Advertisement

ಬಿಎಸ್‌ವೈ ಇನ್ನೂ ಬಿಜೆಪಿಯಲ್ಲೇ ಇದ್ದಾರಾ?

03:35 AM Jun 30, 2017 | Team Udayavani |

ಬಾಗಲಕೋಟೆ: ಕಾಂಗ್ರೆಸ್‌ ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ, ಅತ್ತ ಕೇಂದ್ರ ಸಚಿವರು, ರೈತರ ಸಾಲ ಮನ್ನಾ
ಒಂದು ಫ್ಯಾಶನ್‌ ಎಂದು ಹೇಳುತ್ತಿದ್ದಾರೆ. ಇಲ್ಲಿ ಬಿಎಸ್‌ವೈ ರೈತರ ಸಾಲ ಮನ್ನಾಕ್ಕಾಗಿ ಹೋರಾಡುತ್ತೇನೆಂದು
ಹೇಳುತ್ತಿದ್ದರು. ನಿಜವಾಗಿಯೂ ಯಡಿಯೂರಪ್ಪ ಅವರು ಈಗ ಬಿಜೆಪಿಯಲ್ಲೇ ಇದ್ದಾರಾ? ಇದ್ದರೆ, ರಾಷ್ಟ್ರೀಕೃತ 
ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲವನ್ನು ಮನ್ನಾ ಮಾಡಿಸಲಿ. ಆ ತಾಕತ್ತು ಬಿಎಸ್‌ವೈಗೆ ಇದೆಯಾ ಎಂದು
ಎಐಸಿಸಿ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಟಾಂಗ್‌ ನೀಡಿದ್ದಾರೆ.

Advertisement

ವಿಶ್ವಗುರು ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮದಲ್ಲಿ ಗುರುವಾರ ನಡೆದ ಕೆಪಿಸಿಸಿ ಕಾರ್ಯಾಧ್ಯಕ್ಷರ ಅಧಿಕಾರ
ಸ್ವೀಕಾರ ಮತ್ತು ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು ಬಿಎಸ್‌ವೈ ಹಾಗೂ ಪ್ರಧಾನಿ ಮೋದಿ ವಿರುದ್ಧ
ತೀವ್ರ ವಾಗ್ದಾಳಿ ನಡೆಸಿದರು. ಕರ್ನಾಟಕ ನಂ.1 ಸ್ಥಾನದಲ್ಲಿ ಸಾಗುತ್ತಿದೆ. ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಿ ಎಂದು
ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಹೇಳಿದ ಎರಡೇ ದಿನದಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯದ ರೈತರ
50 ಸಾವಿರ ರೂ. ವರೆಗಿನ ಸಾಲ ಮನ್ನಾ ಮಾಡಿದ್ದಾರೆ. ಸಾಲ ಮನ್ನಾ ಮಾಡುವ ಮೊದಲು ರೈತರ ಬಗ್ಗೆ ಮಾತನಾಡುತ್ತಿದ್ದ ಬಿಎಸ್‌ವೈ, ಈಗ ಕೇಂದ್ರದಿಂದ ಸಾಲ ಮನ್ನಾ ಮಾಡಿಸಲಿ ಎಂದು ಒತ್ತಾಯಿಸಿದರು.

