪ್ರಯೋಜನ
· ದೈಹಿಕ, ಮಾನಸಿಕ ಸ್ಥಿತಿಯನ್ನು ನಿಯಂತ್ರಿಸುವುದು. 
· ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುವುದು.
· ಆಹಾರದಿಂದ ದೇಹಕ್ಕೆ ಶಕ್ತಿ ಸಿಗುವಂತೆ ಮಾಡುವುದು.
· ಮಾಂಸಖಂಡಗಳಿಗೆ ಶಕ್ತಿ ಕೊಡುವುದು.
· ದೇಹದ ಉಷ್ಣತೆಯ ಸಮತೋಲನ ಕಾಪಾಡುವುದು.
· ನರಮಂಡಲದ ಬೆಳೆವಣಿಗೆಗೆ ಸಹಾಯ.
· ಮಕ್ಕಳ ಸಹಜ ಬೆಳವಣಿಗೆಗೆ ಪೂರಕ ಕಾರ್ಯ.

ಮೆದುಳಿನಲ್ಲಿ ಹೈಪೋ ಥಲಾಮಸ್‌ ಎಂಬ ಗ್ರಂಥಿಯಿಂದ ಟಿಆರ್‌ಎಚ್‌ ಎಂಬ ಹಾರ್ಮೋನ್‌ ಉತ್ಪತ್ತಿಯಾಗುತ್ತದೆ. ಇದು ಪಿಟ್ಯೂಟರಿ ಗ್ರಂಥಿಯನ್ನು ಟಿಎಸ್‌ಎಚ್‌ ಹಾರ್ಮೋನ್‌ ಸ್ರವಿಸಲು ಸಹಾಯ ಮಾಡುತ್ತದೆ. ಈ ಟಿಎಸ್‌ಎಚ್‌ ಹಾರ್ಮೋನ್‌ ಥೈರಾಯ್ಡ ಗ್ರಂಥಿಯ ಮೇಲೆ ಪರಿಣಾಮ ಬೀರಿ ಟಿ3, ಟಿ4 ಉತ್ಪತ್ತಿಯಾಗಲು ಕಾರಣವಾಗುತ್ತದೆ. ನಮ್ಮ ದೇಹದಲ್ಲಿ ಆಹಾರದ ಮೂಲಕ ಸಿಗುವ ಅಯೋಡಿನ್‌ ಥೈರಾಯ್ಡ ಕೋಶಗಳು ಹೀರಿಕೊಂಡು ಟೈ ಅಯೋಡೊ ಥೈರೋನಿನ್‌- ಟಿ3, ಥೈರೋಕ್ಟಿನ್‌- ಟಿ4 ಆಗಿ ರೂಪುಗೊಳ್ಳುತ್ತವೆ.

ಥೈರಾಯ್ಡ ಸಮಸ್ಯೆ ಅನುವಂಶಿಯವಾಗಿಯೇ ಬರಬೇಕು ಎಂದೇನಿಲ್ಲ. ಆದರೆ ಬರುವ ಸಾಧ್ಯತೆಗಳು ಹೆಚ್ಚು. ಥೈರಾಯ್ಡನಲ್ಲಿ ಬದಲಾವಣೆಯನ್ನು ತಿಳಿಯಲು ರಕ್ತ ಪರೀಕ್ಷೆಯ ಮೂಲಕ ಟಿ3, ಟಿ4 ಮತ್ತು ಟಿಎಸ್‌ಎಚ್‌ ಲೆವೆಲ್‌ ಟೆಸ್ಟ್‌ ಮಾಡಲಾಗುತ್ತದೆ.

