Advertisement

ಬೀದರ ಓಲ್ಡ್‌ ಸಿಟಿ ಆಸ್ಪತ್ರೆ ಕಟ್ಟಡ ಅನಧಿಕೃತ?

04:59 PM Feb 08, 2021 | Team Udayavani |

ಬೀದರ: ನಗರದ “ಓಲ್ಡ್‌ ಸಿಟಿ’ಯಲ್ಲಿ ತಿಂಗಳ ಹಿಂದೆ ಉದ್ಘಾಟನೆಗೊಂಡಿರುವ 20 ಕೋಟಿ ರೂ. ವೆಚ್ಚದ ಸರ್ಕಾರಿ ನೂರು ಹಾಸಿಗೆ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಕಟ್ಟಡಕ್ಕೆ ಈಗ ಭಾರತೀಯ ಪುರಾತತ್ವ ಇಲಾಖೆಯ “ಎನ್‌ಒಸಿ’ ಕಂಟಕ ಎದುರಾಗಿದೆ. ಆರೋಗ್ಯ ಇಲಾಖೆಯ ಈ ಯಡವಟ್ಟಿನಿಂದಾಗಿ “ತೆರವು’ ಭೀತಿ ಹೆಚ್ಚಿಸಿದೆ.

Advertisement

ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಇಲ್ಲಿನ ಓಲ್ಡ್‌ ಸಿಟಿಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ನೂರು ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು, ಜ.6ರಂದು ಸಿಎಂ ಯಡಿಯೂರಪ್ಪ ಅವರಿಂದ ಲೋಕಾರ್ಪಣೆ ಆಗಿದೆ. ಆದರೆ, ಮಹ್ಮದ್‌ ಗವಾನ್‌ ಮದರಸಾ ಪಾರಂಪರಿಕ ಕಟ್ಟಡದಿಂದ 100 ಮೀ. ಅಂತರದಲ್ಲಿ ಆಸ್ಪತ್ರೆ ನಿರ್ಮಿಸಿರುವುದು ಕೇಂದ್ರ ಪುರಾತತ್ವ ಇಲಾಖೆಯ ನಿಮಯ ಉಲ್ಲಂಘನೆ ಆಗಲಿದೆ. ಸರ್ಕಾರಿ ಆಸ್ಪತ್ರೆ ಕಟ್ಟಡವೇ ಅನ ಧಿಕೃತ ಆದಂತಾಗಿದೆ.

ಪ್ರವಾಸೋದ್ಯಮ ನಗರವಾಗಿರುವ ಬೀದರನ ಐತಿಹಾಸಿಕ ಸ್ಮಾರಕಗಳಿಂದ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಹೊಸ ಕಟ್ಟಡ ನಿರ್ಮಿಸುವಂತಿಲ್ಲ. ಹಳೆ ಕಟ್ಟಡಗಳ ನವೀಕರಣ ಅಥವಾ ಪುನರ್‌ ನಿರ್ಮಾಣ ಮಾಡಬೇಕಾದಲ್ಲಿ ಕೇಂದ್ರ ಪುರಾತತ್ವ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯ. ಆದರೆ, ಓಲ್ಡ್‌ ಸಿಟಿಯ ಆಸ್ಪತ್ರೆ ನಿರ್ಮಾಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಎನ್‌ಒಸಿ ಜತೆಗೆ ನಗರಸಭೆಯಿಂದಲೂ ಅನುಮತಿ ತೆಗೆದುಕೊಂಡಿಲ್ಲ ಎಂಬುದು ಆರ್‌ಟಿಐ ಮೂಲಕ ಬಹಿರಂಗ ಆಗಿದೆ.

ನಗರದ ಓಲ್ಡ್‌ ಸಿಟಿಯಲ್ಲಿ ಮೊದಲಿನಿಂದಲೂ 10 ಹಾಸಿಗೆಯ ಆಸ್ಪತ್ರೆ ಮೂಲಕ ಆರೋಗ್ಯ ಸೇವೆ ಕಲ್ಪಿಸಲಾಗುತ್ತಿತ್ತು. ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಿದ್ದ ರಾಜ್ಯ ಸರ್ಕಾರ 100 ಹಾಸಿಗೆಯ ತಾಯಿ- ಮಕ್ಕಳ ಆರೈಕೆ ಆಸ್ಪತ್ರೆಯನ್ನಾಗಿ ಮೇಲ್ದಜೇಗೇರಿಸಿದೆ. ಇದಕ್ಕಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ 2016-17ನೇ ಸಾಲಿನ ಅನುದಾನದಡಿ 1993.50 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ.

