Advertisement

ಬಿ.ಎಸ್ ಯಡಿಯೂರಪ್ಪ ಪುರೋಹಿತರಾ ? ಪಂಚಾಂಗ ನೋಡ್ತಾರಾ ?: ಸಿದ್ದರಾಮಯ್ಯ

02:51 PM Oct 30, 2019 | Mithun PG |

ಬಾಗಲಕೋಟೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪುರೋಹಿತರಾ ? ಅವರು ಭವಿಷ್ಯ ಹೇಳುತ್ತಾರಾ ? ಭವಿಷ್ಯ ಕಲಿತಿದ್ದಾರಾ ? ಎಂದು  ವಿಧಾನಸಭೆಯ  ವಿರೋಧ  ಪಕ್ಷದ  ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ .

Advertisement

ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಯಡಿಯೂರಪ್ಪ ಅವರು ಅವರು ಪಂಚಾಂಗ ಓದುತ್ತಾರಾ, ಪ್ರವಾಹ ಪರಿಹಾರ ವಿಷಯದಲ್ಲಿ ನಾನು ಸುಳ್ಳು ಹೇಳಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸುಳ್ಳು ಹೇಳುತ್ತಿದ್ದಾರೆ.  ನಾನು ಸತ್ಯವನ್ನೇ ಹೇಳಿದ್ದೇನೆ.  ರಾಜ್ಯ ಸರ್ಕಾರ, ಸಂತ್ರಸ್ತರಿಗೆ ಪರಿಹಾರ ಕೊಟ್ಟಿಲ್ಲ. ಇದು ಸುಳ್ಳಾ ಎಂದು  ಪ್ರಶ್ನಿಸಿ, ಸಿದ್ದರಾಮಯ್ಯ ಖಾಯಂ ವಿರೋಧ ಪಕ್ಷದ ನಾಯಕರಾಗಿರುತ್ತಾರೆ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಈ ರೀತಿ ವ್ಯಂಗ್ಯವಾಡಿದ್ದಾರೆ.

ಸಂತ್ರಸ್ತರಿಗೆ ಪರಿಹಾರ ಕೊಟ್ಟಿರುವ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸುವುದು ಬೇಡ. ಜನರಬಳಿಗೆ ಬಂದು ಕಷ್ಟ ಕೇಳಲಿ. ಸಂತ್ರಸ್ತರಿಗೆ ಪರಿಹಾರ ಸಿಕ್ಕಿದೆಯೋ, ಇಲ್ಲವೋ ಎಂಬುದನ್ನು ಆ ಬಳಿಕ ಮಾತನಾಡಲಿ ಎಂದು ಸವಾಲು ಹಾಕಿದ ಸಿದ್ದರಾಮಯ್ಯ, ಪಕ್ಕದಲ್ಲಿ ನಿಂತಿದ್ದ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರನ್ನು ಕರೆದು ಪರಿಹಾರ ಕೊಟ್ಟಿದ್ದಾರಾ ? ಎಂದು ಪ್ರಶ್ನಿಸಿದರು.

ಇದಕ್ಕೆ ಶಾಸಕ ಆನಂದ ನ್ಯಾಮಗೌಡ, ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ಕೊಟ್ಟಿಲ್ಲ ಎಂದು ಹೇಳಿದರು.ಸಂತ್ರಸ್ತರಿಗೆ ಪರಿಹಾರ ಕೊಟ್ಟಿರುವುದು ಶಾಸಕರಿಗೆ ಗೊತ್ತೋ, ಯಡಿಯೂರಪ್ಪ ಅವರಿಗೆ ಗೊತ್ತೋ ಎಂದು ಇದೇ ವೇಳೆ ಪ್ರಶ್ನಿಸಿದರು.

ಪ್ರವಾಹದಿಂದ ಹಾನಿಯಾದ ಬೆಳೆ, ಮನೆ ಪರಿಹಾರ ಕೊಟ್ಟಿಲ್ಲ. ಅಂಗಡಿ-ಮುಂಗಟ್ಟು ಕೊಚ್ಚಿಕೊಂಡು ಹೋಗಿವೆ. ಅವುಗಳಿಗೂ ಪರಿಹಾರ ಕೊಟ್ಟಿಲ್ಲ. ಒಂದೇ ಮನೆಯಲ್ಲಿ ಇರುವ ಅಣ್ಣ-ತಮ್ಮಂದಿರರಿಗೆ ಪರಿಹಾರ ಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿದರು.

Advertisement

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರವಾಹ ಪರಿಸ್ಥಿತಿ, ಪರಿಹಾರ ವಿತರಣೆ ಕುರಿತು ವಸ್ತುಸ್ಥಿತಿ ಗೊತ್ತಿಲ್ಲ. ಸಂತ್ರಸ್ತರ ಬಳಿಗೆ ಬಂದಿಲ್ಲ. ಈ ಬಗ್ಗೆ ಎಲ್ಲವೂ ವಿಧಾನಸಭೆಯಲ್ಲಿ ಹೇಳಿದ್ದೇವೆ. ಪರಿಹಾರ ಕೊಡುತ್ತೇವೆ ಎಂದು ಸ್ವತಃ ಸಿಎಂ ಒಪ್ಪಿಕೊಂಡಿದ್ದಾರೆ. ಒಪ್ಪಿಕೊಳ್ಳದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇತಿಹಾಸ ಇರುಚಬೇಡಿ:

ಟಿಪ್ಪು ಸುಲ್ತಾನ್ ಕುರಿತು ಪಠ್ಯದಿಂದ ಕೈಬಿಡುವುದಕ್ಕಾಗಿ ಪಠ್ಯ ಪುಸ್ತಕ ಸಮಿತಿಗೆ ವರದಿ ಕೇಳಿರುವ ವಿಷಯದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಟಿಪ್ಪು ಪಠ್ಯ ಕೈಬಿಟ್ಟರೆ ಇತಿಹಾಸ ತಿರುಚಿದಂತಾಗುತ್ತದೆ. ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ್ದು ಸುಳ್ಳಾ. ಅದು ನಿಜ !ನಿಜವಾಗಿದ್ದರೆ, ಅದನ್ನೇ ಬದಲಾಯಿಸಿ ಬಿಡುತ್ತಾರಾ ? ಇತಿಹಾಸ ತಿರುಚಬಾರದು. ಮಕ್ಕಳಿಗೆ ಕಲಿಸಬೇಕು. ಇತಿಹಾಸದಿಂದ ಪಾಠ ಕಲಿಬೇಕು ಎಂದರು.

ಟಿಪ್ಪು ಮತಾಂಧರು ಎಂದು ಬಿಜೆಪಿಯವರು ಮಾತ್ರ ಕರಿಯುತ್ತಾರೆ. ಉಳಿದವರು ಕರೆಯುತ್ತಾರಾ ? ಬಿಜೆಪಿಯವರೇ ಮತಾಂತರರು  ಎಂದು ಆರೋಪಿಸಿದರು.

ಪ್ರವಾಹ ಪರಿಹಾರಕ್ಕೆ ಒತ್ತಾಯಿಸಿ, ಬಾಗಲಕೋಟೆಯಿಂದ ಪಾದಯಾತ್ರೆ ಆರಂಭಿಸುವ ಕುರಿತು ಇನ್ನೂ ಅಂತಿಮವಾಗಿಲ್ಲ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next