ಬೆಂಗಳೂರು: ದಿನವೊಂದಕ್ಕೆ ಹೆಚ್ಚೆಂದರೆ 20 ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಮಾಡಬಹುದಾಗಿದೆ. ಆದರೆ, ಪಾಲಿಕೆಯಿಂದ ಗುತ್ತಿಗೆ ಪಡೆದ ಸ್ವಯಂ ಸೇವಾ ಸಂಸ್ಥೆಗಳು ಹಲವು ವರ್ಷಗಳಿಂದ ದಿನಕ್ಕೆ ಸರಾಸರಿ 500ಕ್ಕೂ ಹೆಚ್ಚು ನಾಯಿಗಳಿಗೆ ಎಬಿಸಿ ಮಾಡಿದ್ದು, ಸುಳ್ಳು ಲೆಕ್ಕಗಳನ್ನು ಅಧಿಕಾರಿಗಳು ಬಿಲ್ ಪಾವತಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಪ್ರತಿವರ್ಷ ಕೋಟ್ಯಂತರ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ, ನಗರದಲ್ಲಿ ವರ್ಷದಿಂದ ವರ್ಷಕ್ಕೆ ನಾಯಿಗಳ ಸಂಖ್ಯೆ ಕಡಿಮೆಯಾಗುವ ಬದಲಿಗೆ ಹೆಚ್ಚಾಗುತ್ತಿದ್ದು, ಎಬಿಸಿಗಾಗಿ ಬಿಡುಗಡೆಯಾಗುತ್ತಿರುವ ಹಣ ಭಷ್ಟ್ರರ ಪಾಲಾಗುತ್ತಿದ್ದು, ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆಯಿಂದ ಕಳೆದ ಹಲವು ವರ್ಷಗಳಿಂದ ಎಬಿಸಿ ಮಾಡುವ ಕೆಲಸವನ್ನು ಮೂರು ಖಾಸಗಿ ಎನ್‌ಜಿಒಗಳಿಗೆ ನೀಡಲಾಗಿದೆ. ಅದರಂತೆ ಗುತ್ತಿಗೆ ಪಡೆದ ಸಂಸ್ಥೆಗಳು ಪ್ರತಿತಿಂಗಳು ಪಾಲಿಕೆಗೆ ಎಷ್ಟು ನಾಯಿಗಳಿಗೆ ಎಬಿಸಿ ಮಾಡಲಾಗಿದೆ ಎಂಬ ಮಾಹಿತಿ ನೀಡಿದರೆ, ಅದನ್ನು ಪರಿಶೀಲಿಸಿ ಅವರಿಗೆ ಪಾಲಿಕೆಯಿಂದ ಬಿಲ್ ಪಾವತಿಸಲಾಗುತ್ತದೆ.
ಆದರೆ, ಕಳೆದ ಹಲವು ವರ್ಷಗಳಿಂದ ಎನ್‌ಜಿಒಗಳು ಪಾಲಿಕೆಗೆ ತಪ್ಪು ಲೆಕ್ಕಗಳನ್ನು ನೀಡಿದರೂ, ಅಧಿಕಾರಿಗಳು ಪರಿಶೀಲನೆ ನಡೆಸದೆ ಬಿಲ್ ಪಾವತಿಸಿದ್ದು, ಅಧಿಕಾರಿಗಳು ಸಹ ಅಕ್ರಮದಲ್ಲಿ ಶಾಮೀಲಾಗಿದ್ದರೆಯೇ ಎಂಬ ಅನುಮಾನಗಳು ಮೂಡುವಂತೆ ಮಾಡಿದೆ. ತಜ್ಞ ಪಶು ವೈದ್ಯರ ಪ್ರಕಾರ ದಿನವೊಂದಕ್ಕೆ ಗರಿಷ್ಠ 15-20 ನಾಯಿಗಳಿಗೆ ಎಬಿಸಿ ಮಾಡಬಹುದು. ಆದರೆ, 2015ರ ಡಿಸೆಂಬರ್‌ನಿಂದ 2016ರ ಜನವರಿವರೆಗೆ ಸರಾಸರಿ 344 ರಿಂದ 557 ನಾಯಿಗಳಿಗೆ ಎಬಿಸಿ ಮಾಡಿರುವುದಾಗಿ ಲೆಕ್ಕ ನೀಡಿದ್ದು, ಅಧಿಕಾರಿಗಳು ಅದರಂತೆ ಬಿಲ್ ನೀಡಿದ್ದಾರೆ.
ಪಾಲಿಕೆಯಿಂದ ಬಿಲ್ ಪಾವತಿಸಿರುವ ಮಾಹಿತಿಯಂತೆ 2000-01ರಿಂದ 2017-18ರ ಮೇ ತಿಂಗಳವರೆಗೆ ಬರೋಬ್ಬರಿ 5,92,144 ಲಕ್ಷ ನಾಯಿಗಳಿಗೆ ಎಬಿಸಿ ಮಾಡಲಾಗಿದೆ. ಜತೆಗೆ 7.88 ಲಕ್ಷ ನಾಯಿಗಳಿಗೆ ಆ್ಯಂಟಿ ರೇಬಿಸ್ ಲಸಿಕೆ ಹಾಕಿದ್ದು, ಈ ಎರಡೂ ಕಾರ್ಯಕ್ಕಾಗಿ ಬರೋಬ್ಬರಿ 31.76 ಕೋಟಿ ರೂ. ವ್ಯಯಿಸಲಾಗಿದೆ. ಇನ್ನು ಪಶುಸಂಗೋಪನಾ ಇಲಾಖೆ 2012-13ರಲ್ಲಿ ನಡೆಸಿದ ಪ್ರಾಣಿ ಗಣತಿಯಂತೆ 1,85,454 ಬೀದಿ ನಾಯಿಗಳು ನಗರದಲ್ಲಿವೆ.
ಬಿಬಿಎಂಪಿ ಲೆಕ್ಕದ ಪ್ರಕಾರ 2012-13ರಿಂದ 2017-18ರವರೆಗೆ ಒಟ್ಟು 1,91,860 ನಾಯಿಗಳಿಗೆ ಶಸ್ತ್ರಚಿಕಿತ್ಸೆ ನೀಡಿರುವುದು ಕಂಡುಬಂದಿದೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಪಶುಪಾಲನಾ ವಿಭಾಗದಲ್ಲಿ ಪಶುಪಾಲನಾ ಇಲಾಖೆ ಅದರ ಲೆಕ್ಕ ಮಾಡುತ್ತದೆ. ಅದರ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಉತ್ತರ ನೀಡುತ್ತಾರೆ.
ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಲ್ಲಿ ಅಕ್ರಮ ನಡೆದಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು.
-ಆರ್.ಸಂಪತ್‌ರಾಜ್, ಮೇಯರ್
ಶಸ್ತ್ರಚಿಕಿತ್ಸೆ ವಿವರ
ವರ್ಷ ನಾಯಿಗಳ ಸಂಖ್ಯೆ
-2012-13 63,373
-2013-14 52,044
-2014-15 29,841
-2015-16 35,185
-2016-17 8,662
-2017-18 2,755
(ಮೇ ತಿಂಗಳವರೆಗೆ)
-ಒಟ್ಟು 1,91,860