Advertisement
ವಾಯು ಮತ್ತು ಶಬ್ದಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪ್ರೋತ್ಸಾಹಿಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸರಿಸುಮಾರು ಅಂದಾಜು 100 ಮಾಲ್‌ಗಳು, 6 ಸಾವಿರಕ್ಕೂ ಅಧಿಕ ಕೇಂದ್ರೀಕೃತ ಹವಾನಿಯಂತ್ರಿತ ಕಟ್ಟಡಗಳು, ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳು 300ಕ್ಕೂ ಹೆಚ್ಚಿವೆ. ಇನ್ನು ಅಪ್ಪಟ ವಾಣಿಜ್ಯ ಕಟ್ಟಡಗಳು ಒಂದು ಲಕ್ಷಕ್ಕೂ ಅಧಿಕವಾಗಿವೆ. ಹಾಗೊಂದು ವೇಳೆ ಚಾರ್ಜಿಂಗ್ ಸ್ಟೇಷನ್ ಕಡ್ಡಾಯಗೊಳಿಸಿದರೆ, ಪ್ರತಿ ಅರ್ಧ ಕಿ.ಮೀ. ಅಂತರದಲ್ಲಿ ವಾಹನಗಳ ಚಾರ್ಜಿಂಗ್ ಸೌಲಭ್ಯ ದೊರೆಯಲಿದೆ.
Related Articles
Advertisement
ಎಲ್ಲ ಕಟ್ಟಡಗಳಲ್ಲೂ ಕಷ್ಟ: ಹೀಗೆ ಚಾರ್ಜಿಂಗ್ ಸ್ಟೇಷನ್ ತೆರೆಯುವ ವಾಣಿಜ್ಯ ಕಟ್ಟಡಗಳು ಗ್ರಾಹಕರನ್ನು ಆಕರ್ಷಿಸಲಿವೆ. ಏನೂ ಖರೀದಿಸದಿದ್ದರೂ ಕೊನೆಪಕ್ಷ ಜನ ವಾಹನಗಳ ಚಾರ್ಜಿಂಗ್‌ಗೆ ಬರುತ್ತಾರೆ. ಚಾರ್ಜಿಂಗ್ ಅವಧಿಯಲ್ಲಿ ಅದೇ ಮಳಿಗೆಯಲ್ಲಿ ಒಂದು ಸುತ್ತು ಹಾಕುತ್ತಾರೆ. ಅಷ್ಟಕ್ಕೂ ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳೇ ಇರಲಿವೆ. ಇದೆಲ್ಲದರಿಂದ ಈ ಕ್ರಮ ಸ್ವಾಗತಾರ್ಹ.
ಆದರೆ, ಈ ಎಲ್ಲ ಅಪ್ಪಟ ವಾಣಿಜ್ಯ ಕಟ್ಟಡಗಳಲ್ಲೂ ಚಾರ್ಜಿಂಗ್ ಸ್ಟೇಷನ್ ಹಾಕುವುದು ಕಷ್ಟ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಯೋಜನಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು. ಇತ್ತೀಚೆಗೆ ವಿದ್ಯುತ್‌ಚಾಲಿತ ವಾಹನಗಳನ್ನು ಉತ್ತೇಜಿಸಲು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ವು ಈ ಮಾದರಿಯ ವಾಹನಗಳ ಚಾರ್ಜಿಂಗ್‌ಗೆ ತರಲುವ ವಿದ್ಯುತ್‌ಗೆ ರಿಯಾಯ್ತಿ ದರ ವಿಧಿಸಿದೆ.
ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕೂಡ “ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್’ ಅಡಿ 40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಪ್ರತಿ 3ರಿಂದ 5 ಕಿ.ಮೀ.ಗೊಂದು ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಚಿಂತನೆ ನಡೆಸಿದ್ದು, ಈ ಸಂಬಂಧ ತನ್ನ ಅಭಿಪ್ರಾಯ ಸಲ್ಲಿಸುವಂತೆ ಕೇಂದ್ರವು ರಾಜ್ಯ ಇಂಧನ ಇಲಾಖೆಗೆ ಪತ್ರ ಬರೆದಿದ್ದು, ಪ್ರತಿ ಸ್ಟೇಷನ್‌ಗೆ 25 ಲಕ್ಷ ರೂ. ನೀಡುವುದಾಗಿ ಹೇಳಿದೆ. ಅಷ್ಟೇ ಅಲ್ಲ, ಯಾರು ಬೇಕಾದರೂ ಚಾರ್ಜಿಂಗ ಸ್ಟೇಷನ್ ಸ್ಥಾಪಿಸಲು ಮುಕ್ತ ಅವಕಾಶ ಕಲ್ಪಿಸಿದ್ದು, ಬೆಸ್ಕಾಂ ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ.
ಈ ಎಲ್ಲ ಕಾರಣಗಳಿಂದ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ 2018ರ ಜೂನ್ ಅಂತ್ಯಕ್ಕೆ ಅಂದಾಜು 12 ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದು, ಈ ಪೈಕಿ ನಗರ ವ್ಯಾಪ್ತಿಯಲ್ಲೇ 6,837 ಇವೆ. ಎಲೆಕ್ಟ್ರಿಕ್ ವೆಹಿಕಲ್ ನೀತಿ, ದರದಲ್ಲಿ ರಿಯಾಯ್ತಿ ಮತ್ತಿತರ ಅಂಶಗಳಿಂದ ಈಚಿನ ದಿನಗಳಲ್ಲಿ ಈ ಮಾದರಿಯ ವಾಹನಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
* 100 ನಗರದಲ್ಲಿರುವ ಶಾಪಿಂಗ್ ಮಾಲ್‌ಗಳು* 1 ಲಕ್ಷ ವಾಣಿಜ್ಯ ಕಟ್ಟಡಗಳ ಸಂಖ್ಯೆ ಅಂದಾಜು
* 85 ಬೆಸ್ಕಾಂ ವಿವಿಧೆಡೆ ನಿರ್ಮಿಸಲು ಉದ್ದೇಶಿಸಿರುವ ಚಾರ್ಜಿಂಗ್ ಸ್ಟೇಷನ್‌ಗಳು
* 6,837 ನಗರದಲ್ಲಿರುವ ಎಲೆಕ್ಟ್ರಿಕ್ ವಾಹನಗಳು * ವಿಜಯಕುಮಾರ ಚಂದರಗಿ