ಸ್ಮಾರಕ ಸಂರಕ್ಷಣಾ ಕಾಯ್ದೆ 1959 ನಿಯಮ ಉಲ್ಲಂಘಿಸಿ ಆಸ್ಪತ್ರೆ ಕಟ್ಟಡ ನಿರ್ಮಿಸಿದ ಹಿನ್ನೆಲೆ ಪುರಾತತ್ವ ಇಲಾಖೆ 2017ರಿಂದ ನಿರಂತರ ನೋಟಿಸ್‌ ನೀಡುತ್ತಾ ಬಂದಿದೆ. ಆದರೆ, ಈ ವಿಷಯದಲ್ಲಿ ಅಸಡ್ಡೆತನ ತೋರಿದ ಜಿಲ್ಲಾ ಆರೋಗ್ಯ ಇಲಾಖೆ ಕೊನೆ ಪಕ್ಷ ಎನ್‌ಒಸಿ ಪತ್ರ ಸಹ ಪಡೆದಿಲ್ಲ. ತಮ್ಮ ಸಮಸ್ಯೆಯನ್ನು ಆರೋಗ್ಯ ಇಲಾಖೆ, ಸರ್ಕಾರ ಹೇಗೆ ಸರಿಪಡಿಸಿಕೊಳ್ಳುತ್ತದೆ ಎಂಬುದು ಕಾದು ನೋಡಬೇಕಿದೆ.

Advertisement

ಪುರಾತತ್ವ ಇಲಾಖೆ ಅಧಿಧೀನದ ಗವಾನ್‌ ಮದರಸಾ ಸ್ಮಾರಕದ 100 ಮೀ. ಅಂತರದಲ್ಲಿ ತಾಯಿ-ಮಗು ಆರೈಕೆ ಆಸ್ಪತ್ರೆ ನಿರ್ಮಿಸಲಾಗಿದೆ. ಇದು ಎಎಸ್‌ಐ ನಿಯಮಗಳ ವಿರುದ್ಧವಾಗಿದೆ. ಈಗಾಗಲೇ ಇಲಾಖೆಯಿಂದ ನೋಟಿಸ್‌ ಸಹ ಜಾರಿಯಾಗಿವೆ. ಅಷ್ಟೇ ಅಲ್ಲ ಆರೋಗ್ಯ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಎನ್‌ಒಸಿ, ನಗರಸಭೆಯಿಂದ ಅನುಮತಿ ಸಹ ಪಡೆದಿಲ್ಲ ಎಂಬುದು ಆರ್‌ಟಿಐ ಮೂಲಕ ಸ್ಪಷ್ಟವಾಗಿದೆ.
*ಅಂಬ್ರೇಶ ಕೆಂಚ, ಆರ್‌ಟಿಐ ಕಾರ್ಯಕರ್ತ, ಬೀದರ

ಬೀದರನ ಓಲ್ಡ್‌ ಸಿಟಿಯಲ್ಲಿ ಗವಾನ್‌ ಮದರಸಾ ಪಾರಂಪರಿಕ ಕಟ್ಟಡದಿಂದ 100 ಮೀ. ಅಂತರದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಿಸಿರುವುದು ಸ್ಮಾರಕಗಳ ಸಂರಕ್ಷಣಾ ಕಾಯ್ದೆಯ ವಿರುದ್ಧವಾಗಿದೆ. ಕಟ್ಟಡ ಆರಂಭಕ್ಕೂ ಮೊದಲೇ ಎಎಸ್‌ಐ ಕೇಂದ್ರ ಕಚೇರಿಯಿಂದ ನೋಟಿಸ್‌ ನೀಡಲಾಗಿದೆ. ಎನ್‌ಒಸಿ ಪಡೆದಿರುವ ಬಗ್ಗೆ ನನಗಿಲ್ಲೂ ಮಾಹಿತಿ ಇಲ್ಲ. ಎನ್‌ಒಸಿ ಇಲ್ಲದಿದ್ದರೆ ಕಟ್ಟಡ ತೆರವುಗೊಳಿಸಬಹುದು. ಇಲ್ಲವೇ ದಂಡ ವಿಧಿಸಿ ನಿರಾಪೇಕ್ಷಣಾ ಪತ್ರ ನೀಡಬಹುದು.
*ಅನಿರುದ್ಧ ದೇಸಾಯಿ, ಸಹಾಯಕ ಸಂರಕ್ಷಣಾಧಿಕಾರಿ, ಭಾರತೀಯ ಪುರಾತತ್ವ ಇಲಾಖೆ, ಬೀದರ

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next