Advertisement

ಪ್ರತಿಪಕ್ಷದಲ್ಲಿ ಕೂರಲು ಮಾನಸಿಕವಾಗಿ ಕಾಂಗ್ರೆಸ್‌ ಸಿದ್ಧತೆ?

02:35 AM Jul 15, 2019 | Sriram |

ಬೆಂಗಳೂರು: ಕೆಲವು ದಿನಗಳಿಂದ ದಿನಂಪ್ರತಿ ವಿಚಿತ್ರ ವೈರುಧ್ಯಗಳನ್ನು ಪಡೆದುಕೊಳ್ಳುತ್ತಿರುವ ರಾಜ್ಯ ರಾಜಕೀಯವನ್ನು ಗಮನಿಸಿದರೆ ಕಾಂಗ್ರೆಸ್‌ ಪಕ್ಷ ಮತ್ತು ಅದರ ಘಟಾನುಘಟಿ ನಾಯಕರು ಮೈತ್ರಿ ಸರ್ಕಾರದ ಪತನವನ್ನೇ ಕಾಯುತ್ತಿರುವಂತೆ ಭಾಸವಾಗುತ್ತಿದೆ.

Advertisement

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿನ ಬಳಿಕ ದೆಹಲಿಗೆ ತೆರಳಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರ ರಾಷ್ಟ್ರೀಯ ಮುಖಂಡರನ್ನು ಭೇಟಿ ಮಾಡಿದ್ದರು. ಆ ಬಳಿಕ ರಾಜ್ಯದಲ್ಲಿ ಅನೇಕ ಬೆಳವಣಿಗೆಗಳಾಗಿವೆ. ಜೆಡಿಎಸ್‌ ಜತೆ ಸರ್ಕಾರ ಮುಂದುವರಿಸುವುದಕ್ಕಿಂತ ಪ್ರತಿಪಕ್ಷದಲ್ಲಿ ಕುಳಿತರೆ ಪಕ್ಷಕ್ಕೆ ಲೇಸು, ಅಲ್ಲದೆ, ಮತ್ತೆ ಪಕ್ಷವನ್ನು ಸಂಘಟಿಸಬಹುದು ಎಂಬ ಸಲಹೆಯನ್ನು ಹೈಕಮಾಂಡ್‌ಗೆ ಹಲವು ಬಾರಿ ನೀಡಿದರೆಂಬ ಮಾಹಿತಿಯಿದೆ.

ಈಗಲೂ ಸಿದ್ದರಾಮಯ್ಯ ಅವರ ನಡೆ-ನುಡಿ ಗಮನಿಸಿದರೆ ಅವರು ಅಷ್ಟೇನೂ ಆತಂಕದಲ್ಲಿಲ್ಲ ಎನ್ನುವುದು ಮೇಲ್ನೋಟಕ್ಕೆ ವೇದ್ಯವಾಗುತ್ತದೆ. ಆದರೆ, ಇನ್ನೋರ್ವ ನಾಯಕ ಡಿ.ಕೆ.ಶಿವಕುಮಾರ್‌ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿರುವುದು ಅವರೊಬ್ಬರೇ ಸರ್ಕಾರ ಉಳಿಸಲು ಹೆಚ್ಚು ಆಸಕ್ತರಾಗಿರುವಂತೆ ಕಾಣುತ್ತಿದೆ. ಕಾಂಗ್ರೆಸ್‌ನ ಅತಿರಥ-ಮಹಾರಥ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಬಿ.ಕೆ.ಹರಿಪ್ರಸಾದ್‌ ಮತ್ತಿತರರು ಸರ್ಕಾರ ಉಳಿಸುವ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅದರರ್ಥ ಅವರೇನೂ ಅಸಮರ್ಥರೆಂದಲ್ಲ! ಅವರಿಗೆ ಆಸಕ್ತಿಯಿಲ್ಲ ಎಂದಷ್ಟೇ ಅರ್ಥ! ಹಾಗಿದ್ದರೆ ಕಾಂಗ್ರೆಸ್‌ ನಾಯಕರು ಮಾನಸಿಕವಾಗಿ ಪ್ರತಿಪಕ್ಷದಲ್ಲಿ ಕೂರಲು ಸಿದ್ಧರಿದ್ದಾರೆ ಎಂದೂ ವಿಶ್ಲೇಷಿಸಬಹುದು.