ಹೈಪೋ ಥೈರಾಯ್ಡಿಸಂ
ದೇಹದಲ್ಲಿ ಟಿ3, ಟಿ4 ಹಾರ್ಮೋನ್‌ಗಳ ಉತ್ಪತ್ತಿ ಕಡಿಮೆಯಾದರೆ ಹೈಪೋ ಥೈರಾಯ್ಡಿಸಂ ಉಂಟಾಗುತ್ತದೆ. ಇದರಿಂದ ತೂಕ ಹೆಚ್ಚುವುದು, ಧ್ವನಿ ಬದಲಾವಣೆ, ಹಳದಿ ಅಥವಾ ಒಣ ದಪ್ಪ ಚರ್ಮ, ವಿಟಮಿನ್‌ ಎ ಕೊರತೆ, ಕೇಂದ್ರೀಕರಿಸಲು ಅಸಮರ್ಥತೆ, ಕಡಿಮೆ ಸ್ಮರಣೆ, ಕೂದಲು ಬೀಳುವುದು, ಸುಲಭವಾಗಿ ದಣಿವು, ದುರ್ಬಲ, ಡಿಪ್ರಶನ್‌, ಶೀತ, ಚಳಿ, ಅಸಹನೆ.

Advertisement

ಹೈಪರ್‌ ಥೈರಾಯ್ಡಿಸಂ
ಹಾರ್ಮೋನ್‌ಗಳ ಉತ್ಪತ್ತಿ ಹೆಚ್ಚಾಗುವುದನ್ನು ಹೈಪರ್‌ಥೈರಾಯ್ಡಿಸಂ ಎನ್ನುತ್ತಾರೆ. ಇದರಿಂದ ವಿಪರೀತ ಬೆವರುವುದು, ಹೆದರಿಕೆ, ತೂಕ ಇಳಿಕೆ, ಥೈರಾಯ್ಡ ಊತ, ಮಾಂಸಖಂಡಗಳು ದುರ್ಬಲವಾಗುವುದು, ನಿದ್ದೆಯ ತೊಂದರೆ, ಉಷ್ಣತೆ ಅಸಹನೆ ಉಂಟಾಗುತ್ತದೆ.

ಆಹಾರ ಹೇಗಿರಬೇಕು
ಥೈರಾಯ್ಡ ಇದ್ದವರು ಕ್ಯಾಬೇಜ್‌, ಬ್ರೊಕೂಲಿ, ಪಾಸ್ತಾ, ಬೀನ್ಸ್‌, ಬ್ರೆಡ್‌ನ‌ಂತಹ ಆಹಾರಗಳನ್ನು ತ್ಯಜಿಸುವುದು ಉತ್ತಮ. ಕ್ಯಾಲ್ಸಿಯಂ, ಮ್ಯಾಗ್ನೇಷಿಯಂ, ಆಯೋಡಿನ್‌ ಯುಕ್ತ ಆಹಾರ ಸೇವಿಸಬೇಕು. ಸಕ್ಕರೆ, ಉಪ್ಪು, ಎಣ್ಣೆ ಪದಾರ್ಥಗಳ ಸೇವನೆಯಲ್ಲಿ ಮಿತಿ ಇರಬೇಕು.ಜತಗೆ ಸರಿಯಾದ ನಿದ್ದೆ, ಆಹಾರ ಸೇವನೆ ಬಗ್ಗೆಯೂ ಎಚ್ಚರಿಕೆ ವಹಿಸಲೇಬೇಕು.

ಗರ್ಭಿಣಿಯರಲಿ ಥೈರಾಯ್ಡ್  ಸಮಸ್ಯೆ 
ಗರ್ಭಿಣಿಯರಲ್ಲಿ ಅಯೋಡಿನ್‌ ಕೊರತೆ ಇದ್ದರೆ ಮಗುವಿನ ಮೇಲೆ ಅದು ಅಡ್ಡ ಪರಿಣಾಮ ಬೀರಬಹುದು. ಶಿಶುವಿನ ಸಹಜ ಬೆಳವಣಿಗೆಗೆ ಥೈರಾಯ್ಡ ಹಾರ್ಮೋನ್‌ ಅಗತ್ಯವಿರುತ್ತದೆ. ಅದ್ದರಿಂದ ಗರ್ಭಿಣಿಯರಿಗೆ ಥೈರಾಯ್ಡ ಸಮಸ್ಯೆ ಇದ್ದರೆ ಸರಿಯಾದ ಚಿಕಿತ್ಸೆ ಅಗತ್ಯ.

 ಡಾ| ರಶ್ಮಿ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next