ಕಳೆದ ನಾಲ್ಕು ಲೋಕಸಭೆ ಚುನಾವಣೆಗಳಲ್ಲೂ ಬಿಜೆಪಿಗೆ 15ರಿಂದ 18 ಸಂಸದ ಸ್ಥಾನಗಳನ್ನು ರಾಜ್ಯ ಕೊಟ್ಟಿದೆ. ಆದರೆ,
ಈ ಸಂಸದರಿಗೆ ಮೋದಿ ಮುಂದೆ ನಿಂತು, ರಾಜ್ಯದ ರೈತರ ಸಾಲ ಮನ್ನಾ ಕುರಿತು ಮಾತಾಡುವ ಧೈರ್ಯ ಇಲ್ಲ. ಡಾ|
ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ಆಗಿದ್ದಾಗ 72 ಲಕ್ಷ ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು. ಈ ಬದ್ಧತೆ
ಬಿಜೆಪಿಯವರಿಗೆ ಇದೆಯೇ ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಒಬ್ಬ ಢೋಂಗಿ ರಾಜಕಾರಣಿ. ದಲಿತರ, ರೈತರ ಹೆಸರಿನಲ್ಲಿ ರಾಜಕೀಯ ನಾಟಕ ಮಾಡುತ್ತಿದ್ದಾರೆ. ಐದು ವರ್ಷ ಬಿಜೆಪಿ ಸರ್ಕಾರದಲ್ಲಿ ರೈತರು, ದಲಿತರಿಗಾಗಿ
ಏನು ಮಾಡಿದ್ದಾರೆ. ಅವರ ಐದು ವರ್ಷಗಳಲ್ಲಿ ಏನೇನು ಮಾಡಿದ್ದಾರೆ ಹಾಗೂ ಕಾಂಗ್ರೆಸ್‌ ಸರ್ಕಾರದ 4 ವರ್ಷದ
ಅವಧಿಯಲ್ಲೇ ಏನು ಅಭಿವೃದಿಟಛಿ ಹಾಗೂ ರಾಜಕೀಯ ಚಟುವಟಿಕೆ ಆಗಿವೆ ಎಂಬುದರ ಚರ್ಚೆಗೆ ಬನ್ನಿ. ಬಿಜೆಪಿಯವರೇ ದಿನಾಂಕ ನಿಗದಿ ಮಾಡಲಿ. ಧೈಯ ಇದ್ದರೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ಸಾಲ ಮನ್ನಾ ಮಾಡಲು ಮೋದಿಗೇನು ದಾಡಿ?
ಬಾಗಲಕೋಟೆ:
“ರೈತರ ಸಾಲಮನ್ನಾ ಮಾಡಲು ಸಿಎಂಗೇನು ದಾಡಿ ಎಂದು ಯಡಿಯೂರಪ್ಪ ಹೇಳುತ್ತಿದ್ದರು. ಕಿವಿ ಹಿಡಿದು ಸಾಲ ಮನ್ನಾ ಮಾಡಿಸುತ್ತೇನೆ ಎಂದಿದ್ದರು. ಅವರ ಬೆದರಿಕೆಗೆ ನಾನು ಸಾಲಮನ್ನಾ ಮಾಡಿಲ್ಲ. ಯಡಿಯೂರಪ್ಪ ಅವರಂತಹ 10 ಜನ ಬಂದ್ರೂ ಹೆದರಲ್ಲ. ಆದರೆ, ರೈತರ ಎಲ್ಲ ಸಾಲ ಮನ್ನಾ ಆಗಬೇಕು ಎಂಬ ಯೋಚನೆ ನನ್ನದಿತ್ತು. ಹೀಗಾಗಿ ಮೋದಿಗೆ ಪತ್ರ ಬರೆದೆ. ರಾಷ್ಟ್ರೀಕೃತ ಬ್ಯಾಂಕ್‌ ಸಾಲ ಅವರು ಮನ್ನಾ ಮಾಡಲಿ, ನಾವು ಸಹಕಾರಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೆ. ಈಗ ನಾವು ಮನ್ನಾ ಮಾಡಿದ್ದೇವೆ. ಆದರೆ, ಪ್ರಧಾನಿ ಮೋದಿ ಅವರಿಗೆ ರೈತರ ಸಾಲ ಮನ್ನಾ ಮಾಡಲು ಏನು ದಾಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಕೂಡಲಸಂಗಮದಲ್ಲಿ ಗುರುವಾರ ನಡೆದ ಎಸ್‌.ಆರ್‌. ಪಾಟೀಲ ಪದಗ್ರಹಣ ಹಾಗೂ ಕಾಂಗ್ರೆಸ್‌ ಸಮಾವೇಶದಲ್ಲಿ ಯಡಿಯೂರಪ್ಪ, ಮೋದಿ ಹಾಗೂ ಬಿಜೆಪಿ ವಿರುದ್ಧ ಅವರು ತೀವ್ರ ವಾಗ್ಧಾಳಿ ನಡೆಸಿದರು.

ಮೋದಿ ಮುಂದೆ ಇಲಿಯಂತೆ ನಿಂತಿದ್ರು: “ರೈತರ ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸಲು, ಅನಂತಕುಮಾರ, ಸದಾನಂದಗೌಡ,  ಯಡಿಯೂರಪ್ಪ ಸೇರಿ ನಾವೆಲ್ಲ ಮೋದಿ ಬಳಿಗೆ ಹೋಗಿದ್ದೆವು. ಆಗ ನಾನು ರೈತರ ಸಾಲ ಮನ್ನಾ ಮಾಡಲು ಮನವಿ ಮಾಡಿದೆ. ನೀವೂ ಹೇಳಿ ಎಂದು ರಾಜ್ಯದ ಬಿಜೆಪಿ ನಾಯಕರಿಗೆ ಹೇಳಿದರೆ, ಮೋದಿ ಎದುರು ಅವರು ಇಲಿ ಮರಿಗಳಂತೆ ನಿಂತಿದ್ದರು. ಇಂತಹ ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸುವ ನೈತಿಕೆ ಹೊಂದಿದ್ದಾರಾ? ಬಿಎಸ್‌ವೈಗೆ ತಾಕತ್ತು ಇದ್ದರೆ ಪ್ರಧಾನಿ ಮೋದಿಯವರ ಮೂಗು ಹಿಡಿದು ರೈತರ ಸಾಲ ಮನ್ನಾ
ಮಾಡಿಸಲಿ’ ಎಂದು ಸವಾಲು ಹಾಕಿದರು.