ಅತೃಪ್ತರಲ್ಲಿ ಹೆಚ್ಚಿನವರು ಸಿದ್ದರಾಮಯ್ಯ ನಿಷ್ಠರು: ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಅತೃಪ್ತ 16 ಶಾಸಕರಲ್ಲಿ ಹೆಚ್ಚಿನವರು ಸಿದ್ದರಾಮಯ್ಯ ನಾಯಕತ್ವದಲ್ಲಿ ವಿಶ್ವಾಸ ಇಟ್ಟವರು. ಅತೃಪ್ತರ ಮಾಧ್ಯಮ ಹೇಳಿಕೆಗಳನ್ನು ಗಮನಿಸುತ್ತಾ ಹೋದರೆ ಅವರಿಗೆಲ್ಲರಿಗೂ ಮುನಿಸಿರುವುದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅವರ ಸೋದರ ಎಚ್.ಡಿ.ರೇವಣ್ಣ ಹಾಗೂ ಜೆಡಿಎಸ್‌ ಮುಖಂಡರ ಮೇಲೆಯೇ. ಹಿಂದೊಮ್ಮೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ಈ ಸರ್ಕಾರ ಉಳಿಯಬೇಕು ಅಥವಾ ಉರುಳಬೇಕು ಎಂದಿದ್ದರೆ ಅದು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ ಎಂದಿದ್ದರಂತೆ ಈಗ ಅದೇ ಆಗುತ್ತಿರುವಂತೆ ಕಾಣುತ್ತಿದೆ. ಮೈತ್ರಿ ಸರ್ಕಾರದ ಉದಯಕ್ಕೂ ಕಾರಣರಾಗಿದ್ದ ಸಿದ್ದರಾಮಯ್ಯ ಈಗ ಅವರ ಆಪ್ತರ ಮೂಲಕ ರಾಜಕೀಯ ದಾಳ ಉರುಳಿಸಿದ್ದಾರೆಯೇ ಎಂಬ ಚರ್ಚೆ ಈಗ ರಾಜಕೀಯ ಪಡಸಾಲೆಯಲ್ಲಿ ನಡೆದಿದೆ.

ಬಿಜೆಪಿ ಸರ್ಕಾರ ಬರಬಾರದು ಎಂಬ ಕಾರಣಕ್ಕೆ ಮತ್ತು ಲೋಕಸಭಾ ಚುನಾವಣೆ, ಅದರಲ್ಲೂ ಮೋದಿ ನಾಯಕತ್ವವನ್ನು ರಾಜ್ಯದಲ್ಲಿ ಎದುರಿಸಲು ಜೆಡಿಎಸ್‌ ಜತೆ ಕೈಜೋಡಿಸಿದರೆ ಸುಲಭ ಎಂದು ಅಂದುಕೊಂಡಿದ್ದ ಕಾಂಗ್ರೆಸ್‌ ಹೈಕಮಾಂಡ್‌ ನಿಲುವಿನಂತೆ ಸಿದ್ದರಾಮಯ್ಯ ಅವರು ಮನಸ್ಸಿಲ್ಲದ ಮನಸ್ಸಿನಿಂದ ಕುಮಾರಸ್ವಾಮಿ ಸಿಎಂ ಆಗಲಿ ಎಂದಿದ್ದರು. ಈಗ ಅವರು ಸರ್ಕಾರದ ಪತನಕ್ಕೂ ನೆರಳಾಗಿದ್ದಾರೆ ಎಂಬುದು ಅವರ ರಾಜಕೀಯ ಪಟ್ಟುಗಳನ್ನು ಮತ್ತು ಆಪ್ತ ‘ಅತೃಪ್ತ’ರ ರಾಜಕೀಯ ನಡೆ ಗಮನಿಸಿದರೆ ಗೋಚರವಾಗುತ್ತದೆ. ಅವರ ತೀರಾ ಆಪ್ತರನ್ನು ಮನವೊಲಿಸ ಲಾರದಷ್ಟು ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆಯೇ ಅಥವಾ ಸರ್ಕಾರ ಉರುಳಿಸಬೇಕೆಂಬ ಹಠಕ್ಕೆ ನಿಂತಿದ್ದಾರೆಯೇ ಎಂಬುದೂ ಚರ್ಚೆಗೆ ಗ್ರಾಸವಾಗಿದೆ.

