Advertisement

ಮರೆಯಾಯ್ತೇ ಮುಸುಕಿನ ಮುನಿಸು?

03:24 PM Apr 27, 2022 | Niyatha Bhat |

ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್‌ ನಾಯಕರು ಒಂದಾದರೇ? ಹೀಗೊಂದು ಪ್ರಶ್ನೆ ಈಗ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ತೀರ್ಥಹಳ್ಳಿಯ ಕಾಂಗ್ರೆಸ್‌ ನಾಯಕರಾದ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್‌ ಹಾಗೂ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್‌.ಎಂ. ಮಜುನಾಥ್‌ ಗೌಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಲ್ಲದೇ ಒಟ್ಟಿಗೇ ಸನ್ಮಾನ ಮಾಡಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ.

Advertisement

ಮಂಗಳವಾರ ಪಟ್ಟಣದ ಬೆಟ್ಟಮಕ್ಕಿಯಲ್ಲಿ ನಡೆದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲು ಕುಳಿತು ಬಳಿಕ ಸನ್ಮಾನವನ್ನೂ ಸ್ವೀಕರಿಸಿದ್ದು ಒಂದೇ ಪಕ್ಷದಲ್ಲಿದ್ದರೂ ಪರಸ್ಪರ ಎದುರಾಳಿಗಳು ಎಂದೇ ಕರೆಸಿಕೊಳ್ಳುತ್ತಿದ್ದವರು ಈಗ ಒಂದಾದರೇ ಎಂಬ ಪ್ರಶ್ನೆ ಮೂಡಿದೆ.

ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಿಮ್ಮನೆ ರತ್ನಾಕರ್‌ ಕಾಂಗ್ರೆಸ್‌ನ ಏಕಮೇವಾದ್ವಿತೀಯ ಮುಖಂಡರೆನಿಸಿಕೊಂಡವರು. ಆದರೆ ಕೆಲ ತಿಂಗಳುಗಳ ಹಿಂದೆ ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡರು ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರಿದ್ದರು. ಅಲ್ಲಿಂದ ತೀರ್ಥಹಳ್ಳಿ ಕಾಂಗ್ರೆಸ್‌ನಲ್ಲಿ ಎರಡು ಬಣಗಳು ಸೃಷ್ಟಿಯಾಗಿದ್ದವು. ಇಬ್ಬರೂ ನಾಯಕರ ಮುಸುಕಿನ ಗುದ್ದಾಟ ಕೆಲವೊಮ್ಮೆ ಸಾರ್ವಜನಿಕವಾಗಿಯೇ ಬಹಿರಂಗವಾಗಿತ್ತು. ಯಾವುದಾದರೂ ಕಾರ್ಯಕ್ರಮದಲ್ಲಿ ಕಿಮ್ಮನೆ ರತ್ನಾಕರ್‌ ಇದ್ದರೆ ಮಂಜುನಾಥ ಗೌಡರು ಇರುತ್ತಿರಲಿಲ್ಲ. ಮಂಜುನಾಥ ಗೌಡರು ಇದ್ದರೆ ಕಿಮ್ಮನೆ ರತ್ನಾಕರ್‌ ಇರುತ್ತಿರಲಿಲ್ಲ. ಅಲ್ಲದೇ ಕೆಲ ಕಾರ್ಯಕ್ರಮಗಳಲ್ಲಿ ತಮ್ಮ ಭಾಷಣದಲ್ಲಿ ಹೆಸರು ಹೇಳದೇ ಪರಸ್ಪರ ಟಾಂಗ್‌ ನೀಡುತ್ತಿದ್ದರು. ಈ ಗೊಂದಲ ಸರಿ ಮಾಡಲು ಕಾಂಗ್ರೆಸ್‌ ನಾಯಕರು ಅನೇಕ ಬಾರಿ ಸಮಯ ನಿಗದಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗೆ ತೀರ್ಥಹಳ್ಳಿ ಪಪಂ ಚುನಾವಣೆಯ ಕಾಂಗ್ರೆಸ್‌ ಗೆಲುವಿನಲ್ಲಿ ಇಬ್ಬರೂ ಒಂದಾದ್ರು ಎಂದೇ ಹೇಳಲಾಗಿತ್ತಾದರೂ ಮತ್ತೆ ಎಲ್ಲೂ ಇಬ್ಬರು ಕಂಡಿರಲಿಲ್ಲ. ಆದರೆ ಮಂಗಳವಾರ ನಡೆದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಈವರೆಗೆ ಎಲ್ಲೂ ಒಟ್ಟಿಗೆ ಕಾಣಿಸಿಕೊಳ್ಳದೇ ಇದ್ದ ನಾಯಕರು ಚುನಾವಣೆ ಸಮೀಪಿಸುತ್ತಿರುವ ಕಾರಣಕ್ಕೆ ಒಂದಾದರೇ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಪಟ್ಟಣ ಪಂಚಾಯತಿ 5 ನೇ ವಾರ್ಡ್‌ನಲ್ಲಿ ಸದಸ್ಯರಾದ ಸುಶೀಲಾ ಶೆಟ್ಟಿ ಅವರ ನೇತೃತ್ವದಲ್ಲಿ ಮಂಗಳವಾರ ಡಾ| ಬಿ ಆರ್‌ ಅಂಬೇಡ್ಕರ್‌ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದ ಕಲಾವತಿ ವೆಂಕಟರಮಣ ದಂಪತಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ| ಸುಂದರೇಶ್‌, ಕೃಷ್ಣಮೂರ್ತಿ ಭಟ್‌, ಡಿ. ಎಸ್‌. ವಿಶ್ವನಾಥ್‌ ಶೆಟ್ಟಿ, ಬಿ. ಗಣಪತಿ, ದತ್ತಣ್ಣ, ಮಂಜುಳಾ, ನಾಗೇಂದ್ರ, ಗೀತಾ ರಮೇಶ್‌, ರಾಘವೇಂದ್ರ ಶೆಟ್ಟಿ, ಬೆಟ್ಟಮಕ್ಕಿ ರಫೀ ಹಲವಾರು ಗಣ್ಯರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next