Advertisement

“ಗೃಹ ಖಾತೆ ನೀಡುವ ಬಗ್ಗೆ ಮಾಹಿತಿ ಇಲ್ಲ’
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಗೃಹ ಖಾತೆ ನೀಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಗೃಹ ಖಾತೆಗೆ ನನ್ನ ಹೆಸರು ಪ್ರಸ್ತಾಪ ಆಗಿರುವುದಕ್ಕೆ ಖುಷಿ ಆಗಿದೆ. ಆದರೆ, ಗೃಹ ಖಾತೆ ನೀಡುವ ಬಗ್ಗೆ ನನಗೆ 
ಯಾವುದೇ ಮಾಹಿತಿ ಇಲ್ಲ’ ಎಂದು ತಿಳಿಸಿದರು. “ಬಳ್ಳಾರಿ ಜಿಲ್ಲಾ ಕಾಂಗ್ರೆಸ್‌ ನಲ್ಲಿ ಯಾವುದೇ ಗೊಂದಲವಿಲ್ಲ. ಅನಿಲ್‌ ಲಾಡ್‌ ಮತ್ತು ನನ್ನ ನಡುವೆ ಯಾವುದೇ ಭಿನ್ನಮತವಿಲ್ಲ. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ’ ಎಂದು ಸಂತೋಷ್‌ ಲಾಡ್‌ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಾಟೀಲ ಪದಗ್ರಹಣ
ಬಾಗಲಕೋಟೆ:
ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನ ಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಶಿವನಗೌಡ
ರುದ್ರಗೌಡ ಪಾಟೀಲ (ಎಸ್‌.ಆರ್‌. ಪಾಟೀಲ) ಅವರು ಗುರುವಾರ ಕೆಪಿಸಿಸಿಯ ನೂತನ ಕಾರ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಅವರು ಕಾಂಗ್ರೆಸ್‌ ಧ್ವಜವನ್ನು ಪಾಟೀಲರಿಗೆ ನೀಡುವ ಮೂಲಕ ಅಧಿಕಾರ ವಹಿಸಿಕೊಟ್ಟರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವಳಿ ಜಿಲ್ಲೆಯ 15 ವಿಧಾನಸಭಾ ಕ್ಷೇತ್ರಗಳು ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಕಾಂಗ್ರೆಸ್‌ ಶಾಸಕರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದು ಪಕ್ಷದ ಸಂಘಟನೆಯ ಭಾರ ಹೊರಿಸಿದರು. ಬಳಿಕ ಮಾತನಾಡಿದ ಎಸ್‌.ಆರ್‌. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ಎಲ್ಲರನ್ನೂ ಸ್ಮರಿಸಿದರು. “ಬೆಂಗಳೂರಿನಲ್ಲಿ ಅಧಿಕಾರ ವಹಿಸಿಕೊಳ್ಳಲು ಕೆಲವರು ಸಲಹೆ ನೀಡಿದ್ದರು. ಆದರೆ, ನನ್ನ ಜನ್ಮಭೂಮಿಯಾಗಿರುವ ಜಿಲ್ಲೆಯ ಹಾಗೂ ವಿಶ್ವಗುರು ಬಸವಣ್ಣನವರ ತಪೋಭೂಮಿಯಾದ 
ಕೂಡಲಸಂಗಮದಲ್ಲಿ ನಾನು ಅಧಿಕಾರ ವಹಿಸಿಕೊಳ್ಳಲು ನಿರ್ಧರಿಸಿದ್ದೆ. ಜತೆಗೆ, ಪಕ್ಷದ ಬೃಹತ್‌ ಸಮಾವೇಶ
ನಡೆಸಬೇಕು ಎಂಬ ಆಲೋಚನೆ ಇತ್ತು. ನಿರೀಕ್ಷೆಗೂ ಮೀರಿ ಜನರು ಸೇರಿದ್ದಾರೆ. ಕಾಂಗ್ರೆಸ್‌ ಮೇಲಿನ ಜನರ ಅಭಿಮಾನ
ಹಾಗೂ ಸರ್ಕಾರದ ಜನಪರ ಯೋಜನೆಗಳು ಇದಕ್ಕೆ ಕಾರಣ’ ಎಂದರು.

“ನನಗೆ ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. 1955ರಿಂದ ಈ ವರೆಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರಗಳಲ್ಲಿ ಉತ್ತರ ಕರ್ನಾಟಕದ ಶಾಸಕರ ಪಾತ್ರ ದೊಡ್ಡದಿದೆ. ಈ ಭಾಗದಲ್ಲಿ ಯಾವ ಪಕ್ಷದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೋ ಆ ಪಕ್ಷ ಅಧಿಕಾರಕ್ಕೆ ಬಂದಿದೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಶಾಸಕರನ್ನು ಆಯ್ಕೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
 

Advertisement

Udayavani is now on Telegram. Click here to join our channel and stay updated with the latest news.

Next