Advertisement

ಪರಂ ವಿರುದ್ಧ ಆಕ್ರೋಶ: ಇನ್ನೊಂದೆಡೆ, ಅತೃಪ್ತರ ಕೆಂಗಣ್ಣಿಗೆ ಗುರಿಯಾಗಿರುವುದು ಡಿಸಿಎಂ ಜಿ.ಪರಮೇಶ್ವರ್‌ ಕೂಡಾ. ಜೆಡಿಎಸ್‌ ನಾಯಕರ ‘ದಬ್ಟಾಳಿಕೆ’ಗೆ ಮಣಿದು ಕಾಂಗ್ರೆಸ್‌ ಶಾಸಕರ ಹಿತವನ್ನು ಕಾಪಾಡದ ಪರಮೇಶ್ವರ್‌ ಅವರ ‘ಹೊಂದಾಣಿಕೆ’ ರಾಜಕಾರಣ ಅತೃಪ್ತರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಬೆಂಗಳೂರು ಹಿಡಿತ ಸಾಧಿಸಿದ್ದ ಕಾಂಗ್ರೆಸ್‌ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರನ್ನು ತಮ್ಮ ಹಿತಕ್ಕೋಸ್ಕರ ಪರಮೇಶ್ವರ್‌ ಜಾಗದಲ್ಲಿ ಕೂರಿಸುವುದು ಅತೃಪ್ತರ ಗುರಿ ಇರಬಹುದು. ಆ ಮೂಲಕ ಸಿದ್ದರಾಮಯ್ಯ ಅವರನ್ನು ರಾಜ್ಯದಲ್ಲಿ ಮತ್ತು ರೆಡ್ಡಿ ಅವರ ನಾಯಕತ್ವವನ್ನು ಬೆಂಗಳೂರಿನಲ್ಲಿ ಗಟ್ಟಿಗೊಳಿಸುವುದೂ ಉದ್ದೇಶವಿರಬಹುದು.

ದಶಕದ ರಾಜ್ಯ ರಾಜಕೀಯ ಗಮನಿಸಿದರೆ ದೇವೇಗೌಡರು ತಮ್ಮ ರಾಜಕೀಯ ಪಟ್ಟುಗಳಿಗೆ ಹೆಸರಾಗಿದ್ದರು. ಅವರ ಪ್ರತಿ ಮಾತು, ನಡವಳಿಕೆಯನ್ನು ವಿರೋಧಿಗಳಾರೂ ಪತ್ತೆ ಹಚ್ಚಲು ಸಾಧ್ಯವಿರಲಿಲ್ಲ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್‌ ಪಕ್ಷವನ್ನು ಸಂಘಟಿಸುವುದು ಮತ್ತು ಬಿಜೆಪಿ ಸರ್ಕಾರ ರಚಿಸಿಕೊಳ್ಳುವಂತೆ ಪರಿಸ್ಥಿತಿ ನಿರ್ಮಿಸಿ ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವುದು ಅವರ ಉದ್ದೇಶ ಇರಬಹುದು. ಆದರೆ, ತಮ್ಮ ರಾಜಕೀಯ ಕಡು ವಿರೋಧಿಗಳೆಂದೇ ಅವರು ಪರಿಗಣಿಸಿದ್ದ ದೇವೇಗೌಡರನ್ನು ಮಣಿಸುವುದು ಮತ್ತು ತಮ್ಮ ಸುತ್ತ ರಾಜಕೀಯ ಬಲಿಯುವಂತೆ ಮಾಡಿರುವುದು ಎದ್ದು ಕಾಣುವ ಅಂಶ. ಮುಂದೇನಿದ್ದರೂ ಸುಪ್ರೀಂ ಮತ್ತು ಸ್ಪೀಕರ್‌ ನಿರ್ಧಾರಗಳು ಮತ್ತು ಕುಮಾರಸ್ವಾಮಿ ಸದನದಲ್ಲಿ ಪ್ರಸ್ತಾಪಿಸಿರುವ ವಿಶ್ವಾಸಮತದ ನಂತರ ಬೆಳವಣಿಗೆಯಷ್ಟೇ.

-ನವೀನ್‌ ಅಮ್ಮೆಂಬಳ

Advertisement

Udayavani is now on Telegram. Click here to join our channel and stay updated with the latest news